ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಕ್ಕಲು ವಾರಸುದಾರರ ನಾರಾಯಣ ಮೂರ್ತಿ ಹೊಸ ಅವತಾರ

By Staff
|
Google Oneindia Kannada News

(ಇನ್ಫೋ ಇನ್‌ಸೈಟ್‌)

ಬರುವ ಮಾರ್ಚ್‌ 31ರಿಂದ ಇನ್ಫೋಸಿಸ್‌ ಎಂಬ ಬಾರತದ ಹೆಮ್ಮೆಯ ಐಟಿ ಕಂಪನಿಯ ಶಿಲ್ಪಿ ಎನ್‌.ಆರ್‌.ನಾರಾಯಣ ಮೂರ್ತಿ ವಿಶ್ವಸನೀಯ ಸಲಹೆಗಾರ ಅರ್ಥಾತ್‌ ಮೆಂಟರ್‌. ಕಂಪನಿಯ ಅಧ್ಯಕ್ಷ ಗಾದಿಗೆ ನಂದನ್‌ ನೀಲೇಕಣಿಯವರಿಗೆ ಬಡ್ತಿ ಕೊಟ್ಟಿರುವ ನಾರಾಯಣ ಮೂರ್ತಿ ಮೆಂಟರ್‌ ಆದದ್ದಾದರೂ ಯಾಕೆ?

ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ನಡೆಸಿರುವ ಸಂದರ್ಶನದಲ್ಲಿ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತಮ್ಮ ಜೀವಿತದ ಕಾಲದಲ್ಲಿ ಕಂಪನಿಯ ಬಿಳಲುಗಳು ಭಾರೀ ಆಳಕ್ಕೆ ಇಳಿವಂತೆ ನೋಡಿಕೊಳ್ಳುವ ಜಾಯಮಾನದ ನಾರಾಯಣ ಮೂರ್ತಿ ಮೆಂಟರ್‌ ಆಗಿ ಮಾಡಲಿರುವುದು, ತಮ್ಮ ಉತ್ತರಾಧಿಕಾರಿಗಳನ್ನು ಹೆಕ್ಕಿ ತೆಗೆಯುವ ಕೆಲಸ. ಒಂದು ಕಂಪನಿಯ ಸರ್ವತೋಮುಖ ಪ್ರಗತಿಗೆ ಕಾರಣವಾಗಬಲ್ಲ ಜಾಣ ಮಿದುಳುಗಳನ್ನು ಗುರ್ತಿಸಿ, ಕಂಪನಿಯನ್ನು ಇನ್ನಷ್ಟು ಬೆಳೆಸುವುದೇ ನಾರಾಯಣ ಮೂರ್ತಿ ಕನಸು.

ಅವರ ಮಾತುಗಳಲ್ಲೇ ಹೇಳುವುದಾದರೆ, ‘ನಾವು ಈಗಾಗಲೇ 250 ಮಂದಿಯನ್ನು ಗುರ್ತಿಸಿದ್ದೇವೆ. ಇವರಲ್ಲಿ ನಾಯಕತ್ವದ ಗುಣ ಇದೆ. ಈ ಸಂಖ್ಯೆ ಮುಂದೆ ಐನೂರು, ಸಾವಿರ ಹೀಗೆ ಬೆಳೆಯುತ್ತಾ ಹೋಗುತ್ತದೆ. ಮುಂದಿನ 50- 100 ವರ್ಷಗಳ ದೂರದೃಷ್ಟಿ ನನ್ನದು. ಆಗಿನ ಆರ್ಥಿಕ ಸ್ಥಿತಿ ಹೇಗಿರುತ್ತದೋ ಬೇರೆ ಮಾತು. ಆದರೆ ನಾಯಕರ ಪೀಳಿಗೆಯನ್ನು ಮುಂದುವರೆಸುವುದು ಅತ್ಯಗತ್ಯ. ಕಂಪನಿಯ ಬ್ರಾಂಡ್‌ ಇಕ್ವಿಟಿಯನ್ನು ಸದಾ ಕಾಪಿಟ್ಟುಕೊಳ್ಳುವ ಉದ್ದೇಶದಿಂದ ಕಾರ್ಪೊರೇಟ್‌ಗಳು, ತಂತ್ರಜ್ಞರು ಮೊದಲಾದವರ ಜೊತೆ ಇನ್ನು ಮುಂದೆ ನನ್ನ ಒಡನಾಟ ಇನ್ನಷ್ಟು ಚುರುಕಾಗುತ್ತದೆ’.

ಪ್ರಸಕ್ತ ವಿತ್ತ ವರ್ಷದ ಮೂರನೇ ತ್ರೆೃಮಾಸಿಕದಲ್ಲಿ 200 ಕೋಟಿ ರುಪಾಯಿಗೂ ಹೆಚ್ಚು ಲಾಭ ಕಂಪನಿ ಗಳಿಸಿದೆ, ಅದೂ ಪ್ರತಿಕೂಲ ಪರಿಸ್ಥಿತಿಯಲ್ಲಿ. ನಾರಾಯಣ ಮೂರ್ತಿ ಪ್ರಕಾರ- ‘ಅಸಾಧ್ಯವಾದುದು ಯಾವುದೂ ಇಲ್ಲ. ಸ್ಲೋಡೌನು ಅಂತ ನಾವೂ ಡೌನ್‌ ಆಗಬಾರದು. ಅಲೆಗೆ ವಿರುದ್ಧ ಈಜುವಾಗ ತೋಳುಗಳು ಬೀಳುವಷ್ಟು ತ್ರಾಸು ತೆಗೆದುಕೊಳ್ಳಲೇಬೇಕು. ನಮ್ಮ ಮಂತ್ರವೂ ಅದೇ. ಕಷ್ಟಪಡು. ಸುಖ ತಂತಾನೇ ಬರುತ್ತದೆ ಎಂಬುದು’.

ಮೂರ್ತಿ ಮಂತ್ರಗಳ ಪಟ್ಟಿ ಮಾಡುವುದಾದರೆ....

  • ಜನರಿಗೆ ಮಾಹಿತಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗೆಗೆ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದಕ್ಕಾಗಿ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಅನುಷ್ಠಾನಕ್ಕೆ ತರಲು ಇ- ಆಡಳಿತ ಬಲು ಮುಖ್ಯ.
  • ಟೈಂ ಸರಿಯಿದ್ದಾಗ ಕಂಪನಿ ಬೆಳೆಸುವುದು ಸುಲಭ. ಆದರೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಈಜಿ ಜಯಿಸುವನೇ ಜಗಜ್ಜಾಣ. ಅದು ಲಿಟ್ಮಸ್‌ ಟೆಸ್ಟ್‌ ಕೂಡ ಹೌದು.
  • ಕೆಲಸ ಕೊಡುವುದು, ತೆಗೆವುದು ಉದ್ದಿಮೆ ಬೆಳೆಯುವ ನಿಟ್ಟಿನಲ್ಲಿ ಇದ್ದೇ ಇರುತ್ತದೆ. ಇಲ್ಲಿನ ಆರ್ಥಿಕ ಪರಿಸ್ಥಿತಿಯೇ ಅಂಥದ್ದು. ಆದರೆ ಕೆಲಸಗಾರರಿಗೆ, ವ್ಯವಸಾಯಗಾರರಿಗೆ ಖಾಲಿ ಕೈಯಲ್ಲಿ ಕೂತುಕೊಳ್ಳುವ ಸ್ಥಿತಿ ಖಂಡಿತ ಬರುವುದಿಲ್ಲ.
  • ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ- ಬಲಿದಾನ ಮುಖ್ಯವಾಗಿತ್ತು. ಆ ಕಾರಣಕ್ಕೆ ತುಂಬಾ ಒಳ್ಳೆಯ ಜನ ಮಾತ್ರ ಅದಕ್ಕೆ ಧುಮುಕಿದರು. ಆದರೆ ಸ್ವಾತಂತ್ರ್ಯ ಸಿಕ್ಕ ನಂತರ ರಾಜಕೀಯ ದುಡ್ಡು ಮಾಡುವ ಸಾಧನವಾಗಿ ಹೋಯಿತು. ದಂತಗೋಪುರದ ಸಿಂಹಾಸನದ ಮೇಲೇರುವ ಉಮೇದಿ ಹೊರತುಪಡಿಸಿ, ಜನಪರ ಕೆಲಸ ಮಾಡುವ ಮನಸ್ಸುಗಳೇ ಅಲ್ಲೊಂದು ಇಲ್ಲೊಂದು ಎನ್ನುವಂತಾಯಿತು.

    ನಾರಾಯಣ ಮೂರ್ತಿ ದೂರದೃಷ್ಟಿಯ ಬಗ್ಗೆ ನೀವೇನಂತೀರಿ?

    ವಾರ್ತಾ ಸಂಚಯ
    ಹಬ್ಬಲಿ ಇವರ ರಸಬಳ್ಳಿ

    ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X