ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 14ರಿಂದ ಎಸ್‌.ಟಿ.ಡಿ. ದರ ಶೇಕಡಾ 60ರಷ್ಟು ಇಳಿಕೆ

By Staff
|
Google Oneindia Kannada News

ನವದೆಹಲಿ : ಖಾಸಗಿ ದೂರವಾಣಿ (ಮೊಬೈಲ್‌) ಕಂಪನಿಗಳೊಂದಿಗೆ ದರ ಸಮರಕ್ಕೆ ನಿಂತಿರುವ ಕೇಂದ್ರ ಸರಕಾರ, ದೂರವಾಣಿ ಗ್ರಾಹಕರಿಗೆ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ವಿಶೇಷ ಕೊಡುಗೆ ನೀಡಿದೆ. ಎಸ್‌.ಟಿ.ಡಿ. ಕರೆಗಳ ದರವನ್ನು ಶೇ.60ರಷ್ಟು ಇಳಿಸಿದೆ.

ಇದರಿಂದಾಗಿ ಸರಕಾರಿ ಒಡೆತನದ ಭಾರತ್‌ ಸಂಚಾರ್‌ ನಿಗಮ ಲಿಮಿಟೆಡ್‌ಗೆ ಮುಂದಿನ 6 ತಿಂಗಳ ಅವಧಿಯಲ್ಲಿ ಸುಮಾರು 3,000 ಕೋಟಿ ರುಪಾಯಿ ನಷ್ಟ ಸಂಭವಿಸಲಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ, ದರ ಕಡಿತದ ಪರಿಣಾಮವಾಗಿ ಕರೆಗಳ ಸಂಖ್ಯೆ ವೃದ್ಧಿ ಆಗುವುದರಿಂದ ಈ ನಷ್ಟ ಭರಿಸಬಹುದು ಎಂಬುದು ಸರಕಾರದ ಅನಿಸಿಕೆ.

ಈ ವಿಷಯವನ್ನು ಶುಕ್ರವಾರ ಕೇಂದ್ರ ದೂರ ಸಂಪರ್ಕ ಸಚಿವ ಪ್ರಮೋದ್‌ ಮಹಾಜನ್‌ ಪ್ರಕಟಿಸಿದ್ದಾರೆ. ಈ ಮುನ್ನ ಖಾಸಗಿ ಮೊಬೈಲ್‌ ಕಂಪನಿಗಳು ಶೇ.50ರಷ್ಟು ದರ ಇಳಿಸಿ ಪೈಪೋಟಿಗೆ ನಾಂದಿ ಹಾಡಿದ್ದವು. ಇದಕ್ಕೆ ಸವಾಲೊಡ್ಡಿದ ಕೇಂದ್ರ ಸರಕಾರ ಶೇ.60ರಷ್ಟು ದರ ಇಳಿಸಿ, ಖಾಸಗಿ ಕಂಪನಿಗಳನ್ನು ಬೆಚ್ಚಿ ಬೀಳಿಸಿದೆ.

ಒಟ್ಟಿನಲ್ಲಿ ಈ ಇಬ್ಬರ ಜಗಳದಲ್ಲಿ ಭಾರತೀಯ ದೂರವಾಣಿ ಗ್ರಾಹಕರಿಗೆ ಲಾಭ ಆಗುತ್ತಿದೆ. ಜನವರಿ 14ರಿಂದ ಜಾರಿಗೆ ಬರುವ ಈ ಹೊಸದರವನ್ನು ಎರಡು ಸ್ತರಗಳಲ್ಲಿ ವಿಂಗಡಿಸಲಾಗಿದೆ. ಬೆಳಗ್ಗೆ 9ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕರೆದಟ್ಟಣೆಯ ಅವಧಿ ಈ ಅವಧಿಯಲ್ಲಿ ದರ ದುಬಾರಿ.

ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ 9 ಗಂಟೆ ವರೆಗೆ ಕರದಟ್ಟಣೆ ಇಲ್ಲದ ಅವಧಿ. ಈ ಅವಧಿಯಲ್ಲಿ ಕಡಿಮೆ ದರ. ಇದರೊಂದಿಗೆ 50ರಿಂದ 200 ಕಿ.ಮೀ, 200ರಿಂದ 500 ಕಿ.ಮೀಟರ್‌ ಮತ್ತು 500 ಕಿ.ಮೀಟರ್‌ಗಿಂತ ಹೆಚ್ಚು ದೂರದ ಕರೆಗಳು ಎಂದು ಮೂರು ಹಂತಗಳಾಗಿ ವಿಂಗಡಿಸಲಾಗಿದೆ.

50ರಿಂದ 200 ಕಿ.ಮೀಟರ್‌ವರೆಗಿನ ಕರೆಗಳ ದರ (ಕರದಟ್ಟಣೆ ಅವಧಿಯಲ್ಲಿ) ನಿಮಿಷಕ್ಕೆ 4.80ರಿಂದ 2.40ಕ್ಕೂ, 200 ಕಿ.ಮೀಟರ್‌ನಿಂದ 500 ಕಿ.ಮೀಟರ್‌ವರೆಗಿನ ದರ ನಿಮಿಷಕ್ಕೆ 11.60ರಿಂದ 4.80ಕ್ಕೂ ಇಳಿಯಲಿದೆ. 500 ಕಿ.ಮೀಟರ್‌ಗಿಂತ ಮಿಗಿಲಾದ ದೂರದ ಕರೆಗಳ ದರ ಭಾರಿ ಪ್ರಮಾಣದ ಇಳಿಕೆ ಕಂಡಿದೆ.

ಕರೆ ದಟ್ಟಣೆ ಇಲ್ಲದ ಅವಧಿಯಲ್ಲಿ 50ರಿಂದ 200 ಕಿ.ಮೀಟರ್‌ವರೆಗಿನ ದೂರದ ಎಸ್‌ಟಿಡಿ ಕರೆಗೆ ನಿಮಿಷಕ್ಕೆ 1.20 ಆಗಿದೆ. 200ರಿಂದ 500 ಕಿ.ಮೀಟರ್‌ವರೆಗಿನ ಕರೆಗಳ ದರವನ್ನು ನಿಮಿಷಕ್ಕೆ 3 ರುಪಾಯಿಯಿಂದ 2.40ಕ್ಕೆ ಇಳಿಸಲಾಗಿದೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X