ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮರಸತಾ ಸಂಗಮ: 30 ಸಾವಿರ ಆರೆಸ್ಸೆಸ್‌ ಶಿಸ್ತಿನ ಸಿಪಾಯಿಗಳ ಸಮಾಗಮ!

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ಬೆಂಗಳೂರಿನ ನಾಗವಾರದ ವಿಶಾಲ ಮೈದಾನಕ್ಕೀಗ ಹೊಸ ಹೆಸರು... ಹೊಸ ರಂಗು!

ಶುಕ್ರವಾರ ಬೆಳಗ್ಗೆ ಅಲ್ಲಿ 30 ಸಾವಿರ ಮಂದಿ ಸ್ವಯಂ ಸೇವಕರು ಮಿಲಿಟರಿ ಶಿಸ್ತಿನಿಂದ ನಮಸ್ತೇ ಸದಾ ವತ್ಸಲೇ... ಎಂದು ಭರತ ಮಾತೆಗೆ ನಮಿಸುತ್ತಾರೆ. ಅದು ಆರೆಸ್ಸೆಸ್‌ ಆಯೋಜಿಸಿರುವ ಬೃಹತ್‌ ಸಮರಸತಾ ಸಂಗಮಕ್ಕೆ ಸಿದ್ಧಗೊಂಡಿರುವ ನಗರ - ಮಾನ್ಯತಾ ನಗರ.

ಗುರುವಾರ ಬೆಳಗ್ಗೆ ದಕ್ಷಿಣ ಕರ್ನಾಟಕದ ಹಳ್ಳಿಗಳಿಂದ ಬರುವ ಸ್ವಯಂ ಸೇವಕರನ್ನು ಬರಮಾಡಿಕೊಳ್ಳುವುದರಲ್ಲಿ ಅತಿಥೇಯ ಸ್ವಯಂ ಸೇವಕರೀಗ ವ್ಯಸ್ತರು. ರೈಲು ನಿಲ್ದಾಣದಲ್ಲಿ ಯೂನಿಫಾರಂ ಹಾಕಿಕೊಂಡು, ಪುಟ್ಟ ಕೇಸರಿ ಬಾವುಟ ಹೊತ್ತುಕೊಂಡು ಅತಿಥಿಗಳಿಗಾಗಿ ಕಾಯುತ್ತಿದ್ದಾರೆ. ನಗರದ ಮುಖ್ಯ ಬಸ್‌ ನಿಲ್ದಾಣಗಳನ್ನು ಹೊಕ್ಕುವ ಬಸ್ಸುಗಳನ್ನು ಕತ್ತೆತ್ತರಿಸಿ ನೋಡುವ ಖಾಕಿ ಚಡ್ಡಿಯ ಹುಡುಗರು... ಮಾನ್ಯತಾ ನಗರಕ್ಕೆ ಕಾಲಿಟ್ಟಂತೆ.. ‘ನಿಮ್ಮ ವಸತಿ...ಊಟಕ್ಕೆ ವ್ಯವಸ್ಥೆ ಮಾಡಿದ್ದೇವೆ.. ಹೀಗೆ ಬನ್ನಿ’ ಎಂದು ಆದರಿಸುವ ಇನ್ನೊಂದು ದಂಡು. ಮಾನ್ಯತಾ ನಗರದಲ್ಲಿ ಎಲ್ಲವೂ ಅಚ್ಚುಕಟ್ಟು . ಏಕೆಂದರೆ ಅದು ಆರೆಸ್ಸಸ್‌ ಸಮಾವೇಶ ; ಅರ್ಥಾತ್‌ ಶಿಸ್ತಿನ ಸಿಪಾಯಿಗಳ ಸಮಾವೇಶ.

ಮೈದಾನದ ಸುತ್ತ ಹಸಿರು ತೋರಣ, ಕೇಸರಿಯ ಸಾಲು ಬಾವುಟ... ಕಣ್ಣಗಲಿಸಿದಷ್ಟೂ ಉಳಿಯುವ ರಂಗವಲ್ಲಿ. ಭಾರತಾಂಬೆಯ ಮೂರುತಿ... ಹೆಡಗೇವಾರರ ಚಿತ್ರ.

ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜಾರೋಹಣ

ದೇಶಭಕ್ತಿ, ಶಿಸ್ತು, ಸರಳತೆ ಆರೆಸ್ಸೆಸ್‌ನ ಎದೆಯಾಲಿಯ ಘೋಷಣೆ. ಪ್ರತಿಯಾಂದು ಬೃಹತ್‌ ಸಾರ್ವಜನಿಕ ಸಮಾರಂಭದಲ್ಲಿಯೂ ಗಣವೇಷಧಾರಿಗಳಾಗಿ ಸ್ವಯಂ ಸೇವಕರು ಪಥಸಂಚಲನ ಹೋಗುವುದುಂಟು. ಸಮರಸತಾ ಸಂಗಮದ ಎರಡನೇ ದಿನ, ಅಂದರೆ ಗಣರಾಜ್ಯೋತ್ಸವದಂದು 10 ಅಡಿ ಉದ್ದದ ತ್ರಿವರ್ಣ ಧ್ವಜವನ್ನು 120 ಅಡಿ ಎತ್ತರದ ಸ್ತಂಭದಲ್ಲಿ ಆರೋಹಣ ಮಾಡಲಾಗುವುದು. ಅಂದು ಸಂಜೆ ನಗರದ ಐದು ಕಡೆ ಭವ್ಯ ಪಥಸಂಚಲನ ನಡೆಯಲಿದೆ. ಇದರಿಂದ ಸಂಚಾರ ತೊಂದರೆ ಉದ್ಭವಿಸಬಾರದೆಂದು ಪೂರ್ವ ವ್ಯವಸ್ಥೆಗಳನ್ನೂ ಸ್ವಯಂ ಸೇವಕರೇ ನಿರ್ವಹಿಸುತ್ತಾರೆ ಎಂದು ಸಮರಸತಾ ಸಂಘಟಕರು ಹೇಳುತ್ತಾರೆ.

ಸಾರಿಗೆ ಮತ್ತು ರೈಲಿನ ಮೂಲಕ ಬಹುದೊಡ್ಡ ಸಂಖ್ಯೆಯಲ್ಲಿ ನಗರ ಪ್ರವೇಶಿಸುವ ಸ್ವಯಂಸೇವಕರನ್ನು ಮಾನ್ಯತಾ ನಗರಕ್ಕೆ ಕರೆತರಲು 300 ಬಿಎಂಟಿಸಿ ಬಸ್‌ಗಳನ್ನು ಆಯೋಜಿಸಲಾಗಿದೆ. ನೀರು, ತಾತ್ಕಾಲಿಕ ಶೌಚಾಲಯ, ಕುಳಿತುಕೊಳ್ಳಲು ಜಮಖಾನೆ ಎಲ್ಲವೂ ರೆಡಿಯಾಗಿದೆ. ಎಲ್ಲವೂ ಸರಿಯಾ ಎಂದು ಹಿರಿಯ ಸ್ವಯಂ ಸೇವಕರು ಹದ್ದಿನ ಕಣ್ಣಿನ ಪರಿಶೀಲನೆ ನಡೆಸುತ್ತಿದ್ದಾರೆ.

ಸಮಾರಂಭದ ಹೈಲೈಟ್ಸ್‌

  • ಸಮಾವೇಶಕ್ಕೆ ದಕ್ಷಿಣ ಕರ್ನಾಟಕದ 16ಕ್ಕೂ ಹೆಚ್ಚಿನ ಜಿಲ್ಲೆಗಳಿಂದ ಪ್ರತಿನಿಧಿಗಳು ಬರಲಿದ್ದಾರೆ. ಮಾನ್ಯತಾ ನಗರ ಕನಿಷ್ಠ 30 ಸಾವಿರ ಮಂದಿಯ ನಿರೀಕ್ಷೆಯಲ್ಲಿದೆ.
  • ಸಂಗಮದಲ್ಲಿ ಹಿರಿಯ ಸಂತರು, ಸನ್ಯಾಸಿಗಳು ಮತ್ತು ಧಾರ್ಮಿಕ ನಾಯಕರ ಮಿಲನ. ಸಾಧಕರಿಗೆ ಸನ್ಮಾನ.
  • ಹಿಂದುತ್ವಕ್ಕೆ ಸಂಬಂಧಿಸಿದಂತೆ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಪ್ರತಿಬಿಂಬಿಸುವ ಬೃಹತ್‌ ವಸ್ತು ಪ್ರದರ್ಶನ.
  • ಆರೆಸ್ಸೆಸ್‌ ಹಿರಿಯರಾದ ಕೆ. ಎಸ್‌. ಸುದರ್ಶನ್‌ ಮತ್ತು ಮೋಹನ್‌ ಭಾಗವತ್‌, ಹೊ.ವೆ. ಶೇಷಾದ್ರಿಯವರ ಮಾರ್ಗದರ್ಶನ ಮತ್ತು ಉಪಸ್ಥಿತಿ.
  • ಸ್ವಯಂ ಸೇವಕರಿಂದ ಸೂರ್ಯ ನಮಸ್ಕಾರ ಮುಂತಾದ ಸಾಮೂಹಿಕ ವ್ಯಾಯಾಮ ಪ್ರದರ್ಶನ.
  • ಆಕರ್ಷಕ ಘೋಷ ವಾದ್ಯ ಕಾರ್ಯಕ್ರಮ.
ಜ.24ರ ಮುಸ್ಸಂಜೆ 6ಗಂಟೆಗೆ ವಸ್ತು ಪ್ರದರ್ಶನ ಉದ್ಘಾಟನೆಯಾಂದಿಗೆ ಕಾರ್ಯಕ್ರಮದ ಆರಂಭ. 25 ರ ಶುಕ್ರವಾರ ಬೆಳಗ್ಗೆ 10.15 ಕ್ಕೆ ಆದಿಚುಂಚನಗಿರಿ ಮಠದ ಬಾಲ ಗಂಗಾಧರನಾಥ ಸ್ವಾಮೀಜಿ ಸಮಾವೇಶವನ್ನು ಉದ್ಘಾಟಿಸುತ್ತಾರೆ. ನಂತರ ಸಹ ಕಾರ್ಯವಾಹ ಹೊ. ವೆ. ಶೇಷಾದ್ರಿಯವರ ಉಪನ್ಯಾಸ. ಸಂಜೆ 4 ಗಂಟೆಗೆ ವಿವಿಧ ಧರ್ಮ, ಮತದ ಮುಖಂಡರೊಂದಿಗೆ ಮಾತುಕತೆ, 7.30ಕ್ಕೆ ಸಂತರಿಂದ ಆಶೀರ್ವಚನ. ಇದಿಷ್ಟೂ ಮದಲ ದಿನದ ಕಾರ್ಯಕ್ರಮ.

ಗಣರಾಜ್ಯೋತ್ಸವದ ದಿನ ಕೆ. ಎಸ್‌. ಸುದರ್ಶನ್‌ ಅವರಿಂದ ತ್ರಿವರ್ಣ ಧ್ವಜಾರೋಹಣ. ಸಹಕಾರ್ಯವಾಹ ಮೋಹನ್‌ ಭಾಗವತ್‌ ಅವರಿಂದ ಉಪನ್ಯಾಸ. 11 ಗಂಟೆಗೆ ಚಿಂತಕರೊಂದಿಗೆ ಸಮಾಲೋಚನೆ. ಸಂಜೆ 4ಕ್ಕೆ ನಗರದ ಆರು ಕಡೆಗಳಿಂದ ಬಹುನಿರೀಕ್ಷಿತ ಪಥಸಂಚಲನ ಆರಂಭ.

27ರ ಭಾನುವಾರ ಬೆಳಗ್ಗೆ 11 ಗಂಟೆಗೆ ಉದ್ಯಮಿಗಳೊಂದಿಗೆ ಮಾತುಕತೆ. ಮಧ್ಯಾಹ್ನ 2 ಗಂಟೆಗೆ ವೃತ್ತಿ ಪರಿಣತರೊಂದಿಗೆ ಚರ್ಚೆ. ಸಂಜೆ ನಾಲ್ಕಕ್ಕೆ ಪ್ರಸಿದ್ಧ ಕಂಪ್ಯೂಟರ್‌ ತಜ್ಞ ವಿಜಯ್‌ ಭಟ್ಕರ್‌ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ. ಸರಸಂಘಚಾಲಕ ಕೆ. ಎಸ್‌. ಸುದರ್ಶನ್‌ ಅವರಿಂದ ಉಪನ್ಯಾಸ.

ಇದು ಸಮರಸತಾ ಸಂಗಮದ ಸ್ವರೂಪ.

ಸಮರಸತಾ ಸಂಗಮಕ್ಕೆ ನೀವೂ ಶುಭ ಹಾರೈಸಿ

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X