ರಕ್ತಕಣಿವೆಯಲ್ಲಿ ಮಲಗಿದ ಬಂದೂಕು, ಗಾಳಿಗೂ ಬಂತು ಉಸಿರು!

ರಕ್ತಕಣಿವೆಯಲ್ಲಿ ಮಲಗಿದ ಬಂದೂಕು, ಗಾಳಿಗೂ ಬಂತು ಉಸಿರು!
ಹದಿನಾಲ್ಕು ವರ್ಷಗಳ ನಂತರ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಶಾಂತಿಃ ಶಾಂತಿಃ ಶಾಂತಿಃ

ನವದೆಹಲಿ : ‘ಅಲ್ಲಿ ಬಂದೂಕುಗಳ ಢಂ ಢಂ ಕರಾಳ ಢಮರಿಲ್ಲ. ಮಾರ್ಟಾರ್‌ ಹೊಮ್ಮಿಸುವ ಹೊಗೆಯ ಕಮಟು ವಾಸನೆಯಿಲ್ಲ. ಅಲ್ಲೀಗ ತಣ್ಣನೆಯ ಹಾಡು- ಪಾಡು. ಈಗೊಮ್ಮೆ ಗಡಿ ನಿಯಂತ್ರಣ ರೇಖೆಯ ನೀ ನೋಡು’ ಅನ್ನುತ್ತಾರೆ ಜಮ್ಮುವಿನ ಪೊಲೀಸ್‌ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್‌ ಎಸ್‌.ಎಂ.ಸಹಾಯ್‌.

ಭಾರತ ಹಾಗೂ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಘೋಷಿಸಿದ ಮೊದಲ ದಿನದ ಚಿತ್ರಣ ಕಳೆದ 14 ವರ್ಷಗಳಲ್ಲಿ ಕಂಡೇ ಇರದಷ್ಟು ಶಾಂತಿಯುತವಾದದ್ದು ಎಂದು ಹರ್ಷಿಸುತ್ತಾರೆ ಸಹಾಯ್‌. ರಂಜಾನ್‌ ಹಬ್ಬಕ್ಕೆ ಧನ್ಯವಾದ.

ಮಂಗಳವಾರ (ನ. 25) ಬೆಳಗ್ಗೆ 7.30 ಗಂಟೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಪಡೆಗಳು ಪರಸ್ಪರ ಗುಂಡು ಹಾರಿಸಿದ್ದು, ಬಿಟ್ಟರೆ ಆ ನಂತರ ಗಾಳಿಗೆ ಹೊಸ ಜೀವ ಬಂದಿದೆ. ಉಭಯ ದೇಶಗಳ ಕದನ ವಿರಾಮದ ಈ ತೀರ್ಮಾನ ಜಮ್ಮು ಮತ್ತು ಕಾಶ್ಮೀರದ ಮಕ್ಕಳಿಗೆ ಹೊಸ ನೀಲಾಕಾಶ ಕಾಣಿಸುವಂತೆ ಮಾಡಿದೆ.

ಈ ಹಿಂದೆ ಕದನ ವಿರಾಮ ಘೋಷಿಸಿದರೂ, ಹಬ್ಬ ಮತ್ತಿತರ ಸಂಭ್ರಮಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಪರಿಪಾಠವಿತ್ತು. ಆದರೆ ಈ ಸಲದ ರಂಜಾನ್‌ ಸಂಭ್ರಮವನ್ನು ಮಿಲಿಟರಿ ಪಡೆಗಳು ಕೂಡ ಹಾಡು- ಪಾಡಿನ ಮೂಲಕ ತಣ್ಣಗೆ ಆಚರಿಸಲು ನಿರ್ಧರಿಸಿದ್ದಾರೆ.

ಈ ಗುಂಡಿನಾಟದ ಆವುಟ ನಿಲ್ಲಲಿ. ಕದನ ವಿರಾಮ ಹಾಗೆಯೇ ಚಿರಂತನವಾಗಲಿ ಅನ್ನೋದು ನನ್ನ ಬಯಕೆ. ಬಹುಶಃ ಈ ಸಲದ ರಂಜಾನಿನಲ್ಲಿ ಅಲ್ಲಾಹನ ಆಶೀರ್ವಾದ ದೊಡ್ಡದಿದೆ. ಭಾರತ ಮತ್ತು ಪಾಕಿಸ್ತಾನದ ಹಸನು ಬಾಂಧವ್ಯಕ್ಕೆ ಇದು ಮುನ್ನುಡಿ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್‌ ಜನರಲ್‌ ಶೌಕತ್‌ ಸುಲ್ತಾನ್‌ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಪಾಕಿಸ್ತಾನದದಿಂದ ಅತಿಕ್ರಮಣಕಾರರ ನುಸುಳುವಿಕೆ ಎಲ್ಲಿಯವರೆಗೆ ಇರುವುದಿಲ್ಲವೋ ಕದನ ವಿರಾಮ ಕೂಡ ಅಲ್ಲಿಯವರೆಗೆ ಇರುತ್ತದೆ. ನುಸುಳಿವಿಕೆ ಮುಂದುವರೆದಲ್ಲಿ ಮತ್ತೆ ಗುಂಡೇಟು ಕೊಡಲು ನಾವು ಮುನ್ನುಗ್ಗಲೇಬೇಕಾಗುತ್ತದೆ ಎಂಬುದು ಭಾರತದ ಹೇಳಿಕೆ. ಮುಜಾಹಿದ್ದೀನ್‌ ಚಟುವಟಿಕೆಗಳು ಕದನ ವಿರಾಮದಂಥಾ ಭಾವನಾತ್ಮಕ ಆಮಿಷಕ್ಕೆ ಯಾವತ್ತಿಗೂ ಬಲಿಯಾಗುವುದಿಲ್ಲ. ನಾವು ನಮ್ಮ ಸಾಧನೆಯನ್ನು ಮಾಡಿಯೇ ತೀರುತ್ತೇವೆ ಎಂಬುದು ಹಿಜ್ಬ್‌- ಉಲ್‌- ಮುಜಾಹಿದ್ದೀನ್‌ ಸಂಘಟನೆಯ ವಕ್ತಾರ ಸಲೀಂ ಹಷ್ಮಿ ಬಿಗಿ ಪಟ್ಟು. ನೀಲಾಕಾಶ ನೋಡುತ್ತಾ ಕೂತಿರುವ ಕಾಶ್ಮೀರಿ ಕಂದಮ್ಮ ಸಲೀಂ ಹಷ್ಮಿ ಮಾತು ಕೇಳಿ ಮತ್ತೆ ಬೆಚ್ಚಿದೆ. ಇಷ್ಟಕ್ಕೂ ಕದನ ವಿರಾಮ ಎಲ್ಲಿಯವರೆಗೆ ಇರುತ್ತದೋ?

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+