ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋಟೆಕ್‌ ಪಾರ್ಕ್‌: ಕರ್ನಾಟಕಕ್ಕೆ ಗುಡ್‌ಬೈ, ಹೈದರಾಬಾದ್‌ ಸೈ..

By Staff
|
Google Oneindia Kannada News

ಬೆಂಗಳೂರು : ಸೈಬ್ರಾಬಾದ್‌ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಹೈದರಾಬಾದ್‌ಗೆ ಸಡ್ಡು ಹೊಡೆದು ಬೆಂಗಳೂರನ್ನು ಸಿಲಿಕಾನ್‌ ಕಣಿವೆಯಾಗಿ ಪರಿವರ್ತಿಸಿದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಬಿ.ಟಿ. ಪಾರ್ಕ್‌ ಸ್ಥಾಪಿಸುವ ವಿಷಯದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆಗಳು ಈಗ ಹೆಚ್ಚಾಗಿವೆ.

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಈಗ ಹೈದರಾಬಾದ್‌ ಪಾಲಾಗುವ ಸೂಚನೆಗಳು ನಿಚ್ಚಳವಾಗಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಬಯೋಟೆಕ್‌ ಪಾರ್ಕ್‌ ಸ್ಥಾಪನೆಗಾಗಿ 100 ಎಕರೆ ಭೂಮಿ ನೀಡುವುದರ ಜೊತೆಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಒದಗಿಸುವುದಾಗಿ ಈ ಹಿಂದೆ ಸರಕಾರ ಭರವಸೆ ನೀಡಿತ್ತು.

ಆದರೆ, ವಿದ್ಯಾರ್ಥಿಗಳ ಚಳವಳಿ, ಪ್ರತಿಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಜಿಕೆವಿಕೆಯ ಸ್ಥಳಕ್ಕೆ ಬದಲಾಗಿ ಬೇರೆಡೆ ಜಾಗ ನೀಡುವುದಾಗಿ ಸೆಪ್ಟೆಂಬರ್‌ನಲ್ಲೇ ಸರಕಾರ ಪ್ರಕಟಿಸಿತಾದರೂ ಈವರೆಗೆ ಬಿಟಿ ಪಾರ್ಕ್‌ಗೆ ಸೂಕ್ತ ಜಾಗ ದೊರೆತಿಲ್ಲ. ಸರಕಾರದ ಈ ವಿಳಂಬ ನೀತಿಯಿಂದ ಬೇಸತ್ತ ಕೆಲವು ಕಂಪನಿಗಳು ಹೈದರಾಬಾದ್‌ನತ್ತ ಹೊರಳಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ.

ಅಗತ್ಯ ಭೂಮಿ (100 ಎಕರೆ) ಒದಗಿಸುವುದರ ಜೊತೆಗೆ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು ಎಂಬ ಬೇಡಿಕೆಗಳನ್ನು ಬಿ.ಟಿ. ಕಂಪನಿಗಳು ಮುಂದಿಟ್ಟಿದ್ದವು. ಬಿಟಿ ಪಾರ್ಕ್‌ ನಿರ್ಮಾಣಕ್ಕಾಗಿ ಜಿಕೆವಿಕೆ ಬದಲು ಬೇರೆ ಜಾಗದಲ್ಲಿ 100 ಎಕರೆ ಭೂಮಿ ಖರೀದಿಸುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದರು. ಆದರೆ, ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಸರಕಾರ ಮೀನಾ ಮೇಷ ಎಣಿಸುತ್ತಿದೆ.

ಮಿಗಿಲಾಗಿ 100 ಎಕರೆ ಭೂಮಿ ಖರೀದಿಗೆ ತಗುಲುವ ವೆಚ್ಚ ಭರಿಸುವ ಸ್ಥಿತಿಯಲ್ಲಿ ಸರಕಾರ ಇಲ್ಲ. ಐ.ಟಿ. ಕ್ಷೇತ್ರದಲ್ಲಿ ಬಂಡವಾಳ ಹೂಡುವ ಕಂಪನಿಗಳೇ ಭೂಮಿ ಖರೀದಿ ವೆಚ್ಚವನ್ನೂ ಭರಿಸಬೇಕು ಎಂದು ಬಯಸಿದೆ. ಈ ವಿಷಯವನ್ನು ಪರೋಕ್ಷವಾಗಿ ರಾಜ್ಯ ಐಟಿ ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ್‌ ವ್ಯಕ್ತಪಡಿಸಿದ್ದಾರೆ.

ಉನ್ನತ ಮೂಲಗಳ ಪ್ರಕಾರ ಸರಕಾರದ ಈ ನೀತಿಯಿಂದ ಬೇಸತ್ತಿರುವ ಕೆಲವು ಬಿ.ಟಿ. ಕಂಪನಿಗಳು ರಾಜ್ಯ ಕೃಷಿ ಸಚಿವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿವೆ. ಈವರೆಗೆ ಸರಕಾರ ನೀಡಿದ ಸಹಕಾರಕ್ಕೆ ಕೃತಜ್ಞತೆಗಳು ಎಂದೂ ತಿಳಿಸಿವೆ. ಅಂದರೆ ಕಂಪನಿಗಳು ಹೈದರಾಬಾದ್‌ಗೆ ಕಂಬಿ ಕೀಳಲು ಪರೋಕ್ಷ ಅನುಮತಿ ಕೇಳಿವೆ ಎಂದೇ ಅರ್ಥ.

ಈ ಮಧ್ಯೆ ಆಂಧ್ರಪ್ರದೇಶ ಸರಕಾರ ಬಯೋಟೆಕ್‌ ಪಾರ್ಕ್‌ ಸ್ಥಾಪನೆಗೆ 150 ಎಕರೆ ಭೂಮಿಯನ್ನು ಹೈದರಾಬಾದ್‌ನಲ್ಲಿ ನೀಡಲು ನಿರ್ಧರಿಸಿದ್ದು, ಬಂಡವಾಳ ಹೂಡಲೂ ಮುಂದಾಗಿದೆ. ಹೀಗಾಗೇ ಬಿ.ಟಿ. ಕಂಪನಿಗಳು ಬೆಂಗಳೂರಿನಿಂದ ಕಂಬಿ ಕೀಳಲು ತಯಾರಿ ನಡೆಸಿವೆ.

ಆಗ್ರಹ : ಈ ಎಲ್ಲ ಬೆಳವಣಿಗೆಗಳ ನಡುವೆಯೇ ಜೈವಿಕ ತಂತ್ರಜ್ಞಾನ ಪಾರ್ಕ್‌ ಬೆಂಗಳೂರಿನಲ್ಲೇ ಸ್ಥಾಪನೆಯಾಗಬೇಕು. ಅಲ್ಲಿ ನಡೆಯುವ ಸಂಶೋಧನೆಗಳ ಅನುಕೂಲ ರಾಜ್ಯದ ಜನರಿಗೆ ದೊರಕಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕೆ. ದ್ವಾರಕಾನಾಥ್‌ ಆಗ್ರಹಿಸಿದ್ದಾರೆ.

ಬಾಲಂಗೋಸಿ : ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವ ಗಾದೆಯಂತೆ, ಆಡಳಿತ ಪಕ್ಷ - ವಿರೋಧ ಪಕ್ಷಗಳ ವಿರೋಧದ ನಡುವೆ ಬಿ.ಟಿ. ಪಾರ್ಕ್‌ ಕರ್ನಾಟಕದ ಕೈತಪ್ಪುತ್ತಿದೆ... ಹೈದರಾಬ್‌ಗೆ ಲಾಭ ಆಗುತ್ತಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X