‘ಹುಬ್ಬಳ್ಳಿ ಜವಳಿ ಕಾರ್ಖಾನೆ ನೌಕರರ ಸ್ವಯಂ ನಿವೃತ್ತಿಗೆ 5.30 ಕೋಟಿ ರು’
ಬೆಂಗಳೂರು : ಬರದಿಂದ ತತ್ತರಿಸಿರುವ ರಾಜ್ಯದ 9 ಜಿಲ್ಲೆಗಳಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸಚಿವ ಸುಂಪುಟ ಸೋಮವಾರ ನಿರ್ಧರಿಸಿದೆ. ಈ ಯೋಜನೆಗೆ ವಿಶ್ವಬ್ಯಾಂಕ್ 690.27 ಕೋಟಿ ರುಪಾಯಿಗಳ ನೆರವು ನೀಡಿದೆ. ಮುಂದಿನ 5 ವರ್ಷಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ.
ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡುತ್ತಿದ್ದ ವಾರ್ತಾ ಸಚಿವ ಎಂ. ಶಿವಣ್ಣ ಅವರು, ಯೋಜನೆಯು ಈ ವರ್ಷದಿಂದಲೇ ಆರಂಭವಾಗಲಿದೆ ಎಂದು ತಿಳಿಸಿದರು. ಮೊದಲ ಹಂತದಲ್ಲಿ ಐದು ಜಿಲ್ಲೆಗಳು ಹಾಗೂ ಎರಡನೇ ಹಂತದಲ್ಲಿ ನಾಲ್ಕು ಜಿಲ್ಲೆಗಳು ಯೋಜನೆಯ ವ್ಯಾಪ್ತಿಗೊಳಪಡಲಿವೆ ಎಂದೂ ಅವರು ತಿಳಿಸಿದರು.
ಈ ಯೋಜನೆಯಿಂದ ಚಾಮರಾಜನಗರ, ಕೊಪ್ಪಳ, ಬೆಳಗಾವಿ, ಬೀದರ್, ದಕ್ಷಿಣ ಕನ್ನಡ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಯ 4,340 ಹಳ್ಳಿಗಳಿಗೆ ಲಾಭವಾಗಲಿದೆ ಎಂದು ಸಚಿವರು ತಿಳಿಸಿದರು.
ಸ್ವಯಂ ನಿವೃತ್ತಿ : 1998ರಿಂದಲೂ ಮುಚ್ಚಿರುವ ಹುಬ್ಬಳ್ಳಿಯ ಮಹಾದೇವ ಜವಳಿ ಕಾರ್ಖಾನೆಯ 460 ಕಾರ್ಮಿಕರ ಸ್ವಯಂ ನಿವೃತ್ತಿಗಾಗಿ 5.30 ಕೋಟಿ ರುಪಾಯಿಗಳ ಅನುದಾನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದ ಅವರು, ಪಶು ಆಸ್ಪತ್ರೆಗಳಿಗೆ ಹಾಗೂ ಚಿಕಿತ್ಸಾಲಯಗಳಿಗೆ ಔಷಧಿ ಖರೀದಿಗಾಗಿ 5.74 ಕೋಟಿ ರುಪಾಯಿ ಮಂಜೂರು ಮಾಡಲು ಸಂಪುಟ ಸಭೆ ತೀರ್ಮಾನಿಸಿತು ಎಂದರು.
ಗುಲ್ಬರ್ಗಾದಲ್ಲಿ ತೊಗರಿ ಬೇಳೆ ಮಂಡಳಿ ಸ್ಥಾಪನೆಗೂ ಸೋಮವಾರ ನಡೆದ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications