ಬೆಂಗಳೂರಿನಲ್ಲಿ ದೇಶದ ವೈಜ್ಞಾನಿಕ ಕ್ರಾಂತಿಯ ಕನ್ನಡಿ ‘ವಿಜ್ಞಾನ ರೈಲು’
ಬೆಂಗಳೂರಿನಲ್ಲಿ ದೇಶದ ವೈಜ್ಞಾನಿಕ ಕ್ರಾಂತಿಯ ಕನ್ನಡಿ ‘ವಿಜ್ಞಾನ ರೈಲು’
ಮೇ 17ರವರೆಗೆ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪ್ರದರ್ಶನ
‘ವಿಜ್ಞಾನ ರೈಲು’ ರಾಷ್ಟ್ರದ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿನ ಸಾಧನೆಯನ್ನು ಒಂದು ವಾರದ ಅವಧಿಯಲ್ಲಿ ಜನರಿಗೆ ತೋರಿಸಿಕೊಡಲಿದೆ ಎಂದು ವಿಜ್ಞಾನ ಪ್ರಸಾರ ಇಲಾಖೆಯ ನಿರ್ದೇಶಕರಾದ ಡಾ. ವಿ. ಬಿ. ಕಾಂಬ್ಳೆ ತಿಳಿಸಿದ್ದಾರೆ. ಸಾಗರ ಅಭಿವೃದ್ಧಿ, ಕೃಷಿ, ಸಂವಹನ, ಅಣು ವಿಜ್ಞಾನ, ದೂರವಾಣಿ, ಜಲ ಸಂಪನ್ಮೂಲಗಳು ಮುಂತಾದ ವಿಷಯಗಳ ಮೇಲೆ ಈ ವಿಜ್ಞಾನ ರೈಲ್ವೆ ಪ್ರದರ್ಶನವು ಬೆಳಕು ಚೆಲ್ಲಲಿದೆ.
ಅರಣ್ಯ ಇಲಾಖೆ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಗಳ ನಿಗಮ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಕೇಂದ್ರ ಜಲ ಆಯೋಗದಂತಹ ಸಂಘಟನೆಗಳ ಸಾಧನೆ ಮತ್ತು ಪಾತ್ರವನ್ನು ಬಿಂಬಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಕಾಂಬ್ಳೆ ತಿಳಿಸಿದರು.
17 ಬೋಗಿಗಳನ್ನು ಹೊಂದಿರುವ ಈ ‘ವಿಜ್ಞಾನ ರೈಲು’ ಭಾರತದ ವೈಜ್ಞಾನಿಕ ಪ್ರಗತಿಯ ಬಗೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ನವ ದೆಹಲಿಯ ಸಾಫ್ದರ್‌ಜಂಗ್ ರೈಲ್ವೆ ನಿಲ್ದಾಣದಿಂದ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರು 2003ರ ಡಿಸೆಂಬರ್ 15 ರಂದು ಈ ರೈಲನ್ನು ಉದ್ಘಾಟನೆ ಮಾಡಿದ್ದರು. ಇದು ದೇಶದಾದ್ಯಂತ 56 ನಗರಗಳಲ್ಲಿ ಪ್ರದರ್ಶಿತವಾಗಿ ಆಗಸ್ಟ್ 16 ರ ವೇಳೆಗೆ ಪುನಃ ನವ ದೆಹಲಿ ಸೇರಲಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು