ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಮಂಗಲ ಕಾಂಗ್ರೆಸ್‌ ಸಭೆಯಲ್ಲಿ ಕ್ಲಬ್‌ಡ್ಯಾನ್ಸ್‌ ಪ್ಲಸ್‌ ಬಾಡೂಟ !!

By Staff
|
Google Oneindia Kannada News

ನಾಗಮಂಗಲ ಕಾಂಗ್ರೆಸ್‌ ಸಭೆಯಲ್ಲಿ ಕ್ಲಬ್‌ಡ್ಯಾನ್ಸ್‌ ಪ್ಲಸ್‌ ಬಾಡೂಟ !!
ನಾಚ್‌ ಮೇರೇ ಬುಲ್‌ಬುಲ್‌ ಕೆ ಓಟು ಮಿಲೇಗಾ.......! ಮತಗಳಿಕೆಗೆ ಮೋಹಿನಿ ದರ್ಶನ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ತುಂಡುಡುಗೆ ತೊಟ್ಟು ಕಾಂಗ್ರೆಸ್‌ ಕಟ್ಟಿದರು. ದೇಶಕ್ಕಾಗಿ ಅವರು ಕಟ್ಟಿದ ಪಕ್ಷದಲ್ಲಿ ಸೇರಿಕೊಂಡವರು ಇಂದು ಯುವತಿಗೆ ತುಂಡುಡುಗೆ ತೊಡಿಸಿ ನೃತ್ಯ ಮಾಡಿಸುವ ಮೂಲಕ ಮತ ಸೆಳೆಯಲು ಹೊರಟಿದ್ದಾರೆ.

ಇಂಥ ದೃಶ್ಯ ಕಂಡು ಬಂದದ್ದು ಒಂದು ಕಾಲಕ್ಕೆ ರಾಜಕೀಯ ಪ್ರಬುದ್ಧತೆಗೆ ಹೆಸರಾಗಿದ್ದ ನಾಗಮಂಗಲ ವಿಧಾನಸಭೆ ಕ್ಷೇತ್ರದ ದೇವಲಾಪುರದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ.

ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಹಲವು ರಾಜಕಾರಣಿಗಳನ್ನು ಕೊಡುಗೆ ನೀಡಿದ್ದ ಖ್ಯಾತಿ ನಾಗಮಂಗಲ ತಾಲೂಕಿಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಹಣ, ಹೆಂಡ, ತೋಳ್ಬಲ ಹೆಚ್ಚಿದೆ. ಇಂತಹ ಅರೆನಗ್ನ ನೃತ್ಯವು ರಾಜಕೀಯ ದಿಕ್ಕು ತಪ್ಪಿರುವುದರ ಸಂಕೇತವಾಗಿದೆ.

ನಡೆದದ್ದಿಷ್ಟು : ಹತ್ತು ಸಹಸ್ರಕ್ಕೂ ಹೆಚ್ಚು ಮಂದಿ ನೆರೆದಿದ್ದ ಬೃಹತ್‌ ಸಭೆ ಅದಾಗಿತ್ತು. ಮಧ್ಯಾಹ್ನ 1:30 ಗಂಟೆಗೆ ನಿಗದಿಯಾಗಿದ್ದ ಸಭೆ ಪ್ರಾರಂಭವಾಗುವುದು ಸ್ವಲ್ಪ ವಿಳಂಬವಾಯಿತು. ನೆರೆದಿದ್ದವರ ಮನ ತಣಿಸಲು ರಸಮಂಜರಿ ಏರ್ಪಡಿಸಲಾಗಿತ್ತು.

ಆರ್ಕೆಸ್ಟ್ರಾ ತಂಡದವರು ತಮ್ಮ ಗಾಯನದ ಮೂಲಕ ಸಭಿಕರ ಮನಸೂರೆಗೊಂಡರು. ಇಷ್ಟು ಸಾಲದೆಂಬಂತೆ ವಿಕೃತ ಕಸರತ್ತೊಂದು ನಡೆಯಿತು. ಮೂರ್ನಾಲ್ಕು ಹಾಡುಗಳ ನಂತರ ಅರೆನಗ್ನ ಯುವತಿಯಾಬ್ಬಳು ‘ರಸವತ್ತಾದ’ ನೃತ್ಯದೊಂದಿಗೆ ರಂಜನೆ ನೀಡಿದಳು.

ಉಪೇಂದ್ರ ನಾಯಕ ನಟನಾಗಿ ನಟಿಸಿರುವ ‘ರಕ್ತ ಕಣ್ಣೀರು’ ಚಿತ್ರದ ‘ಬಾ.. ಬಾರೋ ರಸಿಕ...’ ಹಾಡಿಗೆ ಆ ಯುವತಿಯು ಚಿತ್ರದ ನಾಯಕಿ ರಮ್ಯಕೃಷ್ಣ ಶೈಲಿಯಲ್ಲೇ ನೃತ್ಯ ಮಾಡಿದಳು. ನೆರೆದಿದ್ದ ಯುವಕರು ಕುಣಿದು ಕುಪ್ಪಳಿಸಿದರು. ನೃತ್ಯ ನಡೆಯುತ್ತಿದ್ದಾಗಲೇ ಶಿವರಾಮೇಗೌಡ ಅವರು ಸಚಿವ ಎಚ್‌. ಎಂ. ರೇವಣ್ಣ ಜತೆಗೂಡಿ ವೇದಿಕೆ ಏರಿದರು.

ಬೊಂಬಾಟಾಗಿತ್ತು : ಬಾಡೂಟ ಸಖತ್ತಾಗಿತ್ತು ಸಾರ್‌, ಹೊಟ್ಟೆ ಬಿರಿಯಂಗೆ ತಿಂದ್ವಿ ಸಾರ್‌. ಡ್ಯಾನ್ಸಂತೂ ಬೊಂಬಾಟಾಗಿತ್ತು ಸಾರ್‌... ಎಂದು ಸಮಾವೇಶದಲ್ಲಿ ‘ಸಮಾ’ ಕುಡಿದಿದ್ದ ಗ್ರಾಮಸ್ಥನೊಬ್ಬ ತೂರಾಡುತ್ತಲೇ ನುಡಿದಿದ್ದು ಇಡೀ ಕಾರ್ಯಕ್ರಮಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಸಮಾವೇಶಕ್ಕೆ ಬಂದಿದ್ದ ಸುಮಾರು 20 ಸಾವಿರ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗಾಗಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಮಾಂಸ ಬೇಯಿಸಲಾಗಿತ್ತು . ಅಡುಗೆ, ಊಟಕ್ಕೆಂದೇ ಬೃಹತ್‌ ಶಾಮಿಯಾನ ಹಾಕಲಾಗಿತ್ತು.

ಸತತ ಎರಡು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡ ಎಲ್‌.ಆರ್‌.ಶಿವರಾಮೇಗೌಡ ಅವರು ಕಳೆದ ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಅವರು ಮುಂಬರುವ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ.

ಕಡು ವೈರಿಗಳಾದ ಶಿವರಾಮೇಗೌಡ ಮತ್ತು ಶಾಸಕ ಚಲುವರಾಯಸ್ವಾಮಿ ಅವರು ಪ್ರತಿ ಹೋಬಳಿ ಮಟ್ಟದಲ್ಲಿ ತಂತಮ್ಮ ಕಾರ್ಯಕರ್ತರ ಸಭೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ಸಭೆಗಳು ಬಾಡೂಟ, ಆರ್ಕೆಸ್ಟ್ರಾಗೆ ಸೀಮಿತವಾಗಿರುತ್ತಿದ್ದವು. ದೇವಲಾಪುರದ ಈ ರಸಮಂಜರಿ ಕರ್ನಾಟಕ ಚುನಾವಣಾ ಅಖಾಡದಲ್ಲಿ ವಿನೂತನ ಪ್ರಯೋಗ.

(ಸ್ನೇಹಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X