ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಿಮ್ಮನ್ನು ನೀವೆ ರಕ್ಷಿಸಿಕೊಳ್ಳಿ ಎಂಬುದು ದುರ್ಬಲ ಸರ್ಕಾರದ ಲಕ್ಷಣ’

By Staff
|
Google Oneindia Kannada News

ಬೆಂಗಳೂರು : ನಿಮ್ಮ ಆತ್ಮ ರಕ್ಷಣೆಗಾಗಿ ಉಗುರಿನಿಂದ ಪರಚಿ ಎಂದು ಮಹಿಳೆಯರಿಗೆ ಕರೆ ನೀಡಿ ಭೇಷ್‌ ಎನಿಸಿಕೊಂಡಿದ್ದ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಎಚ್‌.ಟಿ. ಸಾಂಗ್ಲಿಯಾನ, ಮನೆಗೆ ನುಗ್ಗುವ ದರೋಡೆ ಕೋರರನ್ನು ಗುಂಡಿಟ್ಟು ಕೊಲ್ಲಿ ಎಂಬ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಅಂತೆಯೇ ಹೆಚ್ಚುತ್ತಿರುವ ಅಪರಾಧ ತಡೆಗಟ್ಟಲು ನಗರದ ಕೊಳಗೇರಿಗಳಲ್ಲಿರುವ 15 ವರ್ಷ ದಾಟಿದ ಎಲ್ಲ ಪುರುಷರ ಬೆರಳಚ್ಚು ಹಾಗೂ ಭಾವಚಿತ್ರ ಸಂಗ್ರಹಿಸುವ ಸಾಂಗ್ಲಿಯಾನಾರ ಕ್ರಮಕ್ಕೂ ವಿರೋಧ ವ್ಯಕ್ತವಾಗಿದೆ.

ಕೊಳಗೇರಿಗಳಲ್ಲಿರುವ ಪುರುಷರ ಬೆರಳ ಗುರುತು ಹಾಗೂ ಭಾವಚಿತ್ರ ಸಂಗ್ರಹಿಸುವುದಾಗಿ ಹೇಳಿರುವ, ಸಾಂಗ್ಲಿಯಾನಾ ಅವರು ಕೊಳಗೇರಿಗಳಲ್ಲಿ ವಾಸಿಸುವ ಎಲ್ಲ ಬಡವರೂ ಅಪರಾಧಿಗಳು ಎಂದು ತಿಳಿದಂತಿದೆ. ಅಂದರೆ, ಮನೆಯಲ್ಲಿ ವಾಸಿಸುವವರೆಲ್ಲರೂ ಸಭ್ಯಸ್ಥರೇ ಎಂದು ಪ್ರಶ್ನಿಸಿರುವ ವಿರೋಧ ಪಕ್ಷದ ನಾಯಕ ಕೆ.ಎಚ್‌. ಶ್ರೀನಿವಾಸ್‌ ಇದೊಂದು ಮೂರ್ಖತನದ ಹೇಳಿಕೆ ಎಂದು ಟೀಕಿಸಿದ್ದಾರೆ.

ಸೈಕಲ್‌ವಿರೋಧಿಯಾಗಿದ್ದ ಸಾಂಗ್ಲಿಯಾನ ಈಗ ಕೊಳಗೇರಿಗಳಲ್ಲಿ ವಾಸಿಸುವ ಜನರ ಆತ್ಮಾಭಿಮಾನವನ್ನೇ ಘಾಸಿಗೊಳಿಸಿದ್ದಾರೆ ಎಂದು ಕಾರ್ಮಿಕ ನಾಯಕ ಅನಂತಸುಬ್ಬರಾವ್‌ ಖಂಡಿಸಿದ್ದಾರೆ.

ನ್ಯಾಯಮೂರ್ತಿಗಳ ಖಂಡನೆ : ಮನೆಗೆ ನುಗ್ಗಿ ಅಪರಾಧ ಕೃತ್ಯ ಎಸಗಲು ಯತ್ನಿಸುವ ಆರೋಪಿಗಳ ಮೇಲೆ ಗುಂಡು ಹಾರಿಸಿ ಎಂದು ಬೆಂಗಳೂರು ನಿವಾಸಿಗಳಿಗೆ ಸಲಹೆ ನೀಡಿ, ಇದಕ್ಕಾಗಿ ಬಂದೂಕು ಪರವಾನಗಿ ನೀಡಲಾಗುವುದು ಎಂದು ಘೋಷಿಸಿರುವ ಎಚ್‌.ಟಿ. ಸಾಂಗ್ಲಿಯಾನರ ಹೇಳಿಕೆಯನ್ನು ಕೇರಳ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ.ಎಸ್‌. ಮಳೀಮಠ್‌ ಹಾಗೂ ಇತರರು ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಟೀಕಿಸಿದ್ದಾರೆ.

ಜನರೇ ದರೋಡೆಕೋರರನ್ನು ಗುಂಡಿಟ್ಟು ಕೊಲ್ಲಿ ಎನ್ನುವುದಾದರೆ, ನಗರ ಪೊಲೀಸರು ಶಕ್ತರಲ್ಲ ಎಂದು ಹೇಳಿಕೊಂಡಂತೆಯೇ ಎಂದು ಮಳೀಮಠ್‌ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯಾಬ್ಬ ನಾಗರಿಕನಿಗೂ ಆತ್ಮರಕ್ಷಣೆಯ ಹಕ್ಕು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ವ್ಯಕ್ತಿಯಾಬ್ಬ ತಮ್ಮ ಮನೆಗೆ ಡಕಾಯಿತಿಗೆ ಬಂದಿದ್ದಾನೆ ಎಂದು ಭಾವಿಸಿ ಗುಂಡು ಹಾರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ನನಗೆ ಅವಕಾಶ ಇತ್ತರೆ ಬಂದೂಕು ತಯಾರಿಕೆಯನ್ನೇ ನಿಷೇಧಿಸುವೆ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯರೂ ಆದ ನ್ಯಾ. ಮಳೀಮಠ್‌ ಹೇಳಿದ್ದಾರೆ.

ನಗರದಲ್ಲಿ ಒಂದೆರಡು ದರೋಡೆ ನಡೆದರೆ, ಇಡೀ ನಗರದಲ್ಲಿ ಅಪರಾಧ ತಾಂಡವವಾಡುತ್ತಿದೆ ಎಂದು ಭಾವಿಸುವುದು ತಪ್ಪು. ಇಂತಹ ಹೇಳಿಕೆಗಳಿಂದ ಅನಗತ್ಯವಾಗಿ ಸಾರ್ವಜನಿಕರಿಗೆ ಶಸ್ತ್ರಾಸ್ತ್ರ ಖರೀದಿಗೆ ಸರಕಾರವೇ ಪ್ರಚೋದಿಸಿದಂತಾಗುತ್ತದೆ ಎಂದು ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಆರ್‌. ರಾಮಲಿಂಗಂ ಹೇಳಿದ್ದಾರೆ.

ಸಾರ್ವಜನಿಕರ ಬಳಿ ಶಸ್ತ್ರಾಸ್ತ್ರ ಹೆಚ್ಚಿದರೆ, ಅದು ಸಮಾಜದ ಭದ್ರತೆಯ ಬುನಾದಿಯನ್ನೇ ಅಲುಗಾಡಿಸುತ್ತದೆ ಎಂದೂ ಅವರು ಹೇಳಿದ್ದಾರೆ.

ಸಾರ್ವಜನಿಕರು ಶಸ್ತ್ರಾಸ್ತ್ರ ಹೊಂದಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳ ಬೇಕಾಗಿರುವುದು ಸರಕಾರವೇ ಹೊರತು ಪೊಲೀಸ್‌ ಕಮಿಷನರ್‌ ಅಲ್ಲ ಎಂದು ಮಾಜಿ ಅಡ್ವೋಕೇಟ್‌ ಜನರಲ ಆರ್‌.ಎನ್‌. ನರಸಿಂಹ ಮೂರ್ತಿ ಹೇಳಿದ್ದಾರೆ.

ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಡಿ.ಎಂ. ನಂಜುಂಡಪ್ಪ ಅವರು ಈಗಾಗಲೇ ಸಮಾಜದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಸಾಂಗ್ಲಿಯಾನರ ಈ ನಿರ್ಧಾರದಿಂದ ಅದು ಮತ್ತಷ್ಟು ಹೆಚ್ಚುತ್ತದೆ ಎಂದಿದ್ದಾರೆ.

ನಿಮ್ಮನ್ನು ನೀವೆ ರಕ್ಷಿಸಿಕೊಳ್ಳಿ ಎಂಬುದು ದುರ್ಬಲ ಸರಕಾರದ ಲಕ್ಷಣ. ನಗರ ಪೊಲೀಸ್‌ ಆಯುಕ್ತರ ಹೇಳಿಕೆಯಲ್ಲಿ ಈ ಧ್ವನಿ ಅಡಕವಾಗಿದೆ. ನಗರ ಪೊಲೀಸರು ಅಶಕ್ತರು ಎಂದು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X