‘ಜಾಗತೀಕರಣಕ್ಕೆ ಪ್ರಾದೇಶಿಕ ಭಾಷೆ ಮತ್ತು ನಾಟಕವೇ ಪ್ರತ್ಯುತ್ತರ’
ಮಂಗಳೂರು : ರಂಗಭೂಮಿ ಹಾಗೂ ಪ್ರಾದೇಶಿಕ ಭಾಷೆಗಳಿಂದ ಮಾತ್ರ ಜಾಗತೀಕರಣವನ್ನು ಸಮರ್ಥವಾಗಿ ಎದುರಿಸುವುದು ಸಾಧ್ಯ ಎಂದು ಹಿರಿಯ ರಂಗ ನಿರ್ದೇಶಕ ಬಿ.ವಿ. ಕಾರಂತ್ ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದಲ್ಲಿ ನಾಟಕ ಅಕಾಡೆಮಿಯು ಆಯೋಜಿಸಿದ್ದ ರಂಗಭೂಮಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತ, ಜಾಗತೀಕರಣದ ಪರಿಣಾಮಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಭಾಷೆ, ಸಂಸ್ಕೃತಿ ಹಾಗೂ ರಂಗಭೂಮಿ ನಡುವಿನ ಸಂಬಂಧವನ್ನು ಗುರುತಿಸುವ ಕಾರ್ಯ ಆಗಬೇಕಾಗಿದೆ ಎಂದರು .
ರಂಗಭೂಮಿಯ ಕಾರ್ಯಚಟುವಟಿಕೆಗಳು ಒಂದು ಸಮುದಾಯದ ಚಟುವಟಿಕೆಯೂ ಹೌದು. ಅದು ಮಾನವ ಮಾಧ್ಯಮ. ಟಿವಿ, ಸಿನೆಮಾಗಳಂತೆ ಯಂತ್ರ ಮಾಧ್ಯಮವಲ್ಲ. ಇತರ ಮಾಧ್ಯಮಗಳಿಗೆ ಹೋಲಿಸಿದರೆ, ತನ್ನ ವಸ್ತು, ವಿನ್ಯಾಸ ಮತ್ತು ಪ್ರಾಯೋಗಿಕತೆಗಳಿಂದ ರಂಗ ಮಾಧ್ಯಮ ಸಾಕಷ್ಟು ಸ್ವತಂತ್ರವಾಗಿಯೇ ಬೆಳೆದುಕೊಂಡು ಬಂದಿದೆ.
ನೃತ್ಯ, ಸಂಗೀತ, ನಾಟಕಗಳಂತಹ ಕಲಾಪ್ರಕಾರಗಳನ್ನು ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಿಡುವುದಕ್ಕಾಗುವುದಿಲ್ಲ. ಆಧುನಿಕ ಯುಗದಲ್ಲಿ ಸಂಗೀತ ಮತ್ತು ನೃತ್ಯ ತನ್ನದೇ ಮಾರ್ಕೆಟ್‌ವ್ಯಾಲ್ಯೂವನ್ನು ಮೈಗೂಡಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋತಿರುವ ಕಲಾ ಪ್ರಕಾರವೆಂದರೆ ನಾಟಕವೊಂದೇ ಎಂದು ಕಾರಂತರು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷ ನಾಗೇಶ್ ಹಾಗೂ ಜಿಲ್ಲಾಧಿಕಾರಿ ಎ.ಕೆ. ಮೋನಪ್ಪ ಭಾಗವಹಿಸಿದ್ದರು. ನಾಟಕೋತ್ಸವದಲ್ಲಿ ಡಿಸೆಂಬರ್ 12ರಂದು ಸದಾನಂದ ಸುವರ್ಣ ನಿರ್ದೇಶನದ ಉರುಳು(ಮಂಗಳೂರಿನ ಸಂಕೇತ ತಂಡ), 13ರಂದು ಸಿ. ಬಸವಲಿಂಗಯ್ಯ ನಿರ್ದೇಶನದ ಸಂತ್ಯಾಗ ನಿಂತಾನ ಕಬೀರ(ಸಾಣೇಹಳ್ಳಿಯ ಶಿವ ಸಂಚಾರ ತಂಡ), 14ರಂದು ಬಿ. ಜಯಶ್ರೀ ನಿರ್ದೇಶನದ ಸ್ಮಶಾನ ಕುರುಕ್ಷೇತ್ರ(ಸ್ಪಂದನ ತಂಡ) ನಾಟಕಗಳು ಪ್ರದರ್ಶನಗೊಳ್ಳಲಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications