ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಸೆಳೆವ ಬಾದಾಮಿಯ ಬನಶಂಕರಿ ಜಾತ್ರೆಗೆ ಹೋಗೋಣ ಬನ್ನಿ...

By Staff
|
Google Oneindia Kannada News

ಬಾದಾಮಿ : 2002ರ ಜ.28ರ ಸೋಮವಾರ, ಪುಷ್ಯ ಶುದ್ಧ ಹುಣ್ಣಿಮೆ. ಬನಶಂಕರೀ ವ್ರತ. ಅಂದು ಬಾದಾಮಿ, ಐಹೊಳೆ, ಪಟ್ಟದಕಲ್ಲು ಸಮೀಪದ ಶ್ರೀಬನಶಂಕರಿ ಕ್ಷೇತ್ರದಲ್ಲಿ ವೈಭವದ ಜಾತ್ರೆ- ರಥೋತ್ಸವ. ಕನ್ನಡ ನಾಡಿನ ಸಾಂಸ್ಕೃತಿಕ ಪ್ರತೀಕವಾದ ಬಾದಾಮಿಯ ಬಳಿಯ ಈ ಶಕ್ತಿ ದೇವತೆಯ ಜಾತ್ರೆಗೆ ನಾವೂ ಹೋಗೋಣ ಬನ್ನಿ.

ತೆಂಗು, ಕಂಗು, ಬಾಳೆ, ತಾಳೆ, ವಿಳ್ಯೆಯ ಹಸಿರು ಬನರಾಶಿಯ ಸುಂದರ ಬಯಲಲ್ಲಿ ತಿಲಕವನವೆಂದೇ ಪ್ರಸಿದ್ಧವಾದ ಸ್ಥಳದಲ್ಲಿ ನೆಲೆಸಿರುವ ಜನಪದರ ಆರಾಧ್ಯ ದೇವಿಯೇ ತಾಯಿ ಶ್ರೀಬನಶಂಕರಿ. ಅತ್ತ ಹರಿದ್ರಾ ತೀರ, ಇತ್ತ ಸರಸ್ವತಿ ತೀರಗಳ ನಡುವೆ ನಿತ್ಯ ಹರಿದ್ವರ್ಣದ ಗಿಡಮರಗಳಿಂದ ಕಂಗೊಳಿಸುವ ಈ ಪ್ರಶಾಂತ ಪರಿಸರದಲ್ಲಿರುವ ತಾಯಿ ಬನಶಂಕರಿ ಸರ್ವರ ಮನಸೆಳೆಯುತ್ತಾಳೆ.

ದ್ರಾವಿಡ ಶೈಲಿಯಲ್ಲಿರುವ ಇಲ್ಲಿನ ಬನಶಂಕರಿಯ ಮೂಲ ದೇವಾಲಯ 9ನೇ ಶತಮಾನದೆಂಬುದು ಇತಿಹಾಸಕಾರರ ಅಂಬೋಣ. ಈಹೊತ್ತು ದೇವಾಲಯ ಅರ್ಧದಷ್ಟು ಭಾಗ ನೆಲದಲ್ಲಿ ಹೂತು ಹೋಗಿದೆ. ಇದರ ಪಕ್ಕದಲ್ಲೇ ಸುಂದರವಾದ ಹೊಸ ದೇಗುಲ ನಿರ್ಮಿಸಲಾಗಿದೆ.

ಈ ದೇಗುದಲ್ಲಿರುವ ಸಿಂಹವಾಹಿನಿಯಾದ ಬನಶಂಕರಿಯ ಕೃಷ್ಣವರ್ಣದ ಸುಂದರ ವಿಗ್ರಹವನ್ನು ನೋಡಿದವರು ಭಕ್ತಿಭಾವದಿಂದ ಮೈಮರೆಯುತ್ತಾರೆ. ಕಲ್ಯಾಣದ ಚಾಲುಕ್ಯರು, ವಿಜಯನಗರದ ಅರಸರು, ಪೇಶ್ವೆಗಳು ಹಾಗೂ ರಾಷ್ಟ್ರಕೂಟರೂ ಈ ಶಕ್ತಿ ದೇವತೆಯನ್ನು ಆರಾಧಿಸಿದ್ದಾರೆ ಎನ್ನುತ್ತದೆ ಇತಿಹಾಸ. ಇವರ ಕಾಲದಲ್ಲಿ ಪುರಾತನವಾದ ಮೂಲ ದೇವಾಲಯ ಹಲವು ಬಾರಿ ಜೀರ್ಣೋದ್ಧಾರಗೊಂಡಿದೆ.

ಜಾತ್ರೆ - ರಥೋತ್ಸವ: ಮನ-ಬನದ ಸಂಬಂಧಕ್ಕೆ ಸಾಕ್ಷಿಯಾಗಿರುವ ಈ ಪವಿತ್ರ ಕ್ಷೇತ್ರದಲ್ಲಿ ಪ್ರತಿವರ್ಷವೂ ಶಕ್ತಿಸ್ವರೂಪಿಣಿಯಾದ ಬನಶಂಕರಿಯ ರಥೋತ್ಸವ ಅತ್ಯಂತ ವೈಭವದಿಂದ ಜರುಗುತ್ತದೆ. ರಥೋತ್ಸವದ ಮುನ್ನಾದಿನ ದೇವಿಗೆ 108 ವಿಧದ ಕಾಯಿಪಲ್ಲೆಗಳನ್ನು ತಯಾರಿಸಿ ನೈವೇದ್ಯ ಮಾಡುವ ಮೂಲಕ ಪಲ್ಲೇದ ಹಬ್ಬ ಆಚರಿಸುವುದು ಇಲ್ಲಿನ ವಿಶೇಷ.

ಘಟಸ್ಥಾಪನೆಯಾಂದಿಗೆ ಇಲ್ಲಿ ಜಾತ್ರೆಯ ವಿಧಿ ವಿಧಾನಗಳು ಆರಂಭವಾಗುತ್ತವೆ. ಜಾತ್ರೆಯ ಸಂದರ್ಭದಲ್ಲಿ ಪುರಾಣ, ಪುಣ್ಯಕಥೆಗಳ ಪಠಣ ನಡೆಯುತ್ತದೆ. ಪುಷ್ಯಶುದ್ಧ ಪೂರ್ಣಿಮೆಯ ದಿನ ಸಡಗರ ಸಂಭ್ರಮದಿಂದ ರಥೋತ್ಸವ ಜರುಗುತ್ತದೆ. ಜಾತ್ರೆಯ ಅಂಗವಾಗಿ ಇಲ್ಲಿ ನಡೆಯುವ ಕೃಷಿ ವಸ್ತುಪ್ರದರ್ಶನ ರೈತರಿಗೆ ಹಲವು ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ.

ನಾಡಿನ ಎಲ್ಲ ಜಾತ್ರೆಯಂತೆಯೇ ಇಲ್ಲೂ ತಾತ್ಕಾಲಿಕ ಶೆಡ್‌ಗಳಲ್ಲಿ ತಿಂಡಿ ತಿನಿಸು, ಒಡವೆ -ವಸ್ತ್ರದ ಅಂಗಡಿಗಳು ತಲೆ ಎತ್ತುತ್ತವೆ. ಉತ್ತರ ಕರ್ನಾಟಕದ ಖಡಕ್‌ ರೊಟ್ಟಿ, ಸಜ್ಜೆ ರೊಟ್ಟಿ, ಕೆನೆಮೊಸರು ಕೈಬೀಸಿ ಕರೆಯುತ್ತದೆ. ಹೂವು, ಕುಂಕುಮದಾದಿಯಾಗಿ, ಆತ್ಯಾಧುನಿಕ ಎಲಿಕ್ಟ್ರಾನಿಕ್‌ ವಸ್ತುಗಳವರೆಗೆ ವಿವಿಧ ಬಗೆಯ ವಸ್ತುಗಳು ಬಿಕರಿ ಆಗುತ್ತವೆ.

ಈ ವೈಭವದ ಜಾತ್ರೆಯನ್ನು ಕಾಣಲು, ತಮಗೆ ಬೇಕಾದ ವಸ್ತುವನ್ನು ಖರೀದಿಸಲೆಂದೇ ಕರ್ನಾಟಕ ಹಾಗೂ ನೆರೆರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. 20 ದಿನಗಳ ಕಾಲ ನಡೆವ ಜಾತ್ರೆಯಲ್ಲಿ ಹಲವು ನಾಟಕದ ಕಂಪನಿಗಳು ಬೀಡುಬಿಟ್ಟು, ಕಲಾರಸಿಕರ ಮನಗೆಲ್ಲುತ್ತವೆ.

ಹರಕೆ : ಎಲ್ಲಕ್ಕಿಂತಲೂ ಮಿಗಿಲಾಗಿ ಹೊಳೆ ಆಲೂರಿನ ಕಲಾತ್ಮಕ ಬಾಗಿಲುಗಳು ಇಲ್ಲಿನ ಪ್ರದರ್ಶನ ಮಾರಾಟದಲ್ಲಿ ಸರ್ವರ ಗಮನ ಸೆಳೆಯುತ್ತವೆ. ಕರದಂಟಿನ ಗಮಲಂತೂ ಕಡಲಾಚೆಯ ಕನ್ನಡಿಗರನ್ನೂ ಕೈಬೀಸಿ ಕರೆಯುತ್ತವೆ. ಬಂಜೆ ಎಂಬ ಪಟ್ಟ ಹೊತ್ತವರಿಗೂ ದೇವಿಯ ಕೃಪೆಯಾದರೆ ಮಕ್ಕಳಾಗುತ್ತದೆ ಎಂಬುದು ಇಲ್ಲಿನ ಜನಪದರ ನಂಬಿಕೆ.

ಅದಕ್ಕೇ ಸಂತಾನ ಭಾಗ್ಯ ಕರುಣಿಸವ್ವ ಎಂದು ದೇವಿಗೆ ಹರಕೆ ಹೊರುತ್ತಾರೆ. ಮಕ್ಕಳಾದ ಬಳಿಕ ದೇಗುಲಕ್ಕೆ ಆಗಮಿಸಿ, ಬಾಳೆಯ ತೊಟ್ಟಿಲಲ್ಲಿ ತಮ್ಮ ಮಗುವನ್ನು ಮಲಗಿಸಿ ದೇಗುಲದ ಮುಂಭಾಗದಲ್ಲಿರುವ ಹರಿದ್ರಾತೀರ್ಥದಲ್ಲಿ ತೇಲಿ ಬಿಡುತ್ತಾರೆ. ಹೀಗೆ ಮಾಡುವುದರಿಂದ ತಾಯಿಯ ಹರಕೆ ತೀರುತ್ತದೆ. ತಮ್ಮ ಮಗು ತಾಯಿ ಬನಶಂಕರಿಯ ಮಡಿಲಲ್ಲಿ ಬೆಳೆಯುತ್ತದೆ ಎಂಬುದು ದೇವಿಯ ಭಕ್ತರ ಅಛಲ ನಂಬಿಕೆ.

ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X