ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌-2004 : ತೆರಿಗೆ ರಹಿತ ಮಾಯಾಬಜಾರು !

By Staff
|
Google Oneindia Kannada News

ಬಜೆಟ್‌-2004 : ತೆರಿಗೆ ರಹಿತ ಮಾಯಾಬಜಾರು !
ಕೃಷಿಕರಿಗೆ ಹಲವಾರು ವಿನಾಯಿತಿ, ಮಹಿಳೆಯರಿಗೆ ಉಡುಗೊರೆ, ಹಳ್ಳಿಗಳತ್ತ ಸರ್ಕಾರದ ಚಿತ್ತ , ಅಕ್ಷರ ದಾಸೋಹ ವಿಸ್ತರಣೆ....

ಬೆಂಗಳೂರು : ಮಹಿಳೆಯರ ಅಭಿವೃದ್ಧಿಗಾಗಿ ಸ್ತ್ರೀ ಶಕ್ತಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಸ್ಥಾಪನೆ, ರೈತರ ನೀರಾವರಿ ಪಂಪ್‌ಸೆಟ್‌ಗಳ 600 ಕೋಟಿ ರುಪಾಯಿ ಬಾಕಿ ಮನ್ನಾ , 11 ಸಾವಿರ ಮನೆಗಳ ನಿರ್ಮಾಣ ಹಾಗೂ ಪ್ರತಿಯಾಬ್ಬರಿಗೂ ಸೂರು- ಇವು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಗುರುವಾರ ಮಂಡಿಸಿದ ರಾಜ್ಯ ಬಜೆಟ್‌ನ ಮುಖ್ಯಾಂಶಗಳು.

ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ 2004-05 ನೇ ಸಾಲಿನ, ಹೊಸ ತೆರಿಗೆಗಳ ಭಾರವಿಲ್ಲದ ರಾಜ್ಯ ಬಜೆಟ್ಟನ್ನು ಗುರುವಾರ (ಫೆ.5) ಮಂಡಿಸಿದರು. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಕೃಷ್ಣ ಗುರುವಾರ ಬಜೆಟ್‌ ಮಂಡಿಸುವುದರೊಂದಿಗೆ, ಸತತ ಐದು ಬಜೆಟ್‌ ಮಂಡಿಸಿದ ಅಪರೂಪದ ಮುಖ್ಯಮಂತ್ರಿಗಳ ಸಾಲಿಗೆ ಸೇರಿದರು. ಸತತ ಐದು ಬಜೆಟ್‌ ಮಂಡಿಸುತ್ತಿರುವ ಹೆಮ್ಮೆ ತಮಗಿರುವುದಾಗಿ ಕೃಷ್ಣ ಹೇಳಿದರು.

ಹೆಚ್ಚುವರಿ ತೆರಿಗೆಗಳಿಲ್ಲದ ಕಾರಣ 153.26 ಕೋಟಿ ರುಪಾಯಿ ಕೊರತೆಯನ್ನು ರಾಜ್ಯ ಬಜೆಟ್‌ ಎದುರಿಸುತ್ತಿದ್ದು , ಆಡಳಿತದ ಖರ್ಚುವೆಚ್ಚಗಳಿಗೆ ಲಗಾಮು ಹಾಕುವ ಮೂಲಕ ಈ ಕೊರತೆ ನೀಗಿಸುವುದಾಗಿ ಕೃಷ್ಣ ಹೇಳಿದರು.

2004ರ ಜುಲೈ 31 ರವರಗೆ, ನಾಲ್ಕು ತಿಂಗಳ ಲೇಖಾನುದಾನವನ್ನು ಕೋರಿದ ಮುಖ್ಯಮಂತ್ರಿ ಕೃಷ್ಣ - ಪ್ರತಿಕೂಲ ವಾತಾವರಣವಿದ್ದರೂ ಉತ್ತಮ ಆರ್ಥಿಕ ಪ್ರಗತಿಯನ್ನು ರಾಜ್ಯ ದಾಖಲಿಸಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.

ಚೈತನ್ಯಶೀಲ ಕರ್ನಾಟಕ ಭಾರತದಲ್ಲಿ ಹೆಮ್ಮೆಯ ಸ್ಥಾನ ಪಡೆದಿದೆ. ಪುನಶ್ಚೇತನ ಭಾರತದಲ್ಲಿ ಕರ್ನಾಟಕದ ಪಾಲು ಗಣನೀಯವಾಗಿದೆ ಎಂದು ಕೃಷ್ಣ ಬಣ್ಣಿಸಿದರು. ಕಳೆದ 5 ವರ್ಷಗಳಲ್ಲಿ ಸತತ ಮೂರು ವರ್ಷಗಳ ಕಾಲ ಬರಗಾಲ ಕಾಡಿದ್ದರೂ, ಎಲ್ಲ ವರ್ಗ ಜನತೆ ಶಾಂತಿ, ಪ್ರಗತಿ ಹಾಗೂ ನೆಮ್ಮದಿಯನ್ನು ತಮ್ಮ ಅಧಿಕಾರಾವಧಿಯಲ್ಲಿ ಕಂಡಿದ್ದಾರೆ. ನೊಂದವರ ನೆರವಿಗೆ ಸರ್ಕಾರ ಸಕಾಲದಲ್ಲಿ ಧಾವಿಸಿರುವುದೇ ಇದಕ್ಕೆ ಕಾರಣ. ರಾಜ್ಯದ ಜನತೆಯ ತಾಳ್ಮೆ , ಸಹನೆಗೆ ನಮಿಸುವುದಾಗಿ ಕೃಷ್ಣ ಹೇಳಿದರು.

ರಾಜ್ಯದಲ್ಲಿನ ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಸೂಕ್ತ ನೆರವು ಒದಗಿಸಲಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ವಿಷಾದ ವ್ಯಕ್ತಪಡಿಸಿದರು.

ಬಜೆಟ್‌ನ ಮುಖ್ಯಾಂಶಗಳು :

  • ಕೃಷಿ ಅಭಿವೃದ್ಧಿ ನಿಗಮ ಸ್ಥಾಪನೆ : ರಾಜ್ಯದಲ್ಲಿನ ಬರ ಪರಿಹಾರ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಕೃಷಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಕೃಷ್ಣ ತಮ್ಮ ಐದನೇ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸಣ್ಣ ನೀರಾವರಿ ನಿಗಮ ಸ್ಥಾಪನೆಯ ವಿಷಯವನ್ನೂ ಕೃಷ್ಣ ಪ್ರಕಟಿಸಿದರು. ಈ ಎರಡೂ ಯೋಜನೆಗಳಿಗೆ 100 ಕೋಟಿ ರುಪಾಯಿ ಬಜೆಟ್‌ ಬೆಂಬಲ ಘೋಷಿಸಲಾಗಿದೆ.
  • ಅಕ್ಷರ ದಾಸೋಹ ವಿಸ್ತರಣೆ : ಪ್ರಸ್ತುತ 5 ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಸೀಮಿತವಾಗಿರುವ, ಮಧ್ಯಾಹ್ನ ಬಿಸಿಯೂಟ ನೀಡುವ ಅಕ್ಷರ ದಾಸೋಹ ಯೋಜನೆಯನ್ನು ಹೆಚ್ಚುವರಿ 100 ಕೋಟಿ ರುಪಾಯಿ ವೆಚ್ಚದೊಂದಿಗೆ ಏಳನೇ ತರಗತಿಯವರೆಗಿನ ಮಕ್ಕಳಿಗೆ ವಿಸ್ತರಿಸಲಾಗುವುದು.
  • ಗ್ರಾಮೀಣ ಅಭಿವೃದ್ಧಿ : ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳನ್ನು ಸರ್ಕಾರ ನಿರ್ಮಿಸುತ್ತಿದ್ದು , ಈ ರಸ್ತೆ ಕಾಮಗಾರಿಗಳು ಮುಂದುವರೆಯಲಿವೆ. ಗ್ರಾಮೀಣರಿಗೆ ಪರಿಸರ ಮಾಲಿನ್ಯ ರಹಿತ ಆರೋಗ್ಯ, ಉತ್ತಮ ವಿದ್ಯುತ್‌ ಸರಬರಾಜು ಹಾಗೂ ವೆದರ್‌ ಪ್ರೂಫ್‌ ಮನೆ, ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುವುದು.
  • ಕಳೆದ ನಾಲ್ಕು ವರ್ಷಗಳಿಂದ ಕಾಫಿ ಬೆಲೆ ಕುಸಿದಿದ್ದು , ಬೆಳೆ ಸಾಲದಿಂದ ಸಂಕಷ್ಟಗೊಳಗಾಗಿರುವ ಸಣ್ಣ ಹಾಗೂ ಮಧ್ಯಮ ಕಾಫಿ ಬೆಳೆಗಾರರ ನೆರವಿಗೆ 36 ಕೋಟಿ ರುಪಾಯಿಗಳ ನಿಧಿ.
  • ರಾಜ್ಯ ಸರ್ಕಾರ ಈಗಾಗಲೇ ಕೃಷಿ ಆದಾಯ ತೆರಿಗೆಯಿಂದ ಮೂರು ವರ್ಷಗಳ ಕಾಲ ಕಾಫಿ ಬೆಳೆಗಾರರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ 66 ಕೋಟಿ ರುಪಾಯಿ ಹೊರೆಯನ್ನು ಬೊಕ್ಕಸ ಭರಿಸಲಿದೆ.
  • ರಾಜ್ಯ ಬಜೆಟ್‌ನ ಅಂದಾಜು ವೆಚ್ಚ - 30,285.48 ಕೋಟಿ ರುಪಾಯಿಗಳು. ಇದರಲ್ಲಿ ರೆವಿನ್ಯೂ ಖರ್ಚು- 24,988.17 ಕೋಟಿ ರುಪಾಯಿಗಳಾದರೆ, ಮೂಲಧನ ಬಂಡವಾಳ ವೆಚ್ಚ -5,680.54 ಕೋಟಿ ರುಪಾಯಿಗಳು.
  • ತೆರಿಗೆಗಳ ಮೂಲಕ ರಾಜ್ಯ ಸರ್ಕಾರ 14,290.84 ಕೋಟಿ ರುಪಾಯಿ ನಿರೀಕ್ಷಿಸಿದೆ. 4819.13 ಕೋಟಿ ರುಪಾಯಿಗಳನ್ನು ತೆರಿಗೆಯೇತರ ಮೂಲಗಳಿಂದ ನಿರೀಕ್ಷಿಸಿದೆ. ಸಣ್ಣ ಉಳಿತಾಯದಿಂದ 2615.90 ಕೋಟಿ ರು., ಮಾರುಕಟ್ಟೆಯಿಂದ 1087.96 ಕೋಟಿ, ಸಾಲಗಳ ಮೂಲಕ 585 ಕೋಟಿ ಹಾಗೂ ಕೇಂದ್ರ ಸರ್ಕಾರದ ಒಟ್ಟು ಸಾಲಗಳ ಮೂಲಕ 2237.91 ಕೋಟಿ ರುಪಾಯಿ ನಿರೀಕ್ಷಿಸಲಾಗಿದೆ.
  • ಹಳ್ಳಿ ಹಾಗೂ ಪಟ್ಟಣಗಳ ನಡುವಣ ಜೀವನಶೈಲಿಯ ಅಂತರವನ್ನು ಕುಗ್ಗಿಸಲು ಸರ್ಕಾರ ಸರ್ವಯತ್ನಗಳನ್ನೂ ನಡೆಸಲಿದೆ. ರಾಜ್ಯದ ಜನತೆಯ ಜೀವನ ಮಟ್ಟ ಸುಧಾರಣೆಗೆ ಸರ್ಕಾರ ಬದ್ಧ .
(ಪಿಟಿಐ / ಇನ್ಫೋ ವಾರ್ತೆ)

Post your views

ಬಜೆಟ್‌ ಮುಖ್ಯಾಂಶಗಳು, ಭಾಗ-2
ಎಲ್ಲ ಜಿಲ್ಲೆಗಳಲ್ಲಿ ಕುವೆಂಪು ಮಾದರಿ ಶಾಲೆ, ನಾಲ್ಕುನಗರಕ್ಕೆ ವಿಮಾನ

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X