ಚಿಕ್ಕನಾಯಕನ ಹಳ್ಳಿಯಲ್ಲಿ ಜೆಲೆಟಿನ್ ಸ್ಫೋಟಕ್ಕೆ13 ಮಂದಿ ಬಲಿ
ತುಮಕೂರು : ಜೆಲ್ಲಿಗೆಂದು ಭಾರೀ ಬಂಡೆಯಾಂದನ್ನು ಸ್ಫೋಟಿಸಲು ಜೀಪ್‌ನಲ್ಲಿ ತಂದಿದ್ದ ಜೆಲೆಟಿನ್ ಸ್ಫೋಟಗೊಂಡ ಪರಿಣಾಮ 13 ಮಂದಿ ಸ್ಥಳದಲ್ಲೇ ಮೃತರಾದ ದುರಂತ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದಿದೆ.
ಎನ್.ಎ.ಪಿ.ಸಿ. ಸಂಸ್ಥೆ , ಹುಳಿಯಾರ್‌ನಿಂದ ಕೆ.ಬಿ.ಕ್ರಾಸ್ ರಸ್ತೆವರೆಗೆ ರಸ್ತೆ ಅಗಲಗೊಳಿಸಿ ಟಾರ್ ಹಾಕುವುದಕ್ಕಾಗಿ ಅಂಕನ ಬಾವಿ ಬಳಿಯಿರುವ ತಾರೀಕಟ್ಟೆ ತಾಂಡದಲ್ಲಿ ಕ್ರಷರ್ ಯೂನಿಟ್ ಹಾಕಿಕೊಂಡಿದ್ದರು. ಜೆಲ್ಲಿ ಕಲ್ಲುಗಳಿಗಾಗಿ ಭಾರೀ ಬಂಡೆಯಾಂದನ್ನು ಸ್ಫೋಟಿಸಲು ತುಮಕೂರಿನಿಂದ ಜೀಪ್‌ನಲ್ಲಿ ಜೆಲೆಟಿನ್ ಸ್ಫೋಟಕವನ್ನು ತಂದು ಕೊಠಡಿಯಾಂದರಲ್ಲಿ ದಾಸ್ತಾನುಗೊಳಿಸಲು ಇಳಿಸುತ್ತಿದ್ದಾಗ ನಡೆದ ಅಕಸ್ಮಿಕ ಸ್ಫೋಟದಿಂದ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ 13 ಮಂದಿ ಸ್ಥಳದಲ್ಲೇ ಸಜೀವ ದಹನವಾಗಿದ್ದರೆ, 22ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಮೃತರ ಪೈಕಿ ಚಂದ್ರನಾಯಕ, ಕುಮಾರ್ ನಾಯಕ್, ಗೋಪಾಲ್ ನಾಯಕ, ಶಾಮನಾಯಕ್, ಶ್ಯಾಮ್ಯ ನಾಯಕ್, ಬಸವರಾಜ್, ದೊಡ್ಡಬಿದಿರೆಯ ಮೌಲಿ, ನಂಜುಂಡ ನಾಯ್ಕ ಅವರನ್ನು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ, ಸಿದ್ಧರಾಮಯ್ಯ(35), ರೇಶ್ಮಾ(10), ನಾಸಿರ್ ಹುಸೇನ್(18) ಜೀವನ್ಮರಣ ಸ್ಥಿತಿಯಲ್ಲಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಹಂದನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications