ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ವರ ಕಾರ್ಯಕ್ಷೇತ್ರದಲ್ಲಿ ಮೂಲಭೂತವಾದದ ವಿರುದ್ಧ ಮೊಳಗು

By Staff
|
Google Oneindia Kannada News

ಮಧ್ವರ ಕಾರ್ಯಕ್ಷೇತ್ರದಲ್ಲಿ ಮೂಲಭೂತವಾದದ ವಿರುದ್ಧ ಮೊಳಗು
ಕ್ರಿಯೆಯ ಮೂಲಕ ಮೂಲಭೂತವಾದಿಗಳ ಹತ್ತಿಕ್ಕಲು ಕಾರ್ನಾಡ್‌ ಕರೆ. ಧರ್ಮದ ಆಂತರಿಕ ಶಕ್ತಿಯ ಬದಿಗಿರಿಸಿ ಬಾಹ್ಯ ಆಚರಣೆಗೆ ಒತ್ತು ನೀಡುತ್ತಿರುವ ಕುರಿತು ನಿಡುಮಾಮಿಡಿ ಶ್ರೀ ಆತಂಕ.

  • ದಟ್ಸ್‌ಕನ್ನಡ ಡೆಸ್ಕ್‌
ಉಡುಪಿ : ಭಾಷಣ ನಿಲ್ಲಿಸಿ ಕ್ರಿಯೆಯ ಮೂಲಕ ಮೂಲಭೂತವಾದಿಗಳನ್ನು ಹತ್ತಿಕ್ಕಬೇಕಾದ ಸಮಯ ಸನ್ನಿಹಿತವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಪುರಸ್ಕೃತ ಲೇಖಕ ಗಿರೀಶ್‌ ಕಾರ್ನಾಡ್‌ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿ ಕ್ಷೋಭೆಯ ವಾತಾವರಣ ಉಂಟಾಗಲು ಜಿಲ್ಲಾಡಳಿತ ಮತ್ತು ಪೊಲೀಸ್‌ ಭಜರಂಗ ದಳಕ್ಕೆ ನೀಡಿದ ಬೆಂಬಲವೇ ಕಾರಣವಾಗಿದೆ. ದೇಶದ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಇಂಥ ಪ್ರಯತ್ನಗಳನ್ನು ಹತ್ತಿಕ್ಕಬೇಕು ಎಂದು ಗಿರೀಶ್‌ ಕಾರ್ನಾಡ್‌ ಹೇಳಿದರು. ಅವರು ಉಡುಪಿಯಲ್ಲಿ ನಡೆದ ಕೋಮು ಸಾಮರಸ್ಯ ಉದ್ದೀಪನ ಸಮಾವೇಶದಲ್ಲಿ ಫೆ.22ರಂದು ಮಾತನಾಡುತ್ತಿದ್ದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಈ ಸಮಾವೇಶ ಏರ್ಪಡಿಸಿತ್ತು .

ಕೋಮು ಶಕ್ತಿಗಳನ್ನು ದೇಶದಲ್ಲಿ ಹಿಮ್ಮೆಟ್ಟಿಸಲು ಸಾಂಘಿಕ ಪ್ರಯತ್ನ ನಡೆಯಬೇಕಿದೆ. ದೇಶದ ಉದಾರ ಸಂವಿಧಾನ ಪ್ರತಿಯಾಬ್ಬರೂ ತಮ್ಮ ಸಂಸ್ಕೃತಿ ಹಾಗೂ ಧರ್ಮವನ್ನು ಆಚರಿಸಲು ಅವಕಾಶ ಮಾಡಿಕೊಟ್ಟಿದೆ. ಇಂಥ ಸಂದರ್ಭದಲ್ಲಿ ವಿವಿಧತೆಯನ್ನು ನಾಶ ಮಾಡುವ ಪ್ರಯತ್ನಗಳು ಖಂಡನೀಯ ಎಂದು ಕಾರ್ನಾಡ್‌ ಹೇಳಿದರು.

ಹಿಂದೂ ಧರ್ಮದ ಪರಿಕಲ್ಪನೆಗೆ ಹಿಂದುತ್ವ ವಿರೋಧಿಯಾಗಿದೆ. ವಿವಿಧ ಸಂಸ್ಕೃತಿ-ಧರ್ಮಗಳ ಜನತೆ ವಿವಿಧತೆಯಲ್ಲಿ ಏಕತೆಯನ್ನು ಕಾಣುವುದನ್ನು ಹಿಂದುತ್ವ ವಿರೋಧಿಸುತ್ತದೆ. ಇದಕ್ಕೆ ಬಾಬಾ ಬುಡನ್‌ಗಿರಿ ಪ್ರಕರಣವೇ ಸಾಕ್ಷಿ ಎಂದು ಕಾರ್ನಾಡ್‌ ಹೇಳಿದರು. ಭಾರತ ಪ್ರಕಾಶಿಸುತ್ತಿದೆ ಎನ್ನುವ ಕೇಂದ್ರ ಸರ್ಕಾರದ ಘೋಷವಾಕ್ಯವನ್ನು ಅರ್ಥಹೀನ ಎಂದು ಅವರು ಬಣ್ಣಿಸಿದರು.

ಸ್ವಾತಂತ್ರ್ಯ ದೊರೆತು ಐವತ್ತು ವರ್ಷಗಳ ನಂತರವೂ, ಪ್ರೀತಿ ಬೆಳೆಸಿ-ದೇಶ ಉಳಿಸಿ ಎನ್ನುವ ಪ್ರಾಥಮಿಕ ಅಂಶಗಳನ್ನು ಇಂದಿಗೂ ಹೇಳಬೇಕಾಗಿ ಬಂದಿರುವ ಪರಿಸ್ಥಿತಿಗೆ ವ್ಯಥೆಯಾಗುತ್ತಿದೆ ಎಂದು ಗಿರೀಶ್‌ ಕಾರ್ನಾಡ್‌ ವಿಷಾದಿಸಿದರು.

ಧರ್ಮಗಳ ಆಂತರಿಕ ಶಕ್ತಿಯ ನಿರ್ಲಕ್ಷ್ಯ

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಿಡುಮಾಮಿಡಿ ಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಧರ್ಮಗಳ ದುರುಪಯೋಗವನ್ನು ವಿರೋಧಿಸಿದರು. ಎಲ್ಲ ಧರ್ಮಗಳೂ ಶಾಂತಿ ಹಾಗೂ ಸೌಹಾರ್ದತೆಯನ್ನು ಬೋಧಿಸುತ್ತವೆ. ಆದರೆ ಕೆಲವರ ಸ್ವಾರ್ಥದಿಂದಾಗಿ ಧರ್ಮಗಳು ದುರುಪಯೋಗಕ್ಕೆ ಒಳಗಾಗುತ್ತಿವೆ ಎಂದು ನಿಡುಮಾಮಿಡಿ ಶ್ರೀ ಹೇಳಿದರು.

ಹಿಂದೂ ಧರ್ಮ ಹಾಗೂ ಹಿಂದುತ್ವ ಬೇರೆಬೇರೆಯಾದವು. ಹಿಂದುತ್ವದಲ್ಲಿ ರಾಜಕೀಯ ಪಕ್ಷಗಳ ವೋಟ್‌ಬ್ಯಾಂಕ್‌ ರಾಜಕೀಯ ಸೇರಿಕೊಂಡಿದೆ ಎಂದು ನಿಡುಮಾಮಿಡಿ ಶ್ರೀ- ಧರ್ಮಗಳ ಆಂತರಿಕ ಶಕ್ತಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಆದರೆ ಬಾಹ್ಯ ಆಚರಣೆಗಳಿಗೆ ವಿಪರೀತ ಒತ್ತು ನೀಡಲಾಗುತ್ತಿದೆ ಎಂದು ವಿಷಾದಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸುತ್ತಿರುವ ಭಾರತೀಯ ಜನತಾ ಪಕ್ಷದ ಕ್ರಮ ಖಂಡನೀಯ. ಕರ್ನಾಟಕವನ್ನು ಮತ್ತೊಂದು ಗುಜರಾತ್‌ ಮಾಡುವ ಮೂಲಭೂತವಾದಿಗಳ ಉದ್ದೇಶ ಎಂದಿಗೂ ಫಲಿಸದು ಎಂದು ನಿಡುಮಾಮಿಡಿ ಶ್ರೀ ಹೇಳಿದರು.

ಕಳೆದ 54 ವರ್ಷಗಳಲ್ಲಿ ದೇಶದಲ್ಲಿ ಕೋಮು ಸೌಹಾರ್ದ ಕದಡುವ 37 ಸಾವಿರ ಘಟನೆಗಳು ನಡೆದಿವೆ. ಅವುಗಳಲ್ಲಿ 36,600 ಪ್ರಕರಣಗಳು ಕ್ಷುಲ್ಲಕ ಹಾಗೂ ಅಸಂಬದ್ಧ ಕಾರಣಕ್ಕಾಗಿ ನಡೆದಿವೆ ಎಂದ ಸ್ವಾಮೀಜಿ- ಮುಸ್ಲಿಮರು ಆಧುನಿಕ ಶಿಕ್ಷಣಕ್ಕೆ ತಮ್ಮನ್ನು ತೆರೆದುಕೊಳ್ಳಬೇಕು. ಮೊಹಮ್ಮದ್‌ ಪೈಗಂಬರ್‌ ಅವರ ಆದರ್ಶಗಳನ್ನು ಅನುಸರಿಸಬೇಕು ಎಂದು ಕರೆ ನೀಡಿದರು.

ಹಿಂದುತ್ವಕ್ಕೆ ಬಿಜೆಪಿ- ಆರೆಸ್ಸೆಸ್‌ ಶತ್ರು

ಸರ್ವ ಜನಾಂಗದ ಸದಸ್ಯರು ಒಟ್ಟಾಗಿ ಬಾಳುವುದಕ್ಕೆ ಭಾರತೀಯ ಜನತಾ ಪಕ್ಷ ಹಾಗೂ ಆರೆಸ್ಸೆಸ್‌ ಅವಕಾಶ ಮಾಡಿಕೊಡುತ್ತಿಲ್ಲ . ನೈಜ ಹಿಂದುತ್ವಕ್ಕೆ ಇವೆರಡೂ ಶಕ್ತಿಗಳು ತೊಂದರೆ ಉಂಟು ಮಾಡುತ್ತಿವೆ ಎಂದು ಸಮಾವೇಶದಲ್ಲಿ ಮಾತನಾಡಿದ ಸುಧಾರಣಾವಾದಿ ಸ್ವಾಮಿ ಅಗ್ನಿವೇಶ್‌ ಅಭಿಪ್ರಾಯಪಟ್ಟರು.

ರಾಮಜನ್ಮ ಭೂಮಿ ನ್ಯಾಸ್‌ನ ಪರಮಹಂಸರು ನಿಧನರಾದಾಗ ಪ್ರಧಾನಿ ವಾಜಪೇಯಿ ಅವರು ಹೋದುದು ತಪ್ಪು . ಪರಮಹಂಸರ ಸಂಕಲ್ಪವನ್ನು ಈಡೇರಿಸುವುದಾಗಿ ಶ್ರದ್ಧಾಂಜಲಿ ಸಭೆಯಲ್ಲಿ ಘೋಷಿಸುವ ಮೂಲಕ ವಾಜಪೇಯಿ ಮತ್ತೊಂದು ತಪ್ಪು ಮಾಡಿದರು ಎಂದ ಅಗ್ನಿವೇಶ್‌- ಹಿಂದೂ ಸಂಘಟನೆಗಳು ಮೂಲಭೂತವಾದದ ಮೂಲಕ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನಗಳ ಬಗೆಗೆ ಜಾಗೃತ ಮತದಾರರು ಎಚ್ಚರದಿಂದಿರಬೇಕು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ 26 ಕೋಟಿಗೂ ಹೆಚ್ಚು ಮಂದಿ ಬಡತನದ ರೇಖೆಗಿಂತ ಕೆಳಗಿದ್ದಾರೆ. ಸ್ತ್ರೀ ಶೋಷಣೆ, ಅಸಮಾನತೆ, ದಬ್ಬಾಳಿಕೆಗಳಂತಗ ಸಮಸ್ಯೆಗಳನ್ನು ಜನತೆ ಇನ್ನೂ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಧಾನಿ ವಾಜಪೇಯಿ- ಭಾರತ ಪ್ರಕಾಶಿಸುತ್ತಿದೆ, ಹಿತಾನುಭವ ಎನ್ನುವ ಮಾತನಾಡುತ್ತಾರೆ ಎಂದು ಸ್ವಾಮಿ ಅಗ್ನಿವೇಶ್‌ ವಿಷಾದಿಸಿದರು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿಯ ಉಪಾಧ್ಯಕ್ಷ ಮೌಲಾನ ಮಹಮದ್‌ ಸಿರಾಜುಲ್‌ ಹಸನ್‌ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪ್ರಗತಿಪರ ನಾಯಕರು ಸಮಾವೇಶದಲ್ಲಿ ಭಾಗವಹಿಸಿದ್ದರು.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X