ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಡಿಲ ಕಾನೂನಿನಿಂದಾಗಿ ಓತ್ಲಾ ಹೊಡೆಯುವ ಭಾರತದ ವೈದ್ಯರು’

By Oneindia Staff
|
Google Oneindia Kannada News

ಬೆಂಗಳೂರು : ಜೀವನ ಮೌಲ್ಯಗಳಿಗೆ ಭಾರತ ಹೆಸರುವಾಸಿ. ಆದರೆ, ಜೀವ ಕುರಿತ ಮೌಲ್ಯಗಳಲ್ಲಿ ಸೊನ್ನೆ. ಇವತ್ತು ಭಾರತದಲ್ಲಿ ಜನ ಆರೋಗ್ಯದ ಕಾರಣ ಹೆಚ್ಚು ಸಂಖ್ಯೆಯಲ್ಲಿ ಸಾಯುತ್ತಿದ್ದಾರೆಂದರೆ, ಅದಕ್ಕೆ ಕಾರಣ ಜನರ ಮತ್ತು ವೈದ್ಯರ ದಿವ್ಯ ನಿರ್ಲಕ್ಷ್ಯ ಎಂದು ಕರ್ನಾಟಕ ಸ್ಟೇಟ್‌ ಮೆಡಿಕಲ್‌ ಅಂಡ್‌ ಡೆಂಟಲ್‌ ಅಲ್ಯುಮಿನಿ ಆಫ್‌ ಅಮೆರಿಕಾದ ಅಧ್ಯಕ್ಷ ಡಾ.ಸೇತು ಮಾಧವ್‌ ಖಂಡಾತುಂಡಾಗಿ ಹೇಳಿದ್ದಾರೆ.

ಇಂಡೋ-ಅಮೆರಿಕನ್‌ ವೈದ್ಯಕೀಯ ಮತ್ತು ದಂತ ಸಮ್ಮೇಳನದ ಅಂಗವಾಗಿ ನಗರಕ್ಕೆ ಬಂದಿರುವ ಅವರು ಶುಕ್ರವಾರ ಸುದ್ದಿಗಾರರೊಡನೆ ಮಾತಾಡುತ್ತಿದ್ದರು. ಮುಖ್ಯವಾಗಿ ವೈದ್ಯರು ಮತ್ತು ಅಧಿಕ ಸಂಖ್ಯೆಯಲ್ಲಿ ಭಾರತದ ಜನರಿಗೆ ಜೀವ ಕುರಿತ ಮೌಲ್ಯವಿಲ್ಲ. ಇದು ಜೀವನದ ಮೌಲ್ಯಗಳಲ್ಲ. ಜೀವವಿದ್ದರೆ ತಾನೆ ಮೌಲ್ಯ. ಜೀವದ ಬಗೆಗೇ ಪ್ರೀತಿ ಇರದಿದ್ದರೆ ಆಗೋದೇ ಹೀಗೆ. ವೈದ್ಯಕೀಯ ಚಿಕಿತ್ಸೆ ತುರ್ತಾಗಿ ಆಗಬೇಕಾದಾಗಲೂ ದಿವ್ಯ ನಿರ್ಲಕ್ಷ್ಯ ಸಲ್ಲ. ಆದರೆ ಹಾಗೆ ಭಾರತದಲ್ಲಾಗುತ್ತಿರುವುದು ದುರಂತ ಎಂದರು.

ಅಮೆರಿಕೆಯಲ್ಲಿ ಕಳೆದ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಡಾ. ಸೇತು ಮಾಧವ್‌ ಅಲ್ಲಿನ ವ್ಯವಸ್ಥೆಯ ಸೊಬಗನ್ನು ಉದಾಹರಿಸಿದ್ದು ಹೀಗೆ- ಅಲ್ಲಿ ವೈದ್ಯರು ಕಾನೂನಾತ್ಮಕವಾಗಿ ಕೆಲಸದಲ್ಲಿ ತೊಡಗಲೇಬೇಕು. ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಉಡಾಫೆ ಧೋರಣೆ ತಳೆದರೆ, ತಕ್ಕ ಶಾಸ್ತಿಯಾಗುತ್ತದೆ. ಆದರೆ ಭಾರತದಲ್ಲಿ ಹಾಗಿಲ್ಲ. ಇಲ್ಲೂ ಅದೇ ರೀತಿಯ ವ್ಯವಸ್ಥೆಯನ್ನು ಜಾರಿಗೆ ತಂದು, ಬಲವಾದ ಕಾನೂನಿನ ಸಂಕೋಲೆ ತೊಡಿಸಿದರೆ, ಓತ್ಲಾ ಹೊಡೆಯುವ ವೈದ್ಯರಿಗೆ ಬುದ್ಧಿ ಬರುತ್ತದೆ. ನಿರ್ಲಕ್ಷ್ಯ ತೋರುವ ವೈದ್ಯರಿಗೆ ಗಂಭೀರ ಸ್ವರೂಪದ ಶಿಕ್ಷೆ, ಸಾಕಷ್ಟು ದಂಡ ವಿಧಿಸುವುದು ಮಾಡಿದಲ್ಲಿ ಎಷ್ಟೋ ಸಾಯುವ ಜೀವಗಳು ಉಳಿಯುತ್ತವೆ ಎಂದು ಭಾರತದ ವೈದ್ಯರಿಗೆ ಡಾ. ಸೇತು ಮಾಧವ್‌ ಮಾತಿನ ಚಾಟಿ ಏಟು ಕೊಟ್ಟರು.

ತಾಂತ್ರಿಕ ಪ್ರಗತಿಯ ಜೊತೆಗೆ ತುರ್ತು ಸೇವೆಗೆ ಅಗತ್ಯವಾದ ತರಪೇತಿಯನ್ನು ವೈದ್ಯರಿಗೆ ಕೊಡಬೇಕು. ಜೊತೆಗೆ ಜನ ಕೂಡ ಜೀವದ ಬಗ್ಗೆ ಪ್ರೀತಿ ಇಟ್ಟುಕೊಳ್ಳಬೇಕು. ಆಗ ಉರುಳುವ ಹೆಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಖಾಸಗೀಕರಣ ಮಾಡಲು ಸರ್ಕಾರ ಯೋಚಿಸುತ್ತಿದೆ. ಈ ಬಗ್ಗೆ ಸೇತು ಮಾಧವ್‌ ಅವರನ್ನು ಪ್ರಶ್ನಿಸಿದಾಗ, ಖಾಸಗೀಕರಣ ಹೇಗೆ ವರ್ಕ್‌ಔಟ್‌ ಆಗುತ್ತದೆ ಅನ್ನುವುದು ಮುಖ್ಯ. ಅದರಿಂದ ಬಡವರಿಂದ ಸುಲಿಗೆ ಮಾಡತೊಡಗಿದರೆ, ಉದ್ದೇಶ ಯಶಸ್ವಿಯಾಗದು ಎಂದು ಉತ್ತರ ಕೊಟ್ಟರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X