ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರದರ್ಶನ ಕೇಂದ್ರದ ಎದುರು ರಾಜಕಮಲ್‌ ಸರ್ಕಸ್‌ ಟೆಂಟ್‌

By Staff
|
Google Oneindia Kannada News

An Elephant is entertaining spectators in Rajkamal circusಬೆಂಗಳೂರು : ಕರಡಿಯ ಥಕಥಕ ಕುಣಿಸುತ ಬಂದನು.... ಎಂಬ 3ನೇ ಕ್ಲಾಸಿನ ಪದ್ಯ ನಿಮಗೆ ನೆನಪಿರಬೇಕಲ್ಲ. ಗಾರುಡಿಯವ ಕರಡಿಯ ಕುಣಿಸುತ್ತಾ ನಮ್ಮೂರಿಗೆ ಬಂದರೆ, ಬಾಲಕರ ಹಿಂಡೇ ಅವನ ಹಿಂದೆ ಸುತ್ತುತ್ತಿತ್ತು. ಆಗ ಈಗಿನಂತೆ ಟಿ.ವಿ. ಇರಲಿಲ್ಲ. ಊರುಗಳಿಗೆ ಸರ್ಕಸ್‌ ಬರುತ್ತಿದ್ದುದೂ ಅಪರೂಪ. ಕರಡಿ ಕುಣಿತವೇ ಆಗ ಅತಿದೊಡ್ಡ ಮನರಂಜನೆ.

ನೋಡುಗರಿಗೇನೋ ಮನರಂಜನೆ. ಆದರೆ, ಕರಡಿ ಪಡುವ ಪಾಡು ಆ ಶ್ರೀರಾಮನಿಗೇ ಪ್ರೀತಿ. ಸರ್ಕಸ್‌ಗಳೂ ಇದಕ್ಕೆ ಹೊರತಲ್ಲ. ಸರ್ಕಸ್ಸಿನಲ್ಲಿ ಮೈಬಗ್ಗಿಸಿ ದುಡಿವ ಕರಡಿ, ಕೋತಿ, ಆನೆ, ಹುಲಿ, ಕರಡಿ ಇತ್ಯಾದಿ ಪ್ರಾಣಿಗಳು ಕಾಡಿನಲ್ಲಿ ತಾವನುಭವಿಸುತ್ತಿದ್ದ ಸ್ವಾತಂತ್ರ್ಯವನ್ನು ಮಾಲಿಕನಿಗೆ ಮೂಟೆಕಟ್ಟಿಕೊಟ್ಟು. ರಿಂಗ್‌ಮಾಸ್ಟರ್‌ ತಾಳಕ್ಕೆ ತಕ್ಕಂತೆ ಕುಣಿಯುವುದು ಅನಿವಾರ್ಯ. ಇಷ್ಟೆಲ್ಲಾ ಮಾಡಿದರೂ ಅವಕ್ಕೆ ಅರೆಹೊಟ್ಟೆಯೇ.

ಈಗೇಕೆ ಪ್ರಾಣಿಗಳ ಪ್ರಸ್ತಾಪ ಎನ್ನುವಿರಾ? ಮೊನ್ನೆಯಷ್ಟೇ ಬೆಂಗಳೂರಿನ ಹೊಸಕೆರೆ ಹಳ್ಳಿಗೆ 17 ಕಾಡಾನೆಗಳು ಭೇಟಿಕೊಟ್ಟು ಹೋದ ತರುವಾಯ ಈಗ ಸರ್ಕಸ್‌ ಆನೆಗಳು ಬಂದಿದೆ. ಆನೆಗಳ ಜೊತೆ 70ಕ್ಕೂ ಹೆಚ್ಚು ಪ್ರಾಣಿಗಳೂ ಇವೆ.

ಬೆಂಗಳೂರು ಅರಮನೆ ಆವರಣದಲ್ಲಿ ದೂರದರ್ಶನ ಕೇಂದ್ರದ ಎದುರು ರಾಜಕಮಲ್‌ ಸರ್ಕಸ್‌ ಟೆಂಟ್‌ ಹಾಕಿದೆ. 8 ವರ್ಷಗಳ ಬಳಿಕ ಬೆಂಗಳೂರಿಗೆ ಬಂದಿರುವ ರಾಜಕಮಲ್‌ ಈಗಾಗಲೇ ರಾಜ್ಯದ ಮೈಸೂರು, ಹಾಸನ, ತುಮಕೂರುಗಳನ್ನು ಸುತ್ತಿ ಬಂದಿದೆ. ಬೆಂಗಳೂರಿನ ಪುಟಾಣಿಗಳ ಮನಕ್ಕೆ ಮುದ ನೀಡುವುದು ಸರ್ಕಸ್‌ ಉದ್ದೇಶವಂತೆ.

24ರಿಂದ ಪ್ರದರ್ಶನ ಆರಂಭಿಸಿರುವ ಸರ್ಕಸ್‌ನಲ್ಲಿ 200ಕ್ಕೂ ಹೆಚ್ಚು ಕಲಾವಿದರು, ಆನೆ, ಹುಲಿ, ಕರಡಿ, ಚಿರತೆ, ಕೋತಿ ಸೇರಿದಂತೆ 70 ಪ್ರಾಣಿಗಳಿವೆ. ಪ್ರತಿದಿನ ಮಧ್ಯಾಹ್ನ 1, ಮಧ್ಯಾಹ್ನ 4 ಮತ್ತು ಸಂಜೆ 7ಗಂಟೆಗೆ ಎರಡೂವರೆ ತಾಸಿನ ಪ್ರದರ್ಶನ ನಡೆಯುತ್ತಿದೆ. ಅಮೆರಿಕದ ಮೆಕಾವ್‌ ಎಂಬ ಹಕ್ಕಿಕೂಡ ಬೆಂಗಳೂರಿಗರ ರಂಜಿಸಲು ಬಂದಿದೆ.

ಹಿಂಸೆ ರಹಿತ ತರಬೇತಿ : ಎಲೆಕ್ಟ್ರಿಕ್‌ ಶಾಕ್‌ ನೀಡಿ, ಸರ್ಕಸ್‌ ಪ್ರಾಣಿಗಳಿಂದ ದೇಹ ದಂಡನೆ ಮಾಡಿಸಲಾಗುತ್ತದೆ ಎನ್ನುವುದು ಬಹು ಹಳೆಯ ಆರೋಪ. ಆದರೆ, ರಾಜಕಮಲ್‌ನ ವ್ಯವಸ್ಥಾಪಕ ಪ್ರಮೋದ್‌ ಕುಮಾರ್‌ ಈ ಆರೋಪ ನಿರಾಕರಿಸುತ್ತಾರೆ. ನಮ್ಮದೇ ಆದ ತಂತ್ರಜ್ಞಾನದಿಂದ, ಪ್ರಾಣಿಗಳಿಗೆ ಉತ್ತಮ ಆಹಾರ ನೀಡಿ, ಅವುಗಳಿಂದ ಸರ್ಕಸ್‌ ಮಾಡಿಸುತ್ತೇವೆ ಎಂಬ ಸಮಜಾಯಿಷಿ ನೀಡುತ್ತಾರೆ.

ನ್ಯಾಯಾಲಯ ನೀಡಿರುವ ಆದೇಶದ ರೀತ್ಯ ಕೆಲವು ಕ್ರೂರ ಮೃಗಗಳನ್ನು ಬೋನಿನಲ್ಲಿಯೇ ಇಟ್ಟು ಪ್ರದರ್ಶಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. ತಮ್ಮ ಸರ್ಕಸ್‌ನಲ್ಲಿ ಸುಕೋಮಲೆಯರ ಸೈಕಲ್‌ ವರಸೆ, ನೃತ್ಯ, ಕಸರತ್ತುಗಳಿವೆ. ಅಮೆರಿಕ, ರಷ್ಯದಲ್ಲಿ ತರಬೇತಾದ ನುರಿತ ಕಲಾವಿದರಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X