• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಾವಳಿಯ ಕಾಶಿ ಹೆಜಮಾಡಿ

By Staff
|

*ಕೆ. ರಾಜಲಕ್ಷ್ಮಿ ರಾವ್‌

ಆಕಾಶದ ಚುಕ್ಕಿ ಎಣಿಸುತ್ತಾ ಅಂಗಳದಲ್ಲಿ ಮಲಗಿದ ಮೀನುಗಾರನ ಕಿವಿ ತುಂಬ ಕಡಲಿನಲೆಯ ಸದ್ದು. ತಂಗಾಳಿಯಲ್ಲಿ ಮೀನು ಒಣಗುತ್ತಿರುವ ತಿಳಿ ವಾಸನೆ. ದೇವಸ್ಥಾನ, ದೈವಸ್ಥಾನಗಳ ಪ್ರಾಕಾರಗಳಲ್ಲಿ ಮತ್ತೆ ಒಂದಷ್ಟು ಕಥೆಗಳು, ನಂಬಿಕೆಗಳು: ಈ ಕರಾವಳಿಯ ಊರಿನ ಹೆಸರು ಹೆಜಮಾಡಿ.

ಸ್ಥಳನಾಮದ ಬಳಸುದಾರಿ:

ಹಿರಿದಾದ ಊರು- ಹೆಜಮಾಡಿ ಎನ್ನುವ ಲಾಜಿಕ್ಕನ್ನು ಇಲ್ಲಿನ ಹಿರಿಯ ತಲೆಗಳು ಒಪ್ಪುವುದಿಲ್ಲ. ಊರಿನ ಹೆಸರಿನ ಹಿಂದಿನ ಕತೆ ಕೇಳಬೇಕಿದ್ದರೆ ನಿಮಗೆ ಒಂದಿಷ್ಟು ಪದಗಳು, ನಮೂನೆಗಳು ಗೊತ್ತಿರಬೇಕು. ನಾಲ್ಕು ಚೌಕಿಯ ಮನೆ ಹೇಗಿರುತ್ತದೆ ಅಂತ ಗೊತ್ತೇ ?

ಚಾವಡಿ, ದೇವರ ಮನೆ, ಅಡುಗೆ ಮನೆ, ಹಾಲ್‌(ನಡೆ ಕೋಣೆ)ಗಳು ಚೌಕಾಕಾರದಲ್ಲಿದ್ದು, ಇವುಗಳ ನಡುವೆ ಪುಟ್ಟ ಅಂಗಳವೊಂದಿರುತ್ತದೆ. ಹೆಜಮಾಡಿಯ ಮುಖ್ಯ ಅರ್ಚಕರ ಮನೆ ಇಂತಹುದೇ. 250 ವರ್ಷಕ್ಕೂ ಹಿಂದಿನದು ಈ ಮನೆ ಎಂದು ಆ ಮನೆಯವರೇ ಆದ ವಾಸುದೇವ ಆಚಾರ್ಯ ಹೇಳುತ್ತಾರೆ. ಯಾವತ್ತು ಯಾರು ಕಟ್ಟಿದರು ಅಂತ ಹೇಗೆ ಹೇಳುವುದು, ಒಟ್ಟಿನಲ್ಲಿ ತುಂಬಾ ಪುರಾತನವಾದುದು.

ಈ ಮನೆಯ ನಡುವಿನಂಗಳಕ್ಕೆ ಹಿಂದೆ ಚಾಪೆಯ ಹೊದಿಕೆ ಹೊದಿಸಿದ್ದರಂತೆ. ತುಳುವಿನಲ್ಲಿ ಚಾಪೆಗೆ ಪಜೆ ಅಂತ ಹೇಳ್ತಾರೆ. ಛಾವಣಿಗೆ ಮಾಡು ಎನ್ನುವುದು ಗೊತ್ತಲ್ಲ. ಒಟ್ಟಿನಲ್ಲಿ ಪಜೆ ಮಾಡು ಇರುವ ಮನೆಯ ಹೆಸರು ಊರಿಗೇ ಹೆಸರು ತಂತು ಅನ್ನುವುದು ಕಥೆ. ಸ್ಥಳನಾಮದ ಈ ಪುರಾಣ ಹೆಜಮಾಡಿಯ ಹೆಚ್ಚಿನ ಬಿಳಿತಲೆಯವರಿಗೂ ಗೊತ್ತಿಲ್ಲ. ಈಗ ಮನೆಯ ನಡುವಿನಂಗಳ ಪಜೆ ಮಾಡಿನದಾಗಿ ಉಳಿದಿಲ್ಲ ; ಪಜೆ ಜಾಗೆಯಲ್ಲಿ ಬಣ್ಣದ ಪ್ಲಾಸ್ಟಿಕ್‌ ಶೀಟುಗಳಿವೆ.

ಊರೆಂದ ಮೇಲೆ ಊರು ಕಾಯಲೊಬ್ಬ ದೇವರಿರದಿದ್ದರೆ ಹೇಗೆ? ಇಲ್ಲಿರುವುದು 12ನೇ ಶತಮಾನದ ಮಹಾಲಿಂಗೇಶ್ವರ ದೇವಸ್ಥಾನ. ಮಹಲಿಂಗೇಶ್ವರನ ಮಹಿಮೆ ಕಾಶಿ ವಿಶ್ವನಾಥನಿಗೆ ಸಮ ಎನ್ನುವುದು ಊರಿನವರ ಕಾರ್ನಿಕ. ಯಾಕೆಂದರೆ ಈ ಶಿವಾಲಯದ ಮುಂದೆ ಸಂಪ್ರದಾಯದಂತೆ ಇರಬೇಕಾದ ನಂದಿ, ಮತ್ತು ಗಣಪತಿ ಇಲ್ಲ ; ಕಾಶಿಯಲ್ಲೂ ಇಲ್ಲ . ಇಲ್ಲಿರುವ ಶಿಲಾಶಾಸನ ಕೂಡ ಮಹಲಿಂಗೇಶ್ವರನ ಮಹಿಮೆ ಕಾಶಿ ವಿಶ್ವನಾಥನಿಗೆ ಸಮ ಎನ್ನುತ್ತದೆ. ಸಾಮಾನ್ಯವಾಗಿ ದೇವರು ಪೂರ್ವ ದಿಕ್ಕನ್ನೆ ಬಯಸುತ್ತಾರೆ. ಇಲ್ಲಿ ಶಿವಲಿಂಗ ಕುಳಿತಿರುವುದು ಪಶ್ಚಿಮಾಭಿಮುಖವಾಗಿ.

ಶಿವರಾತ್ರಿ ಬಂತೆಂದರೆ ಇಡೀ ಹೆಜಮಾಡಿಗೇ ಸಂಭ್ರಮ. ಊರಿನ ವಾರ್ಷಿಕ ಜಾತ್ರೆ ಶಿವಾಲಯದಲ್ಲಿ ಆರಂಭವಾಗುವುದು ಅಂದೇ. ಸಂಭ್ರಮದ ಶಿವನ ಜಾತ್ರೆ ಮುಗಿದರೆ ಮತ್ತೆ ಪಂಚದೈವಗಳ ಉತ್ಸವ. ಕೋಲ, ನೇಮ.. ಮತ್ತೆ ಒಂದಷ್ಟು ದಿನ ಹಬ್ಬ. ಊರಿನಲ್ಲಿರುವ ಎಲ್ಲರಿಗೂ ಜಾತ್ರೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕೆಲಸ ಬೊಗಸೆ. ದೇವರ ರಥ ಕಟ್ಟುವ ಮುಖ್ಯ ಹಕ್ಕು ಮೀನುಗಾರರಿಗೇ ಮೀಸಲು.

ಹೆಜಮಾಡಿಯ ಪಂಚಭೂತದ ಕಟ್ಟೆಗೂ ಸಿಕ್ಕಾಪಟ್ಟೆ ಕಾರ್ನಿಕವಿದೆ. ಅಲ್ಲಿ ನಿಧಿಯಿತ್ತು ಎಂದು ಸುದ್ದಿಯಾಗಿತ್ತು. ಸರ್ವ ಸಿದ್ಧಿಗಳನ್ನು ಬಳಸಿ ನಿಧಿ ಅಗೆಯಲು ಬಂದ ಮಂತ್ರವಾದಿಗಳನ್ನು ಪಂಚಭೂತಗಳು ಕೊಳ್ಳಿ ಹಿಡಿದು ಓಡಿಸಿದವಂತೆ. ನಿಧಿ ಈಗ ಸುರಕ್ಷಿತ. ಊರವರಿಗೂ ನೆಮ್ಮದಿ. ಈ ರೀತಿ ಕಥೆಗಳು ಸಾಗುತ್ತವೆ.

ಹೆಜಮಾಡಿಗೆ ಹೂವ ತಂದವರು

ಮಲ್ಯರ ಮಠವೆಂದೇ ಪ್ರಸಿದ್ಧವಾಗಿರುವ ಲಕ್ಷ್ಮೀನಾರಾಯಣ ಮಠ, ಊರಿನ ಕಷ್ಟ ಕಳೆಯಲೆಂದೇ ಮಾರಿಯಮ್ಮ ಹೆಜಮಾಡಿಯಲ್ಲಿ ಇದ್ದಾರೆ. ಮಾರಿಯಮ್ಮನಿಗೆ ಪ್ರತಿ ವರ್ಷ ಕರ್ಕಾಟಕ ಮಾಸದಲ್ಲಿ ಕಡಾಯಿ ಅನ್ನ ಸಮರ್ಪಣೆ ಮಾಡಿ ತೃಪ್ತಿಪಡಿಸುವ ಇನ್ನೊಂದು ಪುಟ್ಟ ಉತ್ಸವವಿದೆ. ಹಾಗೆ ನೋಡಿದರೆ ತುಳುನಾಡ ಪುರಾಣಗಳಲ್ಲಿ ಬರುವ ಅಬ್ಬಗದಾರಗ ಅವಳಿ ಸೋದರಿಯರ ದೈವಸ್ಥಾನದಲ್ಲಿ ಶಿವಾಲಯದ ಜಾತ್ರೆಯ ನಂತರ ವಿಶೇಷ ಆಚರಣೆಯಾಂದಿದೆ. ಅಬ್ಬಗ-ದಾರಗ ದೈವಸ್ಥಾನದ ಉತ್ಸವದ ದಿನ ಅಲ್ಲಿ ಕರಾವಳಿಯಲ್ಲೇ ವಿಶೇಷ ಎನಿಸುವ ಮಲ್ಲಿಗೆ ರಾಶಿ ರಾಶಿರಾಶಿ! ಹೂವಿನ ವ್ಯಾಪಾರಿಗಳು: ಮುಸ್ಲಿಮ್‌, ಕ್ರಿಶ್ಚಿಯನ್‌ ಏನೇ ಆಗಿರಲಿ ಆ ವ್ಯಾಪಾರಿ ಒಂದು ಚೆಂಡು ಮಲ್ಲಿಗೆ ಹೂವನ್ನು ಅಬ್ಬಗದಾರಗ ಅವಳಿ ಸೋದರಿಯರಿಗೆ ಅರ್ಪಿಸುತ್ತಾನೆ.

ಹೆಜಮಾಡಿ ಮನೆಯಲ್ಲಿ ಆಗಿ ಹೋದ ಮಹನೀಯರು ಒಬ್ಬಿಬ್ಬರಲ್ಲ . ಮಧ್ವಾಚಾರ್ಯರು ಉಡುಪಿ ಮಠದಲ್ಲಿ ತಮ್ಮ ಆಧ್ಯಾತ್ಮಿಕ ಸಾಧನೆಯಿಂದ ಹೆಸರು ಮಾಡಿದ್ದರು. ಸುಧೀಂದ್ರ ತೀರ್ಥರದು ವಾದಿರಾಜ ಆಚಾರ್ಯರ ಸಾಲಿನಲ್ಲಿ ನಿಲ್ಲುವ ಹೆಸರು. ಹೆಜಮಾಡಿ ಮನೆಯಿಂದ ಮಠಕ್ಕೆ ತೆರಳಿ 104 ವರ್ಷ ಬದುಕಿದ ಈ ಮಹಾನುಭಾವರ ಬದುಕು ದೊಡ್ಡದು. ಸಾಯುವ ಕಾಲದಲ್ಲಿ ಅವರಿಗೆ ಕೋಡುಗಳು ಮೂಡಿದ್ದವಂತೆ. ಅವರ ಮಂತ್ರಾಕ್ಷತೆಯು ಪ್ರಖರವಾಗಿತ್ತು. ಪವಾಡಗಳ ಸಾಲು ಕತೆಗಳೂ ಅವರ ಸುತ್ತಲಿವೆ.

ಸುಜ್ಞಾನ ತೀರ್ಥ ಸ್ವಾಮೀಜಿಯೂ ಇದೇ ಮನೆಯಿಂದ ಬಂದವರು. ಆಯುರ್ವೇದ ತಜ್ಞರು. ಉಡುಪಿಯಲ್ಲಿ ಪ್ರಥಮ ಆಯುರ್ವೇದ ಕಾಲೇಜು ಸ್ಥಾಪಿಸಿದ ಕೀರ್ತಿ ಸುಜ್ಞಾನತೀರ್ಥರದು. ಆಂಧ್ರದ ವಿಶ್ವವಿದ್ಯಾಲಯದಿಂದ ಆಯುರ್ವೇದ ವಿದ್ಯಾವಲ್ಲಭ ಬಿರುದು ಪಡೆದಿದ್ದರು. ಆನೆ ಕಾಲಿಗೆ ಪರಿಣಾಮಕಾರಿ ಔಷಧಿ ನೀಡುತ್ತಿದ್ದರಂತೆ.

ರಾಜಕಾರಣಿ ಮನೋರಮಾ ಮಧ್ವರಾಜ್‌, ತರಂಗದ ಬರಹಗಾರ್ತಿ ಮನೋರಮಾ ಹೆಜಮಾಡಿ... ಹೀಗೆ ಹೆಜಮಾಡಿ ಮನೆತನದವರ ಪಟ್ಟಿ ದೊಡ್ಡದು. ಇತ್ತೀಚೆಗಷ್ಟೇ ಹೆಜಮಾಡಿಗೆ ಭೇಟಿ ನೀಡಿದ ಸಿನಿಮಾ ನಟ ಸುಮನ್‌ ಕೂಡ ಇದೇ ನನ್ನೂರು ಅಂತ ನಂಗೆ ತುಂಬಾ ತಡವಾಗಿ ಗೊತ್ತಾಯ್ತು ಎಂದರು.

ಕಡಲೆಂಬ ಅಕ್ಷಯಪಾತ್ರೆಯಲ್ಲಿ ಮೀನು

ಸಮುದ್ರ ಹೆಜಮಾಡಿಯ ಒಂದಂಗ . ಊರಿನಿಂದ 2 ಕಿಲೋಮೀಟರ್‌ ದೂರವಿರುವ ಅರಬ್ಬಿ ಸಮುದ್ರ ಊರಿನವರಿಗೆ ಅನ್ನ ನೀಡುವ ಅಕ್ಷಯಪಾತ್ರೆ. ಹೆಜಮಾಡಿಯ ಮೀನುಗಾರಿಕೆ ವೃತ್ತಿ ಕರಾವಳಿಯಲ್ಲಿ ಪ್ರಸಿದ್ಧ . ಹಿಂದಿನ ಕಾಲದಲ್ಲಿ ರಂಪಣಿ ಬೋಟ್‌ಗಳ ಮೂಲಕ ಮೀನುಗಾರಿಕೆ ನಡೆಯುತ್ತಿದ್ದಾಗ, ಕರಾವಳಿಯ ಇತರ ಪ್ರದೇಶಗಳಿಗೇ ಒಂದೇ ರಂಪಣಿ ಬೋಟ್‌ಗಳಿದ್ದರೆ, ಹೆಜಮಾಡಿ -ಗುಂಡಿ ಪ್ರದೇಶ ಎರಡು ರಂಪಣಿ ಬೋಟ್‌ಗಳನ್ನು ನಿರ್ವಹಿಸುತ್ತಿತ್ತು.

ಹೆಜಮಾಡಿ ಎಂದರೆ ಮೀನುಗಾರಿಕೆ ಮಾತ್ರವಲ್ಲ ; ಬೀಡಿ ಉದ್ಯಮ, ಕೃಷಿಯೂ ಉಂಟು! ತೆಂಗು, ಬತ್ತ ಇಲ್ಲಿನ ಮುಖ್ಯ ಬೆಳೆಗಳು. ಈಗ ಹೆಜಮಾಡಿಗೆ ಹೊಸದಾಗಿ ಮೀನುಗಾರಿಕಾ ಬಂದರು ಮಂಜೂರಾಗಿದೆ. ಬಂದರು ನಿರ್ಮಾಣ ಕಾರ್ಯವೂ ಮುಗಿದಿದೆ. ಮೀನುಗಾರಿಕಾ ವ್ಯವಹಾರ- ಉದ್ಯಮದಲ್ಲಿ ಹೆಜಮಾಡಿ ವ್ಯಸ್ತವಾಗಿ ಸುದ್ದಿ ಮಾಡುವ ದಿನ ದೂರವಿಲ್ಲ ಅಂತ ಊರಿನವರು ಖುಷಿಯಲ್ಲಿದ್ದಾರೆ.

Post Your views

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more