ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲು ತೂರಾಟ, ಲಾಠಿ ಪ್ರಹಾರ, ಮಾತಿನ ಚಕಮಕಿ ನಡುವೆ ಶೇ.54 ಮತದಾನ

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ಬೆಂಗಳೂರು: ಕಲ್ಲು ತೂರಾಟ, ಆರೋಪ- ಪ್ರತ್ಯಾರೋಪ, ಮತದಾನ ಮಾಡುವ ಎಲೆಕ್ಟ್ರಾನಿಕ್‌ ಯಂತ್ರದ ಗೊಂದಲಗಳನ್ನು ಹೊರತು ಪಡಿಸಿದರೆ, ಗುರುವಾರ ಜರುಗಿದ ಕನಕಪುರ ಲೋಕಸಭಾ ಕ್ಷೇತ್ರದ ಮರು ಚುನಾವಣೆ ಶಾಂತಿಯುತವಾಗಿ ಕೊನೆಗೊಂಡಿದ್ದು- ಅಂದಾಜು ಶೇ.54 ರಷ್ಟು ಮಂದಿ ಮತ ಚಲಾಯಿಸಿದ್ದಾರೆ.

24.98 ಲಕ್ಷ ಮಂದಿ ಮತದಾರರನ್ನು ಹೊಂದಿದ್ದು ದೇಶದ ಎರಡನೇ ಅತಿದೊಡ್ಡ ಲೋಕಸಭಾ ಕ್ಷೇತ್ರ ಎನಿಸಿರುವ ಕನಕಪುರ ಕ್ಷೇತ್ರದ ಚುನಾವಣೆಯು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಹಾಗೂ ಬಿಜೆಪಿಯ ಈಶ್ವರಪ್ಪ ಅವರ ಭವಿಷ್ಯವನ್ನು ನಿರ್ಧರಿಸಲಿದೆ. ಕನಕಪುರ, ಸಾತನೂರು, ಮಾಗಡಿ, ಮಳವಳ್ಳಿ, ಉತ್ತರಹಳ್ಳಿ, ರಾಮನಗರ, ಚನ್ನಪಟ್ಟಣ ಹಾಗೂ ಆನೇಕಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಮತದಾನ ನಡೆದಿದೆ. ಫೆಬ್ರವರಿ 24 ರ ಭಾನುವಾರ ಮತಗಳ ಎಣಿಕೆ ನಡೆಯಲಿದೆ.

ಈ ನಡುವೆ, ಚುನಾವಣಾ ಮುನ್ನಾ ದಿನವಾದ ಬುಧವಾರ ರಾತ್ರಿ ಕನಕಪುರ ತಾಲ್ಲೂಕಿನ ಅಣಕಡಬೂರು ಗ್ರಾಮದಲ್ಲಿ ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಗೆ ದಳದ ಕಾರ್ಯಕರ್ತ ರಾಜ ಎನ್ನುವ 28 ವರ್ಷದ ಯುವಕ ಬಲಿಯಾಗಿದ್ದಾನೆ. ಚುನಾವಣೆ ಆರಂಭಗೊಳ್ಳಲು ಕೆಲವೇ ಗಂಟೆಗಳ ಮುನ್ನ ನಡೆದ ಈ ಘಟನೆ ಹಿಂಸಾಚಾರದ ಭೀತಿಯನ್ನು ಮೂಡಿಸಿತ್ತು . ಇದೇ ರೀತಿ ಗಂಗಸಂದ್ರ ಗ್ರಾಮದಲ್ಲಿ ರಾಜಕೀಯ ಪಕ್ಷಗಳು ವಿತರಿಸಿದ ಕಳ್ಳಭಟ್ಟಿ ಗೆ ಒಬ್ಬ ಯುವಕ ಬಲಿಯಾಗಿದ್ದು , ತೀವ್ರವಾಗಿ ಅಸ್ವಸ್ಥಗೊಂಡ ಇನ್ನೊಬ್ಬ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಕ್ರೋಶಗೊಂಡ ಜನರು ಮತದಾನ ಬಹಿಷ್ಕರಿಸಿದರು.

ಘರ್ಷಣೆಯಲ್ಲಿ ಸಾವಿಗೀಡಾದ ರಾಜು ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ದೇವೇಗೌಡರ ಮಗ ಒಳ್ಳೆ ಸಿನಿಮಾ ತೆಗೀತಾರೆ

ನಕಲಿ ಮತದಾನ ನಡೆಸಲು ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು 15 ರಿಂದ 20 ಸಾವಿರ ಗೂಂಡಾಗಳನ್ನು ಹೊರಗಿನಿಂದ ಕರೆ ತಂದಿದ್ದಾರೆ. ಬಸ್ಸುಗಳಲ್ಲಿ ರೌಡಿಗಳನ್ನು ಕರೆತರುವಂಥ ಕೀಳು ಮಟ್ಟದ ರಾಜಕೀಯಕ್ಕೆ ಕಾಂಗ್ರೆಸ್‌ ಇಳಿಯಬಾರದಿತ್ತು ಎಂದು ದೇವೇಗೌಡರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅಪಾದಿಸಿದ್ದಾರೆ. ಈ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಶಿವಕುಮಾರ್‌, ದೇವೇಗೌಡರ ಮಗ ಒಳ್ಳೆಯ ಸಿನಿಮಾ ತೆಗೀತಾರೆ. ಈಗ ಚುನಾವಣೆ ಸಂದರ್ಭದಲ್ಲೂ ಸಿನಿಮಾ ಮಾಡೋಕೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಹಾಸನ, ಮೈಸೂರು, ಕೋಲಾರ, ಹೊಸಕೋಟೆ, ಕೊರಟಗೆರೆಗಳಿಂದ ನಕಲಿ ಮತದಾನ ಮಾಡಲು ಜಾತ್ಯತೀತ ಜನತಾದಳ ರೌಡಿಗಳನ್ನು ಕರೆ ತಂದಿದೆ ಎಂದೂ ಶಿವಕುಮಾರ್‌ ಆರೋಪಿಸಿದ್ದಾರೆ.

ಜಯನಗರದಲ್ಲಿ ಕಲ್ಲು ತೂರಾಟ- ಲಾಠಿ ಚಾರ್ಜು

ಜಯನಗರದ ಜಿಎನ್‌ಆರ್‌ ಕಲ್ಯಾಣ ಮಂಟಪದಲ್ಲಿ ನಕಲಿ ಮತದಾನಕ್ಕಾಗಿ ಕಾಂಗ್ರೆಸ್‌ ಕರೆ ತಂದಿರುವ ಗೂಂಡಾಗಳು ಆಶ್ರಯ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಆಧರಿಸಿ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗರೊಂದಿಗೆ ಕಲ್ಯಾಣ ಮಂಟಪದ ಬಳಿ ಹೋದಾಗ ಕಾಂಗ್ರೆಸ್‌-ದಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತು. ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಘರ್ಷಣೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಕಾಂಗ್ರೆಸ್‌ಗೆ ಸೇರಿದ ಅನೇಕ ವಾಹನಗಳು ಜಖಂಗೊಂಡಿವೆ.

ಮತದಾನ ಗೊಂದಲ, ಬಹಿಷ್ಕಾರ

ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಬಳಕೆಯಲ್ಲಿ ಗೊಂದಲ ಹಾಗೂ ಮತದಾನ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದ ದೂರುಗಳು ವ್ಯಾಪಕವಾಗಿ ಕೇಳಿಬಂದವು. ಪಟ್ಟಿಯಲ್ಲಿ ಹೆಸರಿಲ್ಲದ ಕಾರಣಕ್ಕಾಗಿ ಅನೇಕರಿಗೆ ಮತ ಚಲಾಯಿಸುವ ಹಕ್ಕನ್ನು ನಿರಾಕರಿಸಲಾಯಿತು.

ಚಂದ್ರ ಲೇಔಟ್‌ನ ಗಂಗೊಂಡನಹಳ್ಳಿ ಮತದಾನ ಕೇಂದ್ರದಲ್ಲಿ ಕರೆಂಟ್‌ ಕೈ ಕೊಟ್ಟಿದ್ದರಿಂದ ಮತದಾನ ಯಂತ್ರಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗದೆ ಮೂರು ಗಂಟೆಗಳ ಕಾಲ ಚುನಾವಣೆ ಸ್ಥಗಿತಗೊಂಡಿತ್ತು . ಮೂಲಭೂತ ಸೌಕರ್ಯಗಳನ್ನು ರಾಜಕಾರಣಿಗಳು ಒದಗಿಸಿಲ್ಲ ಎಂದು ಪ್ರತಿಭಟನೆ ವ್ಯಕ್ತಪಡಿಸಿರುವ ಹೆಬ್ಬಗೋಡಿ ಸಮೀಪದ ಗೊಲ್ಲಹಳ್ಳಿಯ 3 ಸಾವಿರ ಮತದಾರರು ಮತದಾನವನ್ನು ಬಹಿಷ್ಕರಿಸಿ ಚುನಾವಣೆಯಿಂದ ಹೊರಗುಳಿದರು.

ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X