ಕರ್ನಾಟಕ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ: ಭೀಮೆಗೆ ಬಂತು ನೀರು
ಬೆಂಗಳೂರು : ಬಿರು ಬೇಸಿಗೆಗೆ ಮೊದಲೇ ಬತ್ತಿಹೋಗಿರುವ ಭೀಮೆಗೆ ನೀರು ಹರಿಸುವಂತೆ ಕರ್ನಾಟಕ ರಾಜ್ಯ ಸರಕಾರ ಮಾಡಿಕೊಂಡಿದ್ದ ಮನವಿಗೆ ಸ್ಪಂದಿಸಿರುವ ಮಹಾರಾಷ್ಟ್ರ ಸರಕಾರ, ನದಿಗೆ ನೀರು ಹರಿಯಬಿಟ್ಟಿದೆ. ಈ ವಿಷಯವನ್ನು ರಾಜ್ಯ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕಳೆದ ವರ್ಷ ಕರ್ನಾಟಕದಲ್ಲಿ ಮಳೆ ಕೈಕೊಟ್ಟ ಕಾರಣ ಬೇಸಿಗೆ ಬರುವ ಮುನ್ನವೇ ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಯ ಜನತೆಗೆ ಆಧಾರವಾದ ಭೀಮಾ ನದಿ ಬತ್ತಿಹೋಗಿದೆ. ಈ ಎರಡೂ ಜಿಲ್ಲೆಗಳ ರೈತರು ಮತ್ತು ಜನತೆ ಕುಡಿಯುವ ನೀರಿನ ಅಭಾವದಿಂದ ತತ್ತರಿಸಿಹೋಗಿದ್ದು, ನೀರಿಗಾಗಿ ಚಳವಳಿಯನ್ನೂ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಕೂಡಲೇ ಕನಿಷ್ಠ 2 ಟಿ.ಎಂ.ಸಿ. ನೀರು ಬಿಡುವಂತೆ ರಾಜ್ಯ ಸರಕಾರ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿದ ಮಹಾರಾಷ್ಟ್ರ 7 ಸಾವಿರ ಕ್ಯೂಸೆಕ್ಸ್ ನೀರನ್ನು ಭೀಮಾನದಿಗೆ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಹೆಚ್ಚು ನೀರು ಬಿಡುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಪಾಟೀಲ್ ಹೇಳಿದರು. ಈ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications