ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ತನ ಹೊಸ ‘ಅವತಾರ’- ಭಾಗ 3

By Staff
|
Google Oneindia Kannada News

ಮೃತ ಸರೋವರದ ದಾಖಲೆ ಸುರುಳಿಯ ಪರ್ಯಟನೆ :

Jesus Christ : The story behind the storiesಮೇಕೆ ಕಾಯುವ ಅರೆ ಅಲೆಮಾರಿ ಕುಮ್‌ರಾನಿಗರಿಂದ ಅಂತರ್‌ರಾಷ್ಟ್ರೀಯ ಮಟ್ಟದ ವಿದ್ವಾಂಸರ ಕೈಗೆ ಈ ಹಸ್ತ ಪ್ರತಿಗಳು ಹೇಗೆ ಪಯಣಿಸಿತು ಎಂಬುದು ಈ ದಾಖಲೆ ಸುರುಳಿಯಷ್ಟೇ ಕುತೂಹಲಕಾರಿಯಾಗಿದೆ.

ನಿಧಿಯೆಂದು ಭ್ರಮಿಸಿ ನಿರಾಸೆ ಉಂಟು ಮಾಡಿದ ವಸ್ತುವನ್ನು ಹಾಗೇ ಬಿಸಾಡದೆ, ಮನೆಗೆ ತಂದು ಹಲವಾರು ದಿನ ಸುಮ್ಮನೆ ಕಂಭಕ್ಕೆ ನೇತು ಹಾಕಿದ್ದರು. ನಂತರ ಏಳು ಸ್ಕಾೃಲ್‌ಗಳನ್ನು ಹತ್ತಿರದ ಬೆತ್ಲೆಹೆಮ್ಮಿನ ಇಬ್ಬರು ಬೇರೆ ಬೇರೆ ಪ್ರಾಚ್ಯ ವಸ್ತು ಮಾರಾಟಗಾರರಿಗೆ ಮಾರಲಾಯಿತು. ಅದರಲ್ಲಿ ನಾಲ್ಕನ್ನು ತೀರಾ ಅಗ್ಗದ ಬೆಲೆಗೆ ಜೆರುಸಲೆಂನ ಸೆಂಟ್‌ ಮಾರ್ಕ್ಸ್‌ ಮೊನಾಸ್ಟ್ರಿಯಲ್ಲಿದ್ದ ಅಥನೇಶಿಯಸ್‌ ಸ್ಯಾಂಯುಯಲ್‌ಗೆ ಮಾರಲಾಯಿತು.

ಅಮೆರಿಕನ್‌ ಸ್ಕೂಲ್‌ ಆಫ್‌ ಓರಿಯಂಟಲ್‌ ರಿಸರ್ಚ್‌ನ ವಿದ್ವಾಂಸರು ಇದನ್ನು ಓದಿ ನೋಡಿ ಇದರ ಅನರ್ಘ್ಯತೆಯನ್ನು ಮೊದಲ ಬಾರಿಗೆ ಗುರುತಿಸಿದರು. ಆ ದಾಖಲೆ ಸುರುಳಿಗಳ ಛಾಯಾಚಿತ್ರವನ್ನು ಜಾನ್‌ ಟ್ರೆೃವರ್‌ ತೆಗೆದನು. ಖ್ಯಾತ ಪ್ರಾಚ್ಯವಸ್ತು ಶೋಧಕ ವಿಲಿಯಂ ಎಫ್‌ ಆಲ್‌ಬ್ರೆೃಟ್‌ ಇದನ್ನು ಕಂಡ ಕೂಡಲೇ ಇದು ಸುಮಾರು ಕ್ರಿ.ಪೂ.200ರಿಂದ ಕ್ರಿ.ಶ.200ರ ನಡುವಿನದ್ದೆಂದು ಊಹಿಸಿದ. ನಂತರ, ಪ್ರಪಂಚದ ಅತ್ಯಂತ ಹಳೆಯ ಹಸ್ತಪ್ರತಿಗಳು ಜಡೇಯದ ಮರಳುಗಾಡಿನಲ್ಲಿ ಸಿಕ್ಕಿವೆಯೆಂದು ಪ್ರಪಂಚಕ್ಕೆ ತಿಳಿಯಪಡಿಸಿದರು. ಕುಮ್‌ರಾನಿನ ಮೇಕೆ ಕಾಯುವ ಹುಡುಗರ ಬಳಿಯಿದ್ದ ಇನ್ನೂ ಮೂರು ಸುರುಳಿಗಳು ಹೀಬ್ರೂ ವಿಶ್ವವಿದ್ಯಾಲಯದ ಇ.ಎಲ್‌.ಸುಕೇನಿಕ್‌ ಎಂಬ ಪ್ರಾಚ್ಯವಸ್ತು ಸಂಶೋಧಕನಿಗೆ ಮಾರಲಾಯಿತು. (ಇಸ್ರೇಲಿ ಸೈನ್ಯದಲ್ಲಿ ಜನರಲ್‌ ಆಗಿಯೂ, ನಂತರ ಮಸದ ಮತ್ತು ಹಝಾರ್‌ ಅನ್ನು ಉತ್ಖನನ ಮಾಡಿ ಪ್ರಾಚ್ಯವಸ್ತು ಸಂಶೋಧಕನಾದ ಯಿಗಲ್‌ ಯಾದಿನ್‌ ಅವರ ತಂದೆ ಸುಕೇನಿಕ್‌).

ಇಸ್ರೇಲಿನಲ್ಲಿ ತಂಗಿದ ದಾಖಲೆಗಳು

ದಾಖಲೆ ಸುರುಳಿಗಳ ಪರ್ಯಟನೆಗೆ ಇನ್ನಷ್ಟು ಮಹತ್ವ ಬರಲು ಕಾರಣ - ಅದು ಪ್ಯಾಲಸ್ಟೈನಿನಲ್ಲಿ ಬ್ರಿಟಿಷ್‌ ಆಳ್ವಿಕೆ ಅಂತ್ಯವಾಗುವ ಕಾಲ. ಅರಬ್‌ ಮತ್ತು ಯಹೂದಿಗಳ ನಡುವೆ ಘರ್ಷಣೆ ಇದ್ದ ಕಾಲ. ಆದ್ದರಿಂದ ವಿದ್ವಾಂಸರು ಇಂತಹ ದಾಖಲೆಗಳನ್ನು ಅಧ್ಯಯನ ಮಾಡುವುದು ತೀರಾ ಅಪಾಯಕಾರಿಯೇ ಆಗಿತ್ತು. ಕೊನೆಗೆ ಈ ಎಲ್ಲಾ ಸುರುಳಿಗಳೂ ಹೀಬ್ರೂ ವಿಶ್ವವಿದ್ಯಾಲಯಕ್ಕೆ ಬಂದುದು ಮತ್ತೊಂದು ಆಕಸ್ಮಿಕ. ತಾನು ಕೊಂಡ ಹಸ್ತಪ್ರತಿಗಳೊಂದಿಗೆ ಅಥನೇಷಿಯಸ್‌ ಸ್ಯಾಂಯುಎಲ್‌ ಅಮೆರಿಕಾದ್ಯಂತ ಸಂಚಾರ ಮಾಡಿದರೂ ಅದನ್ನು ಕೊಳ್ಳುವವರು ಸಿಗಲೇ ಇಲ್ಲ. ಕೊನೆಗೆ, ವಾಲ್‌ಸ್ಟ್ರೀಟ್‌ ಜರ್ನಲ್‌ನಲ್ಲಿ ಒಂದು ಜಾಹೀರಾತು ನೀಡಿದ. ಆ ವೇಳೆಗೆ ಯಿಗಲ್‌ ಯಾದಿನ್‌ ಅಮೇರಿಕಾದಲ್ಲಿ ಉಪನ್ಯಾಸ ಪ್ರವಾಸದಲ್ಲಿದ್ದು ಈ ಜಾಹೀರಾತನ್ನು ನೋಡಿದ. ಈ ಅಮೂಲ್ಯವಾದ ಹಸ್ತ ಪ್ರತಿಗಳನ್ನು 250,000 ಡಾಲರ್‌ಗಳಿಗೆ ಕೊಂಡ. 1955ರ ಫೆಬ್ರವರಿಯಲ್ಲಿ ಇಸ್ರೇಲಿನ ಪ್ರಧಾನಮಂತ್ರಿ, ತಮ್ಮ ದೇಶ ಎಲ್ಲಾ ಈ ಏಳು ದಾಖಲೆ ಸುರುಳಿಗಳನ್ನೂ ಕೊಂಡಿದೆ. ಹಾಗೂ ಒಂದು ವಿಶೇಷ ವಸ್ತು ಸಂಗ್ರಹಾಲಯದಲ್ಲಿ ಇದನ್ನು ಇಡಲಾಗುತ್ತದೆ ಎಂದು ಘೋಷಿಸಿದ. ಇಂದು ಹೀಬ್ರೂ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯದಲ್ಲಿ ಇದನ್ನು ನಾವು ಕಾಣಬಹುದು.

1946ರಲ್ಲಿ ಇಂತಹ ಅಮೂಲ್ಯ ಸುರುಳಿಗಳು ಸಿಕ್ಕ ವಿವರ ಸಿಕ್ಕ ಮೇಲೆ ಅಲ್ಲಿಗೆ ಪ್ರಾಚ್ಯವಸ್ತು ಸಂಶೋಧಕರ ಅಧಿಕೃತ ತಂಡಗಳು ಹೋಗಿ ಅಲ್ಲಿದ್ದ ಉಳಿದೆಲ್ಲ ಗುಹೆಗಳನ್ನೂ ಶೋಧಿಸಿದವು. ಗುಹೆಗಳಲ್ಲಿ 600ಕ್ಕಿಂತ ಹೆಚ್ಚು ದಾಖಲೆ ಸುರುಳಿಗಳ ಸಾವಿರಾರು ತುಣುಕುಗಳೂ ಸಿಕ್ಕವು.

ಕುಮ್‌ರಾನ್‌ ಬಳಿ ಹಾಳುಬಿದ್ದಿದ್ದ ಖಿರ್‌ಬೆತ್‌ ಕುಮ್‌ರಾನ್‌ ಬಳಿ ವ್ಯಾಪಕ ಸಂಶೋಧನೆ ನಡೆಸಿ ಕೊನೆಗೆ ಅನುಮಾನಾತೀತವಾಗಿ ಆ ದಾಖಲೆಗಳನ್ನು ಈ ಜನಾಂಗದವರೇ ಸುಮಾರು ಕ್ರಿ.ಪೂ.125- ಕ್ರಿ.ಶ. 68ರ ನಡುವೆ ರಚಿಸಿದ್ದು ಎಂದು ತೀರ್ಮಾನಿಸಿದರು. ಜುದೆಯಲ್ಲಿದ್ದ ಅವರು ಕ್ರಿ.ಶ.66- 70ರಲ್ಲಿ ತಮ್ಮ ಮೇಲೆ ಅತಿಕ್ರಮಣ ನಡೆಸುತ್ತಿದ್ದ ರೋಮನ್‌ ಸೈನ್ಯದಿಂದ ದಾಖಲೆ ಸುರುಳಿಗಳನ್ನು ರಕ್ಷಿಸಿಡಲು ಅವರು ಆತುರಾತುರವಾಗಿ ಇಲ್ಲಿ ಅದನ್ನು ಬಚ್ಚಿಟ್ಟು, ಇಲ್ಲಿಂದ ಪಲಾಯನ ಮಾಡಿದ್ದರು.

ಇಂದಿಗೂ ನಾವು ನೋಡಬಹುದಾದ ಕುಮ್‌ರಾನ್‌ನಲ್ಲಿ ಪಾಳುಬಿದ್ದಿರುವ ಖಿರ್‌ಬೆತ್‌ನಲ್ಲಿ ಯಹೂದಿ ಸನ್ಯಾಸಿಗಳು ಸಾಕಷ್ಟು ಪ್ರಮಾಣದಲ್ಲಿ ವಾಸವಾಗಿದ್ದರು. ಅಲ್ಲಿ ಸಾಂಪ್ರದಾಯಿಕ ಸ್ನಾನ ಗೃಹಗಳು, ಸಭಾಗೃಹಗಳು ಎಲ್ಲ ಕಂಡುಬಂದಿವೆ. ಅದರಲ್ಲಿ ಮುಖ್ಯವಾದುದು, ಅನೇಕ ಬೆಂಚು, ಟೇಬಲ್ಲುಗಳು, ಮಸಿ ಹೀರುವ ಕಾಗದ, ಲೇಖನಿಗಳು , ಲಿಪಿಗಳನ್ನು ಬರೆಯುವ ಆಫೀಸು (ಸ್ಕಿೃಪ್ಟೋರಿಯಂ). ಈಗ ದೊರೆತಿರುವ ಬಹುತೇಕ ಸುರುಳಿಗಳು ಇಲ್ಲೇ ಬರೆಯಲಾಗಿತ್ತು ಎಂದು ತಿಳಿದುಬಂದಿದೆ.

ದಾಖಲೆ ಸುರುಳಿಗಳ ವರ್ಣನೆ :

ಮೇಕೆ ಕಾಯುವ ಹುಡುಗರು ಪತ್ತೆ ಮಾಡಿದ ಸುರುಳಿಗಳಿದ್ದ ಗುಹೆಯನ್ನು ಕೇವ್‌ 1 ಎಂದು ಕರೆದರು. ಅಲ್ಲಿ ದೊರೆತ 2 ದಾಖಲೆ ಸುರುಳಿಗಳೇ ಮೂಲ ದಾಖಲೆಗಳು. ಅವುಗಳಲ್ಲಿ :

1) ಇಸಯ್ಯ(Isaiah)ನ ಸಮಗ್ರ ಭವಿಷ್ಯವಾಣಿ- ಇದು ಸಾಕಷ್ಟು ಸುಸ್ಥಿತಿಯಲ್ಲಿದೆ.

2) ಇಸಯ್ಯನ ಮತ್ತೊಂದು ತುಣುಕು.

3) ಹಬಕುಕ್‌(Habakkuk)ನ ಮೊದಲೆರಡು ಅಧ್ಯಾಯಗಳ ಟೀಕೆ.

4) ಶಿಸ್ತಿನ ಕೈಪಿಡಿ ಅಥವಾ ಕೋಮು ನಿಯಮಾವಳಿ ಇದೇ ಬಹಳ ಅಮೂಲ್ಯವಾದ ಮಾಹಿತಿಯ ಮೂಲ, ಕುಮ್‌ರಾನ್‌ನ ಧಾರ್ಮಿಕ ಪಂಗಡಗಳ ಆಚಾರ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲುತ್ತದೆ.

5) (Thanks giving hymns)ಕೃತಜ್ಞತಾ ಪೂರ್ವಕ ಹಾಡುಗಳು, ಭಕ್ತಿಗೀತೆಗಳ ಸಂಕಲನ, ದೇವರನ್ನು ಆರಾಧಿಸುವ(psalms) ಗೀತೆಗಳು.

6) ಬೈಬಲ್ಲಿನ ‘ಜೆನಿಸಿಸ್‌’ ಭಾಗದ ಅರಾಮಿಯದ ಭಾಷೆಯ ವಿಸ್ತುತ ಬರಹ.

7) ಯುದ್ಧ ನಿಯಮಗಳು. ಬೆಳಕಿನ ಪುತ್ರರು (ಕುಮ್‌ರಾನಿಗರು) ಮತ್ತು ಕಗ್ಗತ್ತಲೆಯ ಕುಮಾರರು (ರೋಮನರು ಇರಬಹುದೇ?) ಇವರ ನಡುವೆ ‘ಕೊನೆಯ ದಿನಗಳಲ್ಲಿ’ ನಡೆಯಬೇಕಿರುವ ಯುದ್ಧದ ಬಗ್ಗೆ ಬರೆಯಲಾಗಿದೆ. ಈ ‘ಕೊನೆಯ ದಿನಗಳು’ ಇಷ್ಟರಲ್ಲೇ ಬರಲಿವೆ ಎಂದು ನಂಬಿದ್ದರು, ಕುಮ್‌ರಾನ್‌ನವರು.

Post your views

ಕ್ರಿಸ್ತನ ಹೊಸ ‘ಅವತಾರ’- ಭಾಗ 1

ಮುಖಪುಟ / ಲೋಕೋಭಿನ್ನರುಚಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X