ಗಡಿಯಾಚೆ ಗಣರಾಜ್ಯೋತ್ಸವದ ಖುಷಿ, ಬೀಜಿಂಗ್‌ನಲ್ಲಿ ಹಾರಿದ ತ್ರಿವರ್ಣ ಧ್ವಜ
ಬೀಜಿಂಗ್: 53ನೇ ಗಣರಾಜ್ಯೋತ್ಸವವನ್ನು ಅನಿವಾಸೀ ಭಾರತೀಯರೂ ಸಂಭ್ರಮದಿಂದ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿ, ಆಚರಿಸಿದ ಸುದ್ದಿಗಳು ಬಂದಿವೆ.
ಬೀಜಿಂಗ್‌ನಲ್ಲಿ ಭಾರತೀಯ ರಾಯಭಾರಿ ಶಿವಶಂಕರ್ ಮೆನನ್ ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡಿ ಭಾರತಾಂಬೆಗೆ ನಮಿಸಿದರು. ಇಲ್ಲಿನ ರಾಯಭಾರ ಕಚೇರಿಯ ಮುಂದೆ ನಡೆದ ಪುಟ್ಟ ಸಮಾರಂಭದಲ್ಲಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ವಾಚಿಸಲಾಯಿತು. ಗಣರಾಜ್ಯೋತ್ಸವದ ಮುನ್ನಾ ದಿನ ಔತಣಕೂಟವನ್ನು ಆಯೋಜಿಸಲಾಗಿದ್ದು ಚೀನಾದ ಉಪ ವಿದೇಶಾಂಗ ಸಚಿವ ವಾಂಗ್‌ಯಿ ಈ ಕೂಟದಲ್ಲಿ ಭಾಗವಹಿಸಿದ್ದರು.
ಶಾಂಘೖನಲ್ಲಿನ ಭಾರತೀಯರೂ ಗಣರಾಜ್ಯೋತ್ಸವವನ್ನು ಸ್ಮರಿಸಿಕೊಂಡರು. ಭಾರತೀಯ ದೂತವಾಸ ಕಚೇರಿಯ ಮುಖ್ಯಸ್ಥ ಸುಜನ್ ಆರ್. ಚಿನಾಯ್ ಅವರ ನಿವಾಸದಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಶಾಂಘೖನಲ್ಲಿ ವಾಸಿಸುತ್ತಿರುವ ಭಾರತೀಯರು ಭಾರೀ ಸಂಖ್ಯೆಯಲ್ಲಿ ಸಮಾರಂಭಕ್ಕೆ ಆಗಮಿಸಿ ರಾಷ್ಟ್ರಗೀತೆ ಹಾಡಿದರು.
ಹಾಂಕಾಂಗ್‌ನ ಭಾರತೀಯ ರಾಯಭಾರಿ ಅಶೋಕ್ ಕೆ. ಕಾಂತಾ ಅವರ ನಿವಾಸದಲ್ಲಿ ಜನವರಿ 26ರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ದೇಶಕ್ಕೆ ನಮಿಸಲಾಯಿತು. ಸಂಜೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ 250 ಮಂದಿ ಅತಿಥಿಗಳು ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications