• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೇಮಪತ್ರ ಅಲ್ರೀ ಸೀರಿಯಸ್‌ ಪತ್ರಾನ... ಅದ...

By Staff
|

ಪ್ರೇಮಪತ್ರ ಅಲ್ರೀ ಸೀರಿಯಸ್‌ ಪತ್ರಾನ... ಅದ...
ಮಿನಿಷ್ಟ್ರಾಗಿದ್ದಾಗ ತಾನಾಯ್ತು ತನ್ನ ಪಾಡಾಯ್ತು ಅನ್ನೂವಂಗಿದ್ದ ಧರ್ಮಸಿಂಗ್‌ ಸಾಹೇಬ್ರು , ಮುಖ್ಯಮಂತ್ರಿ ಆದದ್ದೇ ತಡ- ನಾನು ಶಾಯರಿ ಫ್ಯಾನು, ಸಾಹಿತ್ಯದ ಫ್ಯಾನು ಅಂಥ ಮುದ್ದುಮುದ್ದಾಗಿ ಹೇಳತೊಡಗಿದರು. ಈ ಶಾಯರೀ ನೆಪದಾಗೆ ಹುಟ್ಟಿಕೊಂಡ ಉಭಯ ಕುಶಲೋಪರಿ ಪತ್ರ ಇಲ್ಲಿಹುದು.

ಶಾಯರಿಗಳು ಅಂತಂದ್ರ ನನಿಗ ರಗಡು ಇಷ್ಟಾ ಐತಿ. ಸಾಹಿರ್‌ ಲುಧಿಯೇನವಿ, ಗೋರಖ್‌ಪುರಿ, ಕೈಫಿ ಅಜ್ಮಿ ಅವರಂಥ ಧೀಮಂತರು ಬದುಕಿನ ತತ್ವಗಳನ್ನು ಶಾಯರಿಯಾಗಿಟ್ಟು ಕೊಟ್ಟಾರಲ್ಲ? ಅದನ್ನ ಮ್ಯಾಲಿಂದ ಮ್ಯಾಲ ನಾ ಅನುಭವಿಸ್ತೀನಿ. ಶಾಯರಿ ಜಗತ್ತು ನನಿಗ್‌ಅ ಸಮಚಿತ್ತ ನೀಡೇದ. ಶಾಯರಿ, ನನ್ನನ್ನ ಕವಿಯನ್ನಾಗಿ ಮಾಡಿಬಿಟ್ಟದ. ಹೌದರೀ, ನಾ ಶಾಯರಿ ಬರದೇನಿ. ಭಾಷಣದ ನಡೂವ ಶಾಯರೀನ ಬಳಸೇನಿ. ಶಾಯರಿ ನನ್ನನ್ನ ಹಗುರಾಗಿಸ್ಯದ. ನನ್ನಲ್ಲಿ ಹೊಸ ಉತ್ಸಾಹ ಎದ್ದು ನಿಲ್ಲೂ ಹಂಗ ಮಾಡ್ಯದ. ನಾ ಶಾಯರಿಗ ಫ್ಯಾನ್‌. ಸಾಹಿತ್ಯದ ಫ್ಯಾನ್‌..

ಮಾನ್ಯ ಮುಖ್ಯಮಂತ್ರಿಗಳಾದ ಧರ್ಮಸಿಂಗ್‌ ಸಾಹೇಬರೆ,

ನೀವು ಸಚಿವರಾಗಿದ್ದಿರಲ್ಲ , ಯಾಕೋಪ್ಪ- ಆಗೆಲ್ಲ ಇಂಥ ಮಾತು ಹೇಳಿರಲಿಲ್ಲ. ಅದೇ ಮುಖ್ಯಮಂತ್ರಿ ಹುದ್ದೆಗೆ ಏರಿದ ದಿನವೇ ಹೀಗೆಲ್ಲ ಹೇಳಿದಿರಿ. ಶಾಯರಿಯ ನೆಪದಲ್ಲಿ ಕವಿಯಾದಿರಿ. ಒಂದಿಷ್ಟು ಹೊತ್ತು ರಾಜಕೀಯ, ಅದರ ಕಿರಿಕಿರಿ, ಅಲ್ಲಿನ ಗೊಂದಲ ಎಲ್ಲವನ್ನೂ ಮರೆತು ಶುದ್ಧ ಮಗುವಿನಂತೆ ನಗಲು ಶುರುವಿಟ್ಟಿರಿ. ಸಂಭ್ರಮದಿಂದಲೇ K.ಟೀ. ಹೀರಲು ಕುಳಿತಿರಿ. ಇಂಥ ಸಂದರ್ಭದಲ್ಲೇ ನಿಮ್ಮದೇ ಭಾಷೆಯಲ್ಲಿ ನಿಮಗೊಂದು ಛಂದ್‌ ಛಂದದ ಪತ್ರಾ ಬರಿಯಬೇಕು ಅನ್ನಿಸಿತಲ್ಲ- ಅದೇ ನೆಪದಾಗ ಈ ಪತ್ರ-

***

ಸರ.. ಖರೇ ಹೇಳಬೇಕಂದ್ರ.., ನೀವ್‌ ಆ ಶಾಯರೀ ಪ್ರೇಮಿ ಇದ್ದೀರಲ್ಲ- ಆ ನೆಪದಾಗ ಪ್ರೇಮಪತ್ರಾ ಬರೀಬೇಕಂತ ಇದ್ದನ್ರೀ. ಆದ್ರ.. ಮುಖ್ಯಮಂತ್ರಿ ಆದ ದಿನದಿಂದಲಾನ.. ನೀವ.. ಅತಂತ್ರ ಸ್ಥಿತಿಯಾಳಗಾ ಉಳಕೊಂಡೀರಿ. ಮಿಗಿಲಾಗ್‌ಅ ನಿಮಗ.. ವಯಸ್ಸು ಎಪ್ಪತ್ತು ದಾಟೇದ. ಈ ವಯಸ್ಸಿನಾಗ.. ನಿಮಗ.. ಗುಲಾಬಿ ಕೊಡತೇನಿ ಅಂತ ಬಂದ್ರ; ಅಂಥದೇ ಪತ್ರ ಬರೀಲಿಕ್‌ ಹೊಂಟ್ರ ಏನ.. ಛೆಂದ? ಅದಕ್ಕಾನ.. ಸೀರಿಯಸ್‌ ಪತ್ರಾನ ಹಾಕ್ಕೇನರೀ. ರಾಜಕೀಯದ ರಗಡು ಬಿಜಿಯ ನಡುವ.. ಒಂದೀಟ ಬಿಡೂ ಮಾಡಿಕೊಂಡ ಈ ಪತ್ರ ಓದರೀ.

ಹೌದಲ್ರೀ ಸರ.., ಉಳಿದೆಲ್ಲರ ಹಂಗ..ನ ಮುಖ್ಯಮಂತ್ರಿ ಆಗಬೇಕು ಅನ್ನೂದ.. ನಿಮ್ಮ ಬಹುದಿನಗಳ ಕನಸು. ಒಂದಲ್ಲ, ಎರಡಲ್ಲ ಬರಾಬರ್‌ ಮೂರು ಬಾರಿ ನೀವ.. ಸೀಎಂ ಆಗಲಿಕ್ಕ ಭಾಳಾ ಪ್ರಯತ್ನಾ ಪಟ್ಟೇರಿ. ಆಗ ಸಿಗದ ಲಕ್ಕು ಈ ಸರ್ತೆ ಅಕಸ್ಮಾತ್‌ ಸಿಕ್ಕೇಬಿಡ್ತು. ಹೇಳ್ರೀ ಸರ.., ಸೀಎಂ ಪಟ್ಟ ನಿಮಗೇ ಅನ್ನೂದ.. ಖರೇ ಆತಲ್ಲ- ಆ ಕ್ಷಣದಾಗ ಏನಂತ ಅನ್ನಿಸ್ತರೀ? ಆಗಲೂ ಶಾಯರೀ, ಅದರ ಮೋದ ಅಲ್ಲಿನ ನೀತಿ ನೆನಪಾಗೇ ಬಿಡ್ತ..? ಇಲ್ಲ- ತಡೀಲಾರದ ಖುಷೀವಳ್‌ಗ ಕಣ್ಣ ತುಂಬಿ ಬಂತಾ..?

ಸರ.., ಕರನಾಟಗದ ಮಂದಿ ದಶಕದಿಂದ ನೋಡತಾ ಬಂದಾರ. ನೀವ್‌ಅ ದಶಕದಿಂದ..ನ ಅದೇ ಗುಲಬರ್ಗಾ ಸೀಮ್ಯಾಗಿನ ಜೇವರ್ಗಿಯಿಂದನ.. ಗೆಲ್ಲತಾ ಬಂದೀರಿ. ಒಬ್ಬ ರಾಜಕಾರಣಿ ಎಷ್ಟೆಲ್ಲ ಎತ್ತರಕ್ಕ.. ಬೆಳ್ದ ನಿಲ್ಲಬಹುದೋ ಅಷ್ಟು ಎತ್ತರಕ್ಕ ಬೆಳೆದು ನಿಂತೀರಿ. ಆದ್ರೂ ಸೈತ- ನಿಮ್ಮ ತವರು ಕ್ಷೇತ್ರದಾಗ ರಸ್ತೆ ಛಂದಿಲ್ಲ. ಕುಡ್ಯಾಕ ಛಲೋ ನೀರು ಸಿಗೂದಿಲ್ಲ. ಟೈಂ ಟೈಮಿಗ ಬಸ್ಸ ಬರುದಿಲ್ಲ. ಚರಂಡಿ ಅದಾವಲ್ಲ- ಅಲ್ಲಿ ಕ್ಲೀನ್‌ ಅಂಬೂದ ಇಲ್ಲ. ಅಷ್ಟೆಲ್ಲ ಇದ್ದರೂನ ಜೇವರ್ಗಿ ಮಂದಿ ನಿಮ್ಮನ್ನ ತುಂಬ ಹಚಿಗೊಂಡಾರ. ಅಲಲೆ, ಅಂವಾ ನಂ ಧರ್ಮಸಿಂಗ್‌ ಸಾಹೇಬ ಅದಾನ. ಅವಾ ದೊರೀ, ದೊರೀ ಹಾಂಗ ಇರಬೇಕು. ಸೋಲಿಲ್ಲದ ಸರ್ದಾರನ ಹಂಗ್‌ಅ ಮೆರೀಬೇಕು ಅಂತ ನಿರ್ಧರಿಸ್ಯಾರ. ಅದೇ ನೆಪದಲ್ಲಿ ಪ್ರತೀ ಸರ್ತಿ ನಿಮ್ಮನ್ನ ಗೆಲ್ಲಿಸಿ ಕಳಸತೇನ ಉಳಿದಾರ... ಆ ಸಿಮ್ಯಾಗಿನ ಮಂದೀ ಮ್ಯಾಲ ಅದೆಂಥ ಜಾದೂ ಮಾಡೀರೀ ಉಯಪ್ಪಾ? ಒಂದೀಟ ಹೇಳ್ರಲಾ...

ನೀವ.. ಸೀಎಂ ಅಂತ ಕುರ್ಚಿ ಮ್ಯಾಲ ಕೂತ್ರಲ್ಲ- ಆಗಿಂದ..ನ ರಾಜ್ಯದಾಗ ದೀಡ ಮಳಿ ಆಗ್ಯದ. ರೈತರ ಮೊಗದಾಗ ನಗೀ ನವಿಲು ಕುಣಿದಾಡ್ಯದ. ಮಳೀ ಹಿಂದ..ನ ಕೆಟ್ಟ ಸಿಡಿಲಿನ ಹಂಗ್‌ಅ ಆ ತಮಿಳ್ನಾಡ ಮಂದಿ ಕಾವೇರಿ ನೀರ ಕೊಡರೀ ಅಂತ ಬಂದಾಗ-ಹ್ಯಂಗ್ಗಲ್ಲ ಕೊಡಾಕ ಬರಾದಿಲ್ರೀ. ನಮಿಗೇ ನೀರಿಲ್ಲ. ನಿಮಿಗ.. ಅದೆಲ್ಲಿಂದ..ನ ತರೂದ ಅಂತೆಲ್ಲ ದಬಾಯಿಸಿ ಅವರ ಮೊಗದಾಗ ನೀರಿಲಿಸಿ ಕಳಿಸಿದ್ರಲ್ಲ- ಆಗೆಲ್ಲ ರಾಜ್ಯದ ಮಂದೀ ಭಾಳಾಂದ್ರ ಭಾಳ ಖುಷಿ ಪಟ್ಟಾರ. ಸೀಎಂ ಅಂದ್ರ ನೋಡಪ, ಹಿಂಗ ಇರಬೇಕ್‌ ಅಂತ ಷರಾ ಬರ್ದು ಬಿಟ್ಟಾರ!

ಹೌದ್ರೀಯಪ್ಪ. ಸೀಎಂ ಅಂದಮ್ಯಾಗ ನೀವ್‌ಅ ಇಡೀ ರಾಜ್ಯದ ಹೊಣೆ ಹೊತ್ತ ಮನಷಾ. ಕಾವೇರಿ ಅಂದಾಗ ಹ್ಯಂಗೋ ಹಂಗ.. ಕೃಷ್ಣೆ ಅಂದಾಗಲೂ ಮೊದ್ಲು ನಂ ಮಂದೀಗ ನೀರ ಕೊಡತೇವಿ. ಮಿಕ್ಕಿದ್ರ ಮಾತ್ರ ನಿಮಗೂ ಬಿಡತೇವಿ ಅನ್ನಬೇಕರೀ. ಹಂಗಂದ್ರ ಮಾತ್ರ ನೀವ.. ಇದೇ ಮಂದೀ ಕಣ್ಣಾಗ ಹೀರೋ ಅನ್ನಿಸಿಕೋಬಹುದು. ಇಲ್ಲಾಂದ್ರ..........

***

ಸರ.. ಮುಚ್ಚುಮರಿ ಇಲ್ದ ಒಂದ್‌ ಮಾತ್‌ ನಿಮಗ.. ಹೇಳಬೇಕು ಅನ್ನಿಸ್ಯದ. ಏನಂದ್ರ ನಿಂ ಕಾಲ್ದಾಗ ರಗಡು ಅಭಿವೃದ್ಧೀ ಕೆಲ್ಸ ನಡೀಲಿ. ನಾಡ ಮಂದಿ ಹಾಗಂತ ಆಸಿ ಪಟ್ಟಾರ. ನೀವ್‌ಅ ಬೆಂಗ್ಳೂರನ ಸಿಂಗಾಪುರ ಮಾಡೂದ.. ಬ್ಯಾಡ. ಅದು ಬೆಂಗ್ಳೂರ ಹಂಗ..ನ ಇರ್ಲಿ. ಮಾತಿಗೊಮ್ಮೆ ನೀವ್‌ ಸೈತ-ಐಟಿ, ಬಿಟಿ ಅಂತ ಬಡಬಡಿಸೂದ ಬ್ಯಾಡ. ನಾಡಿನ ಉದ್ದೋ ಉದ್ದಕ ತರಾವರಿ ಕಂಪನಿಗಳು ಎದ್ದು ನಿಂತಾವಲ್ಲ, ಅದ್ರ ಹಿಂದ.. ನೀವ್‌ ಬ್ಯಾಡ ಅಂದ್ರು ಕೂಡ ಐಟಿ ಬೆಳೀತಾ ನಿಂದ್ರತೆತಿ.

ಮುಖ್ಯಾ ಅಂದ್ರ, ನಾಡಿನಾಗ ರೈತ ಭಾಳಾಂದ್ರ ಭಾಳ ಕಷ್ಟಕ್ಕ.. ಸಿಕ್ಕಿಕೊಂಡಾನ. ಅವಂಗ.. ಕಾಲಿಗೊಂದು ಕಷ್ಟ. ಕೈ ಇಟ್ರ ನಷ್ಟ. ಹಂಗ್‌ಅ ಆಗಿ ಹೋಗ್ಯದ. ಬಾವಿ ತೆಗೆಸಿದ್ರೂ ನೀರಿಲ್ಲ. ಬೋರ್‌ ಹೊಡೆಸಿದ್ರೂ ನೀರು ಬರಾಂಗಿಲ್ಲ. ಹಂಗಾಗಿ ರೈತ ಸುಸ್ತು ಹೊಡದಾನ. ವರ್ಷ ವರ್ಷವೂ ಬ್ಯಳಿ ಅಂಬೂದ ಕೈಗ ಬರಾವಲ್ದು ಅನ್ನೂ ದುಃಖದಾಗ ಕ್ರಿಮಿನಾಶಕವನ್ನೇ ಗಟಗಟಾಂತ ಕುಡ್ದು ಖಲಾಸ್‌ ಆಗಿಬಿಡಲಿಕ್ಕ ತಯಾರಾಗಿ ನಿಂತಾನ. ಅಂಥ ರೈತನ ಜೀವಾ ಉಳಿಸೂ ಕ್ಯಲಸ ನಿಮ್ಮಿಂದ ಆಗಬೇಕಾಗ್ಯದ.

ಇಷ್ಟಲ್ದ, ಸರಕಾರಿ ಆಫೀಸುಗಳು ಅದಾವಲ್ರಿ- ಅಲ್ಲೆಲ್ಲ ಭಾಳ ಮಂದಿ ದುಷ್ಟರಿದ್ದಾರ. ಅವರೆಲ್ಲ ಲಂಚ ಪಡಿಯೂದ.. ನಮ್ಮ ಜನ್ಮಸಿದ್ಧ ಹಕ್ಕು ಅಂತ ವಾದಿಸಲಿಕ್ಕ ನಿಂತಾರ. ಆಫೀಸೊಳ್ಗೆ ಹೋಗಲಿಕ್ಕ..-ಲಂಚ. ಸೈನ ಪಡೀಲೀಕ ಲಂಚ. ಫೈಲು ಮುಟ್ಟಲೀಕ-ಲಂಚ. ಅದೇ ಫೈಲು ಮುಚ್ಚಲೀಕ, ಆಪೀಸಿನಿಂದ ಹೊರಗೆ ಕಳಿಸಲಿಕ್ಕನ ಲಂಚ ಕೇಳತಾರ. ಇಂಥ ಮಂದೀನ ಹದ್ದು ಬಸ್ತಿನಾಗ ಇಡಲೀಕ ಯಾವ್ದರಾ ಕಾನೂನು ತಂದ್ರ-ಆಗ ನೋಡ್ರೆಪಾ, ನಿಮ್ದು ನಿಜವಾದ ಧರ್ಮರಾಜ್ಯ ಆಗಿ ಬಿಡತೈತಿ.

ರಾಜಕಾರಣದ್ವಳಗ ಇಂಥದ್ದೆಲ್ಲ ಮಾಡೂದ ಕಷ್ಟ . ಆದ್ರ ಮನಸ್ಸಿದ್ರ ಮಾರ್ಗ ಅಂತ ನೀವೇ ಹೇಳೀರಲ್ಲ-ಅದೇ ನೆಪದಾಗ ಇಷ್ಟೆಲ್ಲ ಬರ್ದಬಿಟ್ಟೇನರಿ. ಬ್ಯಾಸರಾ ಮಾಡಿಕೋಬ್ಯಾಡಿ. ಸೀಎಂ ಅನ್ನೂ ತಲ ಬಿಸೀಯಾಳ್ಗ ಶಾಯರಿ ಓದೂದ ಬಿಡಬ್ಯಾಡರೀ.

ಕಡೀಕ ಆಫ್‌ ದಿ ರೆಕಾರ್ಡ್‌ ಮಾತೊಂದದ.. ಐ ಬಿಡಪಾ, ಇದ.. ಹೊಂದಾಣಿಕೇ ಸರಕಾರ. ಭಾಳ ದಿನಾ ಉಳ್ಯಾದಿಲ್ಲ. ಧರ್ಮಸಿಂಗ್‌ ಸೀಎಂ ಥರಾ ಉಳದಾರ ನಿಜ. ಆದ್ರ ನಿಜವಾದ ಸೀಎಂ ಅಂದ್ರ ಸಿದ್ರಾಮಯ್ಯ ಅಂತೆಲ್ಲ ಮಂದೀ ಮಾತಾಡತಾರ. ಅದೆಲ್ಲ ಖರೇನೇನರೀ....

ಈ ಮಾತ್‌ಅ ಸುಳ್ಲಾಗಲಿ. ಸೀಎಂ ಪಟ್ಟ ನಿಮಿಗ ಹೊರೆಯಾಗದಿರಲಿ. ಅಂಗ.. ಸಿದ್ರಾಮಯ್ಯ ಸಾಹೇಬ್ರು ಕೂಡ ನಿಂಕೂಡೆ ಜಗಳಕ್ಕ ನಿಲ್ಲದಿರ್ಲಿ... ಇಷ್ಟಾದ್ರ ಸಾಕಲ್ಲ...

ತಿಳಿದವರಿಗೆ ಹೆಚ್ಚಿಗೆ ಬರೆಯಲು ಶಕ್ತನಲ್ಲ.

ನಮಸ್ತೇೕ...

(ಸ್ನೇಹಸೇತು : ವಿಜಯ ಕರ್ನಾಟಕ)


ಮುಖಪುಟ / ಧರ್ಮ-ಕಾರಣ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more