ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಳು ಬಿದ್ದಿಹುದು ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ಉದ್ಯಾನ

By Staff
|
Google Oneindia Kannada News

ಬೀಳು ಬಿದ್ದಿಹುದು ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ಉದ್ಯಾನ
ಈ ಉದ್ಯಾನದಲ್ಲಿ ಏಷ್ಯಾದಲ್ಲಿ ದೊಡ್ಡದೆನಿಸಿರುವ ಮಾನವ ನಿರ್ಮಿತ ಜಲಪಾತವಿದೆ; ಈ ಜಲಪಾತವ ನೀವ್ಯಾರಾದರೂ ನೋಡಿದ್ದೀರಾ ?

*ದಟ್ಸ್‌ ಕನ್ನಡ ಬ್ಯೂರೊ

ಬೆಂಗಳೂರಿನಲ್ಲಿ ಸಂಜೆಯೇರುತ್ತಲೇ ಜಗಮಗಿಸುವ ಎಂಜಿ ರೋಡಿನ ಪಕ್ಕವೇ ಒಂದು ಪಾರ್ಕ್‌ ಇದೆ. ಇಲ್ಲಿ ಹುಲ್ಲು ಹಾಸಿಲ್ಲ. ನೀಟಾಗಿರುವ ಕಲ್ಲು ಬೆಂಚುಗಳಿಲ್ಲ. ಗುಂಡಗಿನ ಬಲ್ಬುಗಳಿರುವ ಸಾಲು ದೀಪಗಳಿಲ್ಲ. ಆದರೆ ವಿಶಾಲವಾಗಿ ಹರಡಿಕೊಂಡಿರುವ ಹತ್ತಾರು ಮರಗಳಿವೆ. ಈ ಪಾರ್ಕಿನ ಹೆಸರು ಫೀಲ್ಡ್‌ ಮಾರ್ಷಲ್‌ ಕೆ. ಎಂ. ಕಾರಿಯಪ್ಪ ಸ್ಮಾರಕ ಉದ್ಯಾನವನ.

22 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಪಾರ್ಕಿನಲ್ಲಿರುವ ವಿಶಾಲ ಮರಗಳು ಶಿವಾಜಿ ನಗರ, ಡಿಕನ್‌ಸನ್‌ ರೋಡು, ಎಂಡಿ ರೋಡಿನಲ್ಲಿ ತುಂಬುತ್ತಿರುವ ಮಾಲಿನ್ಯಕ್ಕೆ ಔಷಧಿ.

ದೊಡ್ಡ ದೊಡ್ಡ ಬಿಲ್ಡಿಂಗುಗಳ ನಡುವೆ ಮುಳುಗಿ ಹೋಗಿರುವ ಈ ಪಾರ್ಕು ಒಂದು ನಮೂನೆಯ ಇಕಾಲಾಜಿಕಲ್‌ ಹಾಗೂ ಪರಿಸರ ಸಮತೋಲನಕ್ಕೆ ಪರದಾಡುತ್ತಿರುವ ಪಾರ್ಕೂ ಹೌದು. 1996ರಲ್ಲಿ ಆಗ ಪ್ರಧಾನ ಮಂತ್ರಿಯಾಗಿದ್ದ ಎಚ್‌. ಡಿ. ದೇವೇಗೌಡರು ಈ ಪಾರ್ಕನ್ನು ಉದ್ಘಾಟಿಸಿದರು. ಮೊನ್ನೆ ಶುಕ್ರವಾರ ಅಂದರೆ ಜೂನ್‌ 27 ರಂದು ಪಾರ್ಕು ತನ್ನ ಏಳನೇ ಹುಟ್ಟು ಹಬ್ಬವನ್ನು ಸ್ಮಶಾನ ಮೌನದೊಂದಿಗೆ ಆಚರಿಸಿತು. ಯಾಕೆಂದರೆ ಈ ಪಾರ್ಕು ಎಲ್ಲಾ ಹೊತ್ತೂ ಖಾಲಿ ಖಾಲಿಯಾಗಿರುತ್ತದೆ.

ಎಂಜಿ ರೋಡಿನ ಕಲ್ಲುಬೆಂಚುಗಳ ಮೇಲೆ ಕೂತು ಬಣ್ಣದ ರಸ್ತೆಯಲ್ಲಿ ಓಡುವ ವಾಹನಗಳ ದಿಟ್ಟಿಸುವ ಬಣ್ಣದ ಜೋಡಿಗಳು ಕೆಲವೊಮ್ಮೆ ಈ ಪಾರ್ಕಿನ ಒಳಗೆ ಬರುವುದುಂಟು. ಆದರೆ ಆಗಾಗ ಪೊಲೀಸರು ಯುವ ಜೋಡಿಗಳು ಈ ಪಾರ್ಕಿನ ಮೂಲೆಯಲ್ಲಿ ಕಳೆದು ಹೋಗದಂತೆ ಬೆತ್ತ ಹಿಡಿದು ನಿಗಾ ವಹಿಸುತ್ತಿರುತ್ತಾರೆ.

ಈ ಪಾರ್ಕಿನಲ್ಲಿರುವ ಮಾನವ ನಿರ್ಮಿತ ಝರಿ ಏಷ್ಯಾದಲ್ಲಿಯೇ ಅತಿ ದೊಡ್ಡದು ಎಂಬ ಹೇಳಿಕೆಯೂ ಇದೆ. ಆದರೆ ಈ ಜಲಪಾತ ಯಾವಾಗಲೂ ಒಣಗಿಕೊಂಡಿರುವುದರಿಂದ ಈ ಅಗ್ಗಳಿಕೆಗೆ ಬೆಲೆಯಿಲ್ಲ. ಪಾರ್ಕಿನ ಉಸ್ತುವಾರಿ ಮಿಲಿಟರಿ ವಲಯದ ಕಛೇರಿಗೆ ಸೇರಿದ್ದು. ಆರ್ಮಿಯ ಬಳಿ ಪಾರ್ಕಿಗಾಗಿ ವ್ಯಯಿಸಲು ದುಡ್ಡಿಲ್ಲ. ನಗರ ಪಾಲಿಕೆ ಅಥವಾ, ಬಿಡಿಎ ಈ ಪಾರ್ಕಿನ ಅಭಿವೃದ್ಧಿಗೆ ನೆರವಾದರೆ ಚೆನ್ನ ಎಂಬುದು ಪಾರ್ಕಿನ ಉಸ್ತುವಾರಿ ಅಧಿಕಾರಿಗಳ ಅಭಿಮತ. ತೋಟಗಾರಿಕಾ ಇಲಾಖೆಯ ಅಧೀಕ್ಷಕ ಡಾ. ಕೃಷ್ಣಾ ಹೇಳುವ ಪ್ರಕಾರ- ನಗರ ಪಾಲಿಕೆಯ ಆದೇಶ ಬಂದರೆ ಪಾರ್ಕಿನ ಉಸ್ತುವಾರಿ ನೋಡಿಕೊಳ್ಳಬಹುದು. ಇಲ್ಲವಾದರೆ ಆರ್ಮಿ ಪಾರ್ಕಿನೊಳಗೆ ನಾವೇಕೆ ಮೂಗು ತೂರಿಸೋಣ ?

ಆಗಬೇಕಿದೆ ಪಾರ್ಕಿಗಿಷ್ಟು ಸುಣ್ಣಬಣ್ಣ

ಪಾರ್ಕಿಗೆ ಒಂದಿಷ್ಟು ಅಂದ ಚೆಂದ ಕೊಟ್ಟು, ಎರಡು ರೂಪಾಯಿ ಟಿಕೇಟು ಇಟ್ಟರೂ ಎಂಜಿ ರೋಡಿನಲ್ಲಿ ಅಡ್ಡಾಡುವ ಸಾರ್ವಜನಿಕರು ಪಾರ್ಕಿನೊಳಗೆ ಬಂದೇ ಬರುತ್ತಾರೆ. ಎಂಜಿ ರೋಡಿನ ಇನ್ನೊಂದು ತುದಿಯಲ್ಲಿರುವ ಪುಟಾಣಿ ಗಾಂಧಿ ಪಾರ್ಕು ಯಾವತ್ತೂ ವ್ಯಸ್ತ. ಭಾನುವಾರ ಅಂತೂ ಗಾಂಧಿ ಪಾರ್ಕಿನಲ್ಲಿ ಗಿಜಿಗುಡುವಷ್ಟು ಜನರಿರುತ್ತಾರೆ. ಕಾರಿಯಪ್ಪ ಪಾರ್ಕಿಗೆ ಬೇಕಾಗಿರುವುದು ತುಸು ರಿಪೇರಿ ಕಾರ್ಯ ಮತ್ತು ಒಂದು ನಾಯಕತ್ವ ಅಷ್ಟೇ. ಭಾರತದ ಪ್ರಥಮ ದಂಡನಾಯಕನ ಹೆಸರಿನ ಉದ್ಯಾನ ಬೀಳು ಬೀಳಬಾರದಲ್ಲವೇ ?

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X