ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರುಖಾದಿಂದ ಹೊಮ್ಮಿದ ದನಿ

By Staff
|
Google Oneindia Kannada News

Afghanistan Woman may come out of this Burkhaಕಾಬೂಲ್‌ : ತಾಲಿಬಾನಿಗಳ ತುಳಿತಕ್ಕೆ ತತ್ತರಿಸಿದ್ದ ಆಪ್ಘನ್‌ ಮಹಿಳೆಯರು ಬುರುಖಾದಿಂದ ಹೊರ ಬರುವ ಕಾಲ ಹತ್ತಿರಾಗಿದೆ. ಅಮೆರಿಕಾ ಪಡೆಗಳು ಸುರಿಸಿದ ಬಾಂಬ್‌ ಮಳೆಯ ನಡುವೆಯೂ ಬದುಕಿರುವ ಆಪ್ಘನ್ನರಿಗೀಗ ಹಬ್ಬ. ಮನರಂಜನೆಯ ಮನೆಗಳ ಕದ ತೆರೆದಿದೆ. ಅಮೀರ್‌ ಖಾನನ ಲಗಾನ್‌ ಸಿನಿಮಾ ಸಿ.ಡಿ.ಗಳು ಸರಬರನೆ ಬಿಕರಿಯಾಗುತ್ತಿವೆ. ಇಂಥಾ ಸಾಮಾಜಿಕ ಬದಲಾವಣೆಯ ನಡುವೆಯೇ ಹೆಂಗಸರಿಗಾಗೇ ಒಂದು ನಿಯತಕಾಲಿಕ ಜನ್ಮ ತಾಳಿದೆ. ಹೆಸರು ‘ಸೀರತ್‌’ ಅರ್ಥಾತ್‌ ಮನೋವೃತ್ತಿ.

ಮೂವತ್ತೆಂಟರ ಹರೆಯದ ಮೇರಿ ಎಂಬ ಮಹಿಳೆ ಈ ನಿಯತಕಾಲಿಕದ ಹಿಂದಿನ ಮುಖ್ಯ ಮೆದುಳು. ಸರ್ಕಾರದ ವಾರ್ತಾ ಸಚಿವಾಲಯ ಈಕೆಗೆ ಕೆಲಸ ಕೊಟ್ಟಿದೆ. ಸ್ವತಂತ್ರ ಪತ್ರಿಕೆಗಳಿಲ್ಲದ ಆಫ್ಘನ್ನಿನಲ್ಲಿ ಸಂವಹನಾ ಕ್ಷೇತ್ರಕ್ಕೆ ಹೊಸ ರೂಪು ಕೊಡುವ ಸವಾಲು ಈಕೆಯ ಮುಂದಿದೆ. ನಿಯತಕಾಲಿಕದ ಇಡೀ ಕೆಲಸ ಮಾಡಿರುವುದು ಮೇರಿ ಸೇರಿದಂತೆ ಕೇವಲ ಮೂವರು. ಸೀರತ್‌ ಬೆಲೆ 10 ಸೆಂಟ್‌ಗಳು. ಓಬಿರಾಯನ ಕಾಲದ ಮುದ್ರಣ ಯಂತ್ರದಲ್ಲೇ ಅಚ್ಚಾಗಿರುವ ಪತ್ರಿಕೆಯ ಮುಖಪುಟದಲ್ಲಿ ದಾರವನ್ನು ಕಟ್ಟಿ ಮಹಿಳೆಯನ್ನು ಎಳೆದೊಯ್ಯುತ್ತಿರುವ ಚಿತ್ರವಿದೆ.

1992ರಲ್ಲಿ ಸೋವಿಯತ್‌ ರಷ್ಯಾ ನಂತರದ ಸರ್ಕಾರ ಪತನವಾದ ಮೇಲೆ ಮಹಿಳಾ ಪತ್ರಿಕೆಗಳೇ ಪ್ರಕಟವಾಗಲಿಲ್ಲ. ಆಗ ಇದ್ದ ಮೆರ್ಮೋನ್‌ (ಮಹಿಳೆ) ಎಂಬ ಪತ್ರಿಕೆ ನಿಂತುಹೋಯಿತು. ಅದಾದ ಹತ್ತು ವರ್ಷಗಳ ನಂತರ ಇದೀಗ ಗ್ರಂಥಾಲಯ, ಪುಸ್ತಕದ ದುಕಾನಿನ ಶೆಲ್ಫ್‌ ಮೇಲೆ ಮಹಿಳಾ ಪತ್ರಿಕೆ ಬಂದಿದೆ. ಮೊದಲ ಯತ್ನವಾದ್ದರಿಂದ ಮುದ್ರಿಸಿರುವುದು ಕೇವಲ 500 ಪ್ರತಿಗಳನ್ನು.

ನಿಯತಕಾಲಿಕದ ವಿಲೇವಾರಿ ಕೆಲಸದಲ್ಲಿ ಬ್ಯುಸಿಯಾಗಿರುವ ಮೇರಿ ನೆಮ್ಮದಿಯ ನಗು ನಗುತ್ತಲೇ ಹೇಳುತ್ತಾರೆ- ಹೆಂಗಸರು ತಮ್ಮ ಮನದಾಳದ ಭಾವನೆಗಳನ್ನು ಬರೆಹಗಳಾಗಿಸಬೇಕು. ಇಷ್ಟು ವರ್ಷಗಳ ಕಾಲ ಅದುಮಿಟ್ಟಿಕೊಂಡಿರುವ ಪ್ರತಿಭೆಗೆ ಪುಕ್ಕ ಹಚ್ಚಬೇಕು. ವೇದಿಕೆ ನಮ್ಮದು. ಆಗ ನಮ್ಮ ಯತ್ನಕ್ಕೆ ಪೂರ್ಣ ಅರ್ಥ ಸಿಕ್ಕಂತಾಗುತ್ತದೆ.

ಮಾತು ಮುಂದುವರಿಸಿದ ಮೇರಿ, ಆಫ್ಘನ್ನಿನ ಬಹುತೇಕ ಹೆಂಗಸರು ಶಾಲೆಯ ಮೆಟ್ಟಿಲೇ ಹತ್ತಿಲ್ಲ. ಕಳೆದ 10 ವರ್ಷಗಳ ಅವರ ಬದುಕು ಅಕ್ಷರಶಃ ನರಕ. ನಾನು 6 ವರ್ಷಗಳ ಕಾಲ ಮಾಸ್ಕೋದಲ್ಲಿ ಶಾಲೆಗೆ ಹೋಗಿದ್ದವಳು. ಆಫ್ಘನ್‌ ಮಹಿಳೆಯರ ದುಸ್ಥಿತಿಯ ಬಗ್ಗೆ ಬರೆಹವನ್ನೇ ಅಸ್ತ್ರ ಮಾಡಿಕೊಂಡವಳು. ಇಲ್ಲಿನ ಹೆಂಗಸರ ಕಷ್ಟಗಳನ್ನು ನಾನೂ ಮುಟ್ಟಿ ನೋಡಿದ್ದೇನೆ. ಮುಂದಿನ ಸರೀತ್‌ ಸಂಚಿಕೆ ದೇಶದ ಮಧ್ಯಂತರ ನಾಯಕ ಹಮೀದ್‌ ಕರ್ಜಾಯ್‌ ಮಹಿಳಾ ಹಕ್ಕುಗಳ ಕುರಿತು ವ್ಯಕ್ತಪಡಿಸುವ ಅಭಿಪ್ರಾಯವನ್ನು ಒಳಗೊಳ್ಳಲಿದೆ. 44ರ ಹರೆಯದ ಪಶ್ತೂನಿಯಾದ ಹಮೀದ್‌, ದೇಶದಲ್ಲಿ ಮಹಿಳೆಯನ್ನು ಸಾಮಾಜಿಕ ಜೀವನದಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. 30 ಸದಸ್ಯರ ಸಂಪುಟದಲ್ಲಿ ಇಬ್ಬರು ಮಹಿಳೆಯರಿಗೂ ಅವರು ಸ್ಥಾನ ಕೊಟ್ಟಿರುವುದು ಗಮನಾರ್ಹ ಎಂದರು.

ಅಂದಹಾಗೆ, ಸೀರತ್‌ನ ಮೊದಲ ಸಂಚಿಕೆಯ ಮುಖ್ಯ ತಲೆಬರೆಹ- The gates of hope are opening (ಭರವಸೆಯ ಬಾಗಿಲುಗಳು ತೆರೆಯುತ್ತಿವೆ). ಯುದ್ಧಾ ನಂತರ ಆಫ್ಘನ್ನಿನ ಸಾಮಾಜಿಕ ಜೀವನ ಸುಧಾರಿಸುತ್ತಿರುವುದಕ್ಕೆ ಹಿಡಿದ ಕನ್ನಡಿ ಈ ತಲೆಬರೆಹ.

(ಪಿಟಿಐ)

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X