ಬೇಲಿ ತೊಲಗಿದರೂ ಸರಿಯದ ಬುರ್ಖಾ: ಇದು ಮುಸ್ಲಿಂ ಮಹಿಳೆಯ ಮನಸ್ಸು !
*ಇನ್ಫೋ ಇನ್‌ಸೈಟ್
‘ಅಮೆರಿಕನ್ ಆಡಳಿತದ ಬಗ್ಗೆ ನಮ್ಮ ಆರೋಪ ಏನೇ ಇರಲಿ, ಮುಖದ ಮುಸುಕನ್ನು ತೆಗೆದೊಗೆದು ಓಡಾಡುವ ಆಫ್ಘನ್ ಮುಸ್ಲಿಮ್ ಮಹಿಳೆಯರನ್ನು ನೋಡಿದಾಗ ನಾವು ಸಂತೋಷ ಪಡುವುದಿಲ್ಲವೇ?’
ಕಳೆದ ತಿಂಗಳಷ್ಟೇ ತುಮಕೂರಿನಲ್ಲಿ ನಡೆದ 69ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಮ್ಮ ಅಧ್ಯಕ್ಷ ಭಾಷಣದಲ್ಲಿ ಡಾ.ಯು.ಆರ್.ಅನಂತಮೂರ್ತಿ ಹೆಮ್ಮೆಯಿಂದ ಹೇಳಿದ ಮಾತಿದು. ಆದರೀಗ ಆಫ್ಘನ್ನನ್ನು ಒಂದು ಸುತ್ತು ಸುತ್ತಿ ಬಂದರೆ, ಬುರ್ಖಾ ತೊಡದ ಹೆಂಗಸರಿಗೆ ಟಾರ್ಚು ಹಾಕಿ ಹುಡುಕಬೇಕು! ಲೇಖಕಿ ಅರುಂಧತಿ ರಾಯ್ ಜೈಲಿಗೆ ಹೋಗುವುದನ್ನು ಆಫ್ಘನ್ ಮಹಿಳೆ ನೋಡಿದ್ದು ಬುರ್ಖಾ ಪರದೆಯ ಒಳಗಿಂದಲೇ. ತಾಲಿಬಾನಿ ಸರ್ಕಾರದಿಂದ ಅಧಿಕಾರ ಕಸಿದುಕೊಂಡು, ವಿಶ್ವಸಂಸ್ಥೆಯ ಬ್ಯಾಕ್‌ಅಪ್‌ನ ಹೊಸ ಮಧ್ಯಂತರ ಸರ್ಕಾರವೇನೋ ಜಾರಿಗೆ ಬಂತು. ಇದರ ನೇತಾರ ಹಮೀರ್ ಖರ್ಝಾಯ್, ಸೀಮಾ ಸಮರ್ ಎಂಬ ಹೆಂಗಸಿಗೇ ಮಹಿಳಾ ಸಚಿವೆ ಗಾದಿಯನ್ನೂ ಕೊಟ್ಟಾಯ್ತು. ಆದರೆ ಈ ಖಾತೆಯ ಬೊಕ್ಕಸ ಭಣಭಣ!
ಇವತ್ತು ಆಫ್ಘಾನಿಸ್ತಾನದ ಮಹಿಳೆ ಎಷ್ಟರ ಮಟ್ಟಿಗೆ ಸಾಮಾಜಿಕ ಜೀವನದಲ್ಲಿ ಪುರುಷನೊಟ್ಟಿಗೆ ತೊಡಗಿದ್ದಾಳೆ? ನವೆಂಬರ್‌ನಿಂದ ತಾಲಿಬಾನಿಗಳ ತುಳಿತವೇನೋ ತಪ್ಪಿದೆ. ಈ ನಾಲ್ಕು ತಿಂಗಳಲ್ಲಿ ಹೆಂಗಸಿನ ಮನಸ್ಸು ಯಾವ ಪರಿವರ್ತನೆಗೆ ಒಳಗಾಗಿದೆ?ಈ ಪ್ರಶ್ನೆಗಳನ್ನು ಹೊತ್ತು ಕಾಬೂಲಿನ ಓಣಿಗಳಲ್ಲಿ ಓಡಾಡಿದಾಗ...
ಸೊಲ್ತಾನ ಮತ್ತೆ ಬುರ್ಖಾ ಸೇರಿದಳು : ಒಂದು ಶಾಲೆ. ಸೊಲ್ತಾನ ಇದರಲ್ಲಿ ಟೀಚರ್. ಈಕೆಯ ವಯಸ್ಸು 32 ವರ್ಷ. ತಾಲಿಬಾನ್ ಆಡಳಿತ ಇದ್ದಾಗಲೂ ಕದ್ದು ಪಾಠ ಹೇಳುತ್ತಿದ್ದರು. ಈಗ ಪಾಠ ಹೇಳಲು ಯಾವ ಅಂಜಿಕೆಯೂ ಇಲ್ಲ. ಆದರೆ, ಸೊಲ್ತಾನ ಬುರ್ಖಾ ತೆಗೆವುದು ಶಾಲೆಯ ಮಕ್ಕಳ ಮುಂದೆ ಮಾತ್ರ. ಮಿಕ್ಕಂತೆ ಈಕೆಯ ಮೋರೆ ನೋಡುವ ಭಾಗ್ಯವಿಲ್ಲ ! ಹೀಗೆ ಯಾಕೆ? ಸೊಲ್ತಾನ ಮಾತುಗಳಲ್ಲೇ ಕೇಳಿ...‘ಸ್ವಾತಂತ್ರ್ಯ ಬಂದ ಖುಷಿಯಲ್ಲಿ ನಾನು ಬುರ್ಖಾ ತೊಡದೆ, ಶಾಲೆಗೆ ನಡೆದೆ. 10 ವರ್ಷದ ನನ್ನ ಮಗಳು ವಿಚಿತ್ರವಾಗಿ ನೋಡಿದಳು. ಛೀ..ನಾಚಿಕೆ ಆಗೋದಿಲ್ವೆ, ಬುರ್ಖಾ ಹಾಕಿಕೊಳ್ಳದೆ ಬೀದೀಲಿ ಓಡಾಡೋಕೆ ಅಂದಳು! ನನ್ನ ಮಗಳೇ ಛೀ ಅನ್ನಬೇಕಾದರೆ, ಇನ್ನು ದೊಡ್ಡವರು? ಆ ಆತಂಕವೇ ಬುರ್ಖಾ ಒಳಗೆ ಸೇರಿಕೊಳ್ಳುವಂತೆ ಮಾಡಿತು.’
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಕೂಡ ಎಚ್ಚರಿಕೆ ಕೊಟ್ಟಿದ್ದರು- ಸರ್ಕಾರ ಬದಲಾದ ತಕ್ಷಣ, ಆಫ್ಘನ್ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುವ ಭಯವಿದೆ, ಹುಷಾರು!
ಮುಸ್ಲಿಂ ಮನಸ್ಸು ಬುರ್ಖಾ ಮೀರುವುದಾದರೂ ಹೇಗೆ?
ಈ ಮಾತು ಖಂಡಿತ ನಿಜ. ಆಫ್ಘನ್ ಮಹಿಳೆಯರಿಗೂ ಇದೇ ಭಯ. ಎರಡು ದಶಕಗಳಿಗೂ ಹೆಚ್ಚು ಕಾಲ ಅರಾಜಕತೆಯ ನಡುವೆ ವಿದ್ಯೆ ಕಲಿಯುವ ಕನಿಷ್ಠ ಸ್ವಾತಂತ್ರ್ಯದಿಂದಲೂ ವಂಚಿತರಾಗಿದ್ದ ಇಲ್ಲಿನ ಹೆಂಗಸರಲ್ಲಿ ಮೂಢನಂಬಿಕೆಗಳಿಗೇನೂ ಕೊರೆಯಿಲ್ಲ. ಅವುಗಳ ಬೇರು ಮನದಾಳದಲ್ಲಿ ಬಿಗುವು. ‘ಗಂಡಸರ ಸಮಕ್ಕೆ ನಾವು ನಿಲ್ಲಲಾದೀತೆ? ಅಲ್ಲಾಹ ಮೆಚ್ಚುವುದಿಲ್ಲ. ನಾವು ಸಾಯುತ್ತೇವೆ’ ಅನ್ನುವವರ ಸಂಖ್ಯೆ ದೊಡ್ಡದಿದೆ. ಇಲ್ಲಿನ ಪ್ರತಿಶತ 96ರಷ್ಟು ಮಹಿಳೆಯರು ಅನಕ್ಷರಸ್ಥರು.
ಹಾಗಂತ ಆಫ್ಘನ್‌ನಲ್ಲಿ ಮಹಿಳೆಯರ ದನಿ ಪೂರ್ಣ ಉಡುಗಿದೆ ಎಂದಲ್ಲ. ಹತ್ತು ವರ್ಷದ ಹಿಂದೆ ಮುಚ್ಚಿ ಹೋಗಿದ್ದ ಸೀರತ್ ಎಂಬ ಮಹಿಳಾ ಪತ್ರಿಕೆ ಮತ್ತೆ ಅಚ್ಚಾಗುತ್ತಿದೆ. ಇದೇ ರೀತಿಯ ಇನ್ನೊಂದು ನಿಯತಕಾಲಿಕ ‘ಮಲಾಲಾಯ್’ ಹುಟ್ಟಿದೆ. ಮಹಿಳಾ ವೈದ್ಯರು ಸ್ಟೆತಾಸ್ಕೋಪನ್ನು ಕತ್ತಿನ ಸುತ್ತ ಹಾಕಿಕೊಂಡು ನಿರಾಳವಾಗಿ ಓಡಾಡುತ್ತಾರೆ. ವಿದ್ಯಾರ್ಥಿನಿಯರು ಖುಲ್ಲಂ ಖುಲ್ಲಾ ಅಮೀರ್ ಖಾನ್ ಬಗ್ಗೆ ಮಾತಾಡುತ್ತಾರೆ. ಆದರೆ... ಬುರ್ಖಾದಿಂದ ಬೇಕೆನಿಸಿದಾಗ ಹೊರಬರಲು ಮನಸ್ಸು ಇನ್ನೂ ಸಿದ್ಧವಿಲ್ಲ. ಅಲ್ಲಾಹನ ಭಯವಿದೆ, ತಾಲಿಬಾನಿಗಳದ್ದಲ್ಲ !
Post your views on Womens day
ವಾರ್ತಾ ಸಂಚಯ
ಬುರುಖಾದಿಂದ ಹೊಮ್ಮಿದ ದನಿ
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications