ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರಂಗಭೂಮಿಯ ನುಂಗಿದೆ ಸಿನಿಮವೆಂಬ ರಾಹು, ಟಿವಿ ಎಂಬ ಕೇತು’

By Staff
|
Google Oneindia Kannada News

ಮಂಗಳೂರು : ಈ ಹೊತ್ತು ರಂಗಭೂಮಿಗೆ ಗ್ರಹಣ ಹಿಡಿದಿದೆ. ಸಿನಿಮಾ ಎಂಬ ರಾಹುವೂ, ಟಿ.ವಿ. ಚಾನೆಲ್‌ ಎಂಬ ಕೇತುವು ರಂಗಭೂಮಿಯನ್ನು ನುಂಗಿಹಾಕಿದೆ. ಹೀಗೆಂದವರು ಮತ್ತಾರೂ ಅಲ್ಲ ಮಾತಿನಮಲ್ಲ ಎಂದೇ ಹೆಸರಾದ ಖ್ಯಾತ ರಂಗಕಲಾವಿದ ಮಾಸ್ಟರ್‌ ಹಿರಣ್ಣಯ್ಯ.

ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕರ್ನಾಟಕ ಬ್ಯಾಂಕ್‌ ಸಹಯೋಗದಲ್ಲಿ ಏರ್ಪಡಿಸಿದ್ದ, ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಮಾತಿನ ಹೊಳೆ ಹರಿಸಿದ ಅವರು, ಕನ್ನಡ ರಂಗಭೂಮಿಗೆ ಪುನಶ್ಚೇತನ ನೀಡಲು ಉತ್ತಮೋತ್ತಮ ಪ್ರದರ್ಶನಗಳನ್ನು ನೀಡುವ ಹೊಣೆ ರಂಗ ಕಲಾವಿದರ ಹೆಗಲ ಮೇಲಿದೆ ಎಂದರು.

ಇಂದು ಟಿ.ವಿ. ಚಾನೆಲ್‌ಗಳು ಆರೋಗ್ಯಕರ ಸ್ಪರ್ಧೆ ಒಡ್ಡಿವೆ. ಈ ಪರ್ವಕಾಲದಲ್ಲಿ ರಂಗ ಕಲಾವಿದರು ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿ, ರಂಗಭೂಮಿ ಎಂದೆಂದಿಗೂ ಜೀವಂತ ಎಂಬುದನ್ನು ನಿರೂಪಿಸಬೇಕು. ರಂಗಭೂಮಿಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ರಂಗಭೂಮಿಗೂ ನುಸುಳಿರುವ ದ್ವಂದ್ವಾರ್ಥ ಸಂಭಾಷಣೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಹಿರಣ್ಣಯ್ಯ, ತಾವು ದ್ವಂದ್ವಾರ್ಥ ಸಂಭಾಷಣೆಯ ವಿರೋಧಿ ಎಂದು ಘೋಷಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಲು ಬರುತ್ತಾರೆ ಎಂಬುದನ್ನು ಕಲಾವಿದರು ಮರೆಯಬಾರದು ಎಂದೂ ಅವರು ಕಿವಿಮಾತು ಹೇಳಿದರು. ಮುಂದಿನ ದಿನಗಳಲ್ಲಿ ತಮಗೆ ಚಲನಚಿತ್ರಗಳಲ್ಲಿ ನಟಿಸುವ ಯಾವುದೇ ಇರಾದೆ ಇಲ್ಲ ಎಂದೂ ಹಿರಣ್ಣಯ್ಯ ತಿಳಿಸಿದರು.

(ಪಿ.ಟಿ.ಐ/ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X