ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಯಭಟ ಪ್ರಶಸ್ತಿ : ಕಲಾಕ್ಷೇತ್ರದ ತುಂಬ ಶಿಖರಗಾಮಿಗಳು

By Staff
|
Google Oneindia Kannada News

ಆರ್ಯಭಟ ಪ್ರಶಸ್ತಿ : ಕಲಾಕ್ಷೇತ್ರದ ತುಂಬ ಶಿಖರಗಾಮಿಗಳು
ಏ.15ರ ಗುರುವಾರ ರವೀಂದ್ರ ಕಲಾಕ್ಷೇತ್ರದ ಎಲ್ಲೆಡೆಯೂ ಸಾಧಕರದೇ ಮುಖಗಳು. ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮಿಲನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸ್ನೇಹಕೂಟವಾಗಿ ಬದಲಿಸಿತು.

ಬೆಂಗಳೂರು : ದಟ್ಸ್‌ಕನ್ನಡ.ಕಾಂ ಸಂಪಾದಕ ಎಸ್‌. ಕೆ. ಶಾಮಸುಂದರ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಏ.15ರ ಗುರುವಾರ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳ ಗಣ್ಯರ ಸ್ನೇಹಕೂಟದಂತಿದ್ದ ಸಮಾರಂಭಕ್ಕೆ ಕಿಕ್ಕಿರಿದ ಜನ ಸಂದಣಿ ಸೇರಿದ್ದುದು ವಿಶೇಷ. ದಕ್ಷಿಣ ಭಾರತದ ಜನಪ್ರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ನಟ ವಿಷ್ಣುವರ್ಧನ್‌ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ಬಾಲಸುಬ್ರಹ್ಮಣ್ಯಂ ಮತ್ತು ವಿಷ್ಣುವರ್ಧನ್‌ ಅವರು ಪರಸ್ಪರ ಕೊಂಡಾಡಿಕೊಂಡಿದ್ದು ಜನರ ಚಪ್ಪಾಳ ಗಿಟ್ಟಿಸಿತು.

ಎಸ್‌.ಪಿ.ಬಿ.ಗೆ ಪ್ರಶಸ್ತಿ ಪ್ರದಾನ ಮಾಡಿದ ವಿಷ್ಣುವರ್ಧನ್‌- ಒಬ್ಬ ಕಲಾವಿದ ಅಥವಾ ನಟ ಯಶಸ್ವಿಯಾಗುವುದು ಗಾಯಕನಿಂದಲೇ ಎಂದು ಎಸ್‌.ಪಿ.ಯವರನ್ನು ಕೊಂಡಾಡಿದರು. ತಮ್ಮ ಯಶಸ್ಸಿನ ಒಂದು ಭಾಗ ಬಾಲು ಅವರಿಗೂ ಸಲ್ಲುತ್ತದೆ ಎಂದು ವಿಷ್ಣು ಹೇಳಿದರು.

ವಿಷ್ಣು ಮಾತುಗಳಿಗೆ ಪ್ರತಿಕ್ರಿಯಿಸಿದ ಬಾಲು- ನಾವಿಬ್ಬರೂ ಏಕವಚನದ ಗೆಳೆಯರು. ಆದರೆ ಗಾಯಕನಿಂದಲೇ ನಟ ಯಶಸ್ಸುಗಳಿಸುವುದು ಎಂದು ವಿಷ್ಣು ಹೇಳಿದ ಮಾತಿನಲ್ಲಿ ಕೊಂಚ ಉತ್ಪ್ರೇಕ್ಷೆಯಿದೆ. ಹಾಡಿನ ಭಾವಕ್ಕೆ ತಕ್ಕಂತೆ ನಟ ಅಭಿನಯ ಸಾಮರ್ಥ್ಯ ತೋರಿಸಿದಾಗಲೇ ಹಾಡಿಗೆ ನಿಜವಾದ ಮಹತ್ವ ಬರುವುದು ಎಂದರು.

ಇಡೀ ದೇಶದ ಯಾವುದೇ ಭಾಷೆಯ ಜನರು ತೋರಿಸದಷ್ಟು ಪ್ರೀತಿ, ವಿಶ್ವಾಸವನ್ನು ಕನ್ನಡಿಗರು ನನಗೆ ನೀಡಿದ್ದಾರೆ. ಕನ್ನಡಿಗರು ನನ್ನ ಪಾಲಿನ ದೇವರು. ನಾನು ಆಡುತ್ತಿರುವ ಮಾತುಗಳಲ್ಲಿ ಯಾರನ್ನೂ ಮೆಚ್ಚಿಸುವ ಉದ್ದೇಶವಿಲ್ಲ. ಇಷ್ಟು ವರ್ಷಗಳ ನಂತರ ಅದರ ಅಗತ್ಯವೂ ಇಲ್ಲ ಎಂದು ಎಸ್‌. ಪಿ. ನುಡಿದರು. ತಮ್ಮ ಮೊದಲ ಚಿತ್ರದಿಂದ ಇಂದಿನವರೆಗೂ ವಿಷ್ಣು ನನ್ನಿಂದ ಹಾಡಿಸುತ್ತಿದ್ದಾರೆ. ಅವರು ನನ್ನ ಮೇಲಿಟ್ಟ ಅಭಿಮಾನ ಮತ್ತು ಪ್ರೀತಿಗೆ ಇದೇ ಸಾಕ್ಷಿ ಎಂದು ಬಾಲು ಅಭಿಮಾನಿಗಳೆದುರು ಸ್ನೇಹಲೋಕದ ಅನಾವರಣ ಮಾಡಿದರು.

ಸ್ನೇಹಕ್ಕಾಗಿ ಸಮಾರಂಭ

ಇಂದು ಜಾತಿ, ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ಅಸೂಯೆ, ದ್ವೇಷಗಳೇ ತುಂಬಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಇಂತಹ ಪ್ರಶಸ್ತಿ ಸಮಾರಂಭಗಳು ಹೆಚ್ಚು ಹೆಚ್ಚು ನಡೆದಷ್ಟೂ ಪರಸ್ಪರರಲ್ಲಿ ಸ್ನೇಹ ಪ್ರೀತಿಯನ್ನು ಬಿತ್ತುವಲ್ಲಿ ಸಹಕಾರಿಯಾಗುತ್ತದೆ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಾಧೀಶ ಎ.ಜೆ. ಸದಾಶಿವ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಕುಬೇರ ಎಂದೇ ಹೆಸರಾದ ಲೇಔಟ್‌ ಕೃಷ್ಣಪ್ಪ , ಆರ್ಯಭಟ ಸಂಸ್ಥೆ ತನ್ನ 29ನೇ ವಾರ್ಷಿಕ ಆಚರಣೆ ನೆನಪಿಗಾಗಿ ಹೊರತಂದ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಿದರು.

ವಿವಿಧ ಕ್ಷೇತ್ರಗಳ ಗಣ್ಯರಿಗೆ ಹಾಗೂ ಕಿರುತೆರೆಯ ಶ್ರೇಷ್ಠರಿಗೆ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಬೆಂಗಳೂರು ವಿ.ವಿ. ಕುಲಪತಿ ಎಂ.ಎಸ್‌. ತಿಮ್ಮಪ್ಪ, ಹಿರಿಯ ಪತ್ರಕರ್ತ ಎಸ್‌.ವಿ.ಜಯಶೀಲರಾವ್‌, ಹಿರಿಯ ಕಲಾವಿದರಾದ ಹೆಚ್‌.ಜಿ.ಸೋಮಶೇಖರ ರಾವ್‌ ಮತ್ತು ಕೆಎಸ್‌ಎಲ್‌ ಸ್ವಾಮಿ ಹಾಗೂ ಕಾಸರವಳ್ಳಿ ದಂಪತಿಗಳು ಪ್ರಶಸ್ತಿ ವಿಜೇತರಲ್ಲಿ ಸೇರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X