ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ಕರೆ ಕಾರ್ಮಿಕರ ಕಹಿ ಬದುಕು: ಕಣ್ತೆರೆದು ನೋಡಯ್ಯ ಎಸ್ಸೆಂ.ಕೃಷ್ಣ !

By Staff
|
Google Oneindia Kannada News

ಸಕ್ಕರೆ ಕಾರ್ಮಿಕರ ಕಹಿ ಬದುಕು: ಕಣ್ತೆರೆದು ನೋಡಯ್ಯ ಎಸ್ಸೆಂ.ಕೃಷ್ಣ !
ಪಾಂಡವಪುರ ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಂದ ಚುನಾವಣೆಗೆ ಬಹಿಷ್ಕಾರ

ಮೈಸೂರು : ನಾಗಮಂಗಲದಲ್ಲಿ ನಡೆದ ನಂಗಾನಾಚ್‌ನಿಂದಾಗಿ ಕಾಂಗ್ರೆಸ್‌ ಪಕ್ಷ ಮುಜುಗರ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತವರಿನಲ್ಲೇ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳಲ್ಲೊಂದು- ಪಾಂಡವಪುರ ಸಕ್ಕರೆ ಕಾರ್ಖಾನೆಯ ಕಾರ್ಮಿಕರದು.

ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯ 400ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಅವರ ಕುಟುಂಬಗಳು ಮುಂಬರುವ ವಿಧಾನಸಭೆ ಚುನಾವಣೆಗಳಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ಅಷ್ಟೇ ಅಲ್ಲ - ರಾಜ್ಯದಲ್ಲಿನ ಎಲ್ಲ ಸಕ್ಕರೆ ಕಾರ್ಖಾನೆಗಳ ಕಾರ್ಮಿಕರೂ ಚುನಾವಣೆ ಬಹಿಷ್ಕರಿಸುವಂತೆ ಪ್ರಯತ್ನಗಳನ್ನು ನಡೆಸಲು ಪಾಂಡವಪುರದ ಕಾರ್ಮಿಕರು ನಿರ್ಧರಿಸಿದ್ದಾರೆ.

ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಚುನಾವಣೆಗಳನ್ನು ಬಹಿಷ್ಕರಿಸಿರುವ ಕಾರಣ ಇಷ್ಟೆ : ಕಳೆದ ಎರಡು ಅವಧಿಗಳಿಂದ ಪಾಂಡವಪುರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವುದನ್ನೇ ನಿಲ್ಲಿಸಿದೆ. ಗಾಣ ತಿರುಗದಿದ್ದ ಮೇಲೆ ಸಂಬಳದ ಮಾತೆಲ್ಲಿಂದ ಬಂತು ? ಕಳೆದ 10 ತಿಂಗಳಿಂದ ಕಾರ್ಮಿಕರು ಸಂಬಳದ ಮುಖವನ್ನೇ ಕಂಡಿಲ್ಲ . ಹೀಗಿರುವಾಗ ಕಾರ್ಮಿಕರ ಕುಟುಂಬದ ಸದಸ್ಯರ ಮುಖಗಳಲ್ಲಿ ನಗು ಎಲ್ಲಿಂದ ಬರಬೇಕು ?

ರಾಮಣ್ಣ ಎನ್ನುವ ಕಾರ್ಮಿಕನ ಕಥೆಯನ್ನೇ ಕೇಳಿ. ಈತ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ಕಂಪ್ಯೂಟರ್‌ ಆಪರೇಟರ್‌. ಕಳೆದ 14 ತಿಂಗಳಿಂದ ರಾಮಣ್ಣನಿಗೆ ಸಂಬಳ ಬಂದಿಲ್ಲ . ದೊಡ್ಡ ಸಂಸಾರವಿದೆ. ಹಸಿದ ಹೊಟ್ಟೆಗಳಿಗೆ. ದುಡಿಯಲು ಆಸಕ್ತಿಯೂ ಇದೆ. ಸಂಬಳ ಮಾತ್ರ ಇಲ್ಲ !

ನಮಗೆಲ್ಲಾ ಸಂಸಾರಗಳಿವೆ. ಮಕ್ಕಳಿವೆ. ಮಕ್ಕಳನ್ನು ಸ್ಕೂಲಿಗೆ ಕಳಿಸಬೇಕು. ಸಂಬಳ ಕೊಡದಿದ್ದರೆ ಹೇಗೆ ? ಹಬ್ಬಕ್ಕಾಗಿ 500 ರುಪಾಯಿ ಮುಂಗಡ ಕೊಡಿ ಎಂದರೂ ಕಾರ್ಖಾನೆ ಆಡಳಿತ ಮಂಡಳಿ ನಿರಾಕರಿಸಿದೆ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಾರೆ. ಈ ಪರಿಸ್ಥಿತಿಯಿಂದಾಗಿಯೇ ಚುನಾವಣೆಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ.

ಇಲ್ಲಿ ಉದ್ಯೋಗ ಭದ್ರತೆಯೂ ಇಲ್ಲ . 25 ವರ್ಷಗಳಿಂದ ಸೇವೆ ಸಲ್ಲಿಸಿರುವ 173 ತಾತ್ಕಾಲಿಕ ಉದ್ಯೋಗಿಗಳು, ಮೊನ್ನೆಯಷ್ಟೇ ಕೆಲಸ ಕಳಕೊಂಡು, ಸಂಬಳವಿಲ್ಲದೆ ಮನೆಗೆ ಹೋಗಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೆ ಕಾರಣ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಇರುವುದು ಎಂದು ಪಿ.ರಾಮಚಂದ್ರ ಎನ್ನುವ ನೌಕರ ದೂರುತ್ತಾರೆ.

ಟೀವಿಗಳಲ್ಲಿ ನೊಂದವರ ಕಣ್ಣೊರೆಸುವ, ವಿಧಾನಸಭೆಯಲ್ಲಿ ಚೈತನ್ಯಶೀಲ ಕರ್ನಾಟಕದ ಮಾತನಾಡುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಪಾಂಡವಪುರದ ಕಾರ್ಮಿಕರತ್ತ ಕಣ್ಣೆತ್ತಿ ನೋಡಬಾರದೆ ?

(ಇನ್ಫೋ ವಾರ್ತೆ)

Post your views

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X