ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುರುವಾಗುತ್ತಿದೆ ಕ್ರಿಕೆಟ್‌ ಸುಗ್ಗಿ !

By Staff
|
Google Oneindia Kannada News

ಶುರುವಾಗುತ್ತಿದೆ ಕ್ರಿಕೆಟ್‌ ಸುಗ್ಗಿ !
ಟೆಸ್ಟ್‌ ಪಂದ್ಯಗಳ ಘನತೆಯ ಪುನರುತ್ಥಾನದ ಸರಣಿ ಎಂದೇ ಹೆಸರಾದ ಭಾರತ-ಆಸ್ಟ್ರೇಲಿಯಾ ನಡುವಣ ನಾಲ್ಕು ಟೆಸ್ಟ್‌ ಹಣಾಹಣಿಯ ನೆನಪುಗಳು ಇನ್ನೂ ತಾಜಾ ಆಗಿವೆ. ಈ ನಡುವೆಯೇ ತ್ರಿಕೋಣ ಕ್ರಿಕೆಟ್‌ ಸರಣಿ ಜ.9ರಿಂದ ಪ್ರಾರಂಭವಾಗುತ್ತಿದೆ. ಈ ಸರಣಿಯ ಮುನ್ನುಡಿ ಇಲ್ಲಿದೆ.

  • ಅಲೆನ್‌ ಬಾರ್ಡರ್‌, ಪಿಟಿಐಗಾಗಿ
ಶುಕ್ರವಾರದಿಂದ ಪ್ರಾರಂಭವಾಗುತ್ತಿರುವ ಸೀಮಿತ ಓವರ್‌ಗಳ ತ್ರಿಕೋಣ ಸರಣಿಯನ್ನು (ಆಸ್ಟ್ರೇಲಿಯಾ-ಭಾರತ-ಜಿಂಬಾಬ್ವೆ) ಕ್ರಿಕೆಟ್‌ನ ಬಂಪರ್‌ ಸುಗ್ಗಿಯೆಂದೇ ನಾನು ಭಾವಿಸುವೆ. ಏಕೆಂದರೆ, ಮೊನ್ನೆಯಷ್ಟೇ ಮುಗಿದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕು ಟೆಸ್ಟ್‌ಗಳ ಸರಣಿ ಅತ್ಯದ್ಭುತ ಹೋರಾಟದ ಕಣವಾಗಿತ್ತು . ಇವೆರಡೂ ತಂಡಗಳು ವಿಶ್ವಕಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು ಎನ್ನುವುದನ್ನು ಯಾರೂ ಮರೆಯಬಾರದು. ಈ ಅಂಶವೇ ಸ್ಪರ್ಧೆಗೆ ಒಂದು ಹೊಸ ರಂಗು ನೀಡಿದೆ. ಎರಡೂ ತಂಡಗಳಿಗೂ ಟೆಸ್ಟ್‌ ಫಲಿತಾಂಶ ತೃಪ್ತಿ ನೀಡಿಲ್ಲ . ಈ ಕಾರಣದಿಂದಾಗಿ ಒಂದು ದಿನದ ಪಂದ್ಯಗಳಲ್ಲಿ ಪ್ರಶಸ್ತಿ ಗೆಲ್ಲುವ ಹಂಬಲ ಎರಡೂ ತಂಡಗಳದೂ ಆಗಿದೆ. ಸುಗ್ಗಿ ರಂಗೇರಲು ಇನ್ನೇನು ಬೇಕು.

ಆಸ್ಟ್ರೇಲಿಯಾ ತಂಡಕ್ಕೆ ಒಂದಷ್ಟು ಅನುಕೂಲಗಳಿವೆ. ಟೆಸ್ಟ್‌ ಸರಣಿಗಳಲ್ಲಿ ವಿಫಲರಾಗಿದ್ದ ಆ್ಯಡಂ ಗಿಲ್‌ಕ್ರಿಸ್ಟ್‌ ಏಕದಿನದ ಪಂದ್ಯಗಳಲ್ಲಿ ಸ್ಫೋಟಿಸುವ ಸಾಧ್ಯತೆಯಿದೆ. ಫಾರ್ಮ್‌ ಕಳಕೊಂಡ ಆಟಗಾರ ಇದ್ದಕ್ಕಿದ್ದಂತೆ ಎದ್ದುನಿಂತು ಒಂದು ದಿನದ ಪಂದ್ಯಗಳಲ್ಲಿ ವಿಜೃಂಭಿಸುವುದು ಎಂಥ ಅದ್ಭುತ ಸಂಗತಿಯಾಗಬಲ್ಲದು, ಕಲ್ಪಿಸಿಕೊಳ್ಳಿ.

ಟೆಸ್ಟ್‌ ಪಂದ್ಯಗಳಲ್ಲಂತೂ ಭಾರತೀಯರು ಗಿಲ್‌ಕ್ರಿಸ್ಟ್‌ರನ್ನು ಯಶಸ್ವಿಯಾಗಿ ಕಟ್ಟಿಹಾಕಿದರು. ಆದರೆ ಒಂದು ದಿನದ ಪಂದ್ಯಗಳಲ್ಲಿನ ಸವಾಲೇ ಬೇರೆ ರೀತಿಯದು. ನಾನು ಗಮನಿಸಿರುವಂತೆ, ಒಂದು ದಿನದ ಪಂದ್ಯಗಳಲ್ಲಿ ಆರಂಭ ಆಟಗಾರನಾಗಿ ಬರುವುದನ್ನು ಗಿಲ್‌ಕ್ರಿಸ್ಟ್‌ ಇಷ್ಟಪಡುತ್ತಾರೆ. ಆದರೆ, ಟೆಸ್ಟ್‌ ಪಂದ್ಯಗಳಲ್ಲಿ ಅವರ ಸ್ಥಾನ ನಂ.7. ಭಾರತದ ಮಟ್ಟಿಗೆ ಆಸ್ಟ್ರೇಲಿಯಾದ ಕ್ರಿಕೆಟ್‌ ಋತುವಿಗೆ ತಮ್ಮ ಛಾಪು ಒತ್ತಲು ಹವಣಿಸುತ್ತಿರುವ ತೆಂಡೂಲ್ಕರ್‌ ಅವರಂತೆ, ಆಸ್ಟ್ರೇಲಿಯಾ ಪಾಲಿಗೆ ಗಿಲ್‌ಕ್ರಿಸ್ಟ್‌ !

ಆಸ್ಟ್ರೇಲಿಯಾದ ಬೌಲಿಂಗ್‌ ಒಂದು ದಿನದ ಪಂದ್ಯಗಳಿಗೆ ಹೊಂದುವಂಥದ್ದು . ಸೀಮಿತ ಓವರ್‌ಗಳ ಪಂದ್ಯದ ಮನಸ್ಥಿತಿಯೇ ಭಿನ್ನವಾದದ್ದು . ಕೆಲವರಿಗೆ ಬ್ರೆಟ್‌ ಲೀ ಮೆಚ್ಚಿನ ಬೌಲರ್‌ ಆಗಿರಬಹುದು. ಟೆಸ್ಟ್‌ ಪಂದ್ಯಗಳಲ್ಲಿ ಬಸವಳಿದ ಬ್ರೆಟ್‌ಲೀ ಒಂಡೇಗಳಲ್ಲಿ ಭಾರತೀಯರ ಮೇಲೆ ತಿರುಗಿಬೀಳಲು ಹಲ್ಲು ಮಸೆಯುತ್ತಿರಬಹುದು. ಒಂದು ದಿನದ ಪಂದ್ಯಗಳಿಗೂ ಐದು ದಿನದ ಪಂದ್ಯಗಳಿಗೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕು. ಒಂಡೇಗಳಲ್ಲಿ ಓರ್ವ ಬೌಲರ್‌ಗೆ ದೊರಕುವುದು 10 ಓವರ್‌ಗಳು ಮಾತ್ರ. ಇದರಿಂದಾಗಿ ಆತ ತನ್ನೆಲ್ಲ ಶಕ್ತಿ ಹಾಗೂ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಲು ಸಾಧ್ಯವಾಗುತ್ತದೆ.

ನಾಥನ್‌ ಬ್ರ್ಯಾಕೆನ್‌ ಕೂಡ ಗಮನ ಸೆಳೆಯಬಲ್ಲ ಬೌಲರ್‌. ಗಾಯದಿಂದಾಗಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಬ್ರ್ಯಾಕೆನ್‌ ಈಗ ಉತ್ತಮವಾಗಿ ಬೌಲ್‌ ಮಾಡುತ್ತಿದ್ದಾರೆ. ಇನ್ನು ಅರೆಕಾಲಿಕ ಬೌಲರ್‌ಗಳಾದ ಆ್ಯಂಡ್ರೂ ಸೈಮನ್ಸ್‌ , ನೀಲ್‌ ಹಾರ್ವೆ, ಮೈಕೆಲ್‌ ಬೆವನ್‌ ಮುಂತಾದವರು ಚೆಂಡು ಹಂಚಿಕೊಳ್ಳಲು ಇದ್ದೇ ಇದ್ದಾರೆ.

ಭಾರತದ ಬ್ಯಾಟ್ಸ್‌ಮನ್‌ಗಳಂತೂ ಆಸ್ಟ್ರೇಲಿಯ ಬೌಲರ್‌ಗಳ ಪಾಲಿಗೆ ಈ ಪ್ರವಾಸದಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಆದರೆ, ಒಂದು ದಿನದ ಪಂದ್ಯಗಳಿಗೆ ತಕ್ಕಂತೆ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ತಂತ್ರವನ್ನು ಬೌಲರ್‌ಗಳು ಬದಲಿಸಿಕೊಳ್ಳಬಹುದು. ಟೆಸ್ಟ್‌ ಪಂದ್ಯಗಳ ಪಿಚ್‌ಗಿಂತ ಸೀಮಿತ ಓವರ್‌ಗಳ ಪಂದ್ಯದ ಪಿಚ್‌ ಹೆಚ್ಚು ರಕ್ಷಣಾತ್ಮಕವಾಗಿದೆ. ದೊಡ್ಡ ಷಾಟ್‌ಗಳಿಗೆ ಕೈಹಾಕುವುದು ಸುಲಭವಲ್ಲ ; ಏನಿದ್ದರೂ ಸಿಂಗಲ್ಸ್‌ಗಳ ಮೂಲಕ ಇನಿಂಗ್ಸ್‌ ಬೆಳೆಸಬೇಕು.

ಶೆವಾಗ್‌, ತೆಂಡೂಲ್ಕರ್‌, ಗಂಗೂಲಿಯಂತೂ ಗಾಳಿಕುಮಾರರು. ಆಸ್ಟ್ರೇಲಿಯನ್ನರು ತಮ್ಮ ಕ್ಷೇತ್ರ ರಕ್ಷಣೆಯನ್ನು ಸುಧಾರಿಸಿಕೊಳ್ಳಲೇಬೇಕು.

ನಾನೇನಾದರೂ ಭಾರತ ತಂಡದ ನಾಯಕನಾಗಿದ್ದರೆ, ವಿಕೆಟ್‌ ಕೀಪಿಂಗ್‌ ಮಾಡುವಂತೆ ರಾಹುಲ್‌ ದ್ರಾವಿಡ್‌ರನ್ನು ಕೇಳುತ್ತಿರಲಿಲ್ಲ . ಆತನೊಬ್ಬ ಅತ್ಯಮೂಲ್ಯ ಆಟಗಾರ. ದ್ರಾವಿಡ್‌ರನ್ನು ವಿಕೆಟ್‌ ಕೀಪಿಂಗ್‌ ರಿಸ್ಕ್‌ಗೊಡ್ಡಲು ನಾನಂತೂ ಒಪ್ಪುವುದಿಲ್ಲ . ದ್ವಿಪಾತ್ರದ ಒತ್ತಡ ಆತನ ಸಾಮರ್ಥ್ಯದ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ. ಸಿಡ್ನಿಯಲ್ಲಿ ನೋಡಿದಂತೆ ಪುಟಾಣಿ ಪಾರ್ಥಿವ್‌ ಪಟೇಲ್‌ ವೇಗವಾಗಿ ರನ್‌ ಗಳಿಸಬಲ್ಲ . ಟೆಸ್ಟ್‌ಗಳಲ್ಲಿ ಆತನ ವಿಕೆಟ್‌ಕೀಪಿಂಗ್‌ ಉತ್ತಮವಾಗಿರಲಿಲ್ಲವಾದರೂ, ಆತ ಮುಂದಿನ ದಿನಗಳಲ್ಲಿ ಭಾರತ ತಂಡಕ್ಕೆ ಆಸ್ತಿಯಾಗಬಲ್ಲ .

ಜಿಂಬಾಬ್ವೆ ಪಂದ್ಯಾವಳಿಯಲ್ಲಿನ ಮೂರನೇ ತಂಡ. ಎರಡು ಪ್ರಚಂಡ ತಂಡಗಳಿಗೆ ಸ್ಪರ್ಧೆ ನೀಡಬಲ್ಲ ತಾಕತ್ತು ಈ ತಂಡಕ್ಕಿದೆ. ಆಸ್ಟ್ರೇಲಿಯಾ ಎ ಹಾಗೂ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಿರುವ ಜಿಂಬಾಬ್ವೆ ತಂಡ ಒಂದು ದಿನದ ಸರಣಿಗೆ ಉತ್ತಮ ಸಿದ್ಧತೆ ನಡೆಸಿದೆ.

ಆದರೆ, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತವೆ ಎಂದೇ ಪ್ರತಿಯಾಬ್ಬರೂ ಭಾವಿಸಿದ್ದಾರೆ. ಆದರೆ ಚಾಂಪಿಯನ್ನರನ್ನು ಕಂಗೆಡಿಸಬಲ್ಲ ಸಾಮರ್ಥ್ಯ ಜಿಂಬಾಬ್ವೆ ತಂಡಕ್ಕೆ ಖಂಡಿತಾ ಇದೆ. ತಂಡವಾಗಿ ಆಡುವಲ್ಲಿ ಅವರು ಸಮರ್ಥರು. ಬಹುಶಃ ಪಂದ್ಯಾವಳಿಯಲ್ಲಿ ಅತ್ಯುತ್ತಮ ಕ್ಷೇತ್ರರಕ್ಷಣೆ ಸಾಮರ್ಥ್ಯವೂ ಜಿಂಬಾಬ್ವೆ ತಂಡದ್ದೇ ಇರಬಹುದು.

ಜಿಂಬಾಬ್ವೆ ತಂಡ ಯಾವುದೇ ನೋಟಿಸ್‌ ನೀಡದೆ ಚಿಗಿತುಬಿಡಬಹುದು. ಆ ಕಾರಣದಿಂದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಎಚ್ಚರಿಕೆಯಿಂದಿರಬೇಕು.

ಉಳಿದಿರುವುದು ಸುಗ್ಗಿಯ ಸಂಭ್ರಮ !

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X