ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಗಿಟ್ಟದ ವ್ಯಾಪಾರ ಮೈಸೂರಲ್ಲಿ ಗಿಟ್ಟೀತೆ ?

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

ಕಾವೇರಿ ಕಾವಿನ ಹಿನ್ನೆಲೆಯಲ್ಲಿ ಏಷ್ಯಾದ ಪ್ರತಿಷ್ಠಿತ ಐಟಿ ಉತ್ಸವವಾದ ಬೆಂಗಳೂರು ಐಟಿಡಾಟ್‌ಕಾಂ-2002 ಬೋರಲು ಬಿದ್ದದ್ದನ್ನು ಮರೆತು, ಮೈಸೂರು ಐಟಿ.ಕಾಂ ಉತ್ಸವವನ್ನು ವೈಭವದಿಂದ ನಡೆಸಲು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸರ್ಕಾರ ನಿರ್ಧರಿಸಿದೆ.

ಇನ್ನೂ ಅಲ್ಲಲ್ಲಿ ಕಾವೇರಿ ಕಾವಿನ ಹವೆ ಸುಳಿದಾಡುತ್ತಿದ್ದರೂ. ಡಿಸೆಂಬರ್‌ ತಿಂಗಳ ಕೊನೆ ವಾರದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಐಟಿ ಉತ್ಸವ ನಡೆಸಲು ಸರ್ಕಾರ ಸಿದ್ಧತೆಗಳನ್ನು ನಡೆಸಿದೆ. ಮೈಸೂರು ಐಟಿ.ಕಾಂ-2002 ಮೇಳದಲ್ಲಿ ಭಾಗವಹಿಸಲು ಖಾಸಗಿಯರ ಉತ್ಸಾಹ ಈ ಸಲ ಜೋರಾಗಿದೆ. ಉತ್ಸವದ ಯಶಸ್ಸಿಗೆ ಸರ್ಕಾರದೊಂದಿಗೆ ಎಸ್‌ಟಿಪಿಐ, ಬಿಎಸ್‌ಎನ್‌ಎಲ್‌ ಹಾಗೂ ಸಿಲಿಕಾನ್‌ ವ್ಯಾಲಿಯ ಪ್ರತಿಷ್ಠಿತ ಕಂಪನಿಗಳಾದ ಇನ್ಫೋಸಿಸ್‌ ಮತ್ತು ವಿಪ್ರೋ ಕೈ ಜೋಡಿಸಿವೆ ಎನ್ನುತ್ತಾರೆ ಸಹಕಾರ ಸಚಿವ ಎಚ್‌.ವಿಶ್ವನಾಥ್‌.

ಅಕ್ಟೋಬರ್‌ ತಿಂಗಳಿನಲ್ಲಿಯೇ ಮೈಸೂರು ಐಟಿ.ಕಾಂ ಉತ್ಸವ ನಡೆಯಬೇಕಾಗಿತ್ತು. ಆದರೆ, ಅನಿರೀಕ್ಷಿತವಾಗಿ ಸುಳಿದ ಕಾವೇರಿ ಸುಳಿಗಾಳಿಯಲ್ಲಿ ಉತ್ಸವ ಡಿಸೆಂಬರ್‌ಗೆ ವರ್ಗಾವಣೆಯಾಗಿದೆ. ಡಿಸೆಂಬರ್‌ ಹೊತ್ತಿಗೆ ಕಾವೇರಿ ಕೊಳ್ಳದಲ್ಲಿ ಸಂಪೂರ್ಣ ಶಾಂತಿ ನೆಲೆಸುತ್ತಾ ? ಆಶಾವಾದಿ ವಿಶ್ವನಾಥ್‌ ತುಟಿಪಿಟಿಕ್‌ ಎನ್ನುವುದಿಲ್ಲ.

ಬೆಂಗಳೂರು ಐಟಿ.ಕಾಂ ಮೇಳಕ್ಕೆ ರಂಗು ತಂದ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರನ್ನು ಮೈಸೂರು ಐಟಿ.ಕಾಂ ಉತ್ಸವದ ಉದ್ಘಾಟನೆಗೂ ಆಹ್ವಾನಿಸುವ ಮನಸ್ಸು ಸರ್ಕಾರಕ್ಕಿದೆ. ಡಿಸೆಂಬರ್‌ ಕೊನೆಯಲ್ಲಿ ಮೈಸೂರಿನಲ್ಲಿ ನಡೆಯುವ ಸೈನ್ಸ್‌ ಕಾಂಗ್ರೆಸ್‌ ಮೇಳವನ್ನು ಉದ್ಘಾಟಿಸಲು ರಾಷ್ಟ್ರಪತಿ ಮೈಸೂರಿಗೆ ಬರುವ ಕಾರ್ಯಕ್ರಮವಿದೆ. ಈ ಸಂದರ್ಭವನ್ನು ಬಳಸಿಕೊಳ್ಳುವ ಯೋಜನೆ ಸರ್ಕಾರದ್ದು ಎನ್ನುತ್ತಾರೆ ವಿಶ್ವನಾಥ್‌.

ಈ ಬಾರಿ 125 ಕ್ಕೂ ಹೆಚ್ಚು ಕಂಪನಿಗಳು ಐಟಿ ಉತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಈಗಾಗಲೇ ಶೇ.75 ರಷ್ಟು ಪ್ರದರ್ಶನ ಮಳಿಗೆಗಳು ಬುಕ್‌ ಆಗಿವೆ. ವಿದೇಶಿ ಕಂಪನಿಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಸಚಿವ ವಿಶ್ವನಾಥ್‌ ಅಂಕಿಅಂಶ ನೀಡುತ್ತಾರೆ.

ಅಂದಹಾಗೆ, ಮೈಸೂರು ಐಟಿ.ಕಾಂ-2002 ಮೇಳದ ಹೈಲೈಟ್‌ ಏನಪ್ಪಾ ಅಂದರೆ-ಹೂಡಿಕೆದಾರರ ಸಮಾವೇಶದಲ್ಲಿ ಸಿಲಿಕಾನ್‌ ವ್ಯಾಲಿಯ ಐಟಿ ನಾಯಕರ ಜೊತೆ ವಿಡಿಯಾ ಕಾನ್ಫರೆನ್ಸ್‌.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X