ಕನ್ನಡ ತಂತ್ರಾಂಶ ಅಭಿವೃದ್ಧಿ : ಸರ್ಕಾರ ಎಚ್ಚೆತ್ತುಕೊಳ್ಳಲು ಸಾಹಿತಿಗಳ ಆಗ್ರಹ

Subscribe to Oneindia Kannada

ಕನ್ನಡ ತಂತ್ರಾಂಶ ಅಭಿವೃದ್ಧಿ : ಸರ್ಕಾರ ಎಚ್ಚೆತ್ತುಕೊಳ್ಳಲು ಸಾಹಿತಿಗಳ ಆಗ್ರಹ
ಕನ್ನಡಕ್ಕಾಗಿ ಪೂರ್ಣಚಂದ್ರ ತೇಜಸ್ವಿ, ಕಂಬಾರ, ವೆಂಕಟಸುಬ್ಬಯ್ಯ, ಲಿಂಗದೇವರು ಒಕ್ಕೊರಲು

ಬೆಂಗಳೂರು : ‘ನುಡಿ’ ಕನ್ನಡ ತಂತ್ರಾಂಶ ಅಭಿವೃದ್ಧಿ ಕಾರ್ಯವನ್ನು ಕನ್ನಡ ಗಣಕ ಪರಿಷತ್‌ನಿಂದ ಹಿಂತೆಗೆಯಬೇಕೆಂದು ಸಾಹಿತಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕನ್ನಡ ಅಭಿಮಾನಿಗಳು ಸ್ಧಾಪಿಸಿರುವ ಅಂತರರಾಷ್ಟ್ರೀಯ ವೇದಿಕೆ ಈ-ಕವಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೂಡಿಗೆರೆಯಿಂದ ಇಲ್ಲಿಗೆ ಬಂದಿದ್ದ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಪ್ರೊ.ಜಿ. ವೆಂಕಟಸುಬ್ಬಯ್ಯ ಮತ್ತು ಡಾ. ಲಿಂಗದೇವರು ಮುಂತಾದವರು ಕನ್ನಡ ತಂತ್ರಾಂಶದ ಅಭಿವೃದ್ಧಿಗಾಗಿ ಸರ್ಕಾರ ಕೂಡಲೆ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕನ್ನಡ ತಂತ್ರಾಂಶ ಕುರಿತಂತೆ ರಾತ್ರಿಯಿಡೀ ತಂತ್ರಜ್ಞರು ಮತ್ತು ಸಾಹಿತಿಗಳೊಂದಿಗೆ ಚರ್ಚೆ ನಡೆಸಿದ್ದ ತೇಜಸ್ವಿಯವರು, ಕನ್ನಡ ಸಾಫ್ಟವೇರ್‌ ಪ್ರಮಾಣೀಕರಿಸುವ ಅಧಿಕಾರವನ್ನು ಕನ್ನಡ ಗಣಕ ಪರಿಷತ್‌ನಿಂದ ಹಿಂತೆಗೆಯಬೇಕು ಮತ್ತು ಸರ್ಕಾರವೇ ಈ ಕಾರ್ಯವನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಇದು ಬಿಕ್ಕಟ್ಟಿನ ಕಾಲ. ನುಡಿ ಬಳಕೆಯನ್ನು ಸರ್ಕಾರ ಕಡ್ಡಾಯಗೊಳಿಸಿರುವುದರಿಂದ ಕನ್ನಡ ತಂತ್ರಾಂಶದ ಅಭಿವೃದ್ಧಿಗೆ ಶ್ರಮಿಸಿದ ಕಂಪನಿಗಳು ಮುಚ್ಚುವ ಹಂತಕ್ಕೆ ಬಂದಿವೆ. ಸ್ಪರ್ಧಾತ್ಮಕ ಗುಣ ಮೊಟಕುಗೊಂಡಿದೆ. ಗಣಕ ಪರಿಷತ್‌ನ ಏಕಸ್ವಾಮ್ಯ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.

ಕಂಪ್ಯೂಟರ್‌ನಲ್ಲಿ ಭಾಷಾ ಬಳಕೆಗೆ ಸಂಬಂಧಿಸಿದಂತೆ ಚೀನಿ ಮತ್ತು ಲ್ಯಾಟಿನ್‌ ಅಮೆರಿಕದ ಭಾಷೆಗಳಂತೆ ಕನ್ನಡವೂ ಅಭಿವೃದ್ಧಿಯಾಗುವುದು ಎಂದು ಭಾವಿಸಲಾಗಿತ್ತು. ಆದರೆ, ಗಣಕ ಪರಿಷತ್‌ನಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಕೀಬೋರ್ಡ್‌ ವಿನ್ಯಾಸ, ಅಕ್ಷರ ವಿನ್ಯಾಸ, ಬೇರೆ ಸಾಫ್ಟ್‌ವೇರ್‌ನೊಂದಿಗೆ ಹೊಂದಾಣಿಕೆ ದೃಷ್ಟಿಯಿಂದ ಕನ್ನಡ ಉಳಿದ ಭಾಷೆಗಳಿಗಿಂತ ಹಿಂದುಳಿದಿದೆ ಎಂದು ತೇಜಸ್ವಿಯವರು ವಿಷಾದ ವ್ಯಕ್ತಪಡಿಸಿದರು.

ಡಾ.ಲಿಂಗದೇವರು ಅವರು ಮಾತನಾಡಿ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪ್ರತಿನಿಧಿಸುವಲ್ಲಿ ಗಣಕ ಪರಿಷತ್ತು ಸೋತಿದೆ. ಈ ಕಾರ್ಯವನ್ನು ಸರ್ಕಾರ ಮಟ್ಟದ ತಾಂತ್ರಿಕ ಸಲಹಾ ಸ್ಧಾಯಿ ಸಮಿತಿ ವಹಿಸಿಕೊಳ್ಳಬೇಕು ಎಂದರು.

ಕನ್ನಡ ತಂತ್ರಾಂಶ ಅಭಿವೃದ್ಧಿ, ಬಳಕೆ ಕುರಿತಂತೆ ಡಾ. ಚಂದ್ರಶೇಖರ ಕಂಬಾರ, ಪ್ರೊ.ಜಿ.ವೆಂಕಟಸುಬ್ಬಯ್ಯು ಅವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ತಂತ್ರಜ್ಞ ಡಾ.ಯು.ಬಿ.ಪವನಜ, ಈ-ಕವಿ ಸಂಘಟನೆಯ ಮುಖ್ಯ ಕಾರ್ಯದರ್ಶಿ ಕೆ.ಟಿ.ಸತೀಶ್‌ಗೌಡ ಅವರು ಗೋಷ್ಠಿಯಲ್ಲಿ ಭಾಗವಹಿಸಿದ್ದರು.

(ಇನ್ಫೋವಾರ್ತೆ)


ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...