ಚಾಮರಾಜಪೇಟೆ: ಬಂಗಾರಪ್ಪ-ಮುಖ್ಯಮಂತ್ರಿ ಚಂದ್ರು ಕಾರಿಗೆ ಕಲ್ಲು
ಚಾಮರಾಜಪೇಟೆ: ಬಂಗಾರಪ್ಪ-ಮುಖ್ಯಮಂತ್ರಿ ಚಂದ್ರು ಕಾರಿಗೆ ಕಲ್ಲು
ಶುಕ್ರವಾರ ಬಿಜೆಪಿಯಿಂದ ಚಾಮರಾಜಪೇಟೆ ಬಂದ್
ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಸ್ಪರ್ಧೆಯಿಂದ ರಾಜ್ಯದ ಪ್ರತಿಷ್ಠಿತ ಕಣವಾಗಿರುವ ಚಾಮರಾಜಪೇಟೆ ಈಗ ಸಂಘರ್ಷಗಳ ಬೀಡಾಗುತ್ತಿದೆ.
ಏಪ್ರಿಲ್ 15ರ ಗುರುವಾರ ಸಂಜೆ ಬಿಜೆಪಿ ಪರ ಪ್ರಚಾರ ಭಾಷಣ ಮುಗಿಸಿ ಹೊರಡುತ್ತಿದ್ದ , ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿಕೊಂಡ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಾಗೂ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಮುಖ್ಯಮಂತ್ರಿ ಚಂದ್ರು ಅವರ ಕಾರಿಗೆ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಿದೆ .
ಕಾರಿಗೆ ಕಲ್ಲು ತೂರಿದ ಕಿಡಿಗೇಡಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದು ಬಿಜೆಪಿ ದೂರಿದ್ದರೆ, ಇದು ಬಿಜೆಪಿಯ ನಿಯೋಜಿತ ತಂತ್ರ ಎಂದು ಕಾಂಗ್ರೆಸ್ ಆಪಾದಿಸಿದೆ. ಈ ದಾಳಿಯನ್ನು ಪ್ರತಿಭಟಿಸಿ ಏ.16ರ ಶುಕ್ರವಾರ ಚಾಮರಾಜಪೇಟೆ ಬಂದ್‌ಗೆ ಬಿಜೆಪಿ ಕರೆಯಿತ್ತಿದೆ. ಬಂದ್ ಸಮಯದಲ್ಲಿ ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ನಡೆಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಗುರುವಾರ ಸಂಜೆ ಸುಮಾರು 7.30ರ ಹೊತ್ತಿಗೆ ಪ್ರಚಾರ ಭಾಷಣ ಮುಗಿಸಿ ಹೊರಟ ಬಿಜೆಪಿ ನಾಯಕರುಗಳ ಕಾರನ್ನು ಅಡ್ಡಗಟ್ಟಿದ 50 ಜನರ ಗುಂಪೊಂದು ಅವರೆಡೆಗೆ ಕಲ್ಲು ತೂರಿತು. ಈ ಗುಂಪು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಕ್ಷೇತ್ರದ ಮಾಜಿ ಶಾಸಕ ಆರ್.ವಿ. ದೇವರಾಜ್‌ಗೆ ಜಯಕಾರ ಹಾಕುತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಲ್ಲು ತೂರಾಟ ವಿರೋಧಿಸಿ ಮುಖ್ಯಮಂತ್ರಿ ಚಂದ್ರು ಮತ್ತು ಬಿಜೆಪಿ ಮುಖಂಡೆ ಪ್ರಮಿಳಾ ನೇಸರ್ಗಿ ಸ್ಥಳೀಯ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು, ಕೃಷ್ಣ ಅವರು ಯಾವುದಾದರು ತಂತ್ರ ಬಳಸಿ ಗೆಲ್ಲಲೇಬೇಕೆಂದು ನಿರ್ಧರಿಸಿದಂತಿದೆ. ಇದರಲ್ಲಿ ಪೊಲೀಸರು ಶಾಮೀಲಾದಂತಿದೆ. ಆದರೆ ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಈ ಘಟನೆ ಮತ್ತು ಪಕ್ಷಕ್ಕೂ ಏನೇನು ಸಂಬಂಧವಿಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಇದು ಭಾಜಪಾದ ಚುನಾವಣಾ ತಂತ್ರವಷ್ಟೆ. ಜನರ ದೃಷ್ಟಿಯಲ್ಲಿ ಮುಖ್ಯಮಂತ್ರಿ ಕೃಷ್ಣ ಅವರ ವ್ಯಕ್ತಿತ್ವವನ್ನು ಹಾಳುಗೆಡಹುವ ಷಡ್ಯಂತ್ರ ಎಂದು ಪಕ್ಷದ ವಕ್ತಾರ ಆರ್.ವಿ.ಸುದರ್ಶನ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004