ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‌ಫೋಸಿಸ್‌ ಮರುಜನ್ಮ ನೀಡಿದ ‘ಜಯಲಕ್ಷ್ಮೀ ವಿಲಾಸ’ ಉದ್ಘಾಟನೆ

By Staff
|
Google Oneindia Kannada News

ಮೈಸೂರು : ಪಾಳುಬಿದ್ದು ಕುಸಿಯುವ ಹಂತದಲ್ಲಿದ್ದ ಮಾನಸ ಗಂಗೋತ್ರಿ ಆವರಣದಲ್ಲಿರುವ ಜಯಲಕ್ಷ್ಮೀ ವಿಲಾಸ ಮಂಗಳವಾರ ನವವಧುವಿನಂತೆ ಕಂಗೊಳಿಸುತ್ತಿತ್ತು. ಶತಮಾನಗಳಷ್ಟು ಹಳೆಯದಾದ ಭವ್ಯ ವಿಲಾಸಕ್ಕೆ ತನ್ನ ಹಿಂದಿನ ಮೆರುಗು ಬಂದಿತ್ತು. ಇನ್‌ಫೋಸಿಸ್‌ ಫೌಂಡೇಷನ್‌ ಕೃಪೆಯಿಂದ ಪುನರುಜ್ಜೀವನಗೊಂಡು, ಸುಣ್ಣ ಬಣ್ಣ ಹಚ್ಚಿಕೊಂಡು ಕಂಗೊಳಿಸುತ್ತಿದ್ದ ಈ ಐತಿಹಾಸಿಕ ಮಹಲನ್ನು ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಉದ್ಘಾಟಿಸಿದರು.

ಇಂತಹ ಒಂದು ಅದ್ಭುತ ಕಟ್ಟಡವನ್ನು ಜಾನಪದ ವಸ್ತುಗಳ ಸಂಗ್ರಹಾಲಯವನ್ನಾಗಿ ಮಾಡಲು ವಿಶ್ವವಿದ್ಯಾಲಯ ಉದ್ದೇಶಿಸಿರುವುದು ನಿಜಕ್ಕೂ ಪ್ರಶಂಸಾರ್ಹ ವಿಷಯ, ಈ ಕಟ್ಟಡಕ್ಕೆ ಪುನರ್ಜನ್ಮ ನೀಡಿದ ಇನ್‌ಫೋಸಿಸ್‌ ಸಂಸ್ಥೆ ಅಭಿನಂದನಾರ್ಹ ಕಾರ್ಯ ಮಾಡಿದೆ ಎಂದು ಅವರು ಹೇಳಿದರು.

ಮೈಸೂರು ನಗರದಲ್ಲಿ ಕನ್ನಡ ನಾಡಿನ ಪರಂಪರೆಯ ಪ್ರತೀಕವಾಗಿರುವ ಅದ್ಭುತ ಮಹಲುಗಳು ಹಾಗೂ ಸ್ಮಾರಕಗಳ ರಕ್ಷಣೆಗೆ ನಾಗರಿಕರು ಸರಕಾರದೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

1901ರಲ್ಲಿ ಚಾಮರಾಜ ಒಡೆಯರ್‌ ಅವರು ಗ್ರೀಕ್‌ ಶೈಲಿಯಲ್ಲಿಯಲ್ಲಿ ಕಟ್ಟಿಸಿದ್ದ ಜಯಲಕ್ಷ್ಮಿ ವಿಲಾಸ್‌ ಮ್ಯಾನ್ಷನ್‌ 4 ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಈ ಮಹಲಿಗೆ ಜೀವಕಳೆ ಹಾಗೂ ಗತ ವೈಭವ ತಂದುಕೊಡಲು ಪಣತೊಟ್ಟ ಇನ್‌ಫೋಸಿಸ್‌ ಸಂಸ್ಥೆ ಆ ಕಾರ್ಯದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ.

ಅಂದು ಈ ಮಹಲಿನ ನಿರ್ಮಾಣಕ್ಕೆ ಮಹಾರಾಜರು ಮಾಡಿದ್ದ ಖರ್ಚು 7 ಲಕ್ಷ ರುಪಾಯಿ ಆದರೆ, ಇಂದು ಈ ಕಟ್ಟಡದ ಜೀರ್ಣೋದ್ಧಾರಕ್ಕೆ ಆಗಿರುವ ಖರ್ಚು ಎಷ್ಟು ಗೊತ್ತೆ? 1 ಕೋಟಿ 17 ಲಕ್ಷ ರುಪಾಯಿ. ಈ ಖರ್ಚನ್ನು ಇನ್‌ಫೋಸಿಸ್‌ ಪ್ರತಿಷ್ಠಾನ ಭರಿಸಿದೆ.

ಮಂಗಳವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಫೌಂಡೇಷನ್‌ ಅಧ್ಯಕ್ಷೆ ಸುಧಾ ನಾರಾಯಣ ಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ವಿಶ್ವನಾಥ್‌, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹೆಗಡೆ ಮೊದಲಾದವರು ಪಾಲ್ಗೊಂಡಿದ್ದರು.

ಹಲವು ಕಾರ್ಯಕ್ರಮ: ಮಂಗಳವಾರ ಬೆಳಗ್ಗೆ 10-30ರ ಹೊತ್ತಿಗೆ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಆಂದೋಲನ ಪತ್ರಿಕೆಯ ‘ಆಂದೋಲನ ಭವನ’ ಉದ್ಘಾಟಿಸಿದ ಅವರು, ನಂತರ ಜಯಲಕ್ಷ್ಮೀ ವಿಲಾಸ ಉದ್ಘಾಟನೆ ನೆರವೇರಿಸಿದರು. ತಾವು ಓದಿದ ಮಹಾರಾಜಾ ಕಾಲೇಜಿಗೂ ಭೇಟಿ ನೀಡಿ, ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

(ಮೈಸೂರು ಪ್ರತಿನಿಧಿಯಿಂದ)

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X