• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಶೇಖರ ವಿಳಾಸ (ವಿಲಾಸ?)

By Staff
|

ರಾಜಶೇಖರ ವಿಳಾಸ (ವಿಲಾಸ?)

ಬೆಂಗಳೂರೆಂಬ ಚಕ್ರವ್ಯೂಹದಿ ಅಡ್ರೆಸ್ಸು ಹುಡುಕುತ್ತ ಬಸವಳಿದ ಅನುಭವ ನಿಮಗಿದೆಯಾ ? ಇರಲೇಬೇಕು ; ಬೆಂಗಳೂರಿಗೆ ಬಂದವರು ಬೀದಿ ತಪ್ಪದಿದ್ದರೆ ಹೇಗೆ ! ಯೋಚಿಸುತ್ತಾ ಹೋದರೆ, ಮಹಾನಗರದ ವಿಳಾಸ ಪದ್ಧತಿಯೇ ಅವೈಜ್ಞಾನಿಕ ಅನ್ನಿಸಿಬಿಡುತ್ತದೆ. ವಿಳಾಸ ಚಕ್ರವ್ಯೂಹದ ಕುರಿತೊಂದು ಲಹರಿಯಿದು.

 • ಟಿ. ಮಹದೇವ ರಾವ್‌; ಬ್ರಾಕ್‌ಪೋರ್ಟ್‌, ನ್ಯೂಯಾರ್ಕ್‌.
 • T. Mahadeva Rao, New Yorkರಾತ್ರಿ 9 ಗಂಟೆಯ ಮೇಲಾಗಿದೆ. ನೀವು ಊಟ ಮುಗಿಸಿ ಒಂದು ಚಿಕ್ಕ ವಾಕ್‌ ಹೊರಟಿದ್ದೀರಿ. ಪಕ್ಕದಲ್ಲಿ ಆಟೋ ಸದ್ದಾಗುತ್ತದೆ. ನೀವು ಬೇಗ ಬದಿಗೆ ಸರಿಯುತ್ತೀರಿ. ಆಟೋ ನಿಮ್ಮ ಪಕ್ಕವೇ ನಿಲ್ಲುತ್ತದೆ. ‘ಸಾರ್‌, ಈ ಅಡ್ರಸ್‌ ಎಲ್ಲಿ ಬರುತ್ತೆ ? ಸ್ವಲ್ಪ ನೋಡ್ತೀರಾ’ ಸ್ವಲ್ಪ ಅಂಗಲಾಚುವ ಧ್ವನಿ ಕೇಳುತ್ತದೆ. ನೀವು ಆಟೋದೊಳಗೆ ನೋಡುತ್ತೀರಿ. ವೃದ್ಧ ದಂಪತಿಗಳು, ಮುಖದಲ್ಲಿ ತುಸು ಆತಂಕ ಕಾಣಿಸುತ್ತದೆ. ಎರಡು ಸೂಟ್‌ಕೇಸುಗಳೂ ಇವೆ.
  ‘ಬಸ್‌ಸ್ಟ್ಯಾಂಡಿಂದ ಬಂದಿದ್ದೇವೆ, ಒಂದು ಗಂಟೆಯಿಂದ ಸುತ್ತುತ್ತಿದ್ದೇವೆ, ಆಟೋ ಛಾರ್ಜು ಅರವತ್ತು ರೂಪಾಯಿ ಮೇಲಾಗಿದೆ, ಸ್ವಲ್ಪ ಹೆಲ್ಪ್‌ ಮಾಡ್ತೀರಾ?’ ಮುದುಕರ ಧ್ವನಿಯಲ್ಲಿ ಭಯಮಿಶ್ರಿತ ದೀನತೆಯಿದೆ. ಯಾವುದೋ ಊರಿಂದ ಬಂದಿದ್ದಾರೆ. ಮನೆ ಸಿಗದೆ ಒದ್ದಾಡುತ್ತಿದ್ದಾರೆ. ಹೆಚ್ಚು ಹಣವೂ ಇಲ್ಲವೇನೋ. ನಿಮಗೆ ಕರುಳು ಚುರಕ್‌ ಎನ್ನುತ್ತದೆ. ಯಜಮಾನರು ಒಂದು ಅಡ್ರಸ್‌ ಚೀಟಿ ತೋರಿಸುತ್ತಾರೆ. T. Rajashekar, Pitrukrupa, 873, 1A Cross, 2nd Main Road, 3rd Phase, 4th Block, Banashankari III Stage, Bangalore 560078. ‘ಸಾರಿ, ಇದು ಎಷ್ಟನೇ ಬ್ಲಾಕೋ ತಿಳಿಯದು. ಹೀಗೇ ಮುಂದೆ ಹೋದರೆ, ಸೆಕೆಂಡ್‌ ಮೇನ್‌ ಸಿಗುತ್ತೆ, ಫಸ್ಟ್‌ ಎ ಕ್ರಾಸ್‌ ಅಲ್ಲೇ ಇರಬಹುದು’ ಎಂಬ ಅನಿರ್ದಿಷ್ಟ ಉತ್ತರ ಕೊಡುತ್ತೀರಿ. ಆಟೋ ಮುಂದೆ ಹೊರಡುತ್ತದೆ. ಮುದುಕರ ಮುಖದಲ್ಲಿನ ಆತಂಕ ಕಣ್ಣಿಗೆ ಕಟ್ಟುತ್ತದೆ.

  ಇಂಥ ಅನುಭವ ತುಂಬಾ ಜನರಿಗೆ ಆಗಿರಬಹುದಲ್ಲವೆ ?

  ಅಂದಹಾಗೆ, ಈ ಅಡ್ರಸ್‌ ಎಂಬುದರ ಉದ್ದೇಶವಾದರೂ ಏನು ? ಪ್ರಪಂಚದಲ್ಲಿನ ಒಂದು ಸ್ಥಳವನ್ನು ನಿರ್ದಿಷ್ಟವಾಗಿ ಸೂಚಿಸುವುದು, ಅಲ್ಲವೆ?

  ಈ ಜಗತ್ತು ಮೂರು ಆಯಾಮಗಳದ್ದಾಗಿದ್ದರೂ, ಅದರ ಹೊರಮೈಮೇಲಿನ ಯಾವ ಜಾಗವನ್ನಾದರೂ, ಇಷ್ಟನೇ ಅಕ್ಷಾಂಶ, ಇಷ್ಟನೇ ರೇಖಾಂಶ ಎಂದು ಎರಡು ಸಂಖ್ಯೆಗಳಿಂದ ಗುರುತಿಸಿ ಬಿಡಬಹುದು, ಅಲ್ಲವೆ? ಎಲ್ಲಾ ಮನೆಗಳಿಗೂ, ಎರಡೇ ಸಂಖ್ಯೆಯ ಅಡ್ರಸ್‌ ಇದ್ದರೆ ಹೇಗೆ ? ಜಿ.ಪಿ.ಎಸ್‌. ಉಪಯೋಗಿಸಿ, ಆಕಾಶದಲ್ಲಿ ಹಾರಾಡುವ ರೋಬಾಟಿಕ್‌ ಆಟೋ, ಇದ್ದರೆ ಇಂಥ ಅಡ್ರಸ್‌ ಉಪಯೋಗಕ್ಕೆ ಬಂದೀತು! ನಗು ಬರೋದೇ ಇಂಥ ಯೋಚನೆ ಸಂದರ್ಭದಲ್ಲಿ .

  ಮತ್ತೂ ಯೋಚಿಸುವ. ಈ ಅಡ್ರಸ್ಸುಗಳನ್ನು ಸರಳಗೊಳಿಸಲು ಸಾಧ್ಯವಿಲ್ಲವೆ? ಬನಶಂಕರಿಯಲ್ಲಿ ಒಂದು ಮನೆಯನ್ನು ಗುರುತಿಸಲು- ಮನೆ ನಂಬರ್‌, ಕ್ರಾಸ್‌, ಮೇನ್‌, ಫೇಜ್‌, ಬ್ಲಾಕ್‌, ಸ್ಟೇಜ್‌ ಎಂಬ ಆರು ಆಯಾಮಗಳು ಬೇಕೆ? ನೀವು ಮನೆಗಿಟ್ಟಿರುವ ಹೆಸರನ್ನು ಅಡ್ರಸ್ಸಿನಲ್ಲಿ ಸೇರಿಸಬೇಕೆ ? ಪ್ರಶ್ನೆಗಳು ಇಷ್ಟೇ ಅಲ್ಲ . ಬೆಂಗಳೂರಿನ ಎಲ್ಲಾ ಅಡ್ರಸ್ಸುಗಳೂ ಇಷ್ಟು ಕ್ಲಿಷ್ಟವಾಗಿವೆಯೆ? ನಂ. 85, ರಂಗರಾವ್‌ ರಸ್ತೆ, ಚಾಮರಾಜ ಪೇಟೆ. ಎಷ್ಟು ಸುಲಭ ಇದು? ಇದರಲ್ಲಿ ಕ್ರಾಸ್‌, ಮೇನ್‌, ಸ್ಟೇಜ್‌ಗಳ ಹಾವಳಿಯೇ ಇಲ್ಲವಲ್ಲಾ. ಅರೆ, ಬೆಂಗಳೂರಿನ ಕೆಲವು ಹಳೆಯ ಬಡಾವಣೆಗಳಲ್ಲಿ ಅಡ್ರಸ್‌ಗಳು ಸರಳವಾಗಿಯೇ ಇವೆಯಲ್ಲ. ಮಲ್ಲೇಶ್ವರವನ್ನೇ ತಗೊಳ್ಳಿ: ಇಂಥ ನಂಬರ್‌, ಬೇವಿನ ಮರದ ರಸ್ತೆ ಅಥವಾ 18ನೇ ಕ್ರಾಸು, ಅಷ್ಟೆ ! ಈ ಹೊಸ ಬಡಾವಣೆಗಳಲ್ಲೇ ಅಡ್ರಸ್‌ಗಳು ಆರು ಆಯಾಮಗಳ ಲೋಕವಾಗಿರುವುದು. ರಸ್ತೆಗಳ ನಾಮಕರಣ ಪುರಾಣ ಮತ್ತೊಂದು ಚಕಿತಗೊಳಿಸುವ ವೈಖರಿ. 50 ಅಡಿ ರಸ್ತೆ, ನೂರಡಿ ರಸ್ತೆ ಎಂದು ಹೆಸರಿಡುವುದು ಎಂಥ ಪದ್ಧತಿ? ಬೆಂಗಳೂರಿನಲ್ಲಿ ಇದೊಂದೆಯೇ ಐವತ್ತು ಅಡಿ ಅಗಲವಿರುವ ರಸ್ತೆ ? ಇನ್ನು ಬೇವಿನ ಮರದ ರಸ್ತೆಯನ್ನು ಮಾರ್ಗೋಸಾ ರೋಡ್‌ ಎಂದೂ, ಬಸವನಗುಡಿ ರಸ್ತೆಯನ್ನು ಬುಲ್‌ ಟೆಂಪಲ್‌ ರೋಡ್‌ ಎಂದೂ ಕರೆಯುವುದು ಏನು ಚೆನ್ನ ? ಅಡ್ರಸ್‌ ಬರೆದುಕೊಳ್ಳುವಾಗ, 1ನೇ ಕ್ರಾಸ್‌, 2ನೇ ಮೇನನ್ನು, 2ನೇ ಕ್ರಾಸ್‌, 1ನೇ ಮೇನ್‌ ಎಂದು ಬರೆದುಕೊಳ್ಳುವ ಸುಲಭ ತಪ್ಪನ್ನು ಯಾರು ಬೇಕಾದರೂ ಮಾಡಬಹುದು. ಆದರೆ ರಂಗರಾವ್‌ ರಸ್ತೆಯನ್ನು (ಠಂಗ ಠಾವ್‌ ಠಸ್ತೆ ಎಂದು ಕೆಲವು ಕಿಡಿಗೇಡಿಗಳು ಬೋರ್ಡನ್ನು ವಿರೂಪಗೊಳಿಸಿದ್ದರೂ) ಕೃಷ್ಣ ರಾವ್‌ ರಸ್ತೆ ಅಂತ ತಪ್ಪಾಗಿ ಯಾರು ಬರೆದುಕೊಳ್ಳುತ್ತಾರೆ? ರಸ್ತೆಗಳಿಗೆ ನಂಬರ್‌ಗಿಂತ ಹೆಸರುಗಳಿದ್ದರೇ ಸುಲಭ.

  ಹೆಸರುಗಳಾದರೆ ನೆನಪಿಟ್ಟುಕೊಳ್ಳಲು ಸಲೀಸು. ಹೊಸದಾಗಿ ಯಾರನ್ನಾದರೂ ಭೇಟಿಯಾದಿರೆನ್ನಿ. ಅವರ ಹೆಸರು ಬಹಳ ದಿನ ನೆನಪಿನಲ್ಲಿರುತ್ತದೆ, ಫೋನ್‌ ನಂಬರು ಬೇಗ ಮರೆತು ಹೋಗುತ್ತದೆ. ಅದಕ್ಕೇ ಹೇಳಿದ್ದು, ರಸ್ತೆಗಳಿಗೆ ನಂಬರ್‌ಗಿಂತ ಹೆಸರಿಡೋದೇ ಚೆನ್ನ, ಅನುಕೂಲವೂ ಹೌದು. ಅನುಕೂಲ ಏನಂದಿರಾ? ವಿಷಯಕ್ಕೆ ಬರೋಣ.

  ಇದು ಎರಡನೇ ಮೇನ್‌ ಆದರೆ, ಮುಂದಿನದು ಮೂರನೇದೋ, ಒಂದನೇದೋ ಆಗಿರಬೇಕಲ್ಲವೆ? ಹೆಸರಿಟ್ಟರೆ ಆ ಅನುಕೂಲ ತೊಲಗುವುದಿಲ್ಲವೆ? ಎಂಬ ಪ್ರಶ್ನೆ ಏಳುತ್ತದೆ. ಹೂಂ, ನಂಬರ್‌ಗಳಿಗಿರುವ ಕ್ರಮ ವ್ಯವಸ್ಥೆ ಪದಗಳಿಗಿಲ್ಲ, ಅವೇ ಮೇಲು ಎಂದು ಭಾವಿಸುತ್ತೀರಿ. ಕ್ರಮವಾಗಿ ಬರುವ ಪದಗಳಿಲ್ಲವೆ? ಎಂಬ ಪ್ರಶ್ನೆ ಕಾಡುತ್ತದೆ. ಚಿಕ್ಕಂದಿನಲ್ಲಿ ಕಂಠಪಾಠ ಮಾಡಿದ ‘ಚೈತ್ರ, ವೈಶಾಖ, ... ’, ‘ಅಶ್ವಿನಿ, ಭರಣಿ, ...’ ಜ್ಞಾಪಕಕ್ಕೆ ಬರುತ್ತವೆ. ರಸ್ತೆಗಳಿಗೆ ಅಶ್ವಿನಿ ರಸ್ತೆ, ಭರಣಿ ರಸ್ತೆ ಎಂದು ಹೆಸರಿಟ್ಟರೆ ಹೇಗೆ? ನಂ. 25, ಅಶ್ವಿನಿ ರಸ್ತೆ, ಹೇಗಿದೆ ಅಡ್ರಸ್ಸು ? ಇದು ಭರಣಿ

  ರಸ್ತೆಯಾದರೆ ಮುಂದಿನದು ಕೃತ್ತಿಕಾ ರಸ್ತೆ. ಇನ್ನೂ ಹೆಚ್ಚು ಬೇಕಾದರೆ ಪ್ರಭವ, ವಿಭವ, ... ರಸ್ತೆಗಳೊಂದಿಗೆ ಸಂಸ್ಕೃತಿ ಬೆಸೆಯುವುದೆಂದರೆ ಇದೇ ಕಣ್ರೀ.

  ಸಂಸ್ಕೃತಿ-ರಸ್ತೆ ಬೆಸೆವ ಐಡಿಯಾ ಹೇಗಿದೆ ? ಕಲ್ಪಿಸಿಕೊಂಡು ನಕ್ಕಿರಾ ? ಒಂದು ಮಾತು ನೆನಪಿಡಿ, ಸಂಸ್ಕೃತಿ ನಗೆಯ ಸರಕಲ್ಲ ! ಹಾಗೆಯೇ ನಕ್ಕಷ್ಟು ಸುಲಭವಾಗಿ, ಅಡ್ರಸ್ಸು ಹುಡುಕೋದು ಸುಲಭವಲ್ಲ ! ನನ್ನ ವಿನಂತಿ ಇಷ್ಟೇ- ಅಡ್ರಸ್ಸು ಸರಳವಾಗಿರಲಿ, ಮುಖ್ಯವಾಗಿ ನೆನಪಿನಲ್ಲಿರುವಂತೆ. ಈ ಸರಳತೆ ಸಂಸ್ಕೃತಿಯಾಂದಿಗೆ ಹೊಂದಿಕೊಳ್ಳುವುದಾದರೆ ಬೇಡವೆನ್ನುವುದು ಯಾಕ್ರಿ?

  ಮುಖಪುಟ / ಬೆಂಗಳೂರು ಡೈರಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more