• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಹಾ ! ಹವ್ಯಕ ಪಾಕೋತ್ಸವವಿದು...

By Staff
|

ಆಹಾ ! ಹವ್ಯಕ ಪಾಕೋತ್ಸವವಿದು...

ಬೆಂಗಳೂರಿನಲ್ಲಿ ಫೆ.28 ಮತ್ತು 29 ರಂದು ಹವ್ಯಕ ಪಾಕೋತ್ಸವ. ಮಲೆನಾಡ ಮಕ್ಕಳ ಆಹಾರ ವೈವಿಧ್ಯದ ಪ್ರದರ್ಶನ ಮಾತ್ರವಲ್ಲದೆ ಹತ್ತಾರು ಮನರಂಜನೆ- ಸ್ಪರ್ಧೆಗಳೂ ಇಲ್ಲುಂಟು. ಊಟಪ್ರಿಯರಿಗೆ ಸ್ವಾಗತವು.

 • ಶ್ರೀಕಾಂತ ಹೆಗಡೆ, ಬೆಂಗಳೂರು
 • ಬೆಂಗಳೂರು : ‘ಆಹಾರಾರ್ಥ ಕರ್ಮ ಕುರ್ಯಾತ್‌...’ ಎಂಬ ವೇದೋಕ್ತಿಯಂತೆ ಆಹಾರಕ್ಕಾಗಿ ಜೀವದಲ್ಲಿ ನಿಂದ್ಯವಲ್ಲದ ಕೆಲಸವನ್ನು ಮಾಡಬೇಕು, ಪ್ರಾಣ ರಕ್ಷಣೆಗಾಗಿ ಆಹಾರ ಸೇವಿಸಬೇಕು, ತತ್ವಗಳ ತಿಳುವಳಿಕೆಗಾಗಿ ಪ್ರಾಣ ರಕ್ಷಿಸಬೇಕು, ಪುನಃ ದುಃ ಖಿಯಾಗದಿರಲು ತತ್ವ ಜಿಜ್ಞಾಸೆ ಬೇಕು ಎಂಬ ತಾತ್ವಿಕ ಹಿನ್ನೆಲೆಯಲ್ಲಿ ಅಗಣಿತ ತಲೆಮಾರುಗಳಿಂದ ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದನ್ನರಿತು, ಶಾಸ್ತ್ರೀಯವಾದ ಸಾತ್ವಿಕ ಭೋಜನವನ್ನು ಹೊಂದಿ ಶ್ರೇಯಸ್ಕರ ಜೀವನವನ್ನು ಭೋಜನ ಕೋವಿದರು ನಡೆಸುತ್ತಿದ್ದಾರೆ. ಇಂಥಹ ಭೋಜನ ಕಲಾವಿದರಲ್ಲಿ ಹವ್ಯಕರಿಗೊಂದು ವಿಶಿಷ್ಟ ಸ್ಥಾನವಿದೆ.

  ಹವ್ಯಕ ಆಹಾರ ಮತ್ತು ಆಹಾರ ಕ್ರಮದಲ್ಲಿ ಆಯುರ್ವೇದೀಯ ಪದ್ಧತಿಯಿದೆ. ಇದು ಯಾವ ಶಾಸ್ರ್ತಾಧ್ಯಯನವಿಲ್ಲದೆ ಮನೆಯ ಪಾಕಾಧ್ಯಕ್ಷರಾದ ಹಿರಿಯರಿಂದ ಕಿರಿಯರಿಗೆ ತಲೆತಲಾಂತರಗಳಿಂದ ಹರಿದು ಬರುತ್ತಿದೆ. ನಗರ ಜೀವನಕ್ಕೆ ಒಗ್ಗಿಕೊಂಡಿದ್ದರೂ ಇಲ್ಲಿಯೂ ತಮ್ಮ ಆಹಾರ ಸೇವನೆಯ ಕ್ರಮ, ಸಮಯ, ಪರಿಮಾಣಗಳನ್ನು ಹವ್ಯಕರು ಉಳಿಸಿಕೊಂಡು ಬಂದಿದ್ದಾರೆ. ಇಂತಹ ಒಂದು ವೈಶಿಷ್ಟ್ಯ ಭಕ್ಷ್ಯ ಭೋಜ್ಯಗಳ ರುಚಿ ಮತ್ತು ಮಹತ್ವವನ್ನು ಬೆಂಗಳೂರಿನ ಸಸ್ಯಾಹಾರಿ ಜನತೆಗೆ ತೋರಿಸಿ ಕೊಡುವ ಉದ್ದೇಶದಿಂದ ಫೆಬ್ರವರಿ 28 ಮತ್ತು 29 ರಂದು ಬೆಂಗಳೂರಿನ ಗಿರಿನಗರದಲ್ಲಿ ‘ಹವ್ಯಕ ಪಾಕೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  ಇದೊಂದು ಸಂಪೂರ್ಣ ಸಸ್ಯಾಹಾರದ, ಮಲೆನಾಡು ಕರಾವಳಿಯ ಹವ್ಯಕರ ಆಹಾರ ಮೇಳ. ಆಹಾರ ಪ್ರದರ್ಶನ, ಸ್ಪರ್ಧೆ, ಊಟ, ಅಂಗಡಿ-ಮುಂಗಟ್ಟು, ಸಭೆ, ಮನರಂಜನೆಗಳು ಈ ಮೇಳದಲ್ಲಿವೆ.

  ಇಲ್ಲಿನ ಖಾದ್ಯ ವೈವಿಧ್ಯಗಳ ಹಲವು ಹೆಸರುಗಳೇ ವಿಶಿಷ್ಟವಾದವು. ಸುಕ್ಕಿನುಂಡೆ, ಗೆಣಸಲೆ, ವಡಪೆ, ಪತ್ರೊಡೆ, ಕೊಟ್ಟೆಕಡುಬು, ಕರ್ಜಿಕಾಯಿ, ಅತ್ರಾಸ, ಮನೋಹರ, ಖಟ್ಟೆ, ತೊಡದೇವು, ನೀರ್ದೋಸೆ, ಯಲವರಿಗೆ, ಉರಗ ಸಂಬಾರ ಸೊಪ್ಪುಗಳ ತಂಬಳಿಗಳು.... ಇತ್ಯಾದಿ.

  ನೂರಾರು ಬಗೆಯ ಔಷಧೀಯ ಗುಣಗಳ ವನಸ್ಪತಿಯ ತಿಂಡಿ-ತಿನಿಸು, ಪಾನೀಯಗಳು ಬಾಯಲ್ಲಿ ನೀರೂರಿಸಲಿವೆ. ಜೊತೆಗೆ ಅವುಗಳ ಸೇವನೆಯ ಕಾಲ ಹಾಗೂ ಆರೋಗ್ಯಕರ ಗುಣಗಳು ಇತ್ಯಾದಿ ವಿವರಗಳೂ ಮೇಳದಲ್ಲಿ ಸಿಗಲಿದೆ.

  ಈ ಭೂರಿ ಭೋಜನ ಕೂಟದ ರುಚಿಯನ್ನು ಮನರಂಜನೀಯ ಹಾಸ್ಯಲಹರಿಗಳು, ಯಕ್ಷಗಾನ, ಹಾಡು ನೃತ್ಯಗಳು ಹೆಚ್ಚಿಸಲಿವೆ. ಇದರೊಂದಿಗೆ ಕರಕುಶಲ ಕಲಾಕೃತಿಗಳ, ಕರಕುಶಲ ತಿನಿಸುಗಳ, ಸಿದ್ಧಾಹಾರಗಳ, ಅಡಿಗೆ ಪರಿಕರಗಳ, ಗೃಹೋಪಕರಣಗಳ, ಆಯುರ್ವೇದೀಯ ಔಷಧಿಗಳ ನೂರಾರು ಮಳಿಗೆಗಳು ಕೈಬೀಸಿ ಕರೆಯಲಿವೆ.

  ಫೆಬ್ರವರಿ 28ರಂದು ಸಂಜೆ 4 ಗಂಟೆಗೆ ಈ ಉತ್ಸವ ಉದ್ಘಾಟನೆಗೊಳ್ಳಲಿದೆ. ನಂತರ ಹವ್ಯಕರಿಗಾಗಿ ತಿಂಡಿ-ತಿನಿಸು ತಯಾರಿಯ ಸ್ಪರ್ಧೆ, ಪಾಯಸ ಕುಡಿಯುವ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

  ಫೆಬ್ರವರಿ 29ರಂದು ವಿವಿಧ ವಸ್ತುಗಳ ಅಂಗಡಿ-ಮುಂಗಟ್ಟುಗಳು, ತಿನ್ನುವ, ಉಣ್ಣುವ, ಕುಡಿಯುವ, ಆಹಾರ ಪ್ರದರ್ಶನ, ಮಾರಾಟ, ಸಭೆ, ಚಿಂತನೆ, ನೃತ್ಯ ಗಾಯನ, ಯಕ್ಷಗಾನಾದಿ ಕಾರ್ಯಕ್ರಮಗಳು ಭಾನುವಾರದ ಬಿಡುವನ್ನು ಅರ್ಥಪೂರ್ಣ ಮಾಡುವ ಅವಕಾಶ ನೀಡಲಿದೆ.

  ಒಟ್ಟಾರೆ ನಗರದ ಸುಸಂಸ್ಕೃತರಿಗೆ, ಶಾಖಾಹಾರ ಭೋಜನ ಪ್ರಿಯರಿಗೆ, ಸಹೃದಯರಿಗೆ ಇದೊಂದು ಅಪರೂಪದ ಅವಕಾಶ. ಬೆಂಗಳೂರು ಪ್ರಾಂತ ಪ್ರತಿನಿಧಿ ಪರಿಷತ್‌ ಈ ಆಹಾರ ಮೇಳ ಆಯೋಜಿಸಿದೆ.

  ಹೆಚ್ಚಿನ ಮಾಹಿತಿ ಮತ್ತು ಸಂಪರ್ಕಕ್ಕಾಗಿ:

  ಶ್ರೀ ರಾಮಾಶ್ರಮ, ಗಿರಿನಗರ, ದೂರವಾಣಿ: 6721510, 9448061678

  ಮುಖಪುಟ / ವಾರ್ತೆಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more