ಚೆನ್ನೈ ಕಣ್ತುಂಬಿಸಿಕೊಂಡು ಬಂದ ಬೆಂಗಳೂರು ಮೇಯರ್ ಕಣ್ಣಲ್ಲಿ ಸಿಂಗಪೂರ್!
ಬೆಂಗಳೂರು : ಚೆನ್ನೈನಲ್ಲಿ ಮುಂಜಾನೆಯಿಂದ ಸಂಜೆವರೆಗಷ್ಟೇ ಅಲ್ಲ, ರಾತ್ರಿ 8 ಗಂಟೆಯಿಂದ ಮಧ್ಯ ರಾತ್ರಿ 2 ಗಂಟೆವರೆಗೆ ನಗರ ಶುಚಿ ಕೆಲಸಗಳು ನಡೆಯುತ್ತಿವೆ. ಇದನ್ನು ನಾವೂ ಜಾರಿಗೆ ತರುತ್ತೇವೆ. ಈಗಿನ ಗುತ್ತಿಗೆ ಅವಧಿ ಮುಗಿದ ತಕ್ಷಣ ಮಹಾನಗರ ಪಾಲಿಕೆ, ಸ್ವಚ್ಛತೆಗೆ ಜಾಗತಿಕ ಟೆಂಡರ್ ಕರೆಯಲಿದೆ!
ಹೀಗಂತ ಬೆಂಗಳೂರು ಮೇಯರ್ ಕೆ.ಚಂದ್ರಶೇಖರ್ ಬುಧವಾರ ಹೇಳಿದರು. ಸ್ವಂತ ಖರ್ಚಿನಲ್ಲಿ ಎರಡು ದಿನಗಳ ಮಟ್ಟಿನ ಚೆನ್ನೈ ಪ್ರವಾಸ ಮುಗಿಸಿ ಮಂಗಳವಾರ ವಾಪಸ್ಸು ಬಂದ ಚಂದ್ರಶೇಖರ್ ನೇತೃತ್ವದ ಪಾಲಿಕೆ ನಿಯೋಗ ಹುಮ್ಮಸ್ಸಿನಲ್ಲಿದೆ. ಅದರಲ್ಲೂ ನಗರವನ್ನು ಸಿಂಗಾಪೂರ್ ಮಾಡುವ ಹಾದಿ ಹಿಡಿಯಲು ಚಂದ್ರಶೇಖರ್ ಉತ್ಸುಕರಾಗಿದ್ದಾರೆ. ಚೆನ್ನೈನ ಅಭಿವೃದ್ಧಿ ಕಾರ್ಯಗಳನ್ನು ಕಣ್ತುಂಬಿಸಿಕೊಂಡು ಬಂದಿರುವ ಪಾಲಿಕೆ ನಿಯೋಗ ಬುಧವಾರ ಅವುಗಳನ್ನು ಮನನ ಮಾಡಿ, ಚರ್ಚಿಸಿತು.
ಚೆನ್ನೈನ ವಿಸ್ತೀರ್ಣ 170 ಕಿ.ಮೀ. ಜನಸಂಖ್ಯೆ 40 ಲಕ್ಷ. 9500 ಪೌರ ಕಾರ್ಮಿಕರು ನಗರದ ಶುಚಿ ಕೆಲಸ ಮಾಡುತ್ತಾರೆ. ಸ್ವಚ್ಛತೆ ಕೆಲಸ ಈ ಅಲ್ಪ ಪ್ರಮಾಣದ ಪೌರ ಕಾರ್ಮಿಕರಿಂದ ಪೂರ್ಣ ಪ್ರಮಾಣದಲ್ಲಿ ಅಸಾಧ್ಯ. ಈ ಕಾರಣಕ್ಕೇ ಸ್ವಚ್ಛತೆಯ ಮೂರನೇ ಒಂದು ಭಾಗದ ಕೆಲಸವನ್ನು ಮಾತ್ರ ಪಾಲಿಕೆ ಕಾರ್ಮಿಕರು ಮಾಡುತ್ತಾರೆ. ಉಳಿದ ಕೆಲಸ ವಹಿಸಲು ಜಾಗತಿಕ ಟೆಂಡರ್ ಕರೆಯುವುದು ಚೆನ್ನೈನಲ್ಲಿ ರೂಢಿ. ಅಲ್ಲಿ ಟೆಂಡರ್‌ಗೆ ಅರ್ಜಿ ಹಾಕಿದವರ ಯಾದಿಯಲ್ಲಿ ಸಿಂಗಾಪೂರ್ ಕಂಪನಿಯೂ ಇತ್ತು ಎಂದು ಸುದ್ದಿಗಾರರಿಗೆ ಚಂದ್ರಶೇಖರ್ ತಿಳಿಸಿದರು.
ನಾವೂ ಇದೇ ಕ್ರಮ ಅನುಸರಿಸಿ, ಜಾಗತಿಕ ಟೆಂಡರ್ ಕರೆದು, ಸ್ವಚ್ಛತಾ ಕಾಮಗಾರಿಯನ್ನು ಸಿಂಗಾಪೂರ್ ಮಾದರಿಯಲ್ಲಿ ಮಾಡುವ ಕಂಪನಿಗೆ ಮಾತ್ರ ಗುತ್ತಿಗೆ ಕೊಡುತ್ತೇವೆ. ಆಗ ಬೆಂಗಳೂರು ಚೆನ್ನೈಗಿಂತ ಸೊಗಸಾಗಿ ಬೆಳೆಯುತ್ತದೆ. ಸಿಂಗಾಪೂರ್ ಆಗುತ್ತದೆ ಎಂದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications