ಕರೆಂಟು ಕಳ್ಳರ ಮಟ್ಟಹಾಕಿ : ಕೋಲಾರದಲ್ಲಿ ವಾಜಪೇಯಿ
ಕೋಲಾರ : ಕರೆಂಟು ಕಳ್ಳತನ ವ್ಯಾಪಕವಾಗುತ್ತಿದ್ದು, ಬೊಕ್ಕಸಕ್ಕೆ ವಾರ್ಷಿಕ 20 ಸಾವಿರ ಕೋಟಿ ರುಪಾಯಿ ಲುಕಸಾನಾಗುತ್ತಿದೆ. ಕರೆಂಟು ಕಳ್ಳರಿಗೆ ತಕ್ಕ ಶಾಸ್ತಿಯಾಗಬೇಕು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕರೆ ಕೊಟ್ಟರು.
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಡೆಟ್‌ನ 2000 ಮೆಗಾ ವ್ಯಾಟ್ ಸಾಮರ್ಥ್ಯದ ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ (ಎಚ್‌ವಿಡಿಸಿ) ಬೈಪೋಲ್ ವಿದ್ಯುತ್ ಯೋಜನೆಗೆ ಶುಕ್ರವಾರ (ಫೆ.14) ಚಾಲನೆ ಕೊಟ್ಟ ನಂತರ ಪ್ರಧಾನಿ ಮಾತಾಡಿದರು.
ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವಿದ್ಯುತ್ತಿನ ಬಳಕೆ ಕಡಿಮೆಯಿದೆ. ನೈಸರ್ಗಿಕ ಶಕ್ತಿಗಳ ಬಳಕೆಯನ್ನು ಜನರಲ್ಲಿ ಹೆಚ್ಚು ಮಾಡುವುದು ಹಾಗೂ ಪ್ರಸರಣೆ ಮತ್ತು ವಿತರಣೆಯಲ್ಲಾಗುತ್ತಿರುವ ವಿದ್ಯುತ್ ನಷ್ಟವನ್ನು ತಗ್ಗಿಸುವುದರಿಂದ ಸಾಕಷ್ಟು ವಿದ್ಯುತ್ ಕ್ಷಾಮ ನೀಗಲಿದೆ ಎಂದರು.
ದೇಶದ 14 ರಾಜ್ಯಗಳಲ್ಲಿ ವಿದ್ಯುತ್ ಕ್ಷಾಮವಿದೆ. ವಿದ್ಯುತ್ ಉತ್ಪಾದನೆ ಒಂದು ಚಳವಳಿಯ ರೂಪು ತಾಳಬೇಕು. ಇಲ್ಲವಾದರೆ ಈ ಸಮಸ್ಯೆ ಬಗೆಹರಿಸುವುದು ಕಷ್ಟ ಸಾಧ್ಯ. ನಿಗದಿತ ಅವಧಿಗಿಂತ 9 ತಿಂಗಳು ಮುಂಚೆಯೇ ಕೋಲಾರದ ಈ ಯೋಜನೆಯನ್ನು ಪೂರೈಸಿದಕ್ಕಾಗಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಡೆಟ್‌ನ್ನು ಪ್ರಧಾನಿ ಶ್ಲಾಘಿಸಿದರು. 3,100 ಕೋಟಿ ರುಪಾಯಿಯ ಈ ಯೋಜನೆ ಬಲು ಬೇಗ ಮುಗಿದಿರುವುದರಿಂದ 700 ಕೋಟಿ ರುಪಾಯಿ ಉಳಿತಾಯವಾಗಿದೆ. ಈ ಯೋಜನೆ ಇತರೆ ಯೋಜನೆಗಳಿಗೆ ಮಾದರಿಯಾಗಬೇಕೆಂದರು.
ಒರಿಸ್ಸಾದ ತಾಲ್ಚರ್‌ನಿಂದ ಕೋಲಾರದವರೆಗೆ 1,400 ಕಿ.ಮೀ. ವ್ಯಾಪ್ತಿಯವರೆಗೆ ಎಚ್‌ವಿಡಿಸಿ ವಿತರಣಾ ವ್ಯವಸ್ಥೆಯ ಜಾಲ ಹಬ್ಬಿರುವುದು ಈ ಯೋಜನೆಯ ವೈಶಿಷ್ಟ ್ಯ. ಒರಿಸ್ಸಾ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಲ್ಲಿ ಯೋಜನೆ ವ್ಯಾಪಿಸಿದೆ.
ಕೇರಳ ಮತ್ತು ಆಂಧ್ರಪ್ರದೇಶಕ್ಕೇ ಮೀಸಲಾದ ವಿದ್ಯುತ್ ಸ್ಥಾವರಗಳು ನಿರ್ಮಾಣವಾಗಿವೆ. ಕರ್ನಾಟಕಕ್ಕೂ ಇದೇ ರೀತಿಯ ಸ್ಥಾವರವನ್ನು ಒದಗಿಸಿಕೊಡಿ ಎಂದು ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನನಗೆ ಮನವಿ ಸಲ್ಲಿಸಿದರು. ಯಾವುದೇ ಒಂದು ರಾಜ್ಯದ ವಿಷಯವಾಗಿ ಕೇಂದ್ರ ಸರ್ಕಾರ ಪೂವ್ರಾಗ್ರಹ ನೀತಿ ತಳೆಯದು. ಕೃಷ್ಣ ಅವರ ಮನವಿಗೆ ಸ್ಪಂದಿಸಿ ಎಂದು ಪವರ್ ಗ್ರಿಡ್ ಕಾರ್ಪೊರೇಷನ್ ಅಧಿಕಾರಿಗಳಿಗೆ ವಾಜಪೇಯಿ ಕರೆ ಕೊಟ್ಟರು.
ಯೋಜನೆಯ ಚಾಲನಾ ಸಭೆಯಲ್ಲಿ ಮಾತಾಡಿದ ಕೃಷ್ಣ, 2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಈ ಯೋಜನೆಯಲ್ಲಿ ಕರ್ನಾಟಕದ ಪಾಲು ಪ್ರತಿಶತ 23ರಷ್ಟು ಮಾತ್ರ. ಇದು ಹೆಚ್ಚಾಗಬೇಕು. ಕರ್ನಾಟಕ ವಿದ್ಯುತ್ ಕ್ಷಾಮ ಪೀಡಿತ ರಾಜ್ಯ. ಒಂದು ಕಾಲದಲ್ಲಿ ಈ ಕ್ಷೇತ್ರಕ್ಕೇ ಸಾಕಷ್ಟು ಬಂಡವಾಳ ಬರುತ್ತದೆಂಬ ನಿರೀಕ್ಷೆಯಿತ್ತು. ದುರದೃಷ್ಟವಶಾತ್ ಅದು ಹುಸಿಯಾಯಿತು ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications