ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡ ಬೇಡ ಫರ್ನಾಂಡಿಸ್‌ ಮಾತ ನಂಬಬೇಡ -ಲಾಲೂ ಹಿತನುಡಿ

By Staff
|
Google Oneindia Kannada News

ಬೇಡ ಬೇಡ ಫರ್ನಾಂಡಿಸ್‌ ಮಾತ ನಂಬಬೇಡ -ಲಾಲೂ ಹಿತನುಡಿ
ರಾಮಕೃಷ್ಣ ಹೆಗಡೆ ಅವರ ನಿಷ್ಠರಿಗೀಗ ಭಾರಿ ಡಿಮ್ಯಾಂಡು !

ಬೆಂಗಳೂರು : ಹೆಗಡೆ ಅವರ ನಿಧನದಿಂದಾಗಿ ಪ್ರಗತಿಪರ ಜನತಾದಳದ ಸದಸ್ಯರು ಅತಂತ್ರರಾಗಿದ್ದಾರೊ ಇಲ್ಲವೋ ಎನ್ನುವುದು ಬೇರೆ ಮಾತು ; ಜನತಾ ಪರಿವಾರದ ಇತರರು ಮಾತ್ರ ಪ್ರಗತಿಪರ ದಳೀಯರನ್ನು ಅತಂತ್ರರೆಂದು ನಂಬಿದ್ದಾರೆ. ಕಳೆದೊಂದು ವಾರದಿಂದ ನಡೆದ ಘಟನೆಗಳನ್ನೇ ಗಮನಿಸಿ :

ಹೆಗಡೆ ಅವರ ಅನುಯಾಯಿಗಳು ಜಾತ್ಯತೀತ ಜನತಾದಳ ಸೇರಲಿ ಎಂದು ಸಿದ್ಧರಾಮಯ್ಯ ತೋಳುಬೀಸಿ ಕರೆದಿದ್ದಾರೆ. ಅನಾಥಪ್ರಜ್ಞೆಯಿಂದ ಹೆಗಡೆ ಬೆಂಬಲಿಗರು ನರಳುವುದು ಬೇಡ, ಅವರೊಂದಿಗೆ ನಾವಿದ್ದೇವೆ ಎಂದು ಪಿಜಿಆರ್‌ ಸಿಂಧ್ಯಾ ಹೇಳಿದ್ದಾರೆ. ಸಮತಾ ಪಕ್ಷಕ್ಕೆ ಬನ್ನಿ ಎಂದು ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ತಾಂಬೂಲ ಮುಂದಿಟ್ಟಿದ್ದಾರೆ. ನಾವೇನು ಕಮ್ಮಿ ಎಂದು ಬಿಜೆಪಿಯ ವೆಂಕಯ್ಯನಾಯ್ಡು ಕೂಡ ಹೆಗಡೆ ಬೆಂಬಲಿಗರ ಕೈಗೆ ಕಮಲ ಕೊಡುವುದಕ್ಕೆ ಮುಂದಾಗಿದ್ದಾರೆ. ಈಗ ಲಾಲೂ ಪ್ರಸಾದ್‌ ಯಾದವ್‌ ಸರದಿ !

ಆರ್‌ಜೆಡಿ ಅಧ್ಯಕ್ಷ ಲಾಲೂಪ್ರಸಾದ್‌ ಯಾದವ್‌ ಅವರದ್ದು ಆಹ್ವಾನವಲ್ಲ ; ಉಪದೇಶ. ದುಡುಕಬೇಡಿ, ಎಚ್ಚರದಿಂದಿರಿ ಎನ್ನುವುದು ಲಾಲೂ ಉಪದೇಶಾಮೃತ. ಖಾಸಗಿ ಕಾರಣಗಳಿಗಾಗಿ ಜ.23ರಂದು ಬೆಂಗಳೂರಿಗೆ ಆಗಮಿಸಿದ್ದ ಲಾಲೂ ಯಾದವ್‌ ಅವರನ್ನು ಪ್ರಗತಿಪರರು ಭೇಟಿಯಾದಾಗ ಲಾಲೂ ಈ ಉಪದೇಶ ಮಾಡಿದರು.

ಲಾಲೂ ಅವರ ಎಚ್ಚರಿಕೆಯೆಲ್ಲ ಜಾರ್ಜ್‌ ಫರ್ನಾಂಡಿಸ್‌ ಅವರ ಕುರಿತಾದದ್ದೇ ಗಮನಾರ್ಹ. ಜಾರ್ಜ್‌ ಈಗ ಬಿಹಾರದಲ್ಲಿ ನೆಲೆ ಕಳಕೊಂಡಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಆತ ನೆಲೆ ಹುಡುಕುತ್ತಿದ್ದಾನೆ. ಜಾರ್ಜ್‌ ಮಾತಿಗೆ ಮರುಳಾಗಿ ಬಿಜೆಪಿಯಾಂದಿಗೆ ಕೈ ಜೋಡಿಸದಿರಿ ಎಂದು ಲಾಲೂ ಕಿವಿ ಮಾತು ಹೇಳಿದರು.

ಸಮಾಜವಾದವನ್ನು ನೆಲಕಚ್ಚಿಸಿದ ವಿಷಯದಲ್ಲಿ ಲಾಲೂ ಹೆಸರು ಅಜರಾಮರ. ಜಾತ್ಯತೀತ ವಾದಕ್ಕೂ ಜಾರ್ಜ್‌ಗೂ ಸಂಬಂಧವೇ ಇಲ್ಲ . ಆತನ ಮಾತು ಕೇಳಿದರೆ ನಿಮ್ಮ ವ್ಯಕ್ತಿತ್ವವೇ ನಾಶವಾಗುತ್ತದೆ ಎಂದರು ಲಾಲೂ.

ಹೆಗಡೆ ಅವರೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡ ಲಾಲೂ- ತಮ್ಮ ಪಕ್ಷಕ್ಕೆ ಹೆಸರು ಸೂಚಿಸಿದ್ದೇ ಹೆಗಡೆ ಎಂದರು. ಬೊಮ್ಮಾಯಿ ಅವರ ಕುರಿತೂ ತಮಗೆ ಗೌರವವಿದೆ. ಜನತಾ ಪರಿವಾರದವರು ಕಚ್ಚಾಡುವ ಬದಲು ಒಂದಾಗಬೇಕು ಎಂದು ಲಾಲೂ ಹೇಳಿದರು.

ಲಾಲೂ ಅವರನ್ನು ಭೇಟಿಯಾದವರಲ್ಲಿ ಎಬಿಪಿಜೆಡಿ ನಾಯಕರಾದ ಕೆ.ಎನ್‌.ನಾಗೇಗೌಡ, ಬಿ.ರಘುಪತಿ, ರಮೇಶ್‌ಕುಮಾರ್‌, ಎಂ.ಸಿ.ನಾಣಯ್ಯ ಮುಂತಾದವರು ಸೇರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X