ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕಿತ್ಸೆ ನೀಡದ ಯಲಬುರ್ಗ ಸರಕಾರಿಆಸ್ಪತ್ರೆಗಳು

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

ಯಲಬುರ್ಗ : ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ನಿವಾಸಿಗಳು ಖಾಸಗಿ ಆಸ್ಪತ್ರೆಗಳನ್ನೇ ನಂಬಿಕೊಂಡು ದುಬಾರಿ ಬಿಲ್‌ ತೆತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾಗಿದೆ. ಕಾರಣ- ತಾಲ್ಲೂಕಿನ ಸರಕಾರಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿಲ್ಲ .

ಬಿಲ್‌ ನೀಡಲು ತಾಕತ್ತು ಇಲ್ಲದವರು, ಒಣ ಬೇರು, ಶುಂಠಿ ಕಷಾಯದಂತಹ ಮನೆ ಮದ್ದಿಗೆ ಮೊರೆ ಹೋಗುತ್ತಾರೆ. ಅನಾರೋಗ್ಯ ಉಲ್ಬಣಿಸಿದರೆ ಸೌಕರ್ಯಗಳಿಲ್ಲದ ಸರಕಾರಿ ಆಸ್ಪತ್ರೆಗೇ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆಯುತ್ತಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು ಎಂಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಎರಡು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಒಂದು ಜನರಲ್‌ ಆಸ್ಪತ್ರೆಯಿದೆ. ಆದರೆ ನೇಮಕಗೊಂಡಿರುವ ವೈದ್ಯರು ಇಬ್ಬರೇ ಇಬ್ಬರು. ಅವರೂ ರಜೆ ಮೇಲೋ, ಡ್ಯೂಟಿ ಮೇಲೋ ಗೈರು ಹಾಜರಾಗುತ್ತಲೇ ಇರುತ್ತಾರೆ. ಉಳಿದಂತೆ ಏಳು ಮಂದಿ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಆದರೆ ಆಪತ್ತಿಗೆ ಚಿಕಿತ್ಸೆ ನೀಡಬಲ್ಲವರು ಲಭಿಸಿದರೆ ರೋಗಿಗಳ ಪುಣ್ಯ.

ಎಕ್ಸ್‌ರೇ ಮೆಷಿನ್‌ ಇದ್ದರೂ ಆಪರೇಟ್‌ ಮಾಡುವವರಿಲ್ಲ . ಹಾಗೆಯೇ ರಕ್ತ ಮತ್ತು ಮೂತ್ರ ಪರೀಕ್ಷೆಗಳಿಗೂ ಇಲ್ಲಿ ವ್ಯವಸ್ಥೆ ಇಲ್ಲ. ಇದಕ್ಕಾಗಿ ಸಾರ್ವಜನಿಕರು ದೂರದ ಗದಗ ಅಥವಾ ಕೊಪ್ಪಳದ ಖಾಸಗಿ ಕ್ಲಿನಿಕ್‌ವರೆಗೆ ಪ್ರಯಾಣಿಸಬೇಕು. ಲೇಡಿ ಡಾಕ್ಟರ್‌ ಇಲ್ಲದೇ ಇರುವುದರಿಂದ ಗರ್ಭಿಣಿ ಮಹಿಳೆಯರ ತೊಂದರೆಗಳನ್ನೂ ಕೇಳುವವರಿಲ್ಲ.

1998-99 ನೇ ವರ್ಷದಲ್ಲಿ ಯಲಬುರ್ಗ ಆಸ್ಪತ್ರೆಗೆ 63 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸರಕಾರ ಒಪ್ಪಿಕೊಂಡಿತ್ತು . ಆದರೆ ಸ್ಥಳೀಯ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆಸ್ಪತ್ರೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಲಿಲ್ಲ.

ಪ್ರಸ್ತುತ ಆಸ್ಪತ್ರೆಯ ಕೆಟ್ಟ ಸ್ಥಿತಿಯಿಂದ ಸಾರ್ವಜನಿಕರು ಸಿಟ್ಟುಗೊಂಡಿದ್ದಾರೆ. ಏಪ್ರಿಲ್‌ 7ರಂದು ಆಸ್ಪತ್ರೆಯ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಆಸ್ಪತ್ರೆಯನ್ನು ಅಭಿವೃದ್ಧಿ ಗೊಳಿಸಿ, ಇಲ್ಲವಾದರೆ ಬೀಗ ಜಡಿಯಿರಿ ಎಂಬುದು ಧರಣಿಯ ಘೋಷಣೆ. ಧರಣಿಯಲ್ಲಿ ತಾಲ್ಲೂಕು ಪಂಚಾಯತ್‌ ಸದಸ್ಯ ಸಂಗಮೇಶ ವಾಡಿ, ಈರಣ್ಣ ಹಳ್ಳಿಕೇರಿ, ಬಸವರಾಜ ನೆಲಜೆರಿ ಭಾಗವಹಿಸುವರು. ಆಸ್ಪತ್ರೆಯ ಸ್ಥಿತಿ ಗತಿ ಕುರಿತು ಈಗಾಗಲೇ ರಾಜ್ಯ ಆರೋಗ್ಯ ಇಲಾಖೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ದೂರು ನೀಡಲಾಗಿದೆ.

ಧರಣಿಯ ನಂತರವಾದರೂ ಆರೋಗ್ಯ ಇಲಾಖೆಗೆ ಹಾಗೂ ಜಿಲ್ಲಾ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X