• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಕ್ಷ ದೀಪದ ಬೆಳಕಲ್ಲಿ ಮಂಜುನಾಥನಿಗೆ ಮಹೋತ್ಸವ

By Staff
|

*ಟಿ. ಎಂ. ಸತೀಶ್‌

ಧರ್ಮಸ್ಥಳ ಹೆಸರೇ ಹೇಳುವಂತೆ ‘ಇದು ಸತ್ಯ, ಧರ್ಮದ ತವರು. ಮಂಜುನಾಥನ ನೆಲೆವೀಡು’ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಸುಂದರ ಹಾಗೂ ಪ್ರಶಾಂತ ಪರಿಸರದ ಶ್ರೀಕ್ಷೇತ್ರ. ಜಾತಿ-ಮತ-ಧರ್ಮಗಳನ್ನು ಮೀರಿ ಬೆಳೆದ ಸರ್ವಧರ್ಮ ಸಮನ್ವಯ ಕ್ಷೇತ್ರ. ಮಂಗಳೂರಿನಿಂದ 75 ಕಿ.ಮೀಟರ್‌ ದೂರದಲ್ಲಿರುವ ಧರ್ಮಸ್ಥಳ ಅತಿಹೆಚ್ಚು ಭಕ್ತರನ್ನು ಹೊಂದಿರುವ ಶಿವಕ್ಷೇತ್ರ.

ಧರ್ಮಸ್ಥಳವನ್ನು ಒಂದೇ ಪದ ಅಥವಾ ವಾಕ್ಯದಲ್ಲಿ ಬಣ್ಣಿಸುವುದು ಕಷ್ಟ. ಇದನ್ನು ಕೇವಲ ಧರ್ಮ ಕ್ಷೇತ್ರ, ಶೈವಕ್ಷೇತ್ರ, ಯಾತ್ರಾಸ್ಥಳ, ಪ್ರೇಕ್ಷಣೀಯ ತಾಣ ಎಂದರೆ ತಪ್ಪಾಗುತ್ತದೆ. ಇದು ಪ್ರೇಕ್ಷಣೀಯ ಸ್ಥಳವೂ ಹೌದು, ಶೈವ ಕ್ಷೇತ್ರವೂ ಹೌದು, ಧರ್ಮದ ಸ್ಥಳವೂ ಹೌದು. ಇದೆಲ್ಲಕ್ಕಿಂತಲೂ ಮಿಗಿಲಾದ ಮಹತ್ವ ಈ ಮಣ್ಣಿನಲ್ಲಿದೆ. ಧರ್ಮದ ತಾಣದಲ್ಲಿದೆ.

ನ್ಯಾಯಪೀಠ: ವಾರಾಣಸಿ, ಗೋಕರ್ಣದಂತೆ ಇದು ಪೌರಾಣಿಕ ಕ್ಷೇತ್ರವಲ್ಲದಿದ್ದರೂ, ಧರ್ಮದೇವತೆಗಳು ಇಲ್ಲಿಗೆ ಬಂದು ನೆಲೆಸಿದ ಬಗ್ಗೆ ಕಥೆಗಳಿವೆ, ಶೃಂಗೇರಿಯಂತೆ ಇಲ್ಲಿ ಇತಿಹಾಸ ಪ್ರಸಿದ್ಧ ಮಠ ಸಂಸ್ಥಾನವಿಲ್ಲದಿದ್ದರೂ ಹೆಗಡೆಯವರ ಮಾರ್ಗದರ್ಶನದಲ್ಲಿ ಮಠಮಂದಿರಗಳ ಸಮ್ಮಿಲನವೇ ಇಲ್ಲಿದೆ. ಇಲ್ಲಿ ಪವಾಡವೂ ನಡೆಯುತ್ತದೆ, ನ್ಯಾಯ ನಿರ್ಣಯವೂ ಆಗುತ್ತದೆ.

ಕೋರ್ಟ್‌ ಕಚೇರಿಗಳಲ್ಲಿ ಸಾಲ್ವ್‌ಆಗದ ಎಷ್ಟೋ ಪ್ರಕರಣಗಳು ಶ್ರೀಕ್ಷೇತ್ರದಲ್ಲಿ ಇತ್ಯರ್ಥವಾಗಿವೆ. ಇದಕ್ಕೆ ಈ ಸ್ಥಳದ ಮಹಿಮೆ, ಜನರಿಗೆ ಈ ದೇವರ ಬಗ್ಗೆ ಇರುವ ನಂಬಿಕೆ ಮಿಗಿಲಾಗಿ ಅಣ್ಣಪ್ಪನ ಭಯವೂ ಕಾರಣ ಎಂದರೆ ತಪ್ಪಲ್ಲ. ಶ್ರೀಕ್ಷೇತ್ರವೆಂದೇ ಪ್ರಖ್ಯಾತವಾದ ಧರ್ಮಸ್ಥಳ ಬೌದ್ಧಯುಗದ ತಕ್ಷಶಿಲೆಯನ್ನೇ ಹೋಲುವ ಶಿಕ್ಷಣ ಕೇಂದ್ರ.

ಅನ್ನದಾನದ ತವರು. ಇಲ್ಲಿ ಪ್ರತಿನಿತ್ಯವೂ ಕನಿಷ್ಠ 10 ಸಾವಿರಾರು ಭಕ್ತರು ಅನ್ನಪೂರ್ಣ ಹಾಲ್‌ನಲ್ಲಿ ಸಾಲಾಗಿ ಕುಳಿತು ಹತ್ತಾರು ಪಂಕ್ತಿಗಳಲ್ಲಿ ಸಂತೃಪ್ತರಾಗುವಂತೆ ಭೋಜನ ಮಾಡುತ್ತಾರೆ. ಅತ್ಯಾಧುನಿಕ ಸಲಕರಣೆಗಳಿಂದ ಸಜ್ಜಾದ ಆಸ್ಪತ್ರೆ ದೀನದಲಿತರಾದಿಯಾಗಿ ಸರ್ವರ ಆರೋಗ್ಯದ ಹೊಣೆಯನ್ನು ನಿರ್ವಹಿಸುತ್ತದೆ.

ಜೈನಧರ್ಮೀಯರಾದ ಹೆಗಡೆ ಅವರ ಆಡಳಿತಕ್ಕೆ ಒಳಪಟ್ಟ ಈ ಶಿವ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳನ್ನು ಮಾಡುವವರು ವಿಷ್ಣುಭಕ್ತರಾದ ಮಧ್ವಮತದವರು. ಈ ದೇವಾಲಯದಲ್ಲಿ ಶ್ರೀಮಂಜುನಾಥೇಶ್ವರಸ್ವಾಮಿಯ ಜೊತೆಗೆ ಧರ್ಮದೇವತೆಗಳೂ ಇದ್ದಾರೆ. ಶಿವನ ಆಜ್ಞೆಗಳ ಪಾಲನೆಗಾಗಿ ಅಣ್ಣಪ್ಪನಿದ್ದಾನೆ. ಎತ್ತರದ ಬೆಟ್ಟದ ಮೇಲೆ ಗೊಮ್ಮಟೇಶ್ವರನೂ ನಿಂತಿದ್ದಾನೆ.

ಶಿವಕ್ಷೇತ್ರ : ಧರ್ಮಸ್ಥಳ ಒಂದು ಪ್ರಸಿದ್ಧ ಪುಣ್ಯಕ್ಷೇತ್ರ. ‘ಎದ್ದೇಳು ಮಂಜುನಾಥ ಏಳು... ಬೆಳಗಾಯಿತು’ ಎಂಬ ಗೀತೆ ಮೊಳಗುತ್ತಿದ್ದಂತೆ, ಇಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ನೇತ್ರಾವತಿ ನದಿಯಲ್ಲಿ ಮಿಂದ ಸಾವಿರಾರು ಭಕ್ತರು ಭಗವಂತನ ದರ್ಶನಕ್ಕೆ ಸರತಿಯ ಸಾಲಿನಲ್ಲಿ ನಿಲ್ಲುತ್ತಾರೆ.

ಭಗವಂತನ ದರ್ಶನದಿಂದ ಧನ್ಯರಾದ ಜನತೆ, ತಮ್ಮ ದುಃಖ ದುಮ್ಮಾನ ಹೇಳಿಕೊಳ್ಳಲು, ತಮ್ಮ ವ್ಯಾಜ್ಯ ಇತ್ಯರ್ಥ ಪಡಿಸಿ ಎಂದು ಕೇಳಿಕೊಳ್ಳಲು ಡಾ.ವೀರೇಂದ್ರಹೆಗಡೆ ಅವರ ಬಿಡಾರದ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಮನೆ ಕಟ್ಟಲು, ಮಗಳ ಮದುವೆ ಮಾಡಲು, ವೃದ್ಧ ತಂದೆ -ತಾಯಿಗಳ ಕಾಯಿಲೆಗೆ ಔಷಧೋಪಚಾರ ಮಾಡಿಸಲು ಹೆಗಡೆಯವರ ನೆರವು ಕೋರುತ್ತಾರೆ.

ಐತಿಹ್ಯ: ಕೇಳಿದವರಿಗೆ ಇಲ್ಲ ಎಂದು ಬರಿಗೈಲಿ ಕಳಿಸುವ ಮಾತೇ ಇಲ್ಲಿಲ್ಲ. ಎಷ್ಟೇ ಕೈಎತ್ತಿ ನೀಡಿದರೂ ಇಲ್ಲಿನ ಬೊಕ್ಕಸ ಬರಿದಾಗುವುದಿಲ್ಲ. ಹೆಗಡೆ ಕುಟುಂಬದವರು ಮಾಡುವ ಈ ಕಾಯಕಕ್ಕೆ ಸುದೀರ್ಘ ಇತಿಹಾಸವೇ ಇದೆ. ಇದು ಧರ್ಮದೇವತೆಗಳ ಆಜ್ಞೆಯಂತೆ. ಈ ಪವಿತ್ರ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸವೂ ಇದೆ. ಕುಡುಮ ಎಂದು ಕರೆಯಲಾಗುತ್ತಿದ್ದ ಇಂದಿನ ಧರ್ಮಸ್ಥಳ ಪ್ರಾಂತದಲ್ಲಿ ಹಿಂದೆ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ದಂಪತಿಗಳು ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ವಾಸವಾಗಿದ್ದರು. ಧರ್ಮಿಷ್ಠರಾದ ಇವರ ಮನೆಗೆ ಒಮ್ಮೆ ನಾಲ್ವರು ಅಭ್ಯಾಗತರು ಬಂದರು.

ಎಂದಿನಂತೆ ಅಥಿತಿ ಸತ್ಕಾರ ನಡೆಯಿತು. ಆ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ಅಥಿತಿ ಸತ್ಕಾರದಿಂದ ತಾವು ತೃಪ್ತರಾಗಿರುವುದಾಗಿ ತಿಳಿಸಿ, ಆ ಮನೆಯಲ್ಲಿ ನೆಲೆಸಲು ಬಯಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಆಣತಿಯಂತೆ ಪೆರ್ಗಡೆಯವರು ನೆಲ್ಯಾಡಿ ಬೀಡು ತೆರವು ಮಾಡಿ ದೇವರುಗಳಿಗೆ ಬಿಟ್ಟುಕೊಟ್ಟರು. ಕಾಳ, ರಾಹು, ಕಾಯ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ಎಂಬ ಹೆಸರಲ್ಲಿ ದೇವತೆಗಳು ಇಲ್ಲಿ ನೆಲೆನಿಂತರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.

ಅಂದಿನಿಂದ ಇಲ್ಲಿ ಧರ್ಮ ನೆಲೆ ನಿಂತಿದೆ. ಧರ್ಮಕಾರ್ಯಗಳು ಸಾಂಗವಾಗಿ ನೆರವೇರುತ್ತವೆ. ಪ್ರತಿವರ್ಷ ಶ್ರೀಕ್ಷೇತ್ರದಲ್ಲಿ ಸಾಮೂಹಿಕ ಉಚಿತ ವಿವಾಹ ಮಹೋತ್ಸವವೂ ನಡೆಯುತ್ತದೆ. ಧರ್ಮಸ್ಥಳದ ದೇವಾಲಯದ ಆಡಳಿದಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ನಿರುದ್ಯೋಗಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಅವರಿಗೆ ವೃತ್ತಿತರಬೇತಿ ನೀಡಿ, ಸತ್ಪ್ರಜೆಗಳನ್ನಾಗಿ ಪರಿವರ್ತಿಸಲು ರುಡ್‌ಸೆಟ್‌ ಎಂಬ ಸಂಸ್ಥೆಯನ್ನೂ ಹೊಂದಿದೆ. ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸತತ 24 ವರ್ಷಗಳಿಂದ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗುತ್ತಿದೆ. ಮಂಜೂಷಾ ಎಂಬ ಶಾಶ್ವತ ವಸ್ತುಸಂಗ್ರಹಾಲಯವೂ ಇಲ್ಲಿದೆ.

ಸರ್ವಧರ್ಮ ಸಾಹಿತ್ಯ ಸಮ್ಮೇಳನ : ಇದು ಜನರಿಗೆ ಧಾರ್ಮಿಕ, ವೈಜ್ಞಾನಿಕ, ಸಾಮಾಜಿಕ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಸಾಧನೆಯನ್ನೇ ಮೆರೆದಿದೆ. ಪ್ರತಿವರ್ಷ ಇಲ್ಲಿ ಸರ್ವಧರ್ಮ ಸಾಹಿತ್ಯ ಸಮ್ಮೇಳನವೂ ಜರುಗುತ್ತಿದೆ. ಸುಮಾರು 60 ವರ್ಷಗಳ ಹಿಂದೆಯೇ ಸರ್ವಧರ್ಮ ಸಮ್ಮೇಳನ ನಡೆಸಿದ ಕೀರ್ತಿ ಧರ್ಮಸ್ಥಳದ್ದು. ಇದರ ಹಿಂದಿನ ಶಕ್ತಿ ಅಂದಿನ ಧರ್ಮಾಧಿಕಾರಿಗಳಾದ ಮಂಜಯ್ಯ ಹೆಗಡೆ ಅವರು. 1933ರಲ್ಲಿ ಮಂಜಯ್ಯ ಹೆಗಡೆ ಅವರು ಸರ್ವಧರ್ಮ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಇಡೀ ದೇಶಕ್ಕೆ ಮಾದರಿಯಾದರು.

ಹಿಂದಿನಿಂದಲೂ ಇಲ್ಲಿ ವಿವಿಧ ಧರ್ಮಗಳ ಪಂಡಿತರನ್ನು ಆಹ್ವಾನಿಸಿ ಆದರಿಸುವ ಸಂಪ್ರದಾಯವಿದೆ. ಎಲ್ಲ ಧರ್ಮಗಳ ಪ್ರತಿಪಾದಕರೂ ಒಂದೇ ವೇದಿಕೆಯಲ್ಲಿ ಕಲೆತು ವಿಚಾರ ವಿನಿಮಯ ನಡೆಸುತ್ತಾರೆ. ಎಲ್ಲ ಧರ್ಮವನ್ನೂ ಸಮಾನವಾಗಿ ಕಾಣುವ ಧರ್ಮಸ್ಥಳ ವಿಶ್ವಕ್ಕೇ ಮಾದರಿಯಾದ ಒಂದು ಸುಂದರ ಸ್ಥಳ.

21ನೇ ಧರ್ಮಾಧಿಕಾರಿಗಳಾಗಿರುವ ಡಾ. ವೀರೇಂದ್ರ ಹೆಗಡೆ ಅವರು ಇಂದು ಕ್ಷೇತ್ರವನ್ನು ವಿದ್ಯಾಕೇಂದ್ರವಾಗಿಯೂ, ಅನ್ನದಾನ ಕೇಂದ್ರವನ್ನಾಗಿಯೂ, ಆರೋಗ್ಯ ಕೇಂದ್ರವನ್ನಾಗಿಯೂ, ನ್ಯಾಯಪೀಠವನ್ನಾಗಿಯೂ ಪರಿವರ್ತಿಸಿದ್ದಾರೆ. ಇಲ್ಲೊಂದು ಧರ್ಮದ ಸರಕಾರವೇ ಇದೆ ಎಂದರೂ ಅತಿಶಯೋಕ್ತಿ ಏನಲ್ಲ. ಶೈವ, ವೈಷ್ಣವ ಹಾಗೂ ಜೈನ ಧರ್ಮಗಳ ಸಂಗಮ ಸ್ಥಳವಾದ ಇಲ್ಲಿ 210 ಟನ್‌ ಏಕಶಿಲೆಯ 39 ಅಡಿ ಎತ್ತರದ ಬಾಹುಬಲಿಯ ಮೂರ್ತಿಯನ್ನು 1982ರಲ್ಲಿ ಪ್ರತಿಷ್ಠಾಪಿಸಲಾಯಿತು.

ಸತ್ಯ, ಧರ್ಮದ ತಾಣವಾದ ಧರ್ಮಸ್ಥಳ ಆಯುರ್ವೇದ ಶಾಸ್ತ್ರದ ಅಧ್ಯಯನ ಕೇಂದ್ರವೂ ಆಗಿದೆ. ಭಕ್ತರಿಗೆ ತಂಗಲು ಇಲ್ಲಿ ಉಚಿತ ಛತ್ರಗಳೂ ಇವೆ. ಪಂಚತಾರಾ ಹೋಟೆಲ್‌ಗಳನ್ನೂ ನಾಚಿಸುವಂತಹ ಸುಸಜ್ಜಿತ ವಸತಿಗೃಹಗಳೂ ಇವೆ. ಮಂಜುವಾಣಿ ಎಂಬ ಹೆಸರಿನ ಧಾರ್ಮಿಕ ಪತ್ರಿಕೆಯೂ ಹೆಗಡೆ ಅವರ ಮಾರ್ಗದರ್ಶನದಲ್ಲಿ ಪ್ರಕಟವಾಗುತ್ತದೆ. ಶ್ರೀಕ್ಷೇತ್ರಕ್ಕೆ ಕರ್ನಾಟಕದ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ಬಸ್‌ ಸೌಕರ್ಯಇದೆ.

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more