ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚಗುಳಿ ತಿಮಿಂಗಲಗಳಹಿಡಿದು ಹಾಕೋದು ಹೇಗೆ?

By Staff
|
Google Oneindia Kannada News

ಬೆಂಗಳೂರು : ಸೂಕ್ಷ್ಮ ಹುದ್ದೆಗಳಿಗೆ ಯೋಗ್ಯರನ್ನು ಭರ್ತಿ ಮಾಡಲು ಸ್ಥಾಯಿ ಸಮಿತಿಯಾಂದನ್ನು ರಚಿಸಬೇಕು. ಹಾಗಾದಾಗ ಆಡಳಿತದಲ್ಲಾಗುತ್ತಿರುವ ಭ್ರಷ್ಟಾಚಾರ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಬೇಹುಗಾರಿಕಾ ಇಲಾಖೆಯ ಮಾಜಿ ಮುಖ್ಯ ಆಯುಕ್ತ ಎನ್‌.ವಿಠ್ಠಲ್‌ ಸಲಹೆ ಕೊಟ್ಟಿದ್ದಾರೆ.

ಲಂಚಗುಳಿತನದ ಕಾರಣಕ್ಕೆ ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವ ಗಿಂಜೀ ರಾಮಚಂದ್ರನ್‌ ಅವರ ವೈಯಕ್ತಿಕ ಸಹಾಯಕ (ಪಿ.ಎ.) ಆರ್‌.ಪೆರುಮಾಳ್‌ ಅವರನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ವಿಠ್ಠಲ್‌ ಮಾತಾಡುತ್ತಿದ್ದರು. ಆರ್ಥಿಕ ಅಭಿವೃದ್ಧಿ ಕುರಿತು ಬೆಂಗಳೂರಲ್ಲಿ ನಡೆಯುತ್ತಿರುವ ವಿಶ್ವಬ್ಯಾಂಕ್‌ನ ಸಮ್ಮೇಳನದಲ್ಲಿ ಭಾಗವಹಿಸಿದ ವಿಠ್ಠಲ್‌ ಶುಕ್ರವಾರ ಸುದ್ದಿಗಾರರ ಜತೆ ಅನೌಪಚಾರಿಕವಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.

ಕೇಂದ್ರ ಬೇಹುಗಾರಿಕಾ ದಳಕ್ಕೆ (ಸಿಬಿಐ) ನಿರ್ದೇಶಕರನ್ನು ಹೇಗೆ ನೇಮಿಸುತ್ತಾರೋ, ಅದೇ ರೀತಿ ತೀರಾ ಸೂಕ್ಷ್ಮ ಹಾಗೂ ಆಯಕಟ್ಟಿನ ಜಾಗೆಗಳ ಜವಾಬ್ದಾರಿಯುತ ಹುದ್ದೆಗಳಿಗೆ ಆಯ್ಕೆ ನಡೆಯಬೇಕು. ನಾನು ಬೇಹುಗಾರಿಕಾ ಇಲಾಖೆಯಲ್ಲಿದ್ದಾಗಲೇ ಕೇಂದ್ರ ವಿತ್ತ ಸಚಿವ ಜಸ್ವಂತ್‌ ಸಿಂಗ್‌ ಅವರಿಗೆ ಈ ಕಿವಿಮಾತು ಹೇಳಿದ್ದೆ. ಸಾಕಷ್ಟು ದುಡ್ಡು ಮಾಡಲು ಸಾಧ್ಯವಿರುವ ಹುದ್ದೆಗಳ ಮೇಲೆ ನಿಗಾ ಇಡಲು ಸ್ಥಾಯಿ ಸಮಿತಿಯಾಂದು ಅತ್ಯವಶ್ಯಕ. ಈಗಲಾದರೂ ಜಸ್ವಂತ್‌ ಸಿಂಗ್‌ ಎಚ್ಚೆತ್ತುಕೊಳ್ಳಲಿ ಎಂದು ವಿಠ್ಠಲ್‌ ಕರೆ ಕೊಟ್ಟರು.

ಇಲ್ಲಿ ಆಡಳಿತಗಾರರ ಜತೆ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೊಂಡಿ ಹಾಕಿಕೊಳ್ಳುತ್ತಾರೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಕಷ್ಟು ಕಪ್ಪು ಹಣ ಕೂಡಿ ಹಾಕುತ್ತಾರೆ. ಹೀಗಾಗುವಾಗ ಅಧಿಕಾರ ದುರುಪಯೋಗವಾಗುತ್ತದೆ. ಇದಕ್ಕೆಲ್ಲ ಭಾರತದ ಹದಗೆಟ್ಟ ರಾಜಕೀಯ ವ್ಯವಸ್ಥೆಯೇ ಕಾರಣ ಎಂದು ದೂರಿದರು.

ಇವತ್ತು ಕಂಬಿ ಎಣಿಸುತ್ತಿರುವ ಸಚಿವರ ಪಿ.ಎ. ಆರ್‌.ಪೆರುಮಾಳ್‌ ಸ್ವಾಮಿಯನ್ನು ಒಬ್ಬ ಬಲಿಪಶು ಅನ್ನುವುದು ಸಲ್ಲ. ಆತ ಒಬ್ಬ ಖಳನಾಯಕ. ಸಾಕಷ್ಟು ಉಂಡೇಳಲು ಫಲವತ್ತಾದ ಹುದ್ದೆ ಯಾವುದು ಅಂತ ನೋಡಿಯೇ ಇಂತಹ ಅಧಿಕಾರಿಗಳು ಗದ್ದುಗೆ ಏರಿರುತ್ತಾರೆ. ಅದಕ್ಕೆ ಸಾಕಷ್ಟು ಶಿಫಾರಸ್ಸುಗಳನ್ನೂ ಬಳಸಿರುತ್ತಾರೆ ಎಂದು ನೇರವಾಗಿ ಹೇಳಿದರು.

ಕೊನೆ ಮಾತು : ಅಧಿಕಾರದಲ್ಲಿದ್ದಾಗ ಸಣ್ಣ ಪುಟ್ಟ ಲಂಚಗುಳಿಗಳನ್ನೂ ನೇರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ವಿಠ್ಠಲ್‌ ಅಪರೂಪದ ಪ್ರಾಮಾಣಿಕ ವ್ಯಕ್ತಿ. ಈ ಕಾರಣಕ್ಕೇ ಅವರಿಗೆ ಇಲಾಖೆಯಲ್ಲಿ ಶತ್ರುಗಳು ಹೆಚ್ಚಾಗಿದ್ದರು !

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X