ಯಾರವಳು, ಲಕ್ಷ್ಮಣನ ಊರ್ಮಿಳೆ ?
ಯಾರವಳು, ಲಕ್ಷ್ಮಣನ ಊರ್ಮಿಳೆ ?
ರಾಮತೀರ್ಥ ಹೇಳುತ್ತಾರೆ ಕೇಳಿ : ‘ನಾನು ಕ್ರಿಕೆಟಿಗ ಲಕ್ಷ್ಮಣ್‌ರ ಭಾವೀ ಮಾವ. ನನ್ನ ಮುದ್ದು ಮಗಳೊಂದಿಗಿನ ಪಾಣಿಗ್ರಹಣಕ್ಕಾಗಿ ಅಳೀಮಯ್ಯ ಬಿಡಿಗಾಸು ವರದಕ್ಷಿಣೆ ಕೇಳಿಲ್ಲ . ಆತನದೊಂದೇ ಷರತ್ತು - ಶೈಲಜಾ ಕುರಿತ ವಿವರಗಳ ಮದುವೆ ಮುಗಿವವರೆಗೂ ರಹಸ್ಯವಾಗಿಡಬೇಕು...’
- ದಟ್ಸ್‌ಕನ್ನಡ ಬ್ಯೂರೊ
ಲಕ್ಷ್ಮಣ್ ಸೋಲಿಗೆ ಊರ್ಮಿಳಾ ಕಾರಣಳಿರಬಹುದೆ ? ಇದ್ದರೂ ಇರಬಹುದು ; ಕನಸಲೂ ನೀನೆ ಮನಸಲೂ ನೀನೆ ಎನ್ನುವಂತೆ ಎಲ್ಲೆಲ್ಲೂ ಮನದನ್ನೆಯೇ ಕಾಣುತ್ತಿರುವಾಗ, ಚೆಂಡಿನ ಮೇಲೆ ಲಕ್ಷ್ಮಣ್ ಗುರಿ ಇಡುವುದು ಹೇಗೆ ? ಚೆಂಡಿನಲ್ಲೂ ಮೆಚ್ಚಿದವಳ ರೂಪೇ ಕಾಣುತ್ತಿರುವಾಗ, ಶತ್ರುವಂತೆ ಚೆಂಡನ್ನು ಚಚ್ಚುವುದು ಹೇಗೆ ? ಲಕ್ಷ್ಮಣ್‌ರ ಪ್ರೇಮ ಸಂಕಟ ಕ್ರಿಕೆಟ್ ಅಭಿಮಾನಿಗಳಿಗೆ ಅರ್ಥವಾಗುತ್ತದೆ ! ಅದೇರೀತಿ, ಸಹ ಆಟಗಾರರಿಗೂ ಅರ್ಥವಾಗುತ್ತದೆ. ಆ ಕಾರಣದಿಂದಲೇ ಲಕ್ಷ್ಮಣ್ ಒಲ್ಲದ ಆಟ ತಮಗೂ ಬೇಡವೆಂದು ದ್ರಾವಿಡ್, ಗಂಗೂಲಿ, ತೆಂಡೂಲ್ಕರ್ ವಿಕೆಟ್ ಚೆಲ್ಲಲ್ಲಿವೆ ? ಅವರು ಕೂಡ ಇಂಥದೇ ಜ್ವರದಲ್ಲಿ ನರಳಿದವರು, ಬಳಲಿದವರು, ಇನ್ನೂ ಅಗಲಿಕೆಯ ಕಾವು ಆರದ ಹುಡುಗರು.
ಇನ್ನೇನು ಲಕ್ಷ್ಮಣ್‌ರ ಪ್ರೇಮ ಸಂಕಟ ಕೊನೆಯಾಗುವ ಮುಹೂರ್ತ ಹತ್ತಿರದಲ್ಲಿದೆ. ಫೆ.15ರ ಭಾನುವಾರ ಲಕ್ಷ್ಮಣ್- ಬ್ರಹ್ಮಚರ್ಯದ ಲಕ್ಷ್ಮಣರೇಖೆ ಮೀರಿ ಗೃಹಸ್ಥರಾಗುತ್ತಿದ್ದಾರೆ. ಸಿಕಂದರಾಬಾದ್‌ನ ‘ಇಂಪೀರಿಯಲ್ ಗಾರ್ಡನ್ಸ್’ನಲ್ಲಿ ಮದುವೆಯ ಸಂಭ್ರಮ ಈಗಾಗಲೇ ಪಕಳೆಪಕಳೆಯಾಗಿ ಅರಳಿಕೊಳ್ಳುತ್ತಿದೆ. ಇದು ಹತ್ತರ ನಂತರದ ಹನ್ನೊಂದನೆ ಮದುವೆಯಲ್ಲ ; ಲಕ್ಷ್ಮಣ ಕಲ್ಯಾಣಕ್ಕೆ ಅತಿರಥ ಮಹಾರಥರ ದಂಡೇ ಆಗಮಿಸುತ್ತಿದೆ. ವಿವಿಧ ಕ್ಷೇತ್ರಗಳ ಗಣ್ಯರು ಹರಸಲು ಬರುತ್ತಿದ್ದಾರೆ. ಕಮ್ಮಿಯೆಂದರೂ 3 ಸಾವಿರ ಅತಿಥಿಗಳು ಮದುವೆಗೆ ಆಗಮಿಸುವ ನಿರೀಕ್ಷೆಯಿದೆ. ಪ್ರತಿಯಾಬ್ಬರೂ ಗಣ್ಯರೇ ; ಆಹ್ವಾನವಿದ್ದವರಿಗೆ ಮಾತ್ರ ಪ್ರವೇಶ. ಮದುವೆಯ ಆರತಕ್ಷತೆ ಫೆ.15ರಂದೇ ನಡೆಯಲಿದೆ. ರಾತ್ರಿ 8ಕ್ಕೆ ಆರಂಭವಾಗುವ ಆರತಕ್ಷತೆ ಮಧ್ಯರಾತ್ರಿಯವರೆಗೂ ನಡೆಯಲಿದೆ. ಈ ಅಪರೂಪದ ಕ್ಷಣಗಳ ಆತಿಥ್ಯದ ಭಾಗ್ಯ ನಮಗೆ ದೊರೆತಿದೆ ಎಂದು ಸಂಭ್ರಮಿಸುತ್ತಾರೆ ‘ಇಂಪೀರಿಯಲ್ ಗಾರ್ಡನ್ಸ್’ನ ಮೇನೇಜರ್ ರೀತೀಶ್‌ಕುಮಾರ್.
ಅಂದಹಾಗೆ, ಲಕ್ಷ್ಮಣನ ಊರ್ಮಿಳೆ ಯಾರು ?
ಇಲ್ಲಿನ ಕಥಾನಾಯಕಿ ಊರ್ಮಿಳೆ ಎಂಬುದು ಲಕ್ಷ್ಮಣನ ಕೈಹಿಡಿಯುವ ಸುಂದರಿಯ ನಾಮಧೇಯವಲ್ಲ . ಇದು ರಾಮಾಯಣದ ಲಕ್ಷ್ಮಣನ ಪತ್ನಿಯ ಹೆಸರು. ಕ್ರಿಕೆಟಿಗ ಲಕ್ಷ್ಮಣ್ ಮನದನ್ನೆಯ ಹೆಸರು ಶೈಲಜಾ ! ಸದ್ಯಕ್ಕೆ ಲಕ್ಷ್ಮಣ್ ಮನದನ್ನೆಯ ಪೂರ್ವಾಪುರ ಹಾಗೂ ರೂಪು ಗೋಪ್ಯವಾದುದರಿಂದ ಆಕೆಯನ್ನು ಊರ್ಮಿಳಾ ಎಂತಲೇ ಕರೆಯೋಣ.
ಲಕ್ಷ್ಮಣ್ ಭಾವೀಪತ್ನಿಯ ಕುರಿತು ಈವರೆಗೂ ಯಾವುದೇ ವಿವರಗಳು ಲಭ್ಯವಾಗಿಲ್ಲ . ಒಂದುದಿನದ ಕ್ರಿಕೆಟ್ ಪಂದ್ಯ ಮುಗಿಯುವವರೆಗೂ ಫಲಿತಾಂಶ ಗೋಪ್ಯವಾಗಿರುತ್ತದಲ್ಲ ; ಅಂಥದೊಂದು ಗೋಪ್ಯತೆಯನ್ನು ಲಕ್ಷ್ಮಣ್ ತಮ್ಮ ವಧುವಿನ ಕುರಿತು ಕಾಪಾಡಿಕೊಂಡಿದ್ದಾರೆ. ಆಕೆ ಐಶ್ವರ್ಯಾಳಂತೆ ಇದ್ದಾಳೆ, ಕರೀನಾಳಂತೆ ಇದ್ದಾಳಾ, ಗಂಗೂಲಿ ಪತ್ನಿಯಂತೆ ಡಾನ್ಸ್ ಕಲಿತಿದ್ದಾಳಾ, ಸಚಿನ್ ಹೆಂಡತಿಯಂತೆ ವೈದ್ಯಳಾ.... ಉಹುಂ, ಗೊತ್ತಿಲ್ಲ .
ಜಿ.ರಾಮ ತೀರ್ಥರಾವ್ ಹೇಳುತ್ತಾರೆ ಕೇಳಿ : ‘ನಾನು ಲಕ್ಷ್ಮಣ್‌ರ ಭಾವೀ ಮಾವ. ಶೈಲಜಾ ನನ್ನ ಮಗಳು. ನನ್ನ ಮುದ್ದುಮಗಳ ಪಾಣಿಗ್ರಹಣಕ್ಕಾಗಿ ಅಳೀಮಯ್ಯ ಬಿಡಿಗಾಸು ವರದಕ್ಷಿಣೆಯನ್ನೂ ಕೇಳಿಲ್ಲ . ಆತನದೊಂದೇ ಷರತ್ತು - ಶೈಲಜಾಳ ಕುರಿತ ವಿವರಗಳನ್ನು ಮದುವೆ ಮುಗಿಯುವವರೆಗೂ ರಹಸ್ಯವಾಗಿಡಬೇಕು...’
ಶೈಲಜಾಳ ಒಂದೇ ಒಂದು ಭಾವಚಿತ್ರವನ್ನು ನೀಡಲು ಕೂಡ ಲಕ್ಷ್ಮಣ್ ಭಾವೀಮಾವ ರಾಮತೀರ್ಥ ನಿರಾಕರಿಸುತ್ತಾರೆ. ಅವರು ಲಕ್ಷ್ಮಣರೇಖೆಯ ದಾಟಲೊಲ್ಲರು. ಅಂದಹಾಗೆ, ರಾಮತೀರ್ಥ ಗುಂಟೂರು ಗಣಿಯಲ್ಲಿ ಉಪ ನಿರ್ದೇಶಕರು.
ಇದು ದೂರದ ಸಂಬಂಧವೇನೂ ಅಲ್ಲ . ಮದುಮಕ್ಕಳ ಕುಟುಂಬಗಳೆರಡರ ನಡುವೆ ಮುಂಚಿನಿಂದಲೂ ಆಪ್ತತೆಯಿದೆ. ಆರು ತಿಂಗಳ ಹಿಂದೆಯಷ್ಟೇ ಮದುವೆ ನಿಶ್ಚಯವಾಯಿತು. ಯಾರಿಗೂ ಗೊತ್ತಿಲ್ಲದಂತೆ ನಿಶ್ಚಿತಾರ್ಥವೂ ಮುಗಿದಿದೆ. ಮದುವೆಯಷ್ಟೇ ಉಳಿದಿದೆ ಎನ್ನುತ್ತಾರೆ, ರಾಮತೀರ್ಥರಾವು.
ಒಂಚೂರಾದ್ರೂ ಹೇಳೀಪ್ಪಾ ...
ಶೈಲಜಾ ಎಂಸಿಎ ವಿದ್ಯಾರ್ಥಿನಿ. ಆಕೆಗೆ ಕ್ರಿಕೆಟ್ಟೆಂದರೆ ಇಷ್ಟ . ಲಕ್ಷ್ಮಣ್ ಆಟವೂ ಇಷ್ಟ . ಅವಳ ವಯಸ್ಸಿನ ಇತರ ಹುಡುಗಿಯರಿರುತ್ತಾರಲ್ಲ , ಶೈಲಜಾ ಕೂಡ ಹಾಗೆಯೇ ಇದ್ದಾಳೆ ಎಂದು ಜಯತೀರ್ಥ ರಾವ್ ಮಗಳ ಕುರಿತು ಒಂಚೂರು ಗುಟ್ಟು ಬಿಟ್ಟುಕೊಡುತ್ತಾರೆ. ಮರುಕ್ಷಣ ಅವರಿಗೆ ಲಕ್ಷ್ಮಣರೇಖೆ ನೆನಪಾಗುತ್ತದೆ.
ಮದುಮಗ ಲಕ್ಷ್ಮಣ್ ಅಪ್ಪ ಡಾ.ವಿ.ಶಾಂತಾರಾಂಗೆ ಭಾವೀ ಸೊಸೆ ಕಂಡರೆ ತುಂಬಾ ಇಷ್ಟ . ಮಗನಿಗೆ ತಕ್ಕಜೋಡಿ ಎನ್ನುವುದು ಸೊಸೆಯ ಕುರಿತು ಮಾವನ ಕಾಮೆಂಟ್. ಶೈಲಜಾ ಅತ್ತೆಯಾಂದಿಗೆ ಪ್ರತಿನಿತ್ಯ ಮಾತನಾಡುತ್ತಾಳೆ. ಭಾವೀಗಂಡನ ಕುರಿತು ಕೀಟಲೆ ಮಾಡುತ್ತಾಳೆ ಎಂದು ಶಾಂತಾರಾಂ ನಗುತ್ತಾರೆ.
ಫೆ.14ರಂದು ವ್ಯಾಲೆಂಟೈನ್ಸ್ ಡೇ. ಮರುದಿನ ಲಕ್ಷ್ಮಣ್ ಮದುವೆ. ವಧುವಿನ ಭಾವ-ಚಿತ್ರದ ರಹಸ್ಯ ಅಂದು ಕೊನೆಯಾಗಲಿದೆ. ಲಕ್ಷ್ಮಣ್‌ಗೆ ಮದುವೆಯ ಶುಭಾಶಯಗಳು. ಆತನ ಹೊಸ ಇನಿಂಗ್ಸ್‌ಗೆ ಭಾರೀ ಯಶಸ್ಸು ದೊರೆಯಲಿ.
ವ್ಯಕ್ತಿಚಿತ್ರ
ಲಕ್ಷ್ಮಣನೆಂಬ ಅಸಹಾಯ ಶೂರ
ಮುಖಪುಟ / ವಾಟ್ಸ್ ಹಾಟ್












Click it and Unblock the Notifications