ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕೆಯಲ್ಲಿ ನೀರಿಲ್ಲ , ಬಾಡಿಗೆ ರೂಮೂ ಇಲ್ಲ

By Staff
|
Google Oneindia Kannada News

ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರವಾಸ ಹಾಕುವ ಯೋಜನೆಯೇನಾದರೂ ಇದ್ದರೆ, ದಯಮಾಡಿ ಮುಂದೂಡಿ. ಅಲ್ಲೀಗ ಬಾಡಿಗೆಗೆ ರೂಮು ಸಿಗೋದಿಲ್ಲ. ಕುಡಿಯಲು ನೀರೂ ಇಲ್ಲ !

ದೇವಳದ 10 ಧರ್ಮ ಛತ್ರಗಳು, ಕಾಟೇಜುಗಳು ಮತ್ತಿತರ ಛತ್ರಗಳ ರೂಮುಗಳನ್ನು ಬಾಡಿಗೆಗೆ ಕೊಡುತ್ತಿಲ್ಲ. ಯಾಕೆಂದರೆ, ರೂಮಿನ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಕುಕ್ಕೆಯಲ್ಲಿ ಇಂತಾ ದುಸ್ಥಿತಿ ನಿರ್ಮಾಣವಾಗುತ್ತಿರುವುದು ಇದೇ ಮೊದಲು. ದೇವಳದ ಆಡಳಿತಾಧಿಕಾರಿ ಸಂಜೀವ ಮಡಿವಾಳ ಟೈಮ್ಸ್‌ ಆಪ್‌ ಇಂಡಿಯಾ ಪತ್ರಿಕೆಗೆ ಪರಿಸ್ಥಿತಿಯ ಪೂರ್ಣ ಮಾಹಿತಿ ಕೊಟ್ಟಿದ್ದಾರೆ...

ಪಶ್ಚಿಮ ಘಟ್ಟಗಳ ತಲ ಭಾಗದಲ್ಲಿರುವ ಕುಕ್ಕೆ ಮಲೆನಾಡಾದ್ದರಿಂದ ನೈಸರ್ಗಿಕವಾಗಿ ಹರಿಯುವ ನದಿ ನೀರೇ ಪ್ರವಾಸಿಗರಿಗೆ ಬೇಕಾದಷ್ಟಾಗುತ್ತಿತ್ತು. ಆದರೆ, ಈ ಬಾರಿ ಮುಂಗಾರು ಮೋಡಗಳು ಆಡುತ್ತಿಲ್ಲವಾದ್ದರಿಂದ ಜಲ ಮೂಲಗಳು ಬತ್ತಿ ಹೋಗಿವೆ. ಕುಮಾರ ಧಾರಾ ನದಿಯ ಸ್ನಾನಘಟ್ಟವಂತೂ ಬೆಂಗಳೂರು ಕೆಂಗೇರಿ ಕೆರೆಯನ್ನು ನೆನಪಿಸುವಂತಾಗಿದೆ. ಅಲ್ಲಿ ಸ್ನಾನ ಮಾಡಬೇಡಿ ಅಂತ ಭಕ್ತಾದಿಗಳಿಗೆ ನಾವು ಹೇಳುವಂತಿಲ್ಲ ಎನ್ನುವ ದೇವಳದ ಸಿಬ್ಬಂದಿಗೆ ಸ್ನಾನ ಘಟ್ಟ ನೋಡಿದರೆ ಅಳು ಬರುತ್ತದೆ. ಕುಮಾರ ಧಾರಾ ನದಿಯಲ್ಲೀಗ ನೀರು ಹರಿಯುತ್ತಿಲ್ಲ. ಅದು ಅಕ್ಷರಶಃ ಕೊಚ್ಚೆ ನೀರಿನಂತೆ ನಿಂತಿದ್ದು, ದುರ್ನಾತ ಬರುತ್ತಿದೆ. ಇನ್ನು ಕೆಲವು ದಿನ ಮಳೆ ಬರದಿದ್ದರೆ ಅಲ್ಲೂ ನೀರಿನ ಕತೆ ಗೋವಿಂದ.

ಶಾಲಾ- ಕಾಲೇಜುಗಳಿಗೆ ರಜೆ ಇರುವ ಅವಧಿ ಇದಾಗಿರುವುದರಿಂದ ಪ್ರವಾಸಿಗರ ಸಂಖ್ಯೆ ಸಹಜವಾಗಿಯೇ ಹೆಚ್ಚು. ಆದರೆ ಅವರೆಲ್ಲರ ದಾಹ ತಣಿಸಲು ಅಗತ್ಯವಾದ ನೀರಿಲ್ಲ. ದೇವರಿಗೆ ಬಗೆಬಗೆಯ ಸೇವೆ ಮಾಡಿಸುವವರು ನಾಲ್ಕೈದು ದಿನ ತಂಗುವುದಂತೂ ಈಗ ದೊಡ್ಡ ಸಾಹಸದ ವಿಷಯವಾಗಿದೆ.

ಹಿಂದೆ ಇಷ್ಟು ಕಷ್ಟದ ಪರಿಸ್ಥಿತಿ ಎದುರಿಸಿರದ ಕಾರಣ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಗೂ ಇದಕ್ಕೆ ಸುಲಭವಾಗಿ ಪರಿಹಾರ ಎಟುಕುತ್ತಿಲ್ಲ. 8 ಇಂಚು ಪೈಪಿನ ಮೂಲಕ ಸಂಪರ್ಕ ಕಲ್ಪಿಸಿ, ಅಂಬೆಟ್ಟುವಿನಲ್ಲಿ ಇನ್ನೂ ಬತ್ತದೆ ಇರುವ ಮೂಲಗಳಿಂದ ನೀರನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ರಾಜೀವ್‌ ಗಾಂಧಿ ಸಮುದಾಯ ಕುಡಿಯುವ ನೀರು ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ 2 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ.

ಯಾವುದಕ್ಕೂ, ಸದ್ಯಕ್ಕೆ ಸುಬ್ರಹ್ಮಣ್ಯದ ಕಡೆ ಪ್ರವಾಸ ಹೋಗದಿರುವುದೇ ಒಳ್ಳೆಯದು.

(ಇನ್ಫೋ ವಾರ್ತೆ)

Post your views

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X