ವರ್ಷದ ಬಳಿಕ ಬುಜ್‌ನಲ್ಲಿ ಮತ್ತೊಮ್ಮೆ ನಡುಗಿತು ಭೂಮಿ : ಇದು ಲಘುಕಂಪನ
ನವದೆಹಲಿ : ಕಳೆದ ವರ್ಷದ ಘೋರ ದುರಂತವನ್ನು ನೆನಪಿಸುವಂತೆ, ಸರಿಯಾಗಿ ಒಂದು ವರ್ಷದ ಬಳಿಕ ಜ.26ರಂದೇ ಬುಜ್ ಹಾಗೂ ಕಛ್ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.6 ಎಂದು ದಾಖಲಾಗಿರುವ ಇದು ಲಘು ಭೂಕಂಪ.
ಈ ಲಘು ಭೂಕಂಪ ಶನಿವಾರ ರಾತ್ರಿ 9.47ರಲ್ಲಿ ಘಟಿಸಿತು. ಭೂಕಂಪದ ಕೇಂದ್ರಬಿಂದು ಎಂದಿನಂತೆ ಬುಜ್‌ನಲ್ಲೇ ಕೇಂದ್ರೀಕೃತವಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಲಘು ಭೂಕಂಪನದಿಂದ ಯಾವುದೇ ಸಾವು ನೋವುಗಳು ಸಂಭವಿಸಿದ ಬಗ್ಗೆ ವರದಿಗಳು ಬಂದಿಲ್ಲ.
ಕಳೆದ ವರ್ಷ ಗಣರಾಜ್ಯೋತ್ಸವದ ನಸುಕಿನಲ್ಲಿ 6.9ರ ತೀವ್ರತೆಯಲ್ಲಿ ನಡುಗಿದ ಭೂಮಿ 13 ಸಾವಿರಕ್ಕೂ ಹೆಚ್ಚು ಮುಗ್ಧ ಜನರನ್ನು ಬಲಿತೆಗೆದುಕೊಂಡಿತ್ತು. ಬುಜ್ ಮತ್ತು ಕಚ್ ಪ್ರದೇಶಗಳು ಸ್ಮಶಾನವಾಗಿ ಹೋಗಿದ್ದವು. 6 ಲಕ್ಷಕ್ಕೂ ಹೆಚ್ಚು ಜನರು ನಿರ್ವಸತಿಗರಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ವರ್ಷದ ಭೂಕಂಪದಲ್ಲಿ ಉಂಟಾದ ನಷ್ಟ : ಗುಜರಾತ್‌ನಲ್ಲಿ ಕಳೆದ ವರ್ಷ ಘಟಿಸಿದ ಶತಮಾನದ ಅತ್ಯಂತ ಘೋರ ಭೂಕಂಪದಲ್ಲಿ ಆದ ನಷ್ಟದ ಪ್ರಮಾಣದ ಬಗ್ಗೆ ಇತ್ತೀಚೆಗೆ ಪ್ರಕಟವಾದ ವರದಿಯ ವಿವರ ಇಂತಿದೆ. ಈ ದುರಂತದಲ್ಲಿ ಸತ್ತವರ ಸಂಖ್ಯೆ 13,805.
ಕಛ್ ಜಿಲ್ಲೆಯಾಂದರಲ್ಲೇ 12,221 ಮಂದಿ ಸತ್ತಿದ್ದರೆ, 1,66,000 ಮಂದಿ ಗಾಯಗೊಂಡಿದ್ದರು. 2,33,000 ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡರೆ, 9,71,000 ಸಾವಿರ ಮನೆಗಳು ಭಾಗಶಃ ಮುರಿದುಬಿದ್ದಿದ್ದವು. ಒಟ್ಟು 15 ಸಾವಿರ ಕೋಟಿ ರುಪಾಯಿ ಹಾನಿ ಸಂಭವಿಸಿತ್ತು.
(ಪಿ.ಟಿ.ಐ / ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...