ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ದಾಟಿದ ನಿಟ್ಟೂರರಿಗೆ ಇನ್ನೊಂದು ಶಾಲು

By Staff
|
Google Oneindia Kannada News

Nittur Srinivasa Raoವರದಿ- ಚೇತನ್‌

ಬೆಂಗಳೂರು :‘ನನಗೆ ಸನ್ಮಾನ ಸಮಾರಂಭವೆಂದರೆ ಮುಜುಗರ, ಸಂಕೋಚ. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ನನ್ನ ಮನೆ ಇದ್ದ ಹಾಗೆ. ಮನೆಯವರೇ ಸನ್ಮಾನ ಮಾಡಿದರೆ ಹೇಗಿರುತ್ತದೆ? ಆದರೂ ಅವರು ಬಂದು ಕೇಳಿಕೊಂಡಾಗ ಒಪ್ಪಿದೆ. ದೀರ್ಘಾಯುಷಿಯಾಗುವುದು ದೊಡ್ಡದಲ್ಲ. ಆದರೆ ಸಾರ್ಥಕ ಜೀವನ ನಡೆಸಬೇಕು. ನನ್ನ ಬಗ್ಗೆ ಒಳ್ಳೆಯ ಮಾತಾಡುವುದಕ್ಕೆ ನಿಮ್ಮ ಪ್ರೀತಿಯೇ ಕಾರಣ. ನನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು...’

ಕರ್ನಾಟಕದ ನಿವೃತ್ತ ಮುಖ್ಯ ನ್ಯಾಯಮೂರ್ತಿ, ನೂರು ದಾಟಿದ ನಿಟ್ಟೂರು ಶ್ರೀನಿವಾಸ ರಾಯರು ಹೃದಯ ತುಂಬಿ ಮಾತಾಡಿದರು. ಸಂದರ್ಭ- ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಫೆಬ್ರವರಿ 15, ಶನಿವಾರ ಡಿ.ವಿ.ಜಿ. ಸಭಾಂಗಣದಲ್ಲಿ ಸನ್ಮಾನಿಸಿದಾಗ.

ಪತ್ರಿಕೆ ಓದಿ ದೇಶ ಕೆಟ್ಟು ಹೋಗ್ತಿದೆ ಎನ್ನಬೇಕಿಲ್ಲ. ಜೀವನ ಶೈಲಿ ಬಹಳ ಬದಲಾಗಿದೆ. ಮುಖ್ಯವಾಗಿ ಮನುಷ್ಯನಿಗೆ ಚೈತನ್ಯವಿರಬೇಕು. ಚೈತನ್ಯವಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು ಎನ್ನುವ ಮೂಲಕ ಇಳಿವಯಸ್ಸಿನಲ್ಲೂ ಚೈತನ್ಯದ ಬುಗ್ಗೆಯಂಥಾ ಮನಸ್ಸು ತಮ್ಮದೆಂಬುದನ್ನು ನಿಟ್ಟೂರರು ಬಿಚ್ಚಿಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ಭಾರತದ ಮಾಜಿ ರಾಯಭಾರಿ, ದಕ್ಷಿಣ ಆಫ್ರಿಕಾ ಹಾಗೂ ಕೇಂದ್ರ ಯೋಜನಾ ಆಯೋಗ ಮಾಜಿ ಸದಸ್ಯ ಎಲ್‌. ಸಿ. ಜೈನ್‌. ಮುಖ್ಯ ಅತಿಥಿಯಾಗಿ ಬರಬೇಕಿದ್ದ ರಾಜ್ಯಪಾಲರಾದ ಟಿ. ಎನ್‌. ಚತುರ್ವೇದಿ ಗೈರು ಹಾಜರಾಗಿದ್ದರು.

ನಿಟ್ಟೂರರಿಗೆ ಸನ್ಮಾನ ಮಾಡಿದ ನಂತರ ಮಾತನಾಡಿದ ಜೈನ್‌, ರಾಯರನ್ನು ಮೊದಲು ಭೇಟಿಯಾದ ಸಮಯ ನೆನಪಿಸಿಕೊಂಡರು. ಭೇಟಿ ಸಮಯದಲ್ಲಿ ರಾಯರು ತಮ್ಮನ್ನು 100ನೇ ಹುಟ್ಟಿದ ಹಬ್ಬಕ್ಕೆ ಆಹ್ವಾನಿಸಿದುದನ್ನು ಮೆಲುಕು ಹಾಕಿದರು. ಹಾಗೆಯೇ ತಮ್ಮ 100ನೇ ಹುಟ್ಟಿದ ಹಬ್ಬಕ್ಕೂ ರಾಯರನ್ನು ಆಹ್ವಾನಿಸಿದ್ದನ್ನೂ ಸ್ಮರಿಸಿದರು.

ಭಾರತದ ಸಂವಿಧಾನ, ರಾಜಕೀಯ, ರಾಜಕಾರಣಿಗಳ ಬಗ್ಗೆ ಮಾತಾಡಿದ ಜೈನ್‌, ರಾಜಕಾರಣಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಿಟ್ಟೂರು ಶ್ರೀನಿವಾಸ ರಾಯರು ಭಾರತ ಕೇಂದ್ರೀಯ ಜಾಗೃತ ದಳದ ಮೊದಲ ಆಯುಕ್ತರಾಗಿದ್ದವರು. ಅಂದೇ ಅವರು ಭ್ರಷ್ಟಾಚಾರವನ್ನು ಕೊಂದಿದ್ದರೆ, ನಾವು ಈಗ ಇವೆಲ್ಲ ನೋಡಬೇಕಾಗಿರಲಿಲ್ಲ ಎಂದು ನೇರವಾಗಿ ಹೇಳಿದರು.

ಓದಿನ ಬಗ್ಗೆ ಕೇಳಿದರೆ, ನಮ್ಮ ರಾಜಕಾರಣಿಗಳಿಗೆ ಕೋಪ ಬರುತ್ತೆ

ಚುನಾವಣಾ ಆಯೋಗದ ನಿರಂತರ ಹೋರಾಟದ ನಂತರ ಭಾರತೀಯ ಸುಪ್ರೀಂಕೋರ್ಟ್‌ ಮೇ 2, 2002ರಂದು ಮೂವರು ನ್ಯಾಯಾಧೀಶರ ನೇತೃತ್ವದ ಸಭೆ ನಡೆಸಿತು. ಯಾವುದೇ ಅಭ್ಯರ್ಥಿ ಚುನಾವಣಾ ಆಯೋಗದ ಮುಂದೆ ತನ್ನ ಕ್ರಿಮಿನಲ್‌, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದಾಗ, ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ರಾತ್ರೋರಾತ್ರಿ ಒಂದಾಗಿ ಚುನಾವಣಾ ಆಯೋಗದ ವಿರುದ್ಧ ತಿರುಗಿಬಿದ್ದವು. ಚುನಾಯಿತರಾದ ನಂತರ ಸಭಾಧ್ಯಕ್ಷರ ಮುಂದೆ ಸ್ಪಷ್ಟನೆ ಕೊಡುತ್ತೇವೆ ಅಂದರು. ಇವರು ಚುನಾಯಿಸಿ ಬರುವುದು ಜನರಿಂದ. ಸ್ಪಷ್ಟನೆ ಕೊಡಬೇಕಾದ್ದು ಜನರಿಗೆ. ಜನರಿಂದ ಮತ ಹಾಕಿಸಿಕೊಳ್ಳುವುದಷ್ಟೇ ಇವರ ಜಾಯಮಾನ. ಇವರ ವಿದ್ಯಾಭ್ಯಾಸದ ಬಗ್ಗೆ ಕೇಳಿದರೆ ಕೋಪ ಬರುತ್ತೆ. ಯಾಕೆಂದರೆ, ಎಷ್ಟೋ ಜನರಿಗೆ ಸರಿಯಾದ ಶಿಕ್ಷಣ ಲಭ್ಯವಾಗಿಲ್ಲ. ಆದರೆ, ರಾಜಕಾರಣ ಮಾಡುವ ಖದರಿಗೇನೂ ಕಡಿಮೆಯಿಲ್ಲ ಎಂದು ಕಟಕಿಯಾಡಿದರು.

ಪೋರ್ಟ್‌ ಬ್ಲೇರಲ್ಲಿ ಗಾಂಧಿ ಮಹಾತ್ಮ : ‘ನಾನು ನನ್ನ ಹೆಂಡತಿ ದೇವಕಿ ಒಮ್ಮೆ ಪೋರ್ಟ್‌ ಬ್ಲೇರ್‌ಗೆ ಹೋಗಿದ್ದಾಗ ಅಲ್ಲಿನ ಜೈಲಿಗೆ ಹೋಗಿದ್ದೆವು. ಸ್ವಾತಂತ್ರದ ಸಮಯದಲ್ಲಿ ಸ್ವಾತಂತ್ರ ಹೋರಾಟಗಾರರನ್ನು ಅಲ್ಲಿಡುತ್ತಿದ್ದರಂತೆ. ಗಾಂಧೀಜಿಯಾಬ್ಬರನ್ನು ಬಿಟ್ಟು ರಾಜ್‌ಘಾಟ್‌ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾರೂ ಪೋರ್ಟ್‌ ಬ್ಲೇರ್‌ನಲ್ಲಿರಲ್ಲಿಲ್ಲ. ರಾಜ್‌ಘಾಟ್‌ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಸ್ವಾತಂತ್ರ ಬಂದ ನಂತರ ರಾಜ್ಯವಾಳಿದವರೇ’ ಎಂದರು.

ಮೊದಲು ಮತದಾರ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ತಾನು ಮತ ಹಾಕುತ್ತಿರುವುದು ಯಾವುದೇ ರಾಜಕೀಯ ಪಕ್ಷಕ್ಕಲ್ಲ ಬದಲಿಗೆ ಭಾರತ ಮಾತೆಗೆ ಎಂದು ತಿಳಿಯಬೇಕು. ಯಾವ ಅಭ್ಯರ್ಥಿ ತಮ್ಮ ವಿವರಗಳನ್ನು ಜನರೆದುರಿಗೆ ಹೊರಗೆಡವುತ್ತಾರೋ ಅಂತಹವರಿಗೆ ಮಾತ್ರ ನಮ್ಮ ಮತ ಎಂದು ನಾವು ಮೊದಲು ತೀರ್ಮಾನಿಸಬೇಕು ಎಂದು ಜೈನ್‌ ಕರೆ ಕೊಟ್ಟರು.

ರಾಜಕಾರಣಿಗಳಿಗೆ ಸಮಯ ಪರಿಮಿತಿಯೇ ಇಲ್ಲ : ನಮ್ಮ ಸಂವಿಧಾನದಲ್ಲಿ ಸಮಯ ಪರಿಮಿತಿ ಇರುವ ಏಕೈಕ ನಿಯಮ- ಆರ್ಟಿಕಲ್‌ 45. ಅದು ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ್ದು. ಅದರ ಕಾಲಾವಧಿ 10 ವರ್ಷ. ಆದರೆ ಇದೇ ಕಾಲಾವಧಿ ನಮ್ಮ ರಾಜಕಾರಣಿಗಳಿಗಿಲ್ಲ. ಅವರೆಲ್ಲ ದೇಶವನ್ನು ಎಷ್ಟು ವರ್ಷ ಬೇಕಾದರೂ ಆಳಬಹುದು. ಉದಾಹರಣೆಗೆ, ಈ ನಿಯ ಮ ಜಾರಿಯಲ್ಲಿದ್ದ 10 ವರ್ಷ, 1950-60ರ ಸಮಯದಲ್ಲಿ ನೆಹರು 17 ವರ್ಷ , ಬಾಬು ರಾಜೇಂದ್ರ ಪ್ರಸಾದ್‌ 10 ವರ್ಷ ದೇಶವನ್ನಾಳಿದರು. ಶಿಕ್ಷಣ ಮಾತ್ರ ನಮ್ಮ ನಾಯಕರ ಸಂವಿಧಾನ ಭಾಷಣಗಳಲ್ಲಿ ಕಾಣಿಸುವುದಿಲ್ಲ . ನಾವು ಇದರೆಲ್ಲರ ವಿರುದ್ಧ ಹೋರಾಡಬೇಕು. ರಾಯರಂತಹವರು ನಮಗೆ ಪ್ರೇರಣೆ ನೀಡಬೇಕು ಎಂದು ಕಳಕಳಿಯ ಮನವಿ ಮಾಡಿಕೊಂಡರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X