ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು: ಕಲ್ಪವೃಕ್ಷದ ತವರಲ್ಲಿ ಹೊಂಗೆ ಸಾಮ್ರಾಜ್ಯಕ್ಕೆ ಶಂಕುಸ್ಥಾಪನೆ

By Staff
|
Google Oneindia Kannada News

ತುಮಕೂರು: ಕಲ್ಪವೃಕ್ಷದ ತವರಲ್ಲಿ ಹೊಂಗೆ ಸಾಮ್ರಾಜ್ಯಕ್ಕೆ ಶಂಕುಸ್ಥಾಪನೆ
ನುಸಿಯೆಂಬ ಏಡ್ಸ್‌ಗೆ ಸಿಲುಕಿ ತೆಂಗಿನಮರಗಳೆಲ್ಲ ಮಡಿಕೋಲಿನಂತೆ ಬೆತ್ತಲಾಗಿರುವಾಗ, ಹೊಂಗೆಯನ್ನು ವಾಣಿಜ್ಯಬೆಳೆಯಾಗಿ ಅಭಿವೃದ್ಧಿಪಡಿಸುವ ಒಂದು ಮಹತ್ವಾಕಾಂಕ್ಷೆಯ ಯೋಜನೆಗೆ ತುಮಕೂರು ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ತೆಂಗಿಗೆ ಪರ್ಯಾಯ ಹುಡುಕುವ ಪ್ರಯತ್ನ ರೈತರ ಗಮನ ಸೆಳೆದಿದೆ.

  • ಹ.ಚ. ನಟೇಶ್‌ಬಾಬು , ಶಿರಾ
ಹೊಂಗೆ ಎಂದಾಕ್ಷಣ ನೆನಪಿಗೆ ಬರುವುದು ಅದರ ತಂಪು ತಂಪು ನೆರಳು. ಹೊಂಗೆಯದು ಹರಕುಮುರುಕು ನೆರಳಲ್ಲ , ಅದು ದಟ್ಟ ನೆರಳು, ಗಾಢವಾದ ನೆಳಲು. ಬೇಸಿಗೆಯ ದಿನಗಳಲ್ಲಂತೂ ಹೊಂಗೆ ಮರದಡಿಯಲ್ಲಿ ನಿದ್ದೆ ಮಾಡುವುದು ಆಪ್ಯಾಯಮಾನವಾದ ಅನುಭವ. ಹೊಂಗೆ ಒಂದು ರೀತಿಯಲ್ಲಿ ಅಪ್ಪನ ಆಶ್ರಯವಿದ್ದಂತೆ ! ಅಮ್ಮ ಹಣ್ಣು ಕೊಡುವ ಮರದಂತಾದರೆ, ಹೊಂಗೆ ನೆಳಲು ನೀಡುವ ಅಪ್ಪ . ಆ ಕಾರಣದಿಂದಲೇ ಹೊಂಗೆ ನಮ್ಮ ಜನಪದೀಯರ ಬದುಕಿನ ಒಂದು ಭಾಗವಾಗಿತ್ತು .

ನೆಳಲಷ್ಟೇ ಅಲ್ಲ , ಹೊಂಗೆಯ ಕೊಂಬೆರೆಂಬೆ ಹಾಗೂ ಕಾಯಿಗಳೂ ಉಪಯುಕ್ತ . ಹೊಂಗೆಯ ರೆಂಬೆಕೊಂಬೆ ಉರುವಲಿಗೆ ಒದಗಿದರೆ, ಹೊಂಗೆಕಾಯಿ ಎಣ್ಣೆಗೆ ಮೂಲ. ಹೊಂಗೆಯ ಸೊಪ್ಪು ನಾಟಿಗೊಬ್ಬರಕ್ಕೆ ಒಳ್ಳೆಯ ಮೂಲ. ಹೀಗಾಗಿ ಹೊಂಗೆಯ ಮರವೂ ಒಂದುರೀತಿಯಲ್ಲಿ ಕಲ್ಪವೃಕ್ಷವೇ !

‘Honge being popularised in Tumkur Districtಹೊಂಗೆಯ ಈ ಕಥಾನಕಕ್ಕೆ ಕಾರಣ- ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಹೊಂಗೆಯ ಬೆಳೆ ಸುದ್ದಿಯಲ್ಲಿರುವುದು. ತುಮಕೂರು ಹೇಳಿ ಕೇಳಿ ತೆಂಗಿನಮರಗಳ ತವರು ; ಕಲ್ಪವೃಕ್ಷಗಳ ತವರು ಎಂದೇ ಪ್ರಸಿದ್ಧವಾದುದು. ಆದರೆ ಅದೆಲ್ಲ ಹಳೆಯ ಕಥೆ ಸ್ವಾಮಿ. ನುಸಿಯೆಂಬ ಪೀಡೆಯಿಂದಾಗಿ ತೆಂಗಿನಮರಗಳೆಲ್ಲ ಬಂಜೆಯಂತೆ ಒಣಗಿ ನಿಂತಿವೆ. ಸಾವಿರಾರು ಎಕರೆಗಳ ತೆಂಗಿನ ತೋಟಗಳು ಪಾಳುಬಿದ್ದಿವೆ. ತೆಂಗು ನಂಬಿಕೊಂಡ ರೈತರ ಮೋರೆಯಲ್ಲೀಗ ನಗೆ ಗುಳೆ ಎದ್ದಿದೆ. ಇಂಥದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ತೆಂಗಿಗೆ ಪರ್ಯಾಯ ಹುಡುಕಹೊರಟ ರೈತರ ಕಣ್ಣಿಗೆ ಬಿದ್ದಿದೆ- ‘ಹೊಂಗೆ’.

ಸರ್ಕಾರ ಕೂಡ ಹೊಂಗೆಯನ್ನು ವಾಣಿಜ್ಯ ಬೆಳೆಯಾಗಿ ಅಭಿವೃದ್ಧಿ ಪಡಿಸಲು ಆಸಕ್ತಿ ಹೊಂದಿದೆ. ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಪಾವಗಡ ಹಾಗೂ ಕೊರಟಗೆರೆ ತಾಲ್ಲೂಕುಗಳಲ್ಲಿ ಹೊಂಗೆಯನ್ನು ಪ್ರಮುಖವಾಗಿ ಬೆಳಸಲು ಸರ್ಕಾರ ಒತ್ತು ನೀಡಿದೆ. ಒಣ ಪ್ರದೇಶಗಳಾದ ಈ ತಾಲ್ಲೂಕುಗಳಿಗೆ ಹೊಂಗೆ ಒಗ್ಗುವಂಥ ತಳಿ.

ಒಂದು ಅಂದಾಜಿನ ಪ್ರಕಾರ, ಹೊಂಗೆ ಕೈಗೆಹತ್ತಿದರೆ ಒಂದು ಎಕರೆ ಪ್ರದೇಶದ ಬೆಳೆಗೆ ವಾರ್ಷಿಕ 45 ಸಾವಿರ ರುಪಾಯಿ ಲಾಭ ನಿಶ್ಚಿತ. ತೆಂಗಿನ ಬೆಳೆಗೆ ಈ ಮಾತು ಸದ್ಯಕ್ಕಂತೂ ಅನ್ವಯಿಸುವಂತಿಲ್ಲ . ಹಾಗಾಗಿ ಇದು ಹೊಂಗೆಯ ಕಾಲವಣ್ಣ !

ಹೊಂಗೆಯನ್ನು ಪ್ರಮುಖ ಬೆಳೆಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಜಿಲ್ಲೆಯಲ್ಲಿ ಈಗಾಗಲೇ ಚಾಲನೆ ದೊರೆತಿದೆ. ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಅಮರನಾರಾಯಣ ಇತ್ತೀಚೆಗೆ ಪಾವಗಡದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿಯ ಸಾಮಾಜಿಕ ಅರಣ್ಯ ಇಲಾಖೆಯಿಂದ 25 ಲಕ್ಷ ಹೊಂಗೆ ಗಿಡಗಳನ್ನು ನೀಡಲಾಗುವುದು. ಎಲ್ಲ 135 ಗ್ರಾಮ ಪಂಚಾಯಿತಿಗಳಲ್ಲೂ ಹೊಂಗೆ ಬೆಳೆ ಬೆಳೆಯಲು ಉತ್ತೇಜನ ನೀಡಲಾಗುವುದು ಎಂದು ಯೋಜನೆಯ ಕುರಿತು ಅಮರನಾರಾಯಣ ವಿವರ ನೀಡುತ್ತಾರೆ.

ಹೊಂಗೆಯ ಬಗೆಗೆ ಅಮರನಾರಾಯಣ ಒಂದಷ್ಟು ವಿಷಯ ಹೇಳ್ತಾರೆ, ಕೇಳಿ :

  • ಹೊಂಗೆ ಕೃಷಿ ಯೋಜನೆಯ ಯಶಸ್ಸಿಗೆ ಸ್ತ್ರೀಶಕ್ತಿ ಸಂಘಗಳನ್ನು ಬಳಸಿಕೊಳ್ಳಲಾಗುವುದು.
  • ತಮ್ಮ ಜಮೀನಿನಲ್ಲಿ ಹೊಂಗೆ ಬೆಳೆಯುವ ರೈತರಿಗೆ ಪ್ರೋತ್ಸಾಹದ ರೂಪದಲ್ಲಿ 50 ಕೇಜಿ ಅಕ್ಕಿ ನೀಡಲಾಗುವುದು.
  • ಮಧುಗಿರಿ ತಾಲ್ಲೂಕಿನಲ್ಲಿ ನೈಸರ್ಗಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೊಂಗೆ ಮರಗಳಿವೆ. ಇತ್ತೀಚಿನ ದಿನಗಳಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಗಮನ ಹರಿಸಿ, ಮರಗಳ ವೃದ್ಧಿಗೆ ಒತ್ತು ನೀಡಲಾಗುವುದು.
  • ಹೊಂಗೆ ಮರಗಳಿಗೆ ಔಷಧೀಯ ಗುಣವೂ ಇದೆ. ಹೊಂಗೆ ಎಣ್ಣೆ ಇಂಧನವೂ ಹೌದು. ಪೆಟ್ರೋಲ್‌-ಡೀಸೆಲ್‌ಗೆ ಬದಲಿಯಾಗಿ ಹೊಂಗೆಎಣ್ಣೆ ಬಳಸಬಹುದು. ಹೊಂಗೆ ಪರಿಸರ ಸ್ನೇಹಿ. ಅಂದಹಾಗೆ, ಹೊಂಗೆಯನ್ನು ಕೀಟನಾಶಕವಾಗಿಯೂ ಬಳಸಬಹುದು.
ಒಟ್ಟಿನಲ್ಲಿ , ಇದು ಹೊಂಗೆಯ ಕಾಲ. ತುಮಕೂರು ಜಿಲ್ಲೆಯಲ್ಲಿ ಹೊಂಗೆಯ ಈ ಪ್ರಯೋಗ ಯಶಸ್ವಿಯಾದರೆ, ರಾಜ್ಯದ ಉಳಿದ ಜಿಲ್ಲೆಗಳಿಗೂ ಹೊಂಗೆ ಅಭಿಯಾನ ಮುಂದುವರಿಯಬಹುದು. ಈ ಅಭಿಯಾನ ಯಶಸ್ವಿಯಾಗಲಿ. ಹೊಂಗೆ ಹೊನ್ನಾಗಿ ರೈತರ ಮುಖದಲ್ಲಿ ನಗೆ ಮರಳಲಿ. ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಸದಾ ಮೊರೆಯಲಿ.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X