ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀಚಕ ವೃತ್ತಾಂತ ; ದೆಹಲಿಯೆಂಬ ಹೆಣ್ಣುಬಾಕ !

By Staff
|
Google Oneindia Kannada News

ಕೀಚಕ ವೃತ್ತಾಂತ ; ದೆಹಲಿಯೆಂಬ ಹೆಣ್ಣುಬಾಕ !
ದೆಹಲಿ ಎಂದಕೂಡಲೇ ನೆನಪಿಗೆ ಬರುವುದು ಅಲ್ಲಿನ ಐತಿಹಾಸಿಕ ಸ್ಮಾರಕಗಳು, ಸರ್ವೋಚ್ಛ ನ್ಯಾಯಾಲಯ ಹಾಗೂ ಪ್ರಜಾಪ್ರಭುತ್ವದ ಪ್ರತೀಕವಾಗಿ ನಿಂತಿರುವ ಸಂಸತ್‌ಭವನ. ಇವೆಲ್ಲ ದೆಹಲಿಯ ಪ್ರಕಾಶಮಾನ ಮುಖಗಳು. ದೆಹಲಿಗೆ ಕತ್ತಲ ಮುಖವೊಂದಿದೆ ಗೊತ್ತಾ ? ಆ ಕತ್ತಲಲ್ಲಿ ಕೀಚಕರು ವಿಜೃಂಭಿಸುತ್ತಾರೆ. ಬಡಪಾಯಿ ಹೆಣ್ಣುಮಕ್ಕಳು ಹೂವಿನಂತೆ ನಲುಗಿ ಹೋಗುತ್ತಾರೆ. ಕಣ್ಣೀರಿಗಿಲ್ಲಿ ಬೆಲೆಯೇ ಇಲ್ಲ ; ಅಸಹಾಯಕ ಹೆಣ್ಣುಮಕ್ಕಳ ನೆರವಿಗೆ ಯಾವ ಭೀಮನೂ ಇಲ್ಲಿ ಧಾವಿಸಿಬರುವುದಿಲ್ಲ.

  • ಸುಕನ್ಯಾ ಪಿ.
19ರ ವಯಸ್ಸಿನ ಆ ಹುಡುಗಿಯ ಮೇಲೆ ನಡೆದ ಅತ್ಯಾಚಾರದಿಂದಾಗಿ ದೆಹಲಿ ತತ್ತರಿಸಿತು.

ಆಕೆ ಫಿಜಿ ದೇಶದ ಹುಡುಗಿ. ಓದಲಿಕ್ಕೆಂದು ದೆಹಲಿಗೆ ಬಂದಿದ್ದಳು. ಇನ್ನೂ 19ರ ವಯಸ್ಸಿನವಳು. ಆಕೆಯನ್ನು ಅಭಿನವ್‌ ಕೊಚ್ಚಾರ್‌ ಎನ್ನುವ ಟ್ರಾವೆಲ್‌ ಏಜೆಂಟ್‌ ಅಮಾನುಷವಾಗಿ ರೇಪ್‌ ಮಾಡಿದ್ದ . ಇತ್ತೀಚೆಗಷ್ಟೇ ನಡೆದ ಈ ಘಟನೆಯಿಂದಾಗಿ, ರಾಜಧಾನಿ ದೆಹಲಿ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ; ರಾತ್ರಿ ವೇಳೆಯಲ್ಲಂತೂ ಅತ್ಯಂತ ಅಪಾಯಕಾರಿ ಎನ್ನುವ ವಿಷಯ ಮತ್ತೊಮ್ಮೆ ಸ್ಪಷ್ಟವಾಯಿತು.

ಅಬ್ಬಬ್ಬಾ! ಕಾಲ ಕೆಟ್ಟು ಹೋಗಿದೆ. ಈ ಗಂಡಸರು ಕಣ್ಣಿಂದಲೇ ರೇಪ್‌ ಮಾಡುತ್ತಾರೆ ಎಂದು ಮೈಯೆಲ್ಲಾ ಹಿಡಿಯಾಗಿಸಿಕೊಂಡು ನುಡಿಯುತ್ತಾಳೆ ಗುಲ್‌ ಪನಗ್‌. ಆಕೆ ಟೀವಿ ಕಾರ್ಯಕ್ರಮವೊಂದರ ನಿರೂಪಕಿ. ನಿಮ್ಮ ಗಂಡ ಅಥವಾ ಗೆಳೆಯನ ಹಿಂದೆ ಸ್ಕೂಟರ್‌ನಲ್ಲಿ ಕುಳಿತು ಹೋಗುವಾಗ, ಗಂಡಸರ ದೃಷ್ಟಿಯನ್ನು ಎದುರಿಸುವುದೇ ಒಂದು ಸಾಹಸ ಎಂದು ಗುಲ್‌ ಅಸಹ್ಯಿಸಿಕೊಳ್ಳುತ್ತಾಳೆ.

ಗುಲ್‌ ತೀರಾ ಸೂಕ್ಷ್ಮದ ಹುಡುಗಿ. ನೋಟಕ್ಕೇನೆ ಆಕೆ ಬೆದರಿಹೋಗುತ್ತಾಳೆ. ಆದರೆ ದೆಹಲಿಯ ಭಯಾನಕ ಮುಖಗಳು ಇಷ್ಟೇ ಅಲ್ಲ . ರಾತ್ರಿಯಲ್ಲಂತೂ ದೆಹಲಿ ಕಾಮಾತುರ ಪಿಶಾಚಿಯಂತಾಗಿಬಿಡುತ್ತದೆ. ಈ ಬಗ್ಗೆ ಇಶಿತಾ ಸೆನ್‌ ಎನ್ನುವ ವೈದ್ಯೆ ಆತಂಕ ವ್ಯಕ್ತಪಡಿಸುತ್ತಾಳೆ. ಒಮ್ಮೊಮ್ಮೆ ಎಮರ್ಜೆನ್ಸಿ ಬೀಳುತ್ತದೆ. ಆಪರೇಷನ್‌ ಇರುತ್ತದೆ. ಆಗ ತಡರಾತ್ರಿ ಮನೆಗೆ ಬರುವಾಗ ಜೀವ ಕೈಯಲ್ಲಿರುತ್ತದೆ ಎನ್ನುತ್ತಾಳೆ ಇಶಿತಾ. ಆಕೆ ಹೇಳುವುದು ಒಂದೇ ಮಾತು- ದೆಹಲಿ ಕುಲಗೆಟ್ಟಿದೆ, ಹಾರಿಬಲ್‌.

ಯಾವುದಕ್ಕೂ ಇರಲಿ ಎಂದು ಡಾ.ಗುಲ್‌ ಲೈಸೆನ್ಸ್‌ ಹೊಂದಿರುವ ಬಂದೂಕು ಇಟ್ಟುಕೊಂಡಿದ್ದಾಳೆ. ಗುಲ್‌ ಅಷ್ಟೇ ಅಲ್ಲ , ದೆಹಲಿಯ ಅನೇಕ ಹೆಣ್ಣುಮಕ್ಕಳು ಆತ್ಮರಕ್ಷಣೆಯ ಮಂತ್ರ ಜಪಿಸುತ್ತಿದ್ದಾರೆ. ತಾನು ಸದಾಕಾಲ ಮೆಣಸಿನ ಪುಡಿ ಹಾಗೂ ಸ್ವಿಸ್‌ ಚಾಕುವನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿರುವುದಾಗಿ ಫೂನಂ ಹೇಳುತ್ತಾಳೆ. ಈಕೆಗೆ ಟೇಕ್ವಾಂಡೊ ಹಾಗೂ ಥಾಯ್‌ ಬಾಕ್ಸಿಂಗ್‌ ಕೂಡ ಗೊತ್ತು .

ಇನ್ನು ರಫ್ತು ಉದ್ಯಮದಲ್ಲಿ ಕೆಲಸ ಮಾಡುವ ತನಿಯಾ ಚೋಪ್ರಾ ತನಗೆ ತಾನೇ ರಾತ್ರಿ 10ರ ಗಡಿ ವಿಧಿಸಿಕೊಂಡಿದ್ದಾಳೆ. ಕತ್ತಲಾಗುತ್ತಿದ್ದಂತೆ ನನಗೆ ಅಸುರಕ್ಷತೆಯ ಭಾವನೆ ಉಂಟಾಗುತ್ತದೆ. ಆ ಕಾರಣದಿಂದಲೇ 10ರೊಳಗೆ ಮನೆಯಲ್ಲಿರುತ್ತೇವೆ ಎನ್ನುತ್ತಾಳೆ ತನಿಯಾ. ಆದರೆ, ತನಿಯಾಳ ಅದೃಷ್ಟ ಎಷ್ಟು ಜನ ದುಡಿಯುವ ಹೆಣ್ಣುಮಕ್ಕಳಿಗಿದ್ದೀತು ?

2003ನೇ ಇಸವಿಯಲ್ಲಿ ಒಟ್ಟು 450 ಅತ್ಯಾಚಾರದ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿದ್ದವು. 2004ರಲ್ಲಿ , ಮೊದಲ ಎರಡು ತಿಂಗಳಲ್ಲೇ 73 ಅತ್ಯಾಚಾರದ ಪ್ರಕರಣ ವರದಿಯಾಗಿವೆ. ನೆನಪಿಡಿ, ಇವು ಪೊಲೀಸ್‌ ದಾಖಲೆಯಲ್ಲಿ ವರದಿಯಾದ ಪ್ರಕರಣಗಳು ಮಾತ್ರ.

ಅದೆಲ್ಲಾ ಸರಿ. ಹೆಣ್ಣುಮಕ್ಕಳು ಈಪಾಟಿ ಭಯಭೀತರಾಗಿರುವಾಗ ಪೊಲೀಸರು ಏನು ಮಾಡುತ್ತಿದ್ದಾರೆ ?

ನಾವು ನಿದ್ದೆ ಮಾಡುತ್ತಿಲ್ಲ ಎನ್ನುತ್ತಾರೆ ನೈರುತ್ಯ ದೆಹಲಿಯ ಡಿಸಿಪಿ ತೇಜೀಂದರ್‌ ಲೂಥ್ರಾ. ಆದರೂ, ಹೆಣ್ಣುಮಕ್ಕಳ ನೆಮ್ಮದಿಗೆ ದೆಹಲಿಯಲ್ಲಿ ಸಂಚಕಾರ ಒದಗಿದೆ. ಇದು ಪುರುಷ ಸಮಾಜದ ಅಮಾನವೀಯತೆ ದಿನೇದಿನೇ ಹೆಚ್ಚುತ್ತಿರುವುದರ ದ್ಯೋತಕ. ಏಕೆಂದರೆ, ಇದು ದೆಹಲಿಯ ಕಥೆ ಮಾತ್ರವಲ್ಲ ; ಬೆಂಗಳೂರು ಸೇರಿದಂತೆ ಎಲ್ಲ ನಗರಿಗಳ ವ್ಯಥೆಯೂ ಹೌದು.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X