ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮಿಶ್ರಸರ್ಕಾರ! ಜೆಡಿಎಸ್‌ ಜೊತೆ ‘ಕೈ’ಕುಲುಕಲು ಕಾಂಗ್ರೆಸ್‌ ಬಯಕೆ

By Staff
|
Google Oneindia Kannada News

ಸಮ್ಮಿಶ್ರಸರ್ಕಾರ! ಜೆಡಿಎಸ್‌ ಜೊತೆ ‘ಕೈ’ಕುಲುಕಲು ಕಾಂಗ್ರೆಸ್‌ ಬಯಕೆ
ಸರ್ಕಾರ ರಚಿಸಲು ಬಿಜೆಪಿಯೂ ಆಸಕ್ತ , ಎಲ್ಲ ಅವಕಾಶಗಳೂ ಮುಕ್ತ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಕಾಂಗ್ರೆಸ್‌ ಜಾತ್ಯತೀತ ಜನತಾದಳದ ಮುಂದಿಟ್ಟಿದೆ.

ಜಾತ್ಯತೀತ ಜನತಾದಳದೊಂದಿಗೆ ಮೈತ್ರಿಗೆ ಕಾಂಗ್ರೆಸ್‌ ಸಿದ್ಧವಿದೆ. ರಾಜ್ಯದಲ್ಲಿ ಜಾತ್ಯತೀತ ಸರ್ಕಾರವನ್ನು ರಚಿಸುವ ಉದ್ದೇಶದಿಂದ ಜೆಡಿಎಸ್‌ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆಗೂ ಕಾಂಗ್ರೆಸ್‌ ಸಿದ್ಧವಿದೆ ಎಂದು ರಾಜ್ಯ ಕಾಂಗ್ರೆಸ್‌ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಕ್ಷದ ಹಿರಿಯ ಧುರೀಣ ವಿಲಾಸ್‌ರಾವ್‌ ದೇಶ್‌ಮುಖ್‌ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಸಮ್ಮಿಶ್ರ ಸರ್ಕಾರ ಸ್ಥಾಪನೆಯ ಪ್ರಸ್ತಾಪವನ್ನು ಈಗಾಗಲೇ ದೇವೇಗೌಡರಿಗೆ ಕಳಿಸಿಕೊಟ್ಟಿದ್ದೇವೆ. ಈ ಕುರಿತು ಅವರ ಅಭಿಪ್ರಾಯವನ್ನು ನಿರೀಕ್ಷಿಸಲಾಗುತ್ತಿದೆ. ಶುಕ್ರವಾರ ಸಂಜೆ ದೇವೇಗೌಡರು ದೆಹಲಿಗೆ ತೆರಳುತ್ತಿದ್ದು , ಸರ್ಕಾರ ರಚನೆಯ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸುವ ನಿರೀಕ್ಷೆಯಿದೆ ಎಂದು ದೇಶ್‌ಮುಖ್‌ ಹೇಳಿದರು.

ವಿಲಾಸ್‌ರಾವ್‌ ದೇಶ್‌ಮುಖ್‌ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ಶುಕ್ರವಾರ ಚರ್ಚಿಸಿದರು.

ಬಿಜೆಪಿಯ ಆಶಾವಾದ : ರಾಜ್ಯ ವಿಧಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾದ ಬಿಜೆಪಿ ಸರ್ಕಾರ ರಚಿಸುವ ಕುರಿತು ಆಶಾಭಾವನೆ ಹೊಂದಿದೆ. ಜಾತ್ಯತೀತ ಜನತಾದಳ ತನಗೆ ಬೆಂಬಲ ನೀಡುವ ಕುರಿತೂ ಬಿಜೆಪಿ ಆಶಾಭಾವ ವ್ಯಕ್ತಪಡಿಸಿದೆ. ರಾಜ್ಯ ಬಿಜೆಪಿ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಶುಕ್ರವಾರ ಈ ಆಶಾಭಾವ ವ್ಯಕ್ತಪಡಿಸಿದರು.

ರಾಜ್ಯದ ಜನತೆ ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸಿದ್ದರು. ಆದ್ದರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಧಿಕಾರಕ್ಕೆ ಬರುವ ಕಾಂಗ್ರೆಸ್‌ ಪ್ರಯತ್ನಗಳು ಜನಾದೇಶಕ್ಕೆ ವಿರುದ್ಧವಾಗಿವೆ ಎಂದು ಜೇಟ್ಲಿ ಅಭಿಪ್ರಾಯಪಟ್ಟರು. ಸರ್ಕಾರ ರಚನೆಗೆ ಬಿಜೆಪಿ ಸರ್ವಯತ್ನವನ್ನೂ ನಡೆಸುವುದಾಗಿ ಅವರು ಹೇಳಿದರು.

ಈ ನಡುವೆ ಕೇಂದ್ರದಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸರ್ಕಾರ ರಚಿಸುವ ಪ್ರಕಿಯೆಗೆ ಚಾಲನೆ ಸಿಕ್ಕಿದ್ದು , ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿವೆ.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X