ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ನೀವೇ ಬರೆದ ಇಳ‘ಕಲ್ಲು’ ನೇಕಾರರ ಕರುಳು ಕರಗುವಂಥ ಕಥೆ!

By Staff
|
Google Oneindia Kannada News

ನಾವು ನೀವೇ ಬರೆದ ಇಳ‘ಕಲ್ಲು’ ನೇಕಾರರ ಕರುಳು ಕರಗುವಂಥ ಕಥೆ!
ಮಗ್ಗಗಳ ಸದ್ದು ಕ್ಷೀಣವಾದಷ್ಟೂ 9 ಲಕ್ಷ ಮಂದಿಯ ಎದೆಬಡಿತದ ಗ್ರಾಫ್‌ ಜೋಕಾಲಿಯಾಡತೊಡಗುತ್ತದೆ.

  • ದಟ್ಸ್‌ಕನ್ನಡ ಬ್ಯೂರೊ
ಗಾಂಧೀಜಿ ಎನ್ನುವ ಮನುಷ್ಯನಿದ್ದ . ಸಣ್ಣ ಕೈಗಾರಿಕೆಗಳಿಗೆ ಬೆಂಬಲ ಕೊಡಿ, ಗುಡಿ ಕೈಗಾರಿಕೆಗಳಿಗೆ ಮನ್ನಣೆ ನೀಡಿ. ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ. ಹಳ್ಳಿಗಳ ಉದ್ಧಾರವಾಗದ ಹೊರತು ಸ್ವರಾಜ್ಯದ ಪರಿಕಲ್ಪನೆ ಪೂರ್ಣವಾಗುವುದಿಲ್ಲ ...... ಮುಂತಾಗಿ ಒಂದಾನೊಂದು ಕಾಲದ ಆ ಮನುಷ್ಯ ಹೇಳುತ್ತಿದ್ದ . ನಾವು ಜಾಣರು ನೋಡಿ : ಗಾಂಧಿ ಎನ್ನುವ ಆತನನ್ನು ಪ್ರತಿಮೆಯನ್ನಾಗಿ ಸರ್ಕಲ್ಲುಗಳಲ್ಲಿ ಪ್ರತಿಷ್ಠಾಪಿಸಿಬಿಟ್ಟಿದ್ದೇವೆ. ಆತ ಹೇಳಿದುದನ್ನು ಪುಸ್ತಕಗಳಲ್ಲಿ ಬಂಧಿಸಿ ನಿರಾಳವಾಗಿದ್ದೇವೆ.

ಇಳಕಲ್ಲಿನ ನೇಕಾರರ ಗೋಳಿನ ಕಥೆಯ ಕೇಳಿದಾಗ ಥಟ್ಟನೆ ನೆನಪಾಗುವುದು ಅದೇ ಗಾಂಧೀಜಿ.

ಗುಡಿ ಕೈಗಾರಿಕೆಗಳ ಕುರಿತು ನಮ್ಮ ಆಳುವ ವರ್ಗದ ಅನಾದರಣೆಯ ಪ್ರತಿಫಲ, ಇಂದು ಇಳಕಲ್ಲಿನ ನೇಕಾರರು ಅನುಭವಿಸುತ್ತಿರುವ ತವಕ ತಲ್ಲಣಗಳು. ಒಂದು ಕಾಲದಲ್ಲಿ ಭಾರತೀಯ ಮಹಿಳೆಯರ ಅಚ್ಚುಮೆಚ್ಚಿನ ವಸ್ತ್ರವಾಗಿದ್ದ ಇಳಕಲ್ಲಿನ ಸೀರೆಗಳನ್ನು ಇಂದು ಕೇಳುವವರಾದರೂ ಯಾರು ?

ಪಾಶ್ಚಾತ್ಯೀಕರಣ, ಜಾಗತೀಕರಣ, ಉದಾರೀಕರಣ... ಒಂದೇ ಎರಡೇ... ಇಳಕಲ್ಲಿನ ಸೀರೆಗಳನ್ನು, ಆ ಮೂಲಕ ನೇಕಾರರ ಬದುಕನ್ನು ಮೂರಾಬಟ್ಟೆ ಮಾಡಿದ ದೈತ್ಯಶಕ್ತಿಗಳು ! ನಿಮಗೆ ಗೊತ್ತಾ - ಇಳಕಲ್ಲು ಹಾಗೂ ಆಸುಪಾಸು ಇಂದಿಗೂ ಕನಿಷ್ಠ 25 ಸಾವಿರ ಮಗ್ಗಗಳಿವೆ. ಅಂದಾಜು 9 ಲಕ್ಷ ಜನರ ಉಸಿರು ಈ ಮಗ್ಗಗಳ ಶಬ್ದದೊಂದಿಗೆ ಬೆರೆತುಹೋಗಿದೆ. ಮಗ್ಗಗಳ ಸದ್ದು ಕ್ಷೀಣವಾದಷ್ಟೂ ಇವರ ಎದೆಬಡಿತದ ವೇಗ ಕಡಿಮೆಯಾಗುತ್ತದೆ.

ಸರ್ಕಾರ ಏನು ಮಾಡುತ್ತಿದೆ ಎಂದಿರಾ? ಸರ್ಕಾರ ಭರವಸೆಗಳನ್ನು ಕೊಡುತ್ತಲೇ ಇದೆ. ತರಬೇತಿ, ಉದ್ಯೋಗ, ಕಚ್ಛಾವಸ್ತುಗಳನ್ನು ಒದಗಿಸುವುದು- ಮುಂತಾಗಿ ಅಂಗೈಯಲ್ಲಿ ಸ್ವರ್ಗ ತೋರಿಸುವ ಕಸರತ್ತನ್ನು ಈವರೆಗಿನ ಎಲ್ಲ ಸರ್ಕಾರಗಳೂ ಮಾಡುತ್ತಲೇ ಬಂದಿವೆ. ಅನುಷ್ಠಾನ ಮಾತ್ರ ಅಷ್ಟಕ್ಕಷ್ಟೇ .

ಧರ್ಮಸಿಂಗ್‌ ಮುಖ್ಯಮಂತ್ರಿ ಆಗುವುದಕ್ಕಿಂಥ ಮುನ್ನ ಒಂದು ಸರ್ಕಾರ ಇತ್ತಲ್ಲ , ಆ ಸರ್ಕಾರ ನೇಕಾರರಿಗೆಂದು ಒಂದು ವಿಶೇಷ ಯೋಜನೆಯನ್ನೂ ಪ್ರಕಟಿಸಿತ್ತು . ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನ ಸರ್ಕಾರ ಬಿದ್ದುಹೋಯಿತು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಾದರೂ ಈ ಪ್ಯಾಕೇಜನ್ನು ಫಲಪ್ರದವಾಗಿಸುತ್ತಾ ? ಅಂತದೊಂದು ಪುರಸೊತ್ತು ಧರ್ಮಸಿಂಗ್‌-ಸಿದ್ಧರಾಮಯ್ಯ ಜೋಡಿಗಿದೆಯಾ ? ಇಳಕಲ್ಲಿನ ನೇಕಾರರು ನಿರೀಕ್ಷಿಸುತ್ತಿದ್ದಾರೆ.

ಇದ್ದುದರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರವೇ ವಾಸಿ. ಕರ್ನಾಟಕ ಹ್ಯಾಂಡ್‌ಲೂಂ ಅಭಿವೃದ್ಧಿ ನಿಗಮವು ವಿದ್ಯಾ ವಿಕಾಸ ಯೋಜನೆಯಡಿ ಮಕ್ಕಳ ಸಮವಸ್ತ್ರಗಳನ್ನು ಖರೀದಿಸುತ್ತಿತ್ತು . ಆದರೆ, ವಿಪರ್ಯಾಸ ನೋಡಿ ; ನಿಗಮವೇ ಈಗ ರೋಗಗ್ರಸ್ತ ! ಈಗಲೂ ಸಮವಸ್ತ್ರ ಖರೀದಿ ಚಾಲನೆಯಲ್ಲಿದೆ. ಕಾಸು ಮಾತ್ರ ಸರ್ಕಾಲಕ್ಕೆ ಕೈಗೆ ಬರುತ್ತಿಲ್ಲ . ಅಕ್ಟೋಬರ್‌ನಲ್ಲಿ ನಡೆದ ಖರೀದಿಗೆ ಜೂನ್‌ನಲ್ಲೂ ಬಟವಾಡೆ ದೊರೆಯುವುದಿಲ್ಲ . ತುತ್ತಿನ ಚೀಲ ತುಂಬುವುದು ಹೇಗೆ ?

ಸರ್ಕಾರದ ಮಾತು ಬಿಡಿ. ಜನ ಸಾಮಾನ್ಯರಾದ ನಾವು ನೀವೇನು ಮಾಡುತ್ತಿದ್ದೇವೆ ? ಇಳಕಲ್ಲು ಎನ್ನುವುದು ಕರ್ನಾಟಕದ ವಸ್ತ್ರ ಸಂಸ್ಕೃತಿಯ ಒಂದು ಭಾಗ. ಅಂಥದೊಂದು ಸಂಸ್ಕೃತಿಯ ಉಳಿಸುವುದು ಬೇಡವಾ ? ವಾರದಲ್ಲಿ ಒಂದು ದಿನವಾದರೂ ದೇಸಿ ವಸ್ತ್ರ ತೊಡುವ ವ್ರತ ತೊಟ್ಟರೆ, ಇಳಕಲ್ಲು ಹಾಗೂ ಇತರ ಊರಿನ ನೇಕಾರರ ಉಸಿರು ಕೊಂಚ ಸರಾಗವಾದೀತು. ಆ ನೆಮ್ಮದಿ ನಿಮಗೆ ಬೇಡವೇ ?

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X