ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಐಟಿ ಮೇಳದಲ್ಲಿ ವಿಜ್ಞಾನಿ ತಾತನೂ ಮಕ್ಕಳೂ

By Staff
|
Google Oneindia Kannada News

Dr. APJ Kalam, President of Indiaಮೈಸೂರು : ವಿಜ್ಞಾನಿ ಹೃದಯ, ಮಕ್ಕಳತ್ತ ಅದಮ್ಯ ಪ್ರೀತಿ ಇಟ್ಟುಕೊಂಡಿರುವ ರಾಷ್ಟ್ರಪತಿಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಮೈಸೂರು ಡಾಟ್‌ ಕಾಂ ಮೇಳ ಉದ್ಘಾಟಿಸಿದರು ಅನ್ನುವುದಕ್ಕಿಂತ ಮಕ್ಕಳೊಂದಿಗೆ ಮಗುವಾದದ್ದೇ ಶುಕ್ರವಾರದ ವಿಶೇಷ.

ಅವರು ಸಿದ್ಧ ಭಾಷಣವನ್ನು ಮುಂದಿಟ್ಟುಕೊಂಡಿರಲಿಲ್ಲ. ಸಭೆಯ ರೀತಿ ರಿವಾಜನ್ನು ಗಾಳಿಗೆ ತೂರಿದಂಥಾ ಮನಃ ಸ್ಥಿತಿ. ಕ್ಷಣ ಕಾಲ ಅತ್ತಿತ್ತ ನೋಡಿ, ಗಾವುದ ದೂರದಲ್ಲಿದ್ದ ಚಿಣ್ಣ ವಿಜ್ಞಾನಿಗಳನ್ನು ಇನ್ನೂ ಹತ್ತಿರಕ್ಕೆ ಕರೆ ತರುವಂತೆ ಭದ್ರತಾ ಸಿಬ್ಬಂದಿಗೆ ಕಲಾಂ ಆಣತಿಯಿತ್ತರು. ಮಾತು ಭಾಷಣವಾಗಲಿಲ್ಲ. ಚಿಣ್ಣರೊಟ್ಟಿಗಿನ ಆರೋಗ್ಯಕರ ಹರಟೆಯಾಗಿ ವೇದಿಕೆ ರೂಪಿತವಾಯಿತು.

ಅದು ನಲವತ್ತು ನಿಮಿಷ ಕಾಲದ ರಾಷ್ಟ್ರೀಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ. ದೇಶದ ಹಲವು ರಾಜ್ಯಗಳಿಂದ ಬಂದ 650 ಪುಟ್ಟ ಮಕ್ಕಳು ಚುರುಕೋ ಚುರುಕು. ಅವರ ಪ್ರಶ್ನೆಗಳಿಗೆ ತಕ್ಕ ಉತ್ತರ ಕೊಡುವ ಉತ್ಸಾಹದಲ್ಲಿ ಕಲಾಂ ಅಜ್ಜ. ಭಾರತದ ನಿಶ್ಶಸ್ತ್ರೀಕರಣ ನೀತಿ, ಮಾದರಿ ಶಿಕ್ಷಣ ವ್ಯವಸ್ಥೆ, ಮಕ್ಕಳ ಮನೋವಿಕಾಸದಲ್ಲಿ ಮೇಷ್ಟ್ರು- ಮೇಡಂಗಳ ಪಾತ್ರ... ಹೀಗೆ ಪುಟ್ಟ ವಿಜ್ಞಾನಿಗಳು ಗಂಭೀರವಾದ ಪ್ರಶ್ನೆಗಳನ್ನು ಕಲಾಂ ಅಜ್ಜನತ್ತ ಎಸೆದರು. ಚರ್ಚೆ ಕಳೆಗಟ್ಟಿತು.

ಕಲಾಂ ತಾತನ ಟಿಪ್ಸು

‘ಯೋಚನೆ ನಮಗೆ ಜ್ಞಾನ ಕೊಡುತ್ತದೆ. ಯೋಚನೆ ನಮ್ಮನ್ನು ಉದ್ಧರಿಸುತ್ತದೆ. ಯೋಚನೆ ನಮ್ಮ ಜೀವನವನ್ನು ಹಸನಾಗಿಸುತ್ತದೆ. ಮೊದಲು ನೀವು ಕನಸು ಕಾಣಬೇಕು. ಆಮೇಲೆ ಬೆವರು ಹರಿಸಬೇಕು. ಕಂಡ ಕನಸನ್ನು ನನಸಾಗಿಸಿಕೊಳ್ಳದೇ ಬಿಡುವುದಿಲ್ಲ ಎಂಬ ತ್ರಿವಿಕ್ರಮನ ಛಲ ತುಂಬಿಕೊಳ್ಳಬೇಕು...’ ಮಕ್ಕಳ ಕುರಿತು ಅಜ್ಜನ ಸಲಹೆ ಪದೇಪದೇ ಅನುರಣಿಸಿತು. ಪಕ್ಕಾ ಮೇಷ್ಟ್ರ ಧಾಟಿಯಲ್ಲಿ ಕಲಾಂ ‘ನಾನು ಹೇಳಿದ್ದು ನಿಮಗೆ ಅರ್ಥವಾಯಿತೇ’ ಅಂತ ಪ್ರಶ್ನೆ ಎಸೆಯುತ್ತಲೇ ಇದ್ದರು. ಒಬ್ಬ ಹುಡುಗ ಎದ್ದು ಕಲಾಂರನ್ನು ಒಂದು ಸಣ್ಣ ಪ್ರಶ್ನೆ ಕೇಳಿಯೇಬಿಟ್ಟ. ಅದಕ್ಕೆ ಉತ್ತರ ಕೊಟ್ಟ ಕಲಾಂ, ‘ಮುಂದೇನಾಗಬೇಕು ಅಂತ ಇದ್ದೀಯ?’ ಅಂತ ಕೇಳಿದರು. ‘ಸರ್ಜನ್‌ ಆಗ್ತೀನಿ’ ಅಂದ ಹುಡುಗ.

ಆಮೇಲೆ ಕಲಾಂ ಮಕ್ಕಳೊಂದಿಗೆ ಅಕ್ಷರಶಃ ಮಗುವಾಗಿ ಬೆರೆತು, ಅವರ ಕನಸನ್ನು ಕೇಳಿದರು. ಡಾಕ್ಟರ್‌, ಎಂಜಿನಿಯರ್‌..ಹೀಗೆಲ್ಲಾ ಹಾದು ಬಂದ ಉತ್ತರಗಳ ನಡುವೆ ಒಂದು ಹೆಣ್ಣು ಹುಡುಗಿ ‘ನಿಮ್ಮಂತಾಗುತ್ತೇನೆ’ ಅಂದಾಗ ಸಭೆ ಗೊಳ್ಳೆಂದು ನಕ್ಕಿತು. ಆ ಹುಡುಗಿ ಹೇಳಿದ ಅರ್ಥ- ರಾಷ್ಟ್ರಪತಿಯಾಗಬೇಕು ಎಂಬುದಾಗಿತ್ತು. ಆದರೆ ಕಲಾಂ ತಾತ ಅಲ್ಲೂ ಚಟಾಕಿ ಹಾರಿಸಿ ಮಜಾ ಕೊಟ್ಟರು.

ದೇಶವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯಲು ಹಾಗೂ ಅದನ್ನು ಆರ್ಥಿಕವಾಗಿ ಗಟ್ಟಿಗೊಳಿಸಿ, ಮೌಲ್ಯಾಧಾರಿತ ವ್ಯವಸ್ಥೆ ಜಾರಿಗೆ ತರಲು ನನ್ನ ಬೆವರನ್ನು ಹರಿಸುತ್ತೇನೆ ಎಂದು ಮಕ್ಕಳ ಮುಂದೆ ಕಲಾಂ ಗಟ್ಟಿಯಾಗಿ ಹೇಳಿದರು. ಕ್ಷಣ ಮೌನದ ನಂತರ ಮತ್ತೆ ಮಕ್ಕಳು ಅಜ್ಜನೊಟ್ಟಿಗೆ ಸಂತಸ ಹಂಚಿಕೊಂಡರು.

ಮೈಸೂರಲ್ಲಿ ಐಟಿ ಡಾಟ್‌ ಕಾಂ ಮೇಳದ ವಹಿವಾಟಿನ ಸದ್ದಿಗಿಂತ ಕಲಾಂ ಅಜ್ಜನೊಟ್ಟಿಗೆ ಮಕ್ಕಳ ಕೇಕೆಯದೇ ಮಾತು ದಿನವಿಡೀ ಗುನುಗುನಿಸುತ್ತಿತ್ತು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X